ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಸ್ತಕಾಭಿಷೇಕ ಯಶಸ್ಸಿಗೆ ನೆರವು

ಪೂರ್ವ ತಯಾರಿ, ನಿರಂತರ ನಿಗಾವಹಿಸಲು ತೆರೆಯಲಾಗಿರುವ ಕಚೇರಿ ಉದ್ಘಾಟನೆ
Last Updated 27 ಜನವರಿ 2017, 9:39 IST
ಅಕ್ಷರ ಗಾತ್ರ

ಹಾಸನ: ಶ್ರವಣಬೆಳಗೊಳ ಮಹಾ ಮಸ್ತಕಾಭಿಷೇಕದ ಸಂಪೂರ್ಣ ಯಶಸ್ಸಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಎಲ್ಲಾ ರೀತಿಯ ನೆರವು ಒದಗಿಸಲು ಸಿದ್ಧ ಎಂದು ಸಚಿವ ಎ.ಮಂಜು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಮೊದಲನೆ ಮಹಡಿಯಲ್ಲಿ ಮಹಾಮಸ್ತಕಾಭಿಷೇಕದ ಪೂರ್ವ ತಯಾರಿ, ನಿರಂತರ ನಿಗಾವಹಿಸಲು ತೆರೆಯಲಾಗಿರುವ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಮಸ್ತಕಾಭಿಷೇಕವನ್ನು ಅಚ್ಚುಕಟ್ಟಾಗಿ  ನಿರ್ವಹಿಸುವ ಹೊಣೆಗಾರಿಕೆ ಸರ್ಕಾರ, ಜನಪ್ರತಿನಿಧಿಗಳು ಮತ್ತು  ಅಧಿಕಾರಿ, ಸಿಬ್ಬಂದಿಯದ್ದಾಗಿದೆ. ಈಗಾಗಲೇ ಹೆಚ್ಚಿನ ಆರ್ಥಿಕ ನೆರವಿಗೆ ಕೇಂದ್ರಕ್ಕೆ  ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಸಚಿವ ರಾಜನಾಥ್ ಸಿಂಗ್ ಅವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಮನವಿ ಮಾಡಲಾಗುವುದು. ಇದೊಂದು ಉತ್ಸವವಾಗಿದ್ದು, ಕೇವಲ ಬಜೆಟ್‌ನಲ್ಲಿ ಘೋಷಿಸುವ ನೆರವನ್ನಷ್ಟೇ ನಿರೀಕ್ಷಿಸುವ ಅಗತ್ಯವಿಲ್ಲ. ಇತರೆ ಎಲ್ಲಾ ಸಂದರ್ಭಗಳಲ್ಲೂ ಅಗತ್ಯ ಪ್ರಮಾಣದ ಅನುದಾನ ತರಬಹುದಾಗಿದೆ ಎಂದು ಸಚಿವರು ತಿಳಿಸಿದರು. 

ಜಿಲ್ಲಾಧಿಕಾರಿ ವಿ. ಚೈತ್ರಾ ಮಾತನಾಡಿ, ಮಸ್ತಕಾಭಿಷೇಕಕ್ಕೆ ಪೂರಕವಾಗಿ ಅಗತ್ಯವಿರುವ ಎಲ್ಲಾ ಯೋಜನೆಗಳು ಸಿದ್ಧವಾಗಿವೆ. ತಾತ್ಕಾಲಿಕ ಭೂ
ಸ್ವಾಧೀನ ಪ್ರಕ್ರಿಯೆಗೆ ಸ್ಥಳಗಳನ್ನು ಗುರುತಿಸಿ ನಕ್ಷೆ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಸರ್ಕಾರದಿಂದ ₹ 5 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದನ್ನು ಅಟ್ಟಣಿಗೆಗಳ ನಿರ್ಮಾಣ ಸಿದ್ಧತೆಗೆ ಲೋಕೋಪಯೋಗಿ ಇಲಾಖೆ ಮತ್ತು  ತಾತ್ಕಾಲಿಕ ಭೂ ಸ್ವಾಧೀನ ಪ್ರಕ್ರಿಯೆಗೆ ಕಂದಾಯ ಇಲಾಖೆಗೆ ಹಣ ಒದಗಿಸಲಾಗಿದೆ. ಉಳಿದ ಕಾಮಗಾರಿಗಳನ್ನು  ಹಣ ಬಂದ ತಕ್ಷಣ ಪ್ರಾರಂಭಿಸಲಾಗುವುದು ಎಂದು ವಿವರಿಸಿದರು.

ಮಸ್ತಕಾಭಿಷೇಕ ಮಹೋತ್ಸವದ ಕಾರ್ಯಾಧ್ಯಕ್ಷ ಜಿತೇಂದ್ರ ಕುಮಾರ್  ಅವರು  ಮಹೋತ್ಸವದ ಯಶಸ್ಸಿಗೆ ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನು  ಸಚಿವರ ಗಮನಕ್ಕೆ ತಂದರು.

ಅಲ್ಲದೆ ಚಾರುಕೀರ್ತಿ  ಭಟ್ಟಾರಕ ಸ್ವಾಮೀಜಿ ಅವರು ಜಿಲ್ಲಾಧಿಕಾರಿ ವಿ .ಚೈತ್ರಾ ಮತ್ತು ಮಸ್ತಕಾಭಿಷೇಕದ ವಿಶೇಷ ಕರ್ತವ್ಯ ಅಧಿಕಾರಿ ಕೆ.ಎಂ. ಜಾನಕಿ ಅವರಿಗೆ ಬರೆದಿರುವ  ಪತ್ರಗಳನ್ನು ಹಸ್ತಾಂತರಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಜಿಲ್ಲಾಧಿಕಾರಿ ವಿ. ಚೈತ್ರಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಕುಮಾರ್,  ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, 
ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಮಹಮದ್ ರೋಷನ್‌, ಮಸ್ತಕಾಭಿಷೇಕ ಸಮಿತಿ ಪ್ರಧಾನ ಸಂಚಾಲಕ ಪಿ. ವೈ. ರಾಜೇಂದ್ರ ಕುಮಾರ್, ‘ಪ್ರಜಾವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ಮಠದ ಪ್ರತಿನಿಧಿ ಮದನಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT