ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಯಲ್ಲಿ ಕಲೆ ಅರಳಿಸಿ...

Last Updated 25 ಜನವರಿ 2017, 19:30 IST
ಅಕ್ಷರ ಗಾತ್ರ

ಪ್ರಕೃತಿಯಲ್ಲಿ ಇರುವ ಎಲ್ಲವೂ ಒಂದಿಲ್ಲೊಂದು ಕಾರಣಕ್ಕೆ ಅದ್ಭುತ. ಇದರಲ್ಲಿ  ಸಸ್ಯಕಾಶಿ ಪಾಲು ಹೆಚ್ಚೇ ಎನ್ನಬಹುದು. ನಿಸರ್ಗದಲ್ಲಿನ ಸುಂದರ ಹೂವುಗಳು ಅದೆಷ್ಟೋ ಕಲಾವಿದರ ಕಲೆಗೆ ವಸ್ತುವಾಗಿವೆ. ಆದರೆ ಇಲ್ಲೊಬ್ಬ ಎಲೆ ಮಾನವನಿದ್ದಾನೆ. ಆತನ ಕೈಯಲ್ಲಿ ಬಗೆಬಗೆಯ ಎಲೆಗಳೆಲ್ಲವೂ ಕಲಾದೀಕ್ಷೆ ಪಡೆಯುತ್ತವೆ. ನಿತ್ಯ ಬದುಕಿನಲ್ಲಿ ಬಳಕೆಯಾಗುವ ಆಲಂಕಾರಿಕ ವಸ್ತುಗಳಾಗಿ ಅರಳುತ್ತವೆ.

ಬಿದ್ದು ನೆಲ ಸೇರುವ ಎಲೆಗಳಿಗೆ ಕಲಾಸ್ಪರ್ಶ ನೀಡುವವರು ಬೆಂಗಳೂರಿನ ಜಗದೀಶ್. ಮೂಲತಃ ದಾಬಸ್ ಪೇಟೆಯವರಾದ ಜಗದೀಶ್ ಅವರಿಗೆ ಚಿಕ್ಕಂದಿನಿಂದಲೂ ತ್ಯಾಜ್ಯವಸ್ತುಗಳಿಗೆ ಕಲಾ ರೂಪು ನೀಡುವ ಹುಚ್ಚು. ಅವರ ಈ ಪ್ರಯೋಗಕ್ಕೆ ಮೊದಲು ತೆರೆದುಕೊಂಡಿದ್ದು  ಸಿರಿಂಜ್‌ ಬಾಟಲಿಗಳು ಹಾಗೂ ಅದರ ಮೇಲಿರುತ್ತಿದ್ದ ರಬ್ಬರ್‌. ಅದನ್ನು ಜೋಡಿಸುತ್ತಾ ರಂಗನಾಥ ಸ್ವಾಮಿ ಗೋಪುರದ ನೋಟ ನೀಡಿ ಹಿಗ್ಗಿದರು.

ನಂತರದ ದಿನಗಳಲ್ಲಿ ಸಿಗರೇಟ್‌ ಪ್ಯಾಕೆಟ್‌, ಬೆಂಕಿಕಡ್ಡಿಗಳನ್ನು ಬಳಸಿ ವಿವಿಧ ಕಲಾಕೃತಿಗಳನ್ನು ಜಗದೀಶ್‌ ಮಾಡಿದ್ದರು. ಅಲ್ಲಿಂದ ಪ್ರಾರಂಭವಾದ ಅವರ ಕ್ರಿಯಾಶೀಲ ಕಣ್ಣಿಗೆ ಬಿದ್ದಿದ್ದು ಅರಳಿ ಎಲೆಗಳು. ನೆಲದ ಮೇಲೆ ಬಿದ್ದು ವ್ಯರ್ಥವಾಗುವ ಈ ಎಲೆಯನ್ನೇಕೆ ತಮ್ಮ ಪ್ರಯೋಗಕ್ಕೆ ಒಗ್ಗಿಸಿಕೊಳ್ಳಬಾರದೆಂಬ ಯೋಚನೆ ಇದ್ದಕ್ಕಿದ್ದಂತೆ ತಲೆಯಲ್ಲಿ ಸೇರಿತು.

ಅಂದಿನಿಂದಲೇ ಪ್ರಯೋಗಗಳು ಆರಂಭವಾದವು. ಅರಳಿ ಎಲೆ, ತುಪ್ಪದ ಹೀರೆಕಾಯಿ, ಗುಲ್‌ಮೊಹರ್‌ ಹೂವು, ಮಲ್ಲಿಗೆ ಹೂ, ಕನಕಾಂಬರ ಹೂ, ಪಪ್ಪಾಯಿ ಎಲೆ, ಬಾದಾಮಿ ಎಲೆ, ತೆಂಗಿನ ಚಿಪ್ಪು, ಹಾಳಾದ ಮದರ್‌ ಬೋರ್ಡ್‌, ಗ್ರಾಮಾಫೋನ್‌ಗಳು ಇವೆಲ್ಲವನ್ನೂ ತಮ್ಮ ಪ್ರಯೋಗಗಳಿಗೆ ಬಳಸಿಕೊಂಡರು.

ಹೀಗೆ ಎಲೆ, ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡ ಜಗದೀಶ್ ಬಗೆಬಗೆಯ ಲ್ಯಾಂಪ್, ಟೇಬಲ್ ಮ್ಯಾಟ್, ಕಿವಿಯೋಲೆ, ಕೀ ಚೈನ್, ಟೇಬಲ್ ಟಾಪ್ ಮುಂತಾದವುಗಳನ್ನು ವಿನ್ಯಾಸಗೊಳಿಸಿದ್ದಾರೆ. ಅಲ್ಲದೆ ಇವರ ಸೃಜನಶೀಲ ಮನಸಿಗೆ ಸಿಕ್ಕು ಹಳೆಯ ಕ್ಯಾಸೆಟ್‌ಗಳು, ಪೆನ್ಸಿಲ್‌ನ ಉಳಿಕೆ, ಹಾಳಾದ ವಾಚ್, ಈರುಳ್ಳಿ- ಬೆಳ್ಳುಳ್ಳಿ ಸಿಪ್ಪೆ, ಹೀರೆಕಾಯಿ- ಹಾಗಲಕಾಯಿ ಸಿಪ್ಪೆಗಳೂ ಮಾರುಕಟ್ಟೆಯಲ್ಲಿ ಕಲಾವಸ್ತುಗಳಾಗಿ ಮಾರಾಟಕ್ಕಿವೆ.

ಜಗದೀಶ್ ನಿರ್ಮಿಸಿರುವ ವಿವಿಧ ಟೇಬಲ್‌ ಮ್ಯಾಟ್, ಹ್ಯಾಂಗಿಂಗ್ ಬರ್ಡ್, ಕಿವಿಯೋಲೆಗಳು, ಲ್ಯಾಂಪ್‌ಗಳಿಗೆ ವಿದೇಶದಲ್ಲಿಯೂ ಬೇಡಿಕೆ ಇದೆ. ಹಳೆಯ ನಾಣ್ಯಗಳಿಂದ ಮಾಡಿದ ಕಿವಿಯೋಲೆಗಳು, ಮ್ಯಾಟ್‌ಗಳು, ಹ್ಯಾಂಗಿಂಗ್‌ ಬರ್ಡ್‌ಗಳು ಸಿಂಗಪುರದಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ನಿತ್ಯವೂ ಒಂದಿಲ್ಲೊಂದು ಹೊಸ ಕಲಾ ವಸ್ತುವನ್ನು ಹುಡುಕುವ ತವಕದಲ್ಲಿರುವ ಜಗದೀಶ್, ಇಂಥ ಸುಮಾರು 250ಕ್ಕೂ ಹೆಚ್ಚು ಬಗೆಯ ವಿನ್ಯಾಸ ಮಾಡಿದ್ದಾರೆ.

ಅಂದಹಾಗೆ ಇವರು ಓದಿದ್ದು ಪಿಯುಸಿವರೆಗೆ ಮಾತ್ರ. ‘ಕೆಲವರು ಅರಳಿ ಎಲೆ ಸೇರಿದಂತೆ ಹಲವಾರು ಎಲೆಗಳನ್ನು ಬಣ್ಣಗಳ ಮೂಲಕ ಮೂಡಿಸುವುದನ್ನು ನೋಡಿದ್ದೆ. ಪ್ರಕೃತಿ ಇಷ್ಟು ವೈವಿಧ್ಯದ ಎಲೆಗಳನ್ನು ನೀಡಿದೆ. ಅವುಗಳಲ್ಲಿರುವ ರೇಖೆಗಳೇ ಚಿತ್ರಗಳಂತೆ ಕಾಣುತ್ತವೆ. ಅಷ್ಟು ಸೊಗಸಾದ ಕಲೆ ಪ್ರಕೃತಿಯಲ್ಲೇ ಮಿಳಿತಗೊಂಡಿದೆ. ಹೀಗಾಗಿ ಯಾಕೆ ಅದನ್ನೇ ಬಳಸಿಕೊಳ್ಳಬಾರದು ಎಂದುಕೊಂಡೆ.

ಚಿಕ್ಕಂದಿನಿಂದಲೂ, ಬಳಸಿ ಎಸೆದ ವಸ್ತುಗಳನ್ನು ಸಂಗ್ರಹಿಸಿ ಅದನ್ನು ಹೊಸತಾಗಿಸುತ್ತಿದ್ದವ ನಾನು. ಆ ಪ್ರಯತ್ನದಲ್ಲಿಯೇ ಹೊಸ ಹೊಸ ಚಿಂತನೆಗಳು ಬಂದವು. ಪ್ರಾರಂಭದಲ್ಲಿ ತುಂಬಾ ಕಷ್ಟ ಎನಿಸಿತು. ಆದರೆ ನಿಧಾನವಾಗಿ ಕೈ ಪಳಗಿತು. ಈಗ ನನ್ನ ಮನಸಿಗೆ ಬಂದ ಸಾಕಷ್ಟು ವಿನ್ಯಾಸಗಳನ್ನು ಕಾರ್ಯರೂಪಕ್ಕೆ ಇಳಿಸುವುದು ಸುಲಭವಾಗಿದೆ’ ಎನ್ನುತ್ತಾರೆ ಜಗದೀಶ್.

ಪ್ರಾರಂಭದಲ್ಲಿ ಜಗದೀಶ್ ತಾವೇ ಇಂಥ ಸಾಮಗ್ರಿಗಳ ಪೂರ್ಣ ಪ್ರಕ್ರಿಯೆಯನ್ನು ಮಾಡುತ್ತಿದ್ದರು. ಎಲೆಯ ಭಾಗ ಹಾಳಾಗದಂತೆ ರಕ್ಷಿಸಲು ಅವುಗಳಿಗೆ ಕೈಯಿಂದಲೇ ಪ್ಲಾಸ್ಟಿಕ್ ಹೊದಿಕೆ ಹಾಕುತ್ತಿದ್ದರು. ಲ್ಯಾಂಪ್‌ಗಳಿಗೆ ಅಗತ್ಯವಾದ   ಕ್ಯಾನ್ವಾಸ್‌ ತಂದು ಲ್ಯಾಮಿನೇಟ್ ಮಾಡುತ್ತಿದ್ದರು. ಆದರೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದ್ದಂತೆ ಲ್ಯಾಮಿನೇಟ್ ಪ್ರಕ್ರಿಯೆಯನ್ನು ಬೇರೆಯವರಿಂದ ಮಾಡಿಸಿಕೊಳ್ಳುತ್ತಾರೆ.

ಜಗದೀಶ್‌ ಅವರ ಈ ಕಲಾ ದಾರಿಯಲ್ಲಿ ಇನ್ನೊಂದು ವೈಶಿಷ್ಟ್ಯವಿದೆ. ಅವರು ಬಳಸುವುದೆಲ್ಲಾ ನೈಸರ್ಗಿಕ ಬಣ್ಣಗಳು. ತಮ್ಮ ಕಲೆಗೆ ಬೇಕಾದ ಬಗೆಬಗೆಯ ಬಣ್ಣಗಳನ್ನು ಅವರು ನಿತ್ಯ ಬಳಕೆ ವಸ್ತುಗಳಿಂದಲೇ ತಯಾರಿಸಿಕೊಳ್ಳುತ್ತಾರೆ. ಬೆಲೆ ತೆತ್ತು ಏನನ್ನೂ ತಂದುಕೊಳ್ಳದ ಅವರು ಎಲೆಗಳಿಗೆ ವಿವಿಧ ಬಣ್ಣಗಳ ಚೆಲುವು ನೀಡಲು ತಾವೇ ಹೊಸ ಮಾರ್ಗ ಹುಡುಕಿಕೊಂಡಿದ್ದಾರೆ.

‘ಸುಮಾರು ಹದಿಮೂರು ಹದಿನಾಲ್ಕು ವರ್ಷಗಳಿಂದ ನಾನು ಇದೇ ಕೆಲಸ ಮಾಡುತ್ತಿದ್ದೇನೆ. ಆದರೆ ಕಳೆದ ಐದಾರು ವರ್ಷದಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹೋಟೆಲ್‌ಗಳಲ್ಲಿಯೂ ಅನೇಕರು ನಾನು ಮಾಡಿದ ವಸ್ತುಗಳನ್ನು ಖರೀದಿಸುತ್ತಾರೆ. ವಿದೇಶಗಳಲ್ಲಿಯೂ ಬೇಡಿಕೆ ಇದೆ. ನನ್ನ ಪತ್ನಿ ಆಶಾ ಕೂಡ ನನ್ನ ಶ್ರಮಕ್ಕೆ ಕೈ ಜೋಡಿಸುತ್ತಾರೆ. 100 ಹ್ಯಾಂಡ್ಸ್‌ ಸಂಸ್ಥೆ ನನ್ನ ಬೆಳವಣಿಗೆಗೆ ತುಂಬಾ ಸಹಾಯ ಮಾಡಿದೆ.  ಸೂರ್ಯಪ್ರಕಾಶ್‌ ಎನ್ನುವವರ ಮಾರ್ಗದರ್ಶನವೂ ಇದಕ್ಕೆ ಕಾರಣ’ ಎನ್ನುತ್ತಾರೆ ಜಗದೀಶ್‌.

ಬೇರೆ ಬೇರೆ ಕಡೆ ನಡೆಯುವ ವಸ್ತುಪ್ರದರ್ಶನ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇಂಥ ಪರಿಸರಸ್ನೇಹಿ ವಸ್ತುಗಳನ್ನು ಜನಪ್ರಿಯಗೊಳಿಸಿದ್ದಾರೆ. ವಿಭಿನ್ನತೆ ಮೆರೆಯುವ ಎಂಥದ್ದೇ ಕಲೆಯಿರಲಿ ಜನರು ಅದನ್ನು ಮೆಚ್ಚಿ, ಪೋಷಿಸುತ್ತಾರೆ ಎನ್ನುವ ನಂಬಿಕೆ ಜಗದೀಶ್‌ ಅವರದ್ದು.

ಅವರ ಸಂಪರ್ಕಕ್ಕೆ: 98450 27539. ಅವರ ಕಲಾ ಕೈಚಳಕ ನೋಡಲು, www.facebook.com/aralikale/photos/ಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT