ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಲಿನೊಳಗೆ ಸಿಲುಕಿದ ಕಥೆ

ರಯೀಸ್‌ ಚಿತ್ರ ವಿಮರ್ಶೆ
Last Updated 25 ಜನವರಿ 2017, 19:30 IST
ಅಕ್ಷರ ಗಾತ್ರ

ರಯೀಸ್‌ (ಹಿಂದಿ)

ನಿರ್ಮಾಪಕ: ರಿತೇಶ್ ಸಿಧ್ವಾನಿ, ಫರ್‍ಹಾನ್ ಅಖ್ತರ್‌, ಗೌರಿ ಖಾನ್
ನಿರ್ದೇಶಕ: ರಾಹುಲ್ ಧೊಲಾಕಿಯಾ
ತಾರಾಗಣ: ಶಾರುಖ್ ಖಾನ್‌, ನವಾಜುದ್ದಿನ್ ಸಿದ್ದಿಕಿ, ಮಹಿರಾ ಖಾನ್, ಅತುಲ್ ಕುಲಕರ್ಣಿ, ಮೊಹಮ್ಮದ್‌ ಅಯುಬ್‌

ದೃಷ್ಟಿದೋಷವುಳ್ಳ ಹುಡುಗನ ಬಳಿ ಕನ್ನಡಕ ಕೊಳ್ಳಲು ಹಣವಿಲ್ಲ. ಗಾಂಧೀಜಿ ಪ್ರತಿಮೆಯಲ್ಲಿನ ಗಾಜು ಇಲ್ಲದ ಕನ್ನಡಕವನ್ನು ಕದ್ದು, ಅದಕ್ಕೆ ಗಾಜು ಹಾಕಿಸಿಕೊಳ್ಳುತ್ತಾನೆ. ಆದರೆ ಆತ ಜಗತ್ತನ್ನು ನೋಡುವುದು ಗಾಂಧೀಜಿ ಬಯಸಿದ ನೋಟದಿಂದಲ್ಲ, ಬದಲಾಗಿ ಗಾಂಧಿ ತತ್ವಕ್ಕೆ ವಿರುದ್ಧ ದಿಕ್ಕಿನಲ್ಲಿ.

ತನ್ನನ್ನು ಯಾರಾದರೂ ಕುರುಡ ಎಂದು ಕರೆದರೆ ಆತನಿಗೆ ಕಡುಕೋಪ. ಗುಜರಾತ್‌ನ ಲಿಕ್ಕರ್ ದಂಧೆಯ ಚಟುವಟಿಕೆ ಆತನಿಗೆ ಚಿರಪರಿಚಿತ. ಶಾಲೆಗೆ ಹೋಗುವಾಗ ಚೀಲದಲ್ಲಿ ಮದ್ಯದ ಬಾಟಲಿಗಳನ್ನು ಕೊಂಡೊಯ್ದು, ಪೊಲೀಸರ ಕಣ್ಣುತಪ್ಪಿಸುವ ಚತುರ. ಅಕ್ರಮ ಎನ್ನುವುದು ಆ ಪ್ರದೇಶದ ಜನರ ಪಾಲಿಗೆ ಸಕ್ರಮ. ಮುಂದೆ ಮದ್ಯದ ದಂಧೆ ಆತನ ವೃತ್ತಿಯೂ ಆಗುತ್ತದೆ. ಮದ್ಯದ ದೊರೆಯೊಬ್ಬನ ಬಳಿ ಕೆಲಸ ಮಾಡುತ್ತಿದ್ದಾತ, ತನ್ನದೇ ಸಾಮ್ರಾಜ್ಯ ಕಟ್ಟುತ್ತಾನೆ. ಶಹರದ ಜನರಿಗೆ ಆತ ತಮ್ಮ ಬದುಕಿಗೆ ಆಸರೆಯಾಗುವ ಪರೋಪಕಾರಿ.

‘ಡಾನ್‌ 2’ ಚಿತ್ರದಲ್ಲಿ ಪಾತಕಿಯ ಪೋಷಾಕು ಧರಿಸಿದ್ದ ಶಾರುಖ್ ಖಾನ್, ಕಡಿಮೆ ತೂಕದ ಪಾತ್ರದೊಳಗೆ ಇಳಿಯುವ ಸಾಹಸ ಮಾಡಿದ್ದಾರೆ. ಅಕ್ರಮ ಚಟುವಟಿಕೆಗಳೇ ತುಂಬಿರುವ ತನ್ನ ಸುತ್ತಲಿನ ಪ್ರಪಂಚದೊಳಗೆ ಒಂದಾಗುವ ‘ರಯೀಸ್‌’, ಅದನ್ನು ಆಳುವ ಮಟ್ಟಕ್ಕೆ ಏರುವ ಹಪಹಪಿಗೆ ಒಳಗಾಗುವುದು ಮತ್ತು ಸಂಘರ್ಷದೊಳಗೆ ಸಿಲುಕುವುದು ಕಥೆಯ ವಸ್ತು. ಭೂಗತ ಪಾತಕಿ ಅಬ್ದುಲ್ ಲತೀಫ್‌ನ ಬದುಕನ್ನು ಆಧರಿಸಿದ ಕಥೆ ಎನ್ನಲಾದ ಈ ಚಿತ್ರದಲ್ಲಿ, ಕಥೆಯಲ್ಲಿನ ಸಾಧಾರಣ ಗುಣಕ್ಕೆ ರೋಚಕತೆಯನ್ನಾಗಲೀ ಅಥವಾ ಭಾವತೀವ್ರತೆಯನ್ನಾಗಲೀ ಮೂಡಿಸುವ ಶಕ್ತಿ ಇಲ್ಲ.

ನಾಯಕನನ್ನು ‘ರಾಬಿನ್‌ಹುಡ್‌’ನಂತೆ ಚಿತ್ರಿಸುವ ನೆಪದಲ್ಲಿ ಆತನ ಕೃತ್ಯಗಳನ್ನು ಸಮರ್ಥಿಸುವ ಕಥೆ, ‘ಖಳ’ನಾಯಕ ವಿಜೃಂಭಿಸುವ ಸಿನಿಮಾಗಳ ಸಾಲಿಗೆ ಸೇರಿಕೊಳ್ಳುತ್ತದೆ. ಆಗಾಗ್ಗೆ ಹಾಸ್ಯದ ದಾಟಿಯನ್ನು ತರುವ ಪ್ರಯತ್ನ ಗಂಭೀರ ನಿರೂಪಣೆಯ ಓಘಕ್ಕೆ ಕಡಿವಾಣ ಹಾಕುತ್ತದೆ. ಭಾವುಕತೆಯಲ್ಲಿ ತೋಯಿಸುವ ಉದ್ದೇಶದ ಸನ್ನಿವೇಶಗಳು ಸಹ ತೀವ್ರತೆಯನ್ನು ಉಳಿಸಿಕೊಳ್ಳುವುದಿಲ್ಲ. ನಿರ್ದೇಶಕ ರಾಹುಲ್‌ ಧೊಲಾಕಿಯಾ ಹೆಚ್ಚಿನ ಸಮಯವನ್ನು ನಾಯಕನ ಚಾಣಾಕ್ಷತೆ ತೋರಿಸುವ ಸಲುವಾಗಿಯೇ ಮೀಸಲಿಟ್ಟಿದ್ದಾರೆ.

ಗೋಜಲುಗಳಿಲ್ಲದೆ ನೇರವಾಗಿ ನಿರೂಪಿಸಿರುವುದು ಅವರ ಹೆಗ್ಗಳಿಕೆಯಾದರೂ, ಅದರ ತೀಕ್ಷ್ಣತೆಗೆ ಸಿಗಬೇಕಾದ ಮಹತ್ವ ದೊರೆತಿಲ್ಲ. ಹೊಸತನವಿಲ್ಲದ, ಸಡಿಲವಾದ ನಿರೂಪಣೆ ಮದ್ಯ ಸಾಮ್ರಾಜ್ಯದ ದೊರೆಯೊಬ್ಬ, ತಾನೇ  ಅಮಲೇರಿಸಿಕೊಂಡು ಓಲಾಡಿದಂತೆ ಭಾಸವಾಗುತ್ತದೆ.

ಆಧುನಿಕ ಸೌಲಭ್ಯಗಳಿಲ್ಲದ 80ರ ದಶಕದ ಕಾಲಘಟ್ಟದ ಕಥೆಯನ್ನು ಹೇಳುವಾಗ, ಅಂತಹ ಪರಿಸರವನ್ನು ಕಟ್ಟಿಕೊಡುವಲ್ಲಿ ರಾಹುಲ್‌ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ. ಗುಜರಾತ್‌ನ ಪಟ್ಟಣವೊಂದರ ಪರಿಸರ ಚಿತ್ರಕ್ಕೊಂದು ಕಚ್ಚಾ ಸೌಂದರ್ಯ ನೀಡುತ್ತದೆ. ಅದರ ಹೊರತಾಗಿ ಅವರ ಶ್ರಮ ಕಾಣಿಸುವುದು ಪೊಲೀಸ್‌ ಅಧಿಕಾರಿ ನವಾಜುದ್ದಿನ್ ಸಿದ್ದಿಕಿ ಅವರ ಪಾತ್ರ ಸೃಷ್ಟಿಯಲ್ಲಿ ಮಾತ್ರ.

ಶಾರುಖ್ ಇಡೀ ಸಿನಿಮಾದ ಕೇಂದ್ರವಾದರೂ, ಸಿದ್ದಿಕಿ ಅಭಿನಯ ಅವರ ವರ್ಚಸ್ಸನ್ನು ಮೀರುತ್ತದೆ. ರಾಜಕಾರಣ, ಪೊಲೀಸರ ಭ್ರಷ್ಟಾಚಾರ, ತಣ್ಣಗೆ ಕಾಣುವ ಭೂಗತ ಪ್ರಪಂಚದಲ್ಲಿನ ಕ್ರೌರ್ಯ, ಇವೆಲ್ಲವುಗಳ ಮುಖಗಳನ್ನು ಅನೇಕ ಹಿಂದಿ ಚಿತ್ರಗಳು ಚಿತ್ರಿಸಿವೆ. ನಿರ್ದೇಶಕರು ಅವುಗಳನ್ನೇ ಇಲ್ಲಿ ಸ್ಫೂರ್ತಿಯಾಗಿ ಪಡೆದುಕೊಂಡಿದ್ದಾರೆ. ಶಾರುಖ್ ಮತ್ತು ಮಹಿರಾ ಖಾನ್‌ ಪ್ರೇಮಕಥೆಗೆ ಹೆಚ್ಚಿನ ಆದ್ಯತೆ ಸಿಕ್ಕಿಲ್ಲ. ಚಿಕ್ಕದಾಗಿದ್ದರೂ ಈ ಪ್ರೇಮ ಪ್ರಸಂಗಗಳು ಮುದ ನೀಡುತ್ತವೆ.

ಪಾಕಿಸ್ತಾನದ ನಟಿ ಮಹಿರಾ ಖಾನ್‌ ನಟನೆಯಲ್ಲಿ ಶಾರುಖ್‌ಗೆ ಸಾಟಿಯಾಗುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರ ಪಾತ್ರಕ್ಕೆ ಸಿಕ್ಕಿರುವ ಅವಕಾಶ ಕಡಿಮೆ. ತಾಂತ್ರಿಕವಾಗಿ ‘ರಯೀಸ್‌’ ಪ್ರಖರವಾಗಿದೆ. ದೀಪಾ ಭಾಟಿಯ ಸಂಕಲನ ಮತ್ತು ಮೋಹನನ್‌ ಛಾಯಾಗ್ರಹಣ ನಿರ್ದೇಶನದ ವೈಫಲ್ಯಗಳನ್ನು ಮರೆಮಾಚಿಸುವ ಸಾಹಸ ಮಾಡುತ್ತದೆ. ರಾಮ್ ಸಂಪತ್‌ ಸಂಗೀತಕ್ಕೆ ಪ್ರಾಮುಖ್ಯವಿಲ್ಲ. ಸನ್ನಿ ಲಿಯೋನ್‌ ಕಾಣಿಸಿಕೊಂಡಿರುವ ಹಳೆಯ ಹಾಡಿನ ಹೊಸ ಅವತರಣಿಕೆ ಚಿತ್ರದ ಆಕರ್ಷಣೆಗಳಲ್ಲಿ ಒಂದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT