ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡುಮಕ್ಕಳು ಮತ್ತು ಸಂಸ್ಕಾರ

ಸಂಗತ
Last Updated 25 ಜನವರಿ 2017, 20:22 IST
ಅಕ್ಷರ ಗಾತ್ರ

ಮಹಿಳೆಯ ಮೇಲಿನ ದೌರ್ಜನ್ಯದ ಕುರಿತ ಬಹುತೇಕ ಚರ್ಚೆಗಳು ಮುಖ್ಯವಾಗಿ ಸರ್ಕಾರದ ವೈಫಲ್ಯ, ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ಕಲೆ ಕಲಿಸುವುದು ಮುಂತಾದ ವಿಷಯಗಳ ಸುತ್ತ ನಡೆಯುತ್ತವೆ. ಆದರೆ ಸಮಸ್ಯೆಯ ಶಾಶ್ವತ ಪರಿಹಾರದ ಮೂಲವಾದ, ಗಂಡುಮಕ್ಕಳ ಪಾಲನೆಯ ಪ್ರಶ್ನೆಯನ್ನೂ ಚರ್ಚೆಯ ಪ್ರಮುಖ ವಿಚಾರವಾಗಿ ತೆಗೆದುಕೊಳ್ಳಬೇಕಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದವರ ತಾಯಿ-ತಂದೆ ಅವರನ್ನು ಯಾವ ರೀತಿ ಬೆಳೆಸಿದ್ದಾರೆ ಎಂಬ ಬಗ್ಗೆ ಅಧ್ಯಯನ ನಡೆಸಬೇಕಿದೆ.

ನಮ್ಮ ಕುಟುಂಬಗಳಲ್ಲಿ ಗಂಡುಮಕ್ಕಳ ಪಾಲನೆಯನ್ನು ಸಾಮಾನ್ಯವಾಗಿ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ‘ಹುಡುಗ ಅಲ್ವಾ, ಏನೂ ಚಿಂತೆ ಇಲ್ಲ’ ಎಂಬ ಭಾವನೆಯಿಂದಲೇ ಪಾಲಕರು ನಡೆದುಕೊಳ್ಳುತ್ತಾರೆ. ಆದರೆ ಹೆಣ್ಣು ಮಕ್ಕಳನ್ನು ಬೆಳೆಸುವುದಕ್ಕಿಂತ ಗಂಡುಮಕ್ಕಳನ್ನು ಬೆಳೆಸುವುದು ಹೆಚ್ಚು ಸವಾಲಿನ ಕೆಲಸ. ಹೆಣ್ಣುಮಕ್ಕಳನ್ನು ಒಂದೆರಡು ವಿಷಯಗಳಲ್ಲಿ ಗಮನಿಸಿಕೊಂಡರೆ ಸಾಕಾಗುತ್ತದೆ. ಗಂಡುಮಕ್ಕಳ ವಿಷಯ ಹಾಗಲ್ಲ. ‘ಇವನು ಯಾರ ಜೊತೆ ಹೊಡೆದಾಟಕ್ಕಿಳಿದಿರುತ್ತಾನೋ, ಜೂಜಾಟಕ್ಕೆ ಹೋಗುತ್ತಾನೋ, ಹುಡುಗಿಯರ ವಿಷಯದಲ್ಲಿ ಏನಾದರೂ ಅಸಂಬದ್ಧ ಮಾಡಿಕೊಂಡು ಹೊಡೆತ ತಿಂದು ಬರ್ತಾನೋ’ ಮುಂತಾದ ಅನೇಕ ಅಂಶಗಳ ಬಗ್ಗೆ ಪಾಲಕರು ಎಚ್ಚರ ಇಟ್ಟುಕೊಳ್ಳಬೇಕಾಗುತ್ತದೆ.

ಜೈವಿಕವಾಗಿ ಗಂಡಿಗೆ ಧಾರಣಾಶಕ್ತಿ ಹೆಣ್ಣಿಗಿಂತ ಕಡಿಮೆ. ಆದ್ದರಿಂದಲೇ ಆತ್ಮಹತ್ಯೆಯ ಅಂಕಿ ಅಂಶಗಳಲ್ಲಿ ಗಂಡುಮಕ್ಕಳ ಪ್ರಮಾಣ ಹೆಣ್ಣುಮಕ್ಕಳ ಆತ್ಮಹತ್ಯೆಯ ಪ್ರಮಾಣಕ್ಕಿಂತ ಎರಡು ಪಟ್ಟು ಜಾಸ್ತಿ. ಹೆಣ್ಣಿನ ಚಿಂತನಾ ಕ್ರಮದಲ್ಲಿ ಕನ್ವರ್ಜೆಂಟ್ ಸ್ವರೂಪ ಜಾಸ್ತಿ ಇರುತ್ತದೆ. ಗಂಡಿನ ಚಿಂತನಾ ಕ್ರಮದಲ್ಲಿ ಡೈವರ್ಜೆಂಟ್ ಸ್ವರೂಪ ಜಾಸ್ತಿ ಇರುತ್ತದೆ. ವ್ಯವಸ್ಥೆ ಪುರುಷ ಪ್ರಧಾನ ಇರುವುದರಿಂದ ಗಂಡುಮಕ್ಕಳು ಹೆಣ್ಣು ಮಕ್ಕಳಿಗಿಂತ ಜಾಸ್ತಿ ಸಾಮಾಜೀಕರಣಕ್ಕೆ ಒಳಗಾಗುತ್ತಾರೆ. ಆದ್ದರಿಂದ ಅವರು ಕೆಟ್ಟು ಹೋಗಲು ಇರುವ ಅವಕಾಶಗಳೂ ಜಾಸ್ತಿಯೇ ಇರುತ್ತವೆ. ಹೆಣ್ಣುಮಕ್ಕಳು ಸಂಸ್ಕಾರವನ್ನು ಸಹಜವಾಗಿ ರೂಢಿಸಿಕೊಳ್ಳುತ್ತಾರೆ. ಗಂಡುಮಕ್ಕಳಲ್ಲಿ ಅಶಿಸ್ತು ಜಾಸ್ತಿ. ಅವರಲ್ಲಿ ಪ್ರಯತ್ನಪೂರ್ವಕವಾಗಿ ಸಂಸ್ಕಾರವನ್ನು ರೂಢಿಸಬೇಕಾಗುತ್ತದೆ.

ಲೈಂಗಿಕತೆಗೆ ಸಂಬಂಧಿಸಿದಂತೆ ಗಂಡುಮಕ್ಕಳ ಸಮಸ್ಯೆಗಳು ಅಗೋಚರ ರೂಪದ ಮಾನಸಿಕ ಆತಂಕಗಳಾಗಿರುತ್ತವೆ. ಗಂಡು ಎಂದೂ ದುರ್ಬಲನಾಗಲೇಬಾರದು ಎಂಬ ನಮ್ಮ ನಂಬಿಕೆಗಳು ಗಂಡುಮಕ್ಕಳಲ್ಲಿ ತಮ್ಮ ಲೈಂಗಿಕ ಸಾಮರ್ಥ್ಯದ ಕುರಿತಾಗಿ ಅನೇಕ ಆತಂಕಗಳನ್ನು ಸೃಷ್ಟಿಸುತ್ತವೆ.  ಇದರೊಂದಿಗೆ ವ್ಯಾವಹಾರಿಕ ಬದುಕಿನಲ್ಲಿ ಗಂಡಿಗೆ ವಿಶೇಷವಾದ ಸಮಸ್ಯೆ ಉಂಟಾಗುತ್ತದೆ. ಅದು ಆತ ಗಳಿಸಿಕೊಳ್ಳಬೇಕಾದ ಆರ್ಥಿಕ ಶಕ್ತಿಗೆ ಸಂಬಂಧಿಸಿದ್ದು. ಉದ್ಯೋಗವು ಹೆಣ್ಣಿನ ಪಾಲಿಗೆ ‘ಬೇಕಾದರೆ ಹೋಗಬಹುದು, ಬೇಡದಿದ್ದರೆ ಹೋಗದೆಯೂ ಇರಬಹುದು’ ಎಂಬ ಅವಕಾಶ. ಆದರೆ ಗಂಡಿಗೆ ಈ ಆಯ್ಕೆಯಿಲ್ಲ. ತನಗೆ ಉದ್ಯೋಗ ಬೇಡ ಎನ್ನಲು ಅವನಿಗೆ ಅಧಿಕಾರವಿಲ್ಲ. 

‘ನನ್ನನ್ನು ಸಾಕಲು ಆಗದಿದ್ದ ಮೇಲೆ ಏಕೆ ಮದುವೆ ಮಾಡ್ಕೊಂಡೆ’ ಎಂದು ಗಂಡನನ್ನು ಪ್ರಶ್ನಿಸುವ ಅವಕಾಶ ಹೆಣ್ಣಿಗಿದೆ. ಈ ಮಾತನ್ನು ಹೆಂಡತಿಯ ಮುಂದಿಡುವ ಅವಕಾಶ ಗಂಡಿಗಿಲ್ಲ. ಹೀಗಿರುವಾಗ ಗಂಡುಮಕ್ಕಳ ಬೆಳವಣಿಗೆಯಲ್ಲಿ ಸೂಕ್ತ ಮಾರ್ಗದರ್ಶನದ ಅಗತ್ಯ ಇಲ್ಲ ಎಂಬ ಪಾಲಕರ ಮನೋಧರ್ಮ ಗಂಡುಮಕ್ಕಳಿಗೂ, ಹೆಣ್ಣುಮಕ್ಕಳಿಗೂ, ಸಮಾಜಕ್ಕೂ ಹಾನಿಕಾರಕವಾಗಿ ಪರಿಣಮಿಸುತ್ತದೆ.

ಪ್ರತಿ ಕಾಲಘಟ್ಟದ ಸಮಾಜವೂ ತನ್ನದೇ ಆದ ಅವಶ್ಯಕತೆ, ಸಮಸ್ಯೆ, ಸವಾಲುಗಳನ್ನು ಹೊಂದಿರುತ್ತದೆ. ಹಿಂದಿನ ಕಾಲಕ್ಕೆ ಮಕ್ಕಳಿಗೆ ಹಣ ಗಳಿಸುವುದೇ ಸಮಸ್ಯೆಯಾಗಿತ್ತು. ಸಾಕಷ್ಟು ಗಂಡುಮಕ್ಕಳು ಅಲ್ಲೋ ಇಲ್ಲೋ ಕೆಲಸ ಮಾಡಿಕೊಂಡು ಬಂದ ಹಣದಿಂದ ವಿದ್ಯಾಭ್ಯಾಸ ಮಾಡುವುದೂ ಇತ್ತು. ಹಣ ಕೈಯಲ್ಲಿ ಇಲ್ಲದೆ ಇದ್ದಾಗ ಹೇಗೆ ಒಳ್ಳೆಯದನ್ನು ಮಾಡಲು ಆತ್ಮವಿಶ್ವಾಸ ಇರುವುದಿಲ್ಲವೋ ಹಾಗೆಯೇ ಕೆಟ್ಟದ್ದನ್ನು ಮಾಡುವುದಕ್ಕೂ ಆತ್ಮವಿಶ್ವಾಸ ಇರುವುದಿಲ್ಲ.  ಹಣ ಕೈಯಲ್ಲಿ ಇಲ್ಲದಾಗಲೇ ಮನುಷ್ಯ ಜವಾಬ್ದಾರಿಯುತವಾಗಿ ಆಲೋಚಿಸಲು ಕಲಿಯುವುದು. ಒಂದು ಕಾಲದ ಜೀವನ ಸನ್ನಿವೇಶವೇ ಹಾಗಿತ್ತು.

ಕೆಟ್ಟ ಆಲೋಚನೆ ಬಂದರೂ, ಅದನ್ನು ಮಾಡಲು ಹೊರಟರೆ ಏನಾದೀತೊ ಎಂಬ ಭಯ ಇತ್ತು. ಇದರರ್ಥ ಒಂದು ಕಾಲಕ್ಕೆ ಕಾನೂನು ಬಹಳ ಸಶಕ್ತವಾಗಿತ್ತೆಂದಲ್ಲ. ಕಾನೂನು ಆಗಲೂ ಇದ್ದದ್ದು ಹೆಚ್ಚು ಕಡಿಮೆ ಈಗಿನಂತೆಯೇ. ಆದರೆ ಕಾನೂನು ದುರ್ಬಲ ಎಂಬುದು ಸಾರ್ವತ್ರಿಕವಾಗಿ ಗೊತ್ತಾಗಿರಲಿಲ್ಲ!
ಈಗ ಹಾಗಲ್ಲ. ಮಕ್ಕಳ ಕೈಗೆ ಬೇಕಾದ ಹಾಗೆ ಹಣ ಸಿಗುತ್ತಿದೆ. ಹಾಗೆಂದು ಮಕ್ಕಳಿಗೆ ಹಣ ಕೊಡಬಾರದು ಎನ್ನುವುದು ಒಣ ವೇದಾಂತವಾಗುತ್ತದೆ. ತಂದೆ-ತಾಯಿ ಬಳಿ ಹಣ ಇದ್ದಾಗ ‘ಮಗನಿಗೆ ಕೊಡೋಣ’ ಎಂದು ಅನಿಸುವುದು ಸಹಜ. ಹಾಗೆಯೇ, ತಂದೆ-ತಾಯಿ ಬಳಿ ಹಣ ಇದ್ದಾಗಲೂ ಮಗನಿಗೆ ಕೊಡದಿದ್ದರೆ ಮಗನಿಗೆ ತಂದೆ-ತಾಯಿ ಮೇಲೆ ತಿರಸ್ಕಾರ ಮೂಡುವುದಕ್ಕೂ ಕಾರಣವಾಗುತ್ತದೆ.

ಆದರೆ ಆ ಹಣವನ್ನಿಟ್ಟುಕೊಂಡು ತಾನು ಏನು ಮಾಡಿಯೂ ದಕ್ಕಿಸಿಕೊಳ್ಳಬಹುದು ಎಂಬ ಚಿಂತನೆ ಮಗನಲ್ಲಿ ಬರುವುದನ್ನು ತಂದೆ ತಾಯಿ ತಪ್ಪಿಸಬಹುದು. ಹಾಗೆಂದು ಮಗ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಾಗ ತಂದೆ-ತಾಯಿ ಮಗನನ್ನು ಕೈಬಿಟ್ಟು ಕಾನೂನಿನ ಪರವಾಗಿರಬೇಕು ಎನ್ನುವುದು ಒಂದು ಸುಂದರವಾದ ಭಾಷಣ ಆಗಬಹುದೆ ಹೊರತು, ವಾಸ್ತವ ಆಗಲಾರದು. ಆದರೆ ಸಿಕ್ಕಿ ಹಾಕಿಕೊಳ್ಳುವಂಥ ತಪ್ಪನ್ನು ಮಗ ಮಾಡದ ಹಾಗೆ ಬೆಳೆಸಲು ಸಾಧ್ಯವಿದೆ. ಆಗಬೇಕಿರುವ ಕೆಲಸ ಇದು.

ತಂದೆ-ತಾಯಿ ಮಕ್ಕಳಿಗೆ ಏನನ್ನೂ ಹೇಳುವುದಿಲ್ಲವೆಂದಲ್ಲ. ‘ನೀನು ಹಾಗೆ ಮಾಡಬಾರದು, ಹೀಗೆ ಮಾಡಬಾರದು, ನಮ್ಮ ಕಾಲದಲ್ಲಿ ಎಷ್ಟೆಲ್ಲ ಕಷ್ಟ ಇತ್ತು ಗೊತ್ತುಂಟಾ’ ಎಂದೆಲ್ಲ ಹೇಳಿಯೇ ಹೇಳುತ್ತಾರೆ. ಆದರೆ ಆ ಮಾತು ಮಕ್ಕಳ ಮೇಲೆ ಬೀರಬೇಕಾದ ಪರಿಣಾಮ ಬೀರಿವೆಯೇ, ಇಲ್ಲವೇ ಎಂದು ಪರಿಶೀಲಿಸಲು ಹೋಗುವುದಿಲ್ಲ.

ಇದು ಸರಿ ಹೋಗಬೇಕಾದರೆ ಗಂಡುಮಕ್ಕಳನ್ನು ಬಾಲ್ಯದಿಂದಲೇ ತಂದೆ-ತಾಯಿ, ಅದರಲ್ಲೂ ತಂದೆ, ಸರಿ ದಾರಿಯಲ್ಲಿ ತರಬೇಕು. ಏಕೆಂದರೆ ಗಂಡು ಮಗುವಿನ ಬೆಳವಣಿಗೆಯ ಎಲ್ಲ ಹಂತಗಳ ಅನುಭವ ಇರುವುದು ತಂದೆಗೆ. ಮೇಲಾಗಿ ತಾಯಿ ಮಗುವನ್ನು ಪ್ರೀತಿಸುವ ಕ್ರಮಕ್ಕೂ, ತಂದೆ ಪ್ರೀತಿಸುವ ಕ್ರಮಕ್ಕೂ ವ್ಯತ್ಯಾಸ ಇರುತ್ತದೆ. ತಂದೆ ಬುದ್ಧಿ ಹೇಳಿದಾಗ ಗಂಡುಮಕ್ಕಳು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ.

ಮಕ್ಕಳಲ್ಲಿ ಸಂಸ್ಕಾರ ರೂಪಿಸಬೇಕಾದರೆ ಬುದ್ಧಿ ಹೇಳುವುದಕ್ಕಿಂತ ಅರಿವು ಹುಟ್ಟಿಸುವುದು ಹೆಚ್ಚು ಉಪಯುಕ್ತ. ಶಾಲೆಯಿಂದ ಬಂದ ಮಗ ಯಾವುದೋ ಹುಡುಗಿಯ ಬಗ್ಗೆ ಲಘುವಾಗಿ ಮಾತನಾಡಿದರೆ, ತಾಯಿ ಬಗ್ಗೆ ಯಾರಾದರೂ ಲಘುವಾಗಿ ಮಾತಾಡಿದರೆ ಆಗ ಮಗನ ಪ್ರತಿಕ್ರಿಯೆ ಏನಾಗಿರುತ್ತದೆ ಎಂಬ ಅರಿವು ಹುಟ್ಟಿಸಬೇಕು. ಹದಿಹರೆಯಕ್ಕೆ ಬಂದಾಗ ಲೈಂಗಿಕತೆಯನ್ನು ಜೋಕಾಗಿ ತೆಗೆದುಕೊಳ್ಳಬಾರದು, ಅದು ತುಂಬಾ ಗಂಭೀರ ವಿಷಯ ಎಂಬ ಅರಿವು ಹುಟ್ಟಿಸಬೇಕು.

20 ವರ್ಷದವರೆಗೆ ಗಂಡುಮಕ್ಕಳನ್ನು ಹೆಣ್ಣು ಮಕ್ಕಳಿಗಿಂತ ಹೆಚ್ಚು ಎಚ್ಚರಿಕೆಯಿಂದ ಬೆಳೆಸಿದರೆ ಅವನು ಕುಟುಂಬಕ್ಕೆ ಮಾತ್ರ ಅಲ್ಲ, ಸಮಾಜಕ್ಕೆ ಸಂಪನ್ಮೂಲವಾಗುತ್ತಾನೆ. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕೆ ನಿಜವಾದ ಪರಿಹಾರವಿರುವುದು ಹೆಣ್ಣುಮಕ್ಕಳಿಗೆ ಕರಾಟೆ ಕಲಿಸುವುದರಲ್ಲಲ್ಲ; ಗಂಡುಮಕ್ಕಳನ್ನು ಸುಸಂಸ್ಕೃತರನ್ನಾಗಿಸುವುದರಲ್ಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT