ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಂದೋಲನ: ಜನರ ಸಹಕಾರಕ್ಕೆ ಮನವಿ

ರಾಮನಗರ ಜಿಲ್ಲೆಯಾದ್ಯಂತ 68ನೇ ಗಣರಾಜ್ಯೋತ್ಸವ ಸಂಭ್ರಮ
Last Updated 27 ಜನವರಿ 2017, 10:10 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ‘ಜಲಾಂದೋಲನ’ದ ಮೂಲಕ ನೀರಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ 68ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಜಿಲ್ಲಾಡಳಿತವು ರಾಜ್ಯದಲ್ಲಿಯೇ ಮೊದಲನೆಯ ಪ್ರಯೋಗ ಎಂಬಂತೆ ಜಲಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಜಲಸಂರಕ್ಷಣೆ ಜೊತೆಗೆ ಅಂತರ್ಜಲ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಸಾರ್ವಜನಿಕರು ಇದಕ್ಕೆ ಕೈಜೋಡಿಸಿದಲ್ಲಿ ಮಾತ್ರ ಜಲ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ’ ಎಂದು ಅವರು ನುಡಿದರು.

ಜನರ ಸಮಸ್ಯೆ ಆಲಿಸುವ ಸಲುವಾಗಿ ಜಿಲ್ಲಾಡಳಿತ ಸಹಾಯವಾಣಿ ತೆರೆದಿದೆ. ಜನರು 80887–33555ಗೆ ಕರೆ ಮಾಡಿ ದೂರು ದಾಖಲಿಸುವ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಅವರು ಸಲಹೆ ನೀಡಿದರು.

‘ನರೇಗಾ ಅನುಷ್ಟಾನದಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಈಗಾಗಲೇ ₹ 208 ಕೋಟಿ ವ್ಯಯಿಸಲಾಗಿದೆ. ಈ ಬಾರಿ ಚೆಕ್‌ಡ್ಯಾಮ್‌ಗಳ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಬರದಿಂದ ಪೀಡಿತರಾದ ₹1.19 ಲಕ್ಷ ರೈತರನ್ನು ಗುರುತಿಸಲಾಗಿದ್ದು, ಶೀಘ್ರವೇ ಬೆಳೆನಷ್ಟ ಪರಿಹಾರವು ಇವರ ಕೈಸೇರಲಿದೆ.

ಕುಡಿಯುವ ನೀರು ಹಾಗೂ ಮೇವು ಪೂರೈಕೆಗಾಗಿ ₹ 4.4 ಕೋಟಿ ಅನುದಾನ ಬಿಡುಗಡೆ ಆಗಿದೆ. ಈಗಾಗಲೇ ಎರಡು ಗೋಶಾಲೆ ತೆರೆಯಲಾಗಿದ್ದು, ಪ್ರತಿ ಹೋಬಳಿಯಲ್ಲಿ ಮೇವು ಬ್ಯಾಂಕ್‌ ಸ್ಥಾಪನೆಗೆ ಸಿದ್ಧತೆ ನಡೆದಿದೆ’ ಎಂದು ಅವರು ವಿವರಿಸಿದರು.

‘ರೈತರಿಗಾಗಿ ಎಚ್‌ವಿಡಿಎಸ್‌ ಯೋಜನೆ ಜಾರಿ, ಹೈನುಗಾರಿಕೆ ಪ್ರೋತ್ಸಾಹಕ್ಕಾಗಿ ಶೀತಲೀಕರಣ ಘಟಕಗಳ ಸ್ಥಾಪನೆ, ಪೋಡಿ ಮುಕ್ತ ಅಭಿಯಾನ, ಬಡವರ ಮನೆಗಳ ಸಕ್ರಮ, ರಾಜೀವ್‌ ಆವಾಸ್‌, ಅಂಬೇಡ್ಕರ್‌ ವಸತಿ ಯೋಜನೆ ಅಡಿ 600 ಮನೆಗಳ ನಿರ್ಮಾಣವು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯು ಅಭಿವೃದ್ಧಿಯತ್ತ ಸಾಗುತ್ತಿದೆ’ ಎಂದು ಅವರು ವಿವರಿಸಿದರು.

‘ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರವು ಈಗಾಗಲೇ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚಿಸಿ ₹5 ಕೋಟಿ ಅನುದಾನ ನೀಡಿದೆ. ಕಣ್ವ ಜಲಾಶಯದ ಬಳಿ ಅತ್ಯಂತ ವಿಶಿಷ್ಟ ಎನ್ನಬಹುದಾದ ಮಕ್ಕಳ ನಗರಿಯನ್ನು ₹ 200 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದೆ’ ಎಂದು ಅವರು ವಿವರಣೆ ನೀಡಿದರು.

ಪ್ರಶಸ್ತಿ ಪ್ರದಾನ: ವಿವಿಧ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ವೇದಿಕೆಯಲ್ಲಿ ಪ್ರದಾನ ಮಾಡಲಾಯಿತು. ಇದೇ ಮೊದಲ ಬಾರಿಗೆ ಜಿಲ್ಲಾಡಳಿತದ ವತಿಯಿಂದ ಉತ್ತಮ ಸೇವೆ ಸಲ್ಲಿಸಿದ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ‘ಸೇವಾ ಸರ್ವೋತ್ತಮ’ ಪುರಸ್ಕಾರ ನೀಡಲಾಯಿತು.

ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಆರ್‌. ಲತಾ, ಉಪ ವಿಭಾಗಾಧಿಕಾರಿ ರಾಜೇಂದ್ರಪ್ರಸಾದ್‌, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಜಾರಿಕಾರರಾದ ಎಚ್‌.ಪಿ. ಉಮಾ, ಜಿಲ್ಲಾಧಿಕಾರಿ ಕಚೇರಿಯ ಪ್ರಥಮದರ್ಜೆ ಸಹಾಯಕ ಬಿ.ಡಿ. ಚರಣ್‌ರಾಜ್‌ ಹಾಗೂ ಸಹಾಯಕ ಕೃಷಿ ಅಧಿಕಾರಿ ಚಿಕ್ಕವೀರಯ್ಯ ಅವರಿಗೆ ಈ ಪ್ರಶಸ್ತಿ ನೀಡಲಾಯಿತು.

ಸಾಯಿ ವಿನಯ್‌, ಎ.ಕೆ. ಶ್ವೇತಾ, ಎಂ.ಎಲ್‌. ಯೋಗೇಶ್‌, ಕಿಶೋರ್‌ ಹಾಗೂ ಜಿ. ರೋಸಿ ಅವರಿಗೆ ಹೊಯ್ಸಳ ಮತ್ತು ಕೆಳದಿ ಚನ್ನಮ್ಮ ಪುರಸ್ಕಾರ ನೀಡಲಾಯಿತು. ರಾಜ್ಯಮಟ್ಟದ ಜೀವರಕ್ಷಕ ಪ್ರಶಸ್ತಿ ಪ್ಪಗೆರೆಯ ಎಂ. ಅರುಣ್‌ಕುಮಾರ್ ಹಾಗೂ ಜಿಲ್ಲಾ ಮಟ್ಟದಲ್ಲಿ ಕೆ.ಬಿ. ದೇವಪ್ಪ ಪಡೆದುಕೊಂಡರು. ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಬೆಳೆ ಕಟಾವು ಸ್ಪರ್ಧೆ ವಿಜೇತರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ. ರಾಜೇಶ್‌, ಉಪಾಧ್ಯಕ್ಷೆ ದಿವ್ಯಾ ಗಂಗಾಧರ್, ನಗರಸಭೆ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷೆ ಸಮೀನಾ ತಾಜ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹದೇವಯ್ಯ, ಮೈಸೂರು ಎಲೆಕ್ಟ್ರಿಕಲ್ಸ್‌ ಇಂಡಸ್ಟ್ರೀಸ್ ಅಧ್ಯಕ್ಷ ಕೆ. ಶೇಷಾದ್ರಿ, ಜಿಲ್ಲಾಧಿಕಾರಿ ಬಿ.ಆರ್. ಮಮತಾ, ಜಿ.ಪಂ. ಸಿಇಓ ಸಿ.ಪಿ. ಶೈಲಜಾ, ಪೊಲೀಸ್‌ ವರಿಷ್ಠಾಧಿಕಾರಿ ಬಿ. ರಮೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್‌ ಇತರರು ವೇದಿಕೆಯಲ್ಲಿ ಇದ್ದರು.
ಕೃಷ್ಣಪ್ಪ ಹಾಗೂ ನೀಲಕಂಠಸ್ವಾಮಿ ನಿರೂಪಿಸಿದರು.

*
ನರೇಗಾ ಅನುಷ್ಠಾನದಲ್ಲಿ ರಾಮನಗರ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಿದೆ. ಇದರಿಂದಾಗಿ ಇಲ್ಲಿನ ಸಾವಿರಾರು ಕುಟುಂಬಗಳಿಗೆ ಉದ್ಯೋಗ ಲಭಿಸಿದೆ.
-ಡಿ.ಕೆ. ಶಿವಕುಮಾರ್,
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT