ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಯುಎಇ ಬಾಂಧವ್ಯ ಬಲವರ್ಧನೆಗೆ ಮರುವ್ಯಾಖ್ಯಾನ

ಸಂಪಾದಕೀಯ
Last Updated 25 ಜನವರಿ 2017, 20:22 IST
ಅಕ್ಷರ ಗಾತ್ರ

ಇಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಅರಬ್ ಒಕ್ಕೂಟದ (ಯುಎಇ) 179  ಸೈನಿಕರು  ಗಣರಾಜ್ಯೋತ್ಸವದ ಪರೇಡ್‌ನ ನೇತೃತ್ವ ವಹಿಸುವರು ಎಂಬುದು ವಿಶೇಷ ಸಂಗತಿ.  

ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ  ವಿದೇಶಾಂಗ ನೀತಿಯ ಪ್ರಮುಖ ಯಶಸ್ಸಿನಲ್ಲಿ ಕೊಲ್ಲಿ ರಾಷ್ಟ್ರಗಳೊಂದಿಗೆ ಬಾಂಧವ್ಯ ಸುಧಾರಣೆ ಮುಖ್ಯವಾದುದು. ಕೊಲ್ಲಿ ರಾಷ್ಟ್ರಗಳೊಂದಿಗೆ ಒಂದು ಬಗೆಯ  ಔಪಚಾರಿಕ ಬಾಂಧವ್ಯವನ್ನು ಭಾರತ  ಈ ಹಿಂದಿನಿಂದಲೂ ಹೊಂದಿತ್ತು. ಆದರೆ ಹೊಸದೊಂದು ಆತ್ಮೀಯತೆ ಈಗ ಸಾಧ್ಯವಾಗಿದೆ. ಇದಕ್ಕೆ ಪ್ರತೀಕವಾಗಿ ನಹ್ಯಾನ್ ಅವರು ಮಂಗಳವಾರ ಭಾರತಕ್ಕೆ ಬಂದಿಳಿದಾಗ  ಶಿಷ್ಟಾಚಾರವನ್ನು ಬದಿಗೊತ್ತಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡಿದ್ದಾರೆ.  

2015ರಲ್ಲಿ ಅಬುಧಾಬಿಗೆ ಮೋದಿಯವರು ಭೇಟಿ ನೀಡಿದ್ದರು. 34 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ನೀಡಿದ ಭೇಟಿಯಾಗಿತ್ತು ಅದು ಎಂಬುದನ್ನೂ ಸ್ಮರಿಸಬಹುದು. ಭಾರತದ ಆರ್ಥಿಕ ಪ್ರಗತಿಯಲ್ಲಿ ಕೊಲ್ಲಿ ರಾಷ್ಟ್ರಗಳ ಪ್ರಾಮುಖ್ಯವನ್ನು ಕಡೆಗಣಿಸಲಾಗದು. ಸುಮಾರು 80 ಲಕ್ಷ  ಭಾರತೀಯರು ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿದ್ದಾರೆ. ಹೆಚ್ಚಿನವರು ಸೌದಿ ಅರೇಬಿಯಾ, ಯುಎಇ, ಕುವೈಟ್‌ಗಳಲ್ಲಿ ಇದ್ದಾರೆ. ಅದರಲ್ಲೂ ಏಳು ಅರಬ್ ಸಂಸ್ಥಾನಗಳ ಒಕ್ಕೂಟವಾಗಿರುವ ಯುಎಇಯ ಜನಸಂಖ್ಯೆಯಲ್ಲಿ ಶೇ 30ರಷ್ಟು ಭಾರತೀಯ ಸಮುದಾಯದವರಿದ್ದಾರೆ. ಅಲ್ಲಿ  ಸುಮಾರು 20.6 ಲಕ್ಷ ಭಾರತೀಯ ಕೆಲಸಗಾರರಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಅಬುಧಾಬಿ ಯುವರಾಜ ನಹ್ಯಾನ್ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವುದು ಮುಖ್ಯವಾದುದು. ಈ ಸಂದರ್ಭದಲ್ಲಿ ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸುಮಾರು ₹ 5 ಲಕ್ಷ ಕೋಟಿ ಹೂಡಿಕೆಗೆ ಸಹಿ ಹಾಕಲಾಗುತ್ತಿದೆ.  ಬಾಹ್ಯಾಕಾಶ ಸಂಶೋಧನೆ, ಅಣುಶಕ್ತಿ, ಸಮುದ್ರಯಾನ ಮತ್ತು ಸಾರಿಗೆ, ಕೃಷಿ,  ಕೈಗಾರಿಕೆ, ಸಂಶೋಧನೆ ಇತ್ಯಾದಿ ಕ್ಷೇತ್ರಗಳಲ್ಲಿ 16 ದ್ವಿಪಕ್ಷೀಯ ಒಪ್ಪಂದಗಳಿಗೆ ಈ ಭೇಟಿ ಮುನ್ನುಡಿ ಬರೆಯುತ್ತಿದೆ ಎಂಬುದು ಮುಖ್ಯವಾದದ್ದು. ನಾಗರಿಕ ಮೂಲ ಸೌಕರ್ಯಗಳಲ್ಲಿ ಹಣ ಹೂಡಿಕೆಯಲ್ಲದೆ  ರಕ್ಷಣಾ ಉತ್ಪಾದನೆವರೆಗೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಯುಎಇ ದಿಟ್ಟ ಕಾರ್ಯಸೂಚಿ ಮುಂದಿಟ್ಟಿದೆ ಎಂಬುದು ಮುಖ್ಯ.

ಕಳೆದ  ಎರಡೂವರೆ ವರ್ಷಗಳಲ್ಲಿ ಉಭಯ ರಾಷ್ಟ್ರಗಳ ಮಧ್ಯದ ವ್ಯಾಪಾರ ಬಾಂಧವ್ಯ ಬಹಳಷ್ಟು ವೃದ್ಧಿಯಾಗಿದೆ ಎಂಬುದೂ ಇಲ್ಲಿ ಉಲ್ಲೇಖಾರ್ಹ.   ಭಾರತ ಮತ್ತು ಯುಎಇ ನಡುವಣ ವಾರ್ಷಿಕ ವಹಿವಾಟಿನ ಮೊತ್ತ ₹ 4.08 ಲಕ್ಷ ಕೋಟಿ. ಅಮೆರಿಕ ಹಾಗೂ ಚೀನಾ ನಂತರ ಈ ಕೊಲ್ಲಿ ರಾಷ್ಟ್ರ ಭಾರತದ ಮೂರನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.  ಈ  ಆರ್ಥಿಕ ಬಾಂಧವ್ಯ  ದೊಡ್ಡ ಪ್ರಮಾಣದಲ್ಲಿ ಮುಂದುವರಿಯುತ್ತಲೇ ಇದೆ. ಇದರ ನಡುವೆಯೇ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯುಎಇ ಹೊಸ ಮಿತ್ರ ರಾಷ್ಟ್ರವಾಗಿರುವುದು ಹೆಚ್ಚು ಬಲ ತುಂಬುವಂತಹದ್ದು.  

ಆಫ್ಘಾನಿಸ್ತಾನದಲ್ಲಿ ತೊಂದರೆ ಸೃಷ್ಟಿಸುವಲ್ಲಿನ ಪಾಕಿಸ್ತಾನದ ಪಾತ್ರದ ಬಗ್ಗೆ ಯುಎಇ ಹಾಗೂ ಭಾರತ ಎರಡೂ ರಾಷ್ಟ್ರಗಳೂ ಒಂದೇ ಬಗೆಯ ಕಾಳಜಿ ಹೊಂದಿವೆ. ಆಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಇತ್ತೀಚೆಗಷ್ಟೇ ನಡೆದ ಬಾಂಬ್‌ ದಾಳಿಯಲ್ಲಿ ಐವರು ಯುಎಇ ರಾಜತಾಂತ್ರಿಕರು ಜೀವ ಕಳೆದುಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ನಹ್ಯಾನ್ ಅವರ ಭಾರತ ಭೇಟಿ ಹಾಗೂ ಉಭಯ ರಾಷ್ಟ್ರಗಳ ಮಧ್ಯೆ  ಒಪ್ಪಂದಗಳ ಸಹಿ ಹೊಸ ಭರವಸೆಗಳನ್ನು ಮೂಡಿಸುವಂತಹದ್ದು. ದೊಡ್ಡ ಬದಲಾವಣೆಗೂ ಇದು ಕಾರಣವಾಗಬಹುದು. ದೆಹಲಿಯಲ್ಲಿ ಇತ್ತೀಚೆಗಷ್ಟೇ ನಡೆದ ‘ರೈಸಿನಾ ಸಂವಾದ’ದಲ್ಲಿ, ‘ಸೌದಿ ಅರೇಬಿಯಾ, ಯುಎಇ, ಕತಾರ್ ಹಾಗೂ ಇರಾನ್‌ ಸೇರಿದಂತೆ ಕೊಲ್ಲಿ ಹಾಗೂ ಪಶ್ಚಿಮ ಏಷ್ಯಾ ರಾಷ್ಟ್ರಗಳ ಜೊತೆಗಿನ ಬಾಂಧವ್ಯವನ್ನು ಅನಿಶ್ಚಯ ಹಾಗೂ ಸಂಘರ್ಷದ ನಡುವೆಯೂ ಅಲ್ಪಾವಧಿಯಲ್ಲಿ ಮರು ವ್ಯಾಖ್ಯಾನಿಸಿದ್ದೇವೆ’ ಎಂದು ಮೋದಿ ಹೇಳಿದ್ದರು ಎಂಬುದನ್ನು ಮತ್ತೊಮ್ಮೆ ಇಲ್ಲಿ ಸ್ಮರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT