ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ನಾನಾ ಮುಖ

Last Updated 26 ಜನವರಿ 2017, 19:30 IST
ಅಕ್ಷರ ಗಾತ್ರ

*ನಿಮಗೆ ವಾಸ್ತುಶಿಲ್ಪ ಕ್ಷೇತ್ರದಲ್ಲಿ  ಆಸಕ್ತಿ ಬೆಳೆಯಲು ಕಾರಣ?
ನನ್ನ ತಂದೆ ವಾಸ್ತುಶಿಲ್ಪಿ. ಬಾಲ್ಯದಿಂದಲೂ ಅವರ ವೃತ್ತಿಯನ್ನು ಸಮೀಪದಿಂದ ನೋಡುತ್ತ ಬೆಳೆದಿದ್ದರಿಂದ ನನಗೂ ಈ ಕ್ಷೇತ್ರದಲ್ಲಿ ಆಸಕ್ತಿ ಬೆಳೆಯಿತು.

*ಓದು ಮತ್ತು ವೃತ್ತಿ ಬೆಳವಣಿಗೆಯ ಬಗ್ಗೆ ತಿಳಿಸಿ?
ನಗರದ ರಾಮಯ್ಯ ಕಾಲೇಜಿನಲ್ಲಿ ವಾಸ್ತುಶಿಲ್ಪ ವಿಷಯದಲ್ಲಿ ಪದವಿ ಪಡೆದೆ. ದೆಹಲಿಯ ಸ್ಕೂಲ್‌ ಆಫ್‌ ಪ್ಲಾನಿಂಗ್‌ ಅಂಡ್‌ ಆರ್ಕಿಟೆಕ್ಟ್‌ನಲ್ಲಿ ಉನ್ನತ ಶಿಕ್ಷಣ ಮಾಡಿದ್ದೇನೆ. ಅಲ್ಲಿ ಅರ್ಬನ್‌ ಪ್ಲಾನಿಂಗ್‌ ವಿಷಯದಲ್ಲಿ ಪರಿಣತಿ ಪಡೆದೆ.  ಹಾವೇರಿಯಲ್ಲಿ ತುಂಬಾ ಹಿಂದುಳಿದ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಪ್ರಾಜೆಕ್ಟ್‌ ಮಾಡಿದ್ದೇನೆ. ಕಾಮನ್‌ವೆಲ್ತ್‌ ಕ್ರೀಡೆ ಸಮಯದಲ್ಲಿ ಮೂರು ಸ್ಟೇಡಿಯಂಗಳಿಗೆ  ಪ್ರಧಾನ ಆರ್ಕಿಟೆಕ್ಟ್‌ ಆಗಿ ಕೆಲಸ ಮಾಡಿದ್ದೇನೆ. ನಂತರ ಹಲವು ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇನೆ. ಹದಿನೈದು ವರ್ಷದಿಂದ ನಮ್ಮದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. 

*ವಾಸ್ತುಶಿಲ್ಪ ಕ್ಷೇತ್ರದಲ್ಲಿ ಯಾವ ಅಂಶ ಇಷ್ಟವಾಗುತ್ತದೆ?
ಇದು  ಸೃಜನಾತ್ಮಕ ಕ್ಷೇತ್ರ. ಪ್ರತಿ ಪ್ರಾಜೆಕ್ಟ್‌ ತನ್ನದೇ ಆದ ರೀತಿಯಲ್ಲಿ ಭಿನ್ನವಾಗಿರುತ್ತದೆ. ಯಾವಾಗಲೂ ಒಂದೇ ರೀತಿಯ ಕೆಲಸ ಮಾಡಬೇಕೆಂಬ ಬೇಸರ ಇರುವುದಿಲ್ಲ. ಏಕತಾನತೆ ಇಲ್ಲದ ಉದ್ಯೋಗವಿದು. ಕ್ರಿಯಾತ್ಮಕವಾಗಿ ಕೆಲಸ ಮಾಡುವುದರಿಂದ ಉತ್ಸಾಹ ಹೆಚ್ಚುತ್ತಿರುತ್ತದೆ. 

*ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿಯಿದೆ?
ಅರ್ಬನ್‌ ಪ್ಲಾನಿಂಗ್‌,  ಒಳಾಂಗಣ ವಿನ್ಯಾಸದಲ್ಲಿ ಆಸಕ್ತಿಯಿದೆ.

*ಇಲ್ಲಿಯವರೆಗೂ ನಿರ್ಮಿಸಿರುವ ಕಟ್ಟಡಗಳು?
ವಿಜಾಪುರ, ಬಾಗಲಕೋಟೆ, ಬಳ್ಳಾರಿ, ಬೀದರ್‌ನಲ್ಲಿ ಹಲವು ಆಸ್ಪತ್ರೆ ಮತ್ತು ಶೈಕ್ಷಣಿಕ ಕಟ್ಟಡಗಳನ್ನು ನಿರ್ಮಿಸಿದ್ದೇನೆ.
ನಾಗಮಂಗಲದಲ್ಲಿರುವ ನೇತ್ರಪತಿ ಎಜುಕೇಷನ್‌ ಅಂಡ್‌ ರಿಸರ್ಚ್‌ ಸೆಂಟರ್‌ನ ಟ್ರೀಟ್‌ಮೆಂಟ್‌ ಸೆಕ್ಷನ್‌, ಆಡಳಿತ ಮಂಡಳಿ, ಸ್ನಾತಕೋತ್ತರ ಕಟ್ಟಡ, ಕ್ವಾಟ್ರಸ್‌ ಸೇರಿದಂತೆ ಸುಮಾರು  ಇಪ್ಪತ್ತು ಕಟ್ಟಡ ನಿರ್ಮಿಸುತ್ತಿದ್ದೇನೆ. ಬೆಟ್ಟದ ತಳದಲ್ಲಿರುವ ಅಲ್ಲಿಯ ಪರಿಸರ ತುಂಬಾ ಸುಂದರವಾಗಿದೆ. ಅಲ್ಲಿ 15-20 ಕಟ್ಟಡ ನಿರ್ಮಿಸುತ್ತಿದ್ದೇವೆ. 

*ಕಟ್ಟಡ ನಿರ್ಮಿಸುವಾಗ ವಾಸ್ತುವಿಗೆ ಆದ್ಯತೆ ನೀಡುತ್ತೀರಾ?
ಖಂಡಿತಾ. ನಾವು ಮೂಲ ವಾಸ್ತುವನ್ನು ಅನುಸರಿಸಿಯೇ ಕಟ್ಟಡಗಳನ್ನು ನಿರ್ಮಿಸುತ್ತೇವೆ. ಆದರೆ ಮೂಢನಂಬಿಕೆಗೆ ಆದ್ಯತೆ ನೀಡುವುದಿಲ್ಲ. ವಾತಾವರಣಕ್ಕೆ ಅನುಗುಣವಾಗಿರುವ ವಾಸ್ತುವಿಗಷ್ಟೇ ಮಹತ್ವ ನೀಡುತ್ತೇವೆ. ನಿಜವಾಗಿ ಮೂಲ ವಾಸ್ತು ವೈಜ್ಞಾನಿಕವಾಗಿದೆ. ಅದನ್ನಷ್ಟೇ ಅನುಸರಿಸುತ್ತೇವೆ.

*ಆರ್ಕಿಟೆಕ್ಟ್‌ನ ತತ್ವಕ್ಕೆ ವಾಸ್ತು ತೊಡಕಾಗುತ್ತದೆಯೆ?
ಕೆಲವು ಸಮಯದಲ್ಲಿ ನಮ್ಮ ಆಲೋಚನೆಯೇ ಒಂದಿರುತ್ತದೆ. ಅದನ್ನು ಕಾರ್ಯರೂಪಕ್ಕೆ ತರುವಾಗ ವಾಸ್ತುವಿನ ಕಾರಣವೊಡ್ಡಿ ಗ್ರಾಹಕರು ವಿರೋಧಿಸುತ್ತಾರೆ. ಈಗಂತೂ ಐವತ್ತು ಪ್ರಕಾರದ ವಾಸ್ತು ಬಂದಿದೆ. ಇದು ಸೃಜನಾತ್ಮಕತೆಗೆ ಬಹುದೊಡ್ಡ ತೊಡಕು.

*ನಗರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳು, ಬೆಂಗಳೂರಿನ ಹಿಂದಿನ ಸೌಂದರ್ಯವನ್ನು ಹಾಳು ಮಾಡುತ್ತಿದೆ ಅನಿಸುತ್ತಿದೆಯಾ?
ಖಂಡಿತ ಹಾಳು ಮಾಡುತ್ತಿದೆ. ಪಾಶ್ಚಾತ್ಯ ದೇಶಗಳ ಕಟ್ಟಡಗಳನ್ನು ನೋಡಿ ಇಲ್ಲಿಯೂ ಅದೇ ರೀತಿಯ ಕಟ್ಟಡ ನಿರ್ಮಿಸಿಕೊಡಿ ಎನ್ನುತ್ತಾರೆ. ಇಲ್ಲಿಯ ವಾತಾವರಣಕ್ಕೆ ಅದು ಹೊಂದಿಕೆಯಾಗುತ್ತದೆಯೇ, ಇಲ್ಲವೇ? ಎಂಬುದನ್ನು ನೋಡುವುದಿಲ್ಲ. ಗ್ಲೋಬಲ್‌ ಟ್ರೆಂಡ್‌ ಹೇಗಿದೆ ಎಂಬುದನ್ನು ಚಿಂತಿಸುತ್ತಾರೆ. ನಾವೇ ಆವಿಷ್ಕಾರ ಮಾಡೋಣ ಎಂಬುದನ್ನು ಯೋಚಿಸುವುದಿಲ್ಲ. ವಾಣಿಜ್ಯದ ಉದ್ದೇಶಕ್ಕೆ ನಿರ್ಮಾಣವಾಗುವ ಕಟ್ಟಡಗಳಲ್ಲಿ ಈ ರೀತಿಯ ಧೋರಣೆ ಹೆಚ್ಚು.

*ನೀವು ಈ ವೃತ್ತಿಗೆ ಬಂದಾಗಿನ ಕಾಲಕ್ಕೂ ಈಗ ಏನು ಬದಲಾವಣೆಯಾಗಿದೆ?
ಆಗಿನ ಕಾಲದಲ್ಲಿ ಆರ್ಕಿಟೆಕ್ಟ್‌ಗೆ ತುಂಬಾ ಬೆಲೆ ಇತ್ತು. ದೊಡ್ಡ ಜಾಗ, ಟೇಬಲ್‌ ಇತ್ತು.  ನಾವೆಲ್ಲ ಕೈಯಲ್ಲಿಯೇ ನೀಲನಕ್ಷೆ ಮೂಡಿಸುತ್ತಿದ್ದೆವು. ಕಂಪ್ಯೂಟರ್‌ ಬಳಕೆ ಕಡಿಮೆಯಿತ್ತು.  ಆದರೆ ಈಗ ಬೆಲೆ ಕಡಿಮೆಯಾಗುತ್ತಿದೆ. ಕಂಪ್ಯೂಟರ್‌ನಲ್ಲಿಯೇ ಎಲ್ಲ ಕೆಲಸವನ್ನು ಮಾಡುತ್ತಾರೆ.

*ಯುವ ವಾಸ್ತುಶಿಲ್ಪಿಗಳಿಗೆ ನಿಮ್ಮ ಸಲಹೆಯೇನು?
‘ನಾವು ಏನೇ ಮಾಡಿದರೂ ಜನರ ಒಳಿತನ್ನು ಮರೆಯಬಾರದು. ವಾತಾವರಣ ಹಾಳಾಗದಂತೆ. ನಗರಕ್ಕೆ ಒಳಿತಾಗುವ ರೀತಿಯಲ್ಲಿ  ಕಟ್ಟಡ ನಿರ್ಮಿಸಬೇಕು.’

*ಬೆಂಗಳೂರಿನ ಅಭಿವೃದ್ಧಿಗೆ ನಿಮ್ಮ ಸಲಹೆ?
ಬಿಡದಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡಬೇಕು. ಕೇವಲ ಬಿಡದಿ ಎಂದಲ್ಲ ಸುತ್ತಮುತ್ತ ಪ್ರದೇಶಗಳ ಬೆಳವಣಿಗೆಗೆ ಆದ್ಯತೆ ನೀಡಬೇಕು. ನಗರದಲ್ಲಿರುವ ಗ್ರೀನ್‌ಬೆಲ್ಟ್‌ (ಕೃಷಿ ಪ್ರದೇಶ) ಕಡಿಮೆಯಾಗುತ್ತಿದೆ. ಸಿಟಿ ಅಭಿವೃದ್ಧಿ ಮಾಡುತ್ತೇವೆ ಎಂದು ಬೆಂಗಳೂರಿನ ವಾತಾವರಣಕ್ಕೆ ತೊಂದರೆ ಮಾಡುತ್ತಿದ್ದಾರೆ. ಪ್ರತಿ ಲೇಔಟ್‌ನಲ್ಲಿಯೂ ಇಂತಿಷ್ಟು ಜಾಗವನ್ನು ಮನೆ, ಪಾರ್ಕ್, ರಸ್ತೆಗಾಗಿ ಮೀಸಲಿಡಬೇಕು ಎಂಬ ನಿಯಮವಿದೆ. ಬೆಂಗಳೂರಿನಲ್ಲಿ ಶೇ10ರಷ್ಟು ಪಾರ್ಕ್‌ ಇರಬೇಕು. ಆದರೆ ಈಗ ಇಲ್ಲಿ ಉಳಿದಿರುವುದು ಶೇ 6 ರಷ್ಟು ಮಾತ್ರ. ಅಭಿವೃದ್ಧಿಯ ಓಟದೊಂದಿಗೆ ‘ಪರಿಸರ ಸಮತೋಲನ’ ಹಾಳಾಗದಂತೆ ನೋಡಿಕೊಳ್ಳಬೇಕು. ಬಿಡದಿಯಂಥ ನಗರದ ಸುತ್ತಮುತ್ತಲಿನ ಸ್ಥಳಗಳನ್ನು ಅಭಿವೃದ್ಧಿ ಮಾಡಿ. ನಗರದಿಂದ ಅಲ್ಲಿಗೆ ಲಿಂಕ್‌ ಆಗುವ ಹಾಗೆ ಮಾಡಿದರೆ ನಗರದ ಮೇಲಿನ ಒತ್ತಡ ಕಡಿಮೆ ಮಾಡಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT