ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಾನಿಸು... ನಿಧಾನಿಸು!...

Last Updated 27 ಜನವರಿ 2017, 19:30 IST
ಅಕ್ಷರ ಗಾತ್ರ

ಎಲ್ಲೋ ಹೊರಟ್ಬಿಟ್ಟಿದ್ದೀವಿ. ಟ್ರಾಫಿಕ್ ಸಿಗ್ನಲ್ ಸಿಕ್ಬಿಟ್ಟಿದೆ. 120 ಸೆಕೆಂಡು! ಅಯ್ಯೋ ಎಷ್ಟು ಹೊತ್ತು ಕಾಯ್ಬೇಕಪ್ಪಾ? ಹೇಗಾದ್ರೂ, ಯಾವುದಾದ್ರೂ ಕಡೆ ತಿರುಗಿಸಿ 120 ಸೆಕೆಂಡುಗಳನ್ನು ಹೇಗಾದರೂ ಕಡಿಮೆ ಮಾಡೋಕ್ಕೆ ನೋಡುತ್ತೇವೆ ತಾನೆ?! ಅಥವಾ ಸಿಗ್ನಲ್ ಬಿಟ್ಟ ತಕ್ಷಣ ಮುಂದಿನ ಕಾರಿನವನೇನಾದರೂ ಹೊರಡಲಿಲ್ಲ ಅಂದರೆ ಅವನ ಕಿವಿ ರಿಪೇರಿಯಾಗುವ ಹಾಗೆ ಹಾರನ್ ಹಾರನ್!

ಬೆಳಿಗ್ಗೆ ಎದ್ದ ತಕ್ಷಣ? ತಿಂಡಿ ಮಾಡಬೇಕು, ಸ್ನಾನ ಮಾಡಬೇಕು, ಚಿಕ್ಕ ಮಕ್ಕಳಿಗೆ ಹೇಗಾದರೂ ಬಾಯಿಗೆ ತುರುಕಬೇಕು, ಮಕ್ಕಳನ್ನು ಶಾಲೆಗೆ ಬಿಟ್ಟು / ಬಸ್ ಹತ್ತಿಸಿ, ಟ್ರಾಫಿಕ್‌ನಲ್ಲಿ ಆಫೀಸಿಗೆ ಸರಿಯಾದ ಸಮಯಕ್ಕೆ ಬಂದು ಸೇರಬೇಕು. ಮತ್ತೆ ಸಂಜೆ ಹೊರಡುವಾಗಲೂ ಅಷ್ಟೆ. ಮನೆಗೆ ಬಂದ ತಕ್ಷಣ ಎಲ್ಲವೂ ‘ಬೇಗ ಬೇಗ’ ಆಗಬೇಕು.

ಜಗತ್ತೇ ಓಡುತ್ತಿದೆ! ಏನೇ ಕಲಿಯುವುದಕ್ಕೂ ‘ಕ್ರ್ಯಾಷ್ ಕೋರ್ಸ್’, ಆಹಾರಕ್ಕೆ ಇನ್‌ಸ್ಟಂಟ್ ಮಿಕ್ಸ್, ಫಾಸ್ಟ್ ಫುಡ್, ವ್ಯಾಯಾಮ ಮಾಡಬೇಕೆಂದಿದ್ದರೆ ಹೊರಗೆ ಬಂದು ನಡೆಯುವ ಬದಲು ಟ್ರೆಡ್‌ಮಿಲ್ ಮೇಲೆ ಮನೆಯಲ್ಲಿಯೇ ಓಡುವುದು, ಒಟ್ಟಿನಲ್ಲಿ ಇಷ್ಟೆಲ್ಲಾ ಬೇಗ ಮಾಡಿದರೂ ಯಾರಿಗೂ, ಯಾವುದಕ್ಕೂ ಸಮಯವಿಲ್ಲ! ಇಪ್ಪತ್ತನಾಲ್ಕು ಗಂಟೆಗಳೂ ಸಾಲುತ್ತಿಲ್ಲ.

‘ಬೇಗ ಬೇಗ ಮಾಡಿದರೆ ಒಳ್ಳೇದಲ್ವೇ? ಏನು ತೊಂದರೆ? ಎನ್ನುತ್ತೀರಾ?’ ಜಗತ್ತಿನ ಈ ವೇಗ ನಮ್ಮ ಆಹಾರ, ಸಂಬಂಧಗಳು, ಕೊನೆಗೆ ಎಲ್ಲಕ್ಕಿಂತ ಹೆಚ್ಚು ನಮ್ಮ ಆರೋಗ್ಯದ ಮೇಲೆ ಹಲವು ಸಮಸ್ಯೆಗಳನ್ನು ತಂದಿಟ್ಟಿದೆ. ಮಕ್ಕಳಂತೂ ವೇಗದ ‘ಬರ್ನ್‌ ಔಟ್’ ನಿಂದ ನರಳುತ್ತಿದ್ದಾರೆ. ರಕ್ತದೊತ್ತಡ, ಅಪಘಾತಗಳು, ಯಾವುದೇ ಕಾಯಿಲೆಗೆ ಕಾರಣವಾಗುವ ಸಾಧ್ಯತೆಯ ಅಂಶಗಳಲ್ಲಿ ಮೊದಲ ಸ್ಥಾನದಲ್ಲಿರುವ ಒತ್ತಡ ಎಲ್ಲಕ್ಕೂ ಈ ವೇಗ ಕಾರಣವಾಗಿಬಿಟ್ಟಿದೆ.

ಸರಿ, ನಿಧಾನಿಸಿದರಾಯಿತು. ಆದರೆ ಅದು ಅಷ್ಟು ಸುಲಭವಲ್ಲ. ವೇಗವೆಂದರೆ ನಮ್ಮ ಸಾಮಾನ್ಯಾರ್ಥದಲ್ಲಿ ಚುರುಕು, ಚಟುವಟಿಕೆ. ನಿಧಾನ ಎಂದರೆ? ಸೋಮಾರಿತನ, ಕೆಲಸದ ಬಗ್ಗೆ ನಿರ್ಲಕ್ಷ್ಯ, ದಡ್ಡತನ, ಜಾಣತನ. ಹಾಗಾಗಿ ನೀವು ವೇಗವಾಗಿರದಿದ್ದರೆ ಇಂದಿನ ಸಮಾಜ ನಿಮ್ಮನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚು. ನೀವು ಎಷ್ಟು ಸಂತೋಷವಾಗಿ ಇದ್ದೀರಿ ಎಂಬುದಕ್ಕಿಂತ ನೀವು ಎಷ್ಟು ವೇಗವಾಗಿ ಏನನ್ನಾದರೂ ಮಾಡಬಲ್ಲಿರಿ ಎಂಬುದು ಎಲ್ಲರಿಗೂ ಮುಖ್ಯ.

ಹಾಗಿದ್ದರೆ? ರಸ್ತೆಯಲ್ಲಿ ಹೋಗುವಾಗ ಟ್ರಾಫಿಕ್‌ನಿಂದ ನೀವು ಒಂದು ಗಂಟೆ ಕಾಯಬೇಕಾದರೆ, ಅದು ನಿಧಾನಿಸಿದಂತೆಯೇ? ನಮ್ಮ ಮೈಕೈ ಪರಚಿಕೊಳ್ಳುವಂತೆ ಮಾಡುವ ಇದು ನಿಧಾನಿಸುವಿಕೆ ಎನಿಸುವುದಿಲ್ಲ. ಅದೇ ನೀವು ಟೀವಿಯನ್ನು ಆಫ್ ಮಾಡಿ, ಮೊಬೈಲ್ ಬದಿಗಿರಿಸಿ, ನಿಮ್ಮ ಕುಟುಂಬದವರೊಡನೆ ಕುಳಿತು ಆರಾಮವಾಗಿ ಊಟ ಮಾಡುವುದು ನಿಮ್ಮ ಸಮಯದ ಜೊತೆಗೇ ನಿಮ್ಮ ಹೃದಯ-ಶ್ವಾಸಕೋಶ-ರಕ್ತಚಲನೆ ಇವುಗಳನ್ನೂ ನಿಧಾನಿಸಿ, ಆಯುಷ್ಯ ಹೆಚ್ಚಲು ಕಾರಣವಾಗುತ್ತದೆ.

ಮಹಿಳೆಯರಂತೂ ತಮ್ಮ ಊಟ-ತಿಂಡಿಗಳ ಬಗ್ಗೆಯೂ, ಹೊರಗಿನ -ಒಳಗಿನ ಕೆಲಸಗಳ ಬಗ್ಗೆಯೂ ಆವಸರಿಸುವುದನ್ನು ತಮ್ಮ ರೂಢಿಯಾಗಿಸಿಕೊಂಡಿರುತ್ತಾರೆ.  ‘The hurried woman syndrome’ ಎಂಬ ಸಮಸ್ಯೆಯನ್ನು  ಆಧುನಿಕ ಮನೋವಿಜ್ಞಾನ ಹೆಸರಿಸುತ್ತದೆ. ಪ್ರಾಯೋಗಿಕವಾಗಿ ನಿಧಾನಿಸುವುದು ನಿಜವಾಗಿ ಇಂದಿನ ಬದುಕಿನಲ್ಲಿ ಸಾಧ್ಯವೇ? ‘ಸಾಧ್ಯವಿದೆ’ ಎನ್ನುತ್ತವೆ ಸಂಶೋಧನೆಗಳು. ನಿಜವಾಗಿ ಬೇಕಾದ್ದು ಪ್ರಯತ್ನಿಸುವ ಮನಸ್ಸು ಮಾತ್ರ!

ತೂಕ ಇಳಿಸಿಕೊಳ್ಳಲು, ನಿಧಾನಿಸಿ.
ಬೇಗ ಬೇಗ ತಿನ್ನುವುದು ಮೆದುಳಿಗೆ ‘ಸಾಕು’ ಎಂಬ ಸಂಕೇತ ನೀಡುವುದನ್ನು ತಡ ಮಾಡುತ್ತದೆ. ನಾವು ಹೆಚ್ಚು ತಿನ್ನುವಂತೆ ಮಾಡುತ್ತದೆ. ಟೀವಿ ನೋಡುತ್ತಾ ಇ-ಮೇಲ್ ಮಾಡುತ್ತಾ ತಿನ್ನುವುದರ ಬದಲು, 20 ನಿಮಿಷಗಳು ನಿಧಾನವಾಗಿ ಆಹಾರದ ರುಚಿಯ ಬಗ್ಗೆ ಕೇಂದ್ರೀಕರಿಸಿ ತಿನ್ನಲು ಪ್ರಯತ್ನಿಸಿ. ಪರಿಣಾಮ – ನೀವು ಗಮನವಿಟ್ಟು ತಿನ್ನುವಾಗ ಪ್ರತಿದಿನ ನೂರು ಕ್ಯಾಲೊರಿಗಳಷ್ಟು ಹೆಚ್ಚು ಆಹಾರ ನೀವು ತಿನ್ನುವುದನ್ನು ತಡೆಯಬಹುದು. ಅಂದರೆ ವರ್ಷಕ್ಕೆ ಮೂರು ಕೆ.ಜಿ.ಗಳಷ್ಟು ತೂಕ ಹೆಚ್ಚುವುದನ್ನು ತಡೆಯಬಹುದು.

ಒಳ್ಳೆಯ ತಂದೆ-ತಾಯಿಯರಾಗಲು ನಿಧಾನಿಸಿ!
ಮಕ್ಕಳ ಜೊತೆ ಸಮಯ ಕಳೆಯುವುದಂತೂ ಎಷ್ಟು ಕಷ್ಟ?! ಅವರಿಗೆ ಓದಿಸುವ, ಅವರ ಕೆಲಸಗಳನ್ನು ಮಾಡುವ, ಅಡುಗೆ-ಊಟ-ತಿಂಡಿ ಮಾಡುವ, ಅವರಿಗಾಗಿ ಹೊರಗೆ ದುಡಿಯುವ ಅವಸರದಲ್ಲಿ ಅವರ ಜೊತೆ ಆಟವಾಡಲು-ಮಾತನಾಡಲು ಸಮಯವೆಲ್ಲಿದೆ? ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದೇ ನಿಧಾನಿಸುವ ರೀತಿಯಲ್ಲ. ಅದರ ಬದಲು ಅವರಿಗಾಗಿ ಕಳೆಯುವ ಸಮಯವನ್ನೇ ಸ್ವಲ್ಪ ಬೇರೆ ರೀತಿಯಲ್ಲಿ ಕಳೆದರೆ ಆಯಿತು. ಮಕ್ಕಳ ಜೊತೆ ಕುಳಿತು ಮಾತನಾಡುತ್ತಾ ಒಟ್ಟಿಗೆ ಊಟ-ತಿಂಡಿ ಮಾಡುವುದು, ಮನೆ ಕೆಲಸವನ್ನು ಐದು ನಿಮಿಷಗಳ ಕಾಲ ಬದಿಗಿಟ್ಟು ಮಕ್ಕಳೊಡನೆ ಆಟವಾಡುವುದು – ಇಂಥ ಬದಲಾವಣೆಗಳು ಮಕ್ಕಳ ಬಾಲ್ಯವನ್ನು ಸುಂದರವಾಗಿಸುವುದರ ಜೊತೆಗೆ ಹದಿಹರೆಯದ ಸಮಸ್ಯೆಗಳನ್ನು ತಡೆಗಟ್ಟಬಲ್ಲವು.

ಆರೋಗ್ಯಕರ ಹೃದಯಕ್ಕಾಗಿ ನಿಧಾನಿಸಿ!
ಟ್ರಾಫಿಕ್‌ನಲ್ಲಿ ಎರಡು ನಿಮಿಷ ಕಾಯಬೇಕಾಗಿ ಬಂದರೆ ಒತ್ತಡಕ್ಕೊಳಗಾಗಬೇಡಿ. ಕ್ಯೂನಲ್ಲಿ ಬೇಗ ಮುಂದೆ ಹೋಗದಿದ್ದರೆ ಚಡಪಡಿಸಬೇಡಿ. ಒತ್ತಡ-ಚಡಪಡಿಕೆಗಳು ಹೃದಯದ ಮೇಲೆ ಹೊರೆ, ರಕ್ತದೊತ್ತಡದ ಸಾಧ್ಯತೆ ಏರುತ್ತದೆ. ಹಾಗಾಗಿ ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ನಿಧಾನವನ್ನು ನಿಮ್ಮದಾಗಿಸಿಕೊಳ್ಳಿ.

ಶಕ್ತಿ ಹೆಚ್ಚಿಸಿಕೊಳ್ಳಲು ನಿಧಾನ, ನಿಧಾನ!
ಎಲ್ಲವನ್ನೂ ವೇಗವಾಗಿ ಮಾಡಲು ತೊಡಗಿದಾಕ್ಷಣ ಉಸಿರಾಟ ಹೆಚ್ಚುತ್ತದೆ. ಮೆದುಳಿಗೆ ಆಮ್ಲಜನಕ ಕಡಿಮೆಯಾಗುತ್ತದೆ. ಪರಿಣಾಮ? ಸುಸ್ತು-ಆತಂಕ. ದೀರ್ಘ ಉಸಿರಾಟ, ಇದನ್ನು ದೂರವಾಗಿಸಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಗುಟ್ಟು, ಆತಂಕ-ದಣಿವು ಉಂಟಾಗುತ್ತಿದೆ ಎನ್ನುವಾಗ ಆಳವಾಗಿ ಉಸಿರಾಡಿ. 1, 2, 3, 4 ಎಣಿಸಿ. ಸ್ವಲ್ಪ ನಿಧಾನಿಸಿ.

ಕೆಲಸದಲ್ಲಿ ಮುನ್ನುಗ್ಗಲು, ನಿಧಾನಿಸಿ!
ಪ್ರಾಜೆಕ್ಟ್‌ಗಳನ್ನು ಮುಗಿಸಲು ವೇಗವಾಗಿ ಅವಸರಿಸುವುದು, ಹಲವು ಕೆಲಸಗಳನ್ನು ಒಮ್ಮೆಲೇ ಮುಗಿಸಲು ಯತ್ನಿಸುವುದು, ನಮ್ಮ ಕ್ರಿಯಾಶೀಲತೆಯನ್ನು ಕೊಲ್ಲುತ್ತದೆ. ಯಶಸ್ವಿಯಾಗಿ ಮುಗಿಸಲು ಅಡ್ಡಿಯಾಗುತ್ತದೆ. ತಪ್ಪುಗಳು ಹೆಚ್ಚುತ್ತವೆ. ಕೆಲವು ನಿಮಿಷಗಳ ನಿಧಾನತೆ ಮಿದುಳಿನ ಕ್ರಿಯಾಶೀಲತೆ ಹೆಚ್ಚಿಸಿ ನಿಮ್ಮ ಯೋಜನೆಗೆ ಯಶಸ್ಸು ದೊರಕಿಸುತ್ತದೆ.ಅಷ್ಟೇ ಅಲ್ಲ ‘ತೃಪ್ತಿ’ಯನ್ನೂ ತಂದುಕೊಡುತ್ತದೆ.

ವಾಹನಸಂಚಾರದಲ್ಲಿ ಖಂಡಿತ ನಿಧಾನಿಸಿ!
ವಾಹನ ಸಂಚಾರದಲ್ಲಿ ಮುನ್ನುಗ್ಗುವ ಥ್ರಿಲ್ ಬೇಡ. ನಿಮ್ಮ ಹಾಗೂ ಇತರರ ಆರೋಗ್ಯ-ಪ್ರಾಣ ಎರಡನ್ನೂ ನೆನಪಿಡಿ! ಕೆಲವು ನಿಮಿಷಗಳಷ್ಟು ತಡವಾಗುವುದು ನಿಮ್ಮ  ನಿಮ್ಮ ಗುರಿಯಲ್ಲಿ ಹೆಚ್ಚಿನ ವ್ಯತ್ಯಾಸವನ್ನು  ತರಲಾರವು.

ಕೆಲಸದಿಂದ ಹೊರಬಂದು ಜೀವನದ ಗತಿಯನ್ನು ಕೆಲವು ದಿನಗಳಷ್ಟಾದರೂ ನಿಧಾನಿಸಿ. ಪ್ರವಾಸವನ್ನೂ  ಒತ್ತಡವಾಗಿ ಮಾಡಿಕೊಳ್ಳಬೇಡಿ. ‘ಎಂಟು ದಿನದಲ್ಲಿ ನೂರು ಊರುಗಳು!’, ‘ಒಂದು ವಾರದಲ್ಲಿ ನಾಲ್ಕು ದೇಶಗಳು’. ಅದರ ಬದಲು ಎರಡು ದಿನಗಳು ಹತ್ತಿರದ ತಾಣದಲ್ಲಿ ಆರಾಮವಾಗಿ ಕಾಲವನ್ನು ಕಳೆಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ನಿಮ್ಮ ಯೋಚನೆ-ಕನಸುಗಳು-ಚಿಂತೆಗಳು ಎಲ್ಲವನ್ನೂ ಒಂದೆಡೆ ಬರೆಯಿರಿ. ಒತ್ತಡವನ್ನು ಹೊರಹಾಕಿ. ಸ್ನಾನವನ್ನು ನಿಧಾನವಾಗಿ ಮಾಡಿ. ಆನಂದಿಸಿ.

ಹೊಸ ಸೋಪಿನ ಪರಿಮಳ ಆಸ್ವಾದಿಸಿ!
ನಿಧಾನಿಸುವುದು ಸಾಧ್ಯವಿದೆ ಎಂಬುದು ಸ್ಪಷ್ಟ. ಆದರೆ ಅದೆಷ್ಟು ಉಪಯುಕ್ತ ಎಂಬುದು? ಕಾರ್ಲ್ ಹೊನೊರೆ ಎಂಬ ಪತ್ರಕರ್ತ ‘ನಿಧಾನತೆ’ಯನ್ನು ತನ್ನದಾಗಿಸಿಕೊಳ್ಳುತ್ತಾ ಹೇಳಿದ ಮಾತುಗಳಿವು: ‘ನನ್ನ ಪುಟ್ಟ ಮಗನಿಗೆ ರಾತ್ರಿ ಕಥೆಯನ್ನು ಹೇಳುವ ಸಮಯಕ್ಕೆ ನಾನು ಮೊದಲು ಆರಿಸುತ್ತಿದ್ದುದು ‘One minute bed time stories’ (ಒಂದು ನಿಮಿಷದ ಮಲಗುವ ಸಮಯದ ಕಥೆಗಳು). ಅದು ನಾನು ಹೆದರುತ್ತಿದ್ದ ಸಮಯ. ಈಗ ನನ್ನ ಮಗನ ಬಳಿ ಹೋಗುವಾಗ, ನನ್ನ ವಾಚ್-ಕಂಪ್ಯೂಟರ್-ಮೊಬೈಲ್ ಎಲ್ಲವೂ ಪಕ್ಕಕ್ಕೆ.

ಈಗ ಅವನಿಗೆ ಕಥೆ ಹೇಳುವ ಸಮಯ ನಾನು ಬೆಳಗಿನಿಂದ ಕಾಯುವ ಸಮಯ. ನಾನು ಕಥೆ ಹೇಳುತ್ತಿರುತ್ತೇನೆ. ಇದ್ದಕ್ಕಿದ್ದ ಹಾಗೆ ಅವನು ಕೇಳುತ್ತಾನೆ. ‘‘ಅಪ್ಪ, ಇವತ್ತು ನಮ್ಮ ಆಟದ ಮೈದಾನದಲ್ಲಿ ಒಂದು ಬೇಸರದ ಸಂಗತಿ ಏನಾಯಿತು ಗೊತ್ತೆ?’’ ಹೀಗೆ ಎಲ್ಲದರ ಬಗ್ಗೆ ಮಾತು-ಕತೆ ಮುಂದುವರೆಯುತ್ತದೆ! 

ಮೊನ್ನೆ ನಾನು ಮತ್ತೊಂದು ಟೂರ್‌ಗೆ ಹೋಗುವಾಗ ನನ್ನ ಮಗ ಓಡಿ ಬಂದು ಒಂದು ಕಾರ್ಡು ಕೊಟ್ಟ. ಏಕೆ? ಆತ ಹೇಳಿದ್ದು “ಇದು ಜಗತ್ತಿನ ಅತ್ಯುತ್ತಮ ಕಥೆ ಹೇಳುವ ಅಪ್ಪನಿಗೆ” ಅಂತ! ಆಗ ನಾನಂದುಕೊಂಡೆ “ಓ, ನಿಧಾನಿಸುವುದು ನಿಜವಾಗಿ ಕೆಲಸ ಮಾಡುತ್ತದೆ’ ಅಂತ!”
ಹೀಗಾಗಿ ಆರೋಗ್ಯಕ್ಕಾಗಿ, ಸಂತೋಷಕ್ಕಾಗಿ, ನಿಮ್ಮ ಕುಟುಂಬಕ್ಕಾಗಿ ನಿಧಾನಿಸಿ! ನಿಧಾನಿಸಿ!

*20 ನಿಮಿಷಗಳು ನಿಧಾನವಾಗಿ ಆಹಾರದ ರುಚಿಯ ಬಗ್ಗೆ ಕೇಂದ್ರೀಕರಿಸಿ ತಿನ್ನಲು ಪ್ರಯತ್ನಿಸಿ. ಇದರಿಂದ ನೀವು ಪ್ರತಿದಿನ ನೂರು ಕ್ಯಾಲೊರಿಗಳಷ್ಟು ಹೆಚ್ಚು ಆಹಾರ ನೀವು ತಿನ್ನುವುದನ್ನು ತಡೆಯಬಹುದು.

*ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದೇ ನಿಧಾನಿಸುವ ರೀತಿಯಲ್ಲ. ಅದರ ಬದಲು ಮಕ್ಕಳ ಜೊತೆ ಕುಳಿತು ಮಾತನಾಡುತ್ತಾ ಊಟ-ತಿಂಡಿ ತಿನ್ನುವುದು, ಮನೆ ಕೆಲಸವನ್ನು ಐದು ನಿಮಿಷಗಳ ಕಾಲ ಬದಿಗಿಟ್ಟು ಮಕ್ಕಳೊಡನೆ ಆಟವಾಡಿ. ಇದರಿಂದ ಮಕ್ಕಳೂ ಸಂತೋಷವಾಗಿರುತ್ತಾರೆ.

*ಮೆದುಳಿಗೆ ಆಮ್ಲಜನಕ ಕಡಿಮೆಯಾದರೆ ಸುಸ್ತು, ಆತಂಕ ಉಂಟಾಗಬಹುದು. ಇದರಿಂದ ಪಾರಾಗಲು ದೀರ್ಘವಾಗಿ ಉಸಿರೆಳೆದುಕೊಳ್ಳಿ.

*ಕೆಲವು ನಿಮಿಷಗಳ ನಿಧಾನತೆ ಮೆದುಳಿನ ಕ್ರಿಯಾಶೀಲತೆ ಹೆಚ್ಚಿಸಿ ನಿಮ್ಮ ಯೋಜನೆಗೆ ಯಶಸನ್ನು ದೊರಕಿಸುತ್ತದೆ.

*ವಾಹನಸಂಚಾರದಲ್ಲಿ ಮುನ್ನುಗ್ಗುವ ಥ್ರಿಲ್ ಬೇಡ. ಇದರಿಂದ ಕೇವಲ ನಿಮ್ಮದಲ್ಲ, ನಿಮ್ಮ ಹಿಂದೆ, ಮುಂದೆ ಬರುವ ವಾಹನ ಸವಾರರ ಪ್ರಾಣಕ್ಕೂ ಸಂಚಕಾರ ಬರಬಹುದು.

*ಸ್ನಾನ, ಊಟ, ತಿಂಡಿ ಎಲ್ಲವನ್ನೂ ನಿಧಾನವಾಗಿ ಮಾಡಿ. ಇದರಿಂದ ಮನಸ್ಸು ಖುಷಿಯಾಗಿರುತ್ತದೆ. ಪ್ರತಿ ಕೆಲಸವನ್ನು ನಿಧಾನವಾಗಿ ಮಾಡಿ, ಸಂತಸದಿಂದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT