ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಬಾಲ್ಯ ಕದ್ದ ಕಾಗೆಗಳು

ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ – 2017 ಮೂರನೆಯ ಬಹುಮಾನ ಪಡೆದ ಪ್ರಬಂಧ
Last Updated 27 ಜನವರಿ 2017, 19:30 IST
ಅಕ್ಷರ ಗಾತ್ರ

ಅಪ್ಪಯ್ಯನ ಶ್ರಾದ್ಧ ಮುಗಿಯುತ್ತಿದ್ದಂತೆ ಪುರೋಹಿತರು ಬಾಳೆಎಲೆಯಲ್ಲಿ ಹಾಕಿಕೊಟ್ಟ ಪಿಂಡದ ಅನ್ನ, ಎಳ್ಳು, ನೀರು ಮತ್ತು ವಡೆಯ ಚೂರನ್ನು ಅಮ್ಮ ಮತ್ತು ಅಣ್ಣ ತಮ್ಮೊಂದಿರೊಂದಿಗೆ ತಾರಸಿಯ ಮೇಲೆ ಇಟ್ಟು ‘ಕಾ ಕಾ’ ಎಂದು ಗಂಟಲು ಹರಿದು ಹೊಗುವಂತೆ ಕಿರಿಚಿಕೊಂಡರೂ ‘ಕಾ’ ಎಂದು ಒಂದೇ ಒಂದು ಕಾಗೆಯೂ ಹಾರಿ ಬಂದು ಹಾಜರಿ ಹಾಕಲಿಲ್ಲ.

ತೀರಿಕೊಂಡವರು ಕಾಗೆಗಳಾಗಿ ಶ್ರಾದ್ಧದ ದಿನ ಬಂದು ಪಿಂಡದನ್ನ ತಿನ್ನುವರೆಂಬ ನಂಬಿಕೆ; ಯಾರ ಎಲೆಯ ಅನ್ನವನ್ನು ಕಾಗೆ ಬಂದು ಮೊದಲು ತಿನ್ನುತ್ತದೊ ಅವರೇ ತೀರಿಕೊಂಡವರಿಗೆ ಪ್ರೀತಿ ಪಾತ್ರರಾದವರು ಎಂಬ ನಂಬಿಕೆ ಬೇರೆ. ಕಾಗೆಗಳಂತೆ ಕಾಣುವ ಸ್ವಲ್ಪ ಬೂದುಬಣ್ಣದ ಪಾರಿವಾಳಗಳ ಸಾಮ್ರಾಜ್ಯವೇ ಎಲ್ಲೆಲ್ಲೂ. ಎಲ್ಲಿ ಹೋದವು ಈ ಕಾಗೆಗಳು? ಪಾರಿವಾಳಗಳು ದಂಡೆತ್ತಿ ಬಂದು ಕಾಗೆಗಳನ್ನು ಸೋಲಿಸಿ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡವೇ?

ಕಾಗೆಗಳು ಬಂದು ಪಿಂಡದನ್ನ ಸ್ವಿಕರಿಸದಿದ್ದಾಗ ಶ್ರಾದ್ಧ ಅಪೂರ್ಣವಾದಂತೆಯೇ? ತೀರಿಕೊಂಡವರು ಈಗ ಕಾಗೆಗಳಾಗಿ ಬರುತ್ತಿಲ್ಲವೇ? ಇಲ್ಲ, ಈಗ ತೀರಿಕೊಂಡ ಹಿರಿಯರು ಪಾರಿವಾಳಗಳಾಗಿ ಬರುತ್ತಾರೆಂದು ನಂಬುವುದೇ? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಸಿಗದೆ ತಲೆ ಕೆರೆದುಕೊಂಡರೆ ತಲೆಕೂದಲು ಉದುರಿತೇ ವಿನಾ ಉತ್ತರ ಮಾತ್ರ ಸಿಗಲಿಲ್ಲ.

ಮಧ್ಯಮ ಅಥವಾ ದೊಡ್ಡ ಗಾತ್ರದ ಹಕ್ಕಿಗಳೆಂದು ಗುರುತಿಸಬಹುದಾದ ಕಪ್ಪುಬಣ್ಣದ ಕಾಗೆಗಳು ಅನಿಷ್ಟದ ಲಕ್ಷಣವೆಂದು ಎಲ್ಲರೂ ತಿರಸ್ಕರಿಸುತ್ತಿದ್ದರೂ ನನ್ನ ಬಾಲ್ಯದ ನೆನಪಿಗೆ ಅಂಟಿಕೊಂಡು ಗಂಟು ಹಾಕಿ ಕೂತಿದೆ.

ಹಿಂದೆ ಮನೆಯ ಹೊರಗೆ ಕಾಲುಡುತ್ತಿದ್ದಂತೆ ಮೊದಲು ಕಣ್ಣಿಗೆ ಕಾಣುವ ಜೀವಿಗಳಲ್ಲಿ ಕಾಗೆಗಳೂ ಒಂದು, ಒಂದೇ ಮರ ಗಿಡಗಳ ಮೇಲೆ ಕೂತು ‘ಕಾ ಕಾ’ ಎಂದು ಒಡಗಂಟಲಲ್ಲಿ ಕಿರುಚಾಡುತ್ತಲೋ, ಇಲ್ಲವೇ ಅಲ್ಲಿ ಇಲ್ಲಿ ನಿಂತ ನೀರಲ್ಲೇ ಮುಳುಗಿ ಏಳುತ್ತ ಅಡಿಯಲ್ಲಿರುವ ಚಿಕ್ಕ ಚಿಕ್ಕ ಹುಳು–ಹುಪ್ಪಟೆಗಳನ್ನು ಕೊಕ್ಕಿನಿಂದ ಹಿಡಿಯುತ್ತಲೋ, ಇಲ್ಲ ಜೊಲಾಡುತ್ತಿರುವ ವಿದ್ಯುತ್‌ತಂತಿಗಳಲ್ಲಿ ನೇತಾಡಲು ಹೋಗಿ ಪ್ರಾಣತ್ಯಾಗ ಮಾಡಿದ ಕಾಗೆಗಳನ್ನು ಕಾಣಬಹುದಿತ್ತು.

ಕಾಗೆಗಳು ಸತ್ತ ಪ್ರಾಣಿಗಳ ಸುತ್ತ ಹಾರಡುತ್ತ ತನ್ನದೇ ಭಾಷೆಯಲ್ಲಿ ತನ್ನ ಬಂಧುಗಳಿಗೆ ಸುದ್ದಿ ಹೇಳುವುದನ್ನು ನೋಡಿದಾಗ ಆಕಾಶವಾಣಿಯ ಆವಿಷ್ಕಾರ ಇವುಗಳಿಂದಲೇ ಆಯಿತೇನೊ ಎಂದು ಅನ್ನಿಸುತ್ತದೆ. ಒಂದನೇ ಕ್ಲಾಸಿನ 8ನೇ ಪಾಠದಲ್ಲಿ ಬರೆದಂತೆ, ಬೇಸಿಗೆಯಲ್ಲಿ ಒಡಕುಮಡಿಕೆಯ ಚೂರು ನೀರಿಗೆ ಕಷ್ಟಪಟ್ಟು ಕಲ್ಲು ಹಾಕಿ ನೀರು ಮೇಲೆ ಬಂದಾಗ ಕೊಕ್ಕಿನಿಂದ ನೀರು ಕುಡಿಯದೆ ನಲ್ಲಿಯಿಂದ ಬರುವ ಹನಿ ಹನಿ ನೀರನ್ನು ಕೊಕ್ಕಿನಿಂದ ಕುಡಿಯುವುದನ್ನು ದೇವರಾಣೆಗೂ ನೋಡಿದ್ದೇನೆ. 

ಮಳೆಗಾಲದಲ್ಲಿ ಜೋರಾಗಿ ಬೀಸುವ ಮಳೆ–ಗಾಳಿಗೆ ನಾವು ಕೊಡೆ ಹಿಡಿದರೂ ಒದ್ದೆ ಮುದ್ದೆಯಾಗಿ ನಡುಗುತ್ತಿದ್ದರೆ, ಕಾಗೆಗಳು ಮಾತ್ರ ಮಳೆಯಲ್ಲಿ ನೆಂದರೂ ಪಟಪಟನೆ ತಲೆ ಕೊಡವಿ ಫ್ರೆಶ್ ಆಗುತ್ತವೆ.

ಕಪ್ಪುಬಣ್ಣವೆಂದರೆ ಮೂಗು ಮುರಿಯುವ ನನ್ನ ಬಾಲ್ಯದ ಕಾಲದಲ್ಲಿ ಕಾಗೆಗಳು ‘ಕಾ ಕಾ’ ಎಂದು ಮನೆಯ ಮಾಡಿನ ಮೇಲೆ ಕೂತು ದೊಡ್ಡದಾಗಿ ಕಿರಿಚಿಕೊಂಡಾಗಲಂತೂ ‘ಅಯ್ಯಯ್ಯೊ’ ಮನೆಯಲ್ಲಿ ಸಾವು ಹತ್ತಿರ ಬಂತೆಂದು ಹೆದರಿಕೊಂಡು, ಕಂಡ ಕಂಡ ದೇವರಿಗೆಲ್ಲ ಹರಕೆ ಹೊತ್ತುಕೊಳ್ಳುತಿದ್ದ ಜನರಿಗೇನೂ ಕಡಿಮೆ ಇರಲಿಲ್ಲ. ಇನ್ನು ಕಾಗೆಗಳು ಮನೆಯ ಮಾಡಿನ ಮೇಲೆ ಕೂತು ತಿಪ್ಪರಲಾಗ ಹಾಕುತ್ತಿದ್ದರೆ ಕಾಗೆ ‘ಕೂಳು ಬಾಗುತ್ತಿದೆ, ಯಾರೋ ನೆಂಟರು ಬರುತ್ತಿದ್ದಾರೆ’ ಅನ್ನ ಮಾಡಲು ಒಂದು ಮುಷ್ಟಿ ಅಕ್ಕಿ ಜಾಸ್ತಿ ಹಾಕುವವರೂ ಇದ್ದರು.

ಕಾಗೆಗಳ ಮೇಲೆ ಇಷ್ಟೊಂದು ಭರವಸೆ ಇಡುವ ಮನುಷ್ಯರೇ ದಡ್ಡರು. ಕಾಗೆಗಳೇ ತ್ರಿಕಾಲಜ್ಞಾನಿಗಳು. ಕಾಗೆಗಳು ಮಹಾ ಬುದ್ಧಿವಂತ ಪಕ್ಷಿಗಳು. ಕೋಗಿಲೆಯ ಗೂಡಿನಲ್ಲಿ ಅವು ಮೊಟ್ಟೆ ಇಟ್ಟರೆ, ಕೋಗಿಲೆಗಳು ಅವನ್ನು ತಮ್ಮವೇ ಮೊಟ್ಟೆಗಳೆಂದು ಶಾಖ ಕೊಟ್ಟು ಮರಿ ಮಾಡುವವು. ಕಾಗೆಮರಿಗಳು ಸ್ವಲ್ಪ ದೊಡ್ಡವರಾಗುತ್ತಲೇ ‘ಕಾ ಕಾ’ ಎನ್ನುತ್ತ ಕೋಗಿಲೆಯಮ್ಮನಿಗೆ ‘ಟಾ ಟಾ’ ಹೇಳಿ ಹಾರಿ ಹೋಗುತ್ತವೆ.

ಇನ್ನು ಆರ್. ಕೆ. ಲಕ್ಷ್ಮಣರಂತಹ ವ್ಯಂಗ್ಯಚಿತ್ರಕಾರ­ರನ್ನೇ ಪುಸಲಾಯಿಸಿ ಅವರ ವ್ಯಂಗ್ಯಚಿತ್ರಗಳಲ್ಲಿಯೂ ಇಣುಕಿವೆ. ಬಾಯಲ್ಲಿ ತಿಂಡಿ ಇಟ್ಟುಕೊಂಡು ಮರದ ಮೇಲೆ ಕೂತ ಕಾಗೆ ‘ಕಾ’ ಎಂದಾಗ ಬಾಯಿಂದ ಬಿದ್ದ ತಿಂಡಿಯ ಚೂರನ್ನು ನಾಯಿ ಕಚ್ಚಿಕೊಂಡು ಹೋದ ಕಥೆ ಪಾಠಕ್ಕಷ್ಟೆ ಮೀಸಲು; ನಾನಂತೂ ಎಲ್ಲೂ ದಡ್ಡ ಕಾಗೆಯನ್ನು ಕಂಡ ನೆನಪಾಗುವುದಿಲ್ಲ.

ಇನ್ನು ಚಿಕ್ಕ ಮಕ್ಕಳಿಗಂತೂ ಈ ಕಾಗೆಗಳು ಹೆದರಿಸುವ ಪರಿ ನೋಡಬೇಕು; ಚಿಕ್ಕ ಮಕ್ಕಳು ಕೈಯಲ್ಲಿ ತಿಂಡಿ ಹಿಡಿದುಕೊಂಡು ಹೊರಗೆ ಬಂದರೆ ಮೇಲೆ ಹಾರಿಕೊಂಡಿರುವ ಕಾಗೆಗಳಿಗೂ ಕ್ಷಣಮಾತ್ರದಲ್ಲಿ ಮೆಲ್ಲನೆ ಕೆಳಗೆ ಹಾರಿ ಬಂದು ಮಕ್ಕಳ ತಲೆಯ ಮೇಲೆ ಸುತ್ತಿ, ಪಕ್ಕನೆ ಮಕ್ಕಳ ಕೈಯಲ್ಲಿರುವ ತಿಂಡಿಯನ್ನು ಎಗರಿಸಿ ಒಂದೇ ನೆಗೆತ ಆಕಾಶದತ್ತ. ಈಗಿನ ಸಿಸಿಟಿವಿಗಳಿಗೇನೂ ಕಡಿಮೆ ಇರಲಿಲ್ಲ ನಮ್ಮ ಕಾಲದ ಕಾಗೆಗಳು.

ಮಕ್ಕಳೋ ಕಾಗೆಯನ್ನು ಹತ್ತಿರದಿಂದ ಕಂಡ ಹೆದರಿಕೆಯಿಂದ ಮತ್ತು ಕೈಯಲ್ಲಿದ್ದ ತಿಂಡಿ ಹೋದ ದುಃಖದಲ್ಲಿ ಗಟ್ಟಿಯಾಗಿ ಕಿರಿಚಿಕೊಳ್ಳುತ್ತಿದ್ದರೆ, ದೂರದಲ್ಲಿ ಮರದ ಮೇಲೆ ಕೂತು ಮಕ್ಕಳ ಕೈಯಿಂದ ಕಸಿದ ತಿಂಡಿಯನ್ನು ಕಾಲಲ್ಲಿ ಹಿಡಿದು ‘ಕಾ ಕಾ’ ಎನ್ನುತ್ತ ಮುಸಿ ಮುಸಿ ನಗುತ್ತವೆ. ಮನುಷ್ಯನಿಗೆ ಸಿಕ್ಕಿದ್ದನ್ನೆಲ್ಲ ಒಬ್ಬನೇ ತಿನ್ನಬೇಕೆಂಬ ಬುದ್ಧಿಯಾದರೆ ಕಾಗೆಗಳು ಹಂಚಿ ತಿನ್ನುವ ಬುದ್ಧಿಯುಳ್ಳವು. ತಿನ್ನುವ ಪದಾರ್ಥಕ್ಕೆ ಬಾಯಿ ಇಡುವ ಮೊದಲು ‘ಕಾ ಕಾ’ ಎಂದು ಕೂಗಿ ತನ್ನ ಬಂಧುಗಳಿಗೆ ವಿಷಯ ತಿಳಿಸಿಯೇ ತಿನ್ನುತ್ತಿದ್ದವು.  

ಬಾಲ್ಯದಲ್ಲಿ ನಾನಂತೂ ಬದ್ಧ ಕಾಗೆದ್ವೇಷಿ; ಕಾಗೆಗಳು ಸಿಕ್ಕಿದ್ದನ್ನು ಕಬಳಿಸುವುದು ಮಾತ್ರ ಅಲ್ಲ, ನನ್ನ ಬೇಸಿಗೆ ರಜಾವನ್ನೂ ಕಬಳಿಸುತಿದ್ದವು. ಎಪ್ರಿಲ್–ಮೇ ಬಂತೆಂದರೆ ಶಾಲೆಗೆ ರಜಾ, ನೆತ್ತಿ ಸುಡುವ, ಬಿಟ್ಟಿಯಾಗಿ ಸಿಗುವ ಸೂರ್ಯನ ಶಾಖವನ್ನೇಕೆ ಬಿಡಬೇಕೆಂದು ಮನೆಯವರು ಹಪ್ಪಳ, ಸಂಡಿಗೆ ಮಾಡುವ ಕೆಲಸಕ್ಕೆ ತೊಡಗಿ, ಮನೆ ಕಾರ್ಖಾನೆಯಾಗುತ್ತದೆ. ಗಂಡುಮಕ್ಕಳು ಆಡಿಕೊಂಡಿದ್ದರೆ ಹೆಣ್ಣುಮಕ್ಕಳಾದ ನಮಗೇ ಎಲ್ಲ ಕೆಲಸ; ಗೆಣಸಿನ ಹಪ್ಪಳವಾದರೆ ಗೆಣಸಿನ ಸಿಪ್ಪೆ ತೆಗೆಯುವ ಕೆಲಸ, ಉದ್ದಿನ ಹಪ್ಪಳವಾದರೆ ಲಟ್ಟಿಸುವ ಕೆಲಸ, ಅಮ್ಮನೊಂದಿಗೆ ಸಂಡಿಗೆ ಇಡುವ ಕೆಲಸ.

ಇಷ್ಟಕ್ಕೇ ಮುಗಿಯುವುದಿಲ್ಲ; ಒಣಗಿಸಿದ ಹಪ್ಪಳ, ಸಂಡಿಗೆಗೆ ಕಾಗೆ ಬರದಂತೆ ಕಾಯುವ ಕೆಲಸವೂ ನಮ್ಮದೇ. ಬಿಸಿಲಿನಲ್ಲಿ ಒಣಗಿಸಿದ ಹಪ್ಪಳ, ಸಂಡಿಗೆಗೆ ಕಾಗೆಗಳು ಬರದಂತೆ ನಾಲ್ಕು ಮೂಲೆಯಲ್ಲಿ ಇಟ್ಟಿಗೆ ಇಟ್ಟು ಚೌಕಾಕಾರದಲ್ಲಿ ಹಗ್ಗ ಸುತ್ತಿ, ಮಧ್ಯೆ ಅಡ್ಡಕ್ಕೆ ಹಗ್ಗ ಕಟ್ಟಿದರೆ ಸ್ವಲ್ಪ ಹೊತ್ತು ಕಾಗೆಗಳು ದೂರ ಉಳಿಯುತ್ತವೆ. ಕಾಗೆಗಳು ದೂರವಾದದ್ದನ್ನು ನೋಡಿ ನಾವು ಮೆಲ್ಲನೆ ಆಡತೊಡಗಿದರೆ ಕಾಗೆಗಳಿಗೆ ಇದರ ಸುಳಿವು ಸಿಕ್ಕಿ ವಾಯುವೇಗದಲ್ಲಿ ಬರ್ರನೆ ಹಾರಿ ಬಂದು ಒಂದೊ ಎರಡೊ ಹಪ್ಪಳಗಳನ್ನು ಎಗರಿಸಿಕೊಂಡು ಹೋಗುತ್ತವೆ.

ಈ ಸುದ್ದಿ ಅಮ್ಮನಿಗೆ ಹೋಗಲು ಹೆಚ್ಚು ತಡವಾಗುವುದಿಲ್ಲ, ‘ಈ ಮಕ್ಕಳಿಗೆ ಜವಾಬ್ದಾರಿಯೇ ಇಲ್ಲಪ್ಪ, ಕುಣಿಯುದೊಂದೇ ಗೊತ್ತು’ ಎನ್ನುತ್ತ ಬೈಗುಳದ ಸುರಿಮಳೆ ಸುರಿಸತೊಡಗುತ್ತಾರೆ. ಬೈಗುಳಗಳನ್ನು ಕೇಳಲಾಗದ ನಾವು ಪುನಃ ಕೋಲು ಹಿಡಿದುಕೊಂಡು ದ್ವೇಷದಿಂದ ‘ಕಾ ಕಾ’ ಎಂದು ಕಿರಿಚಿಕೊಂಡು ಮತ್ತೆ ಕಾಗೆಗಳನ್ನು ಕಾಯುವ ಕೆಲಸಕ್ಕೆ ಹೋಗಬೇಕಾಗುತ್ತದೆ.

‘ಸೋಂಬೇರಿ ಕತ್ತೆ ಕಾಯುವ ಕೆಲಸಕ್ಕೆ ಲಾಯಕ್ಕು’ ಎಂಬ ಆಡುಮಾತನ್ನು ಎಲ್ಲೋ ಕೇಳಿದ ನೆನಪು. ನಾನಂತೂ  ಸೋಂಬೇರಿಯಲ್ಲದಿದ್ದರೂ ಕಾಗೆ ಕಾಯುವ ಕೆಲಸದಲ್ಲಿ ನಿಪುಣಳಾಗುತ್ತ ಬಂದೆ; ಕಾಗೆಯ ಬಗ್ಗೆ ಪ್ರಬಂಧ ಬರೆಯಲೂ ಮುಂದಾದೆ.

ಬಾಲ್ಯದಲ್ಲಿ ಕಾಗೆಯ ಮೇಲಿನ ನನ್ನ ಸಿಟ್ಟು, ದ್ವೇಷ, ದುಃಖ, ಅಸಹಾಯಕತೆ ಇದ್ದದ್ದು ಮೆಲ್ಲನೆ ಕುತೂಹಲಕ್ಕೆ ತಿರುಗಿ, ಪ್ರೀತಿಯತ್ತ ಹೊರಳಿತು. ದೊಡ್ದವಳಾದಂತೆ ಕಪ್ಪುಬಣ್ಣವನ್ನು ಪ್ರೀತಿಸತೊಡಗಿದೆ. ಕಾಗೆಯ ‘ಕಾ ಕಾ’ ಭಾಷೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಕಾಗೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಹಲವು ಪುಸ್ತಕಗಳನ್ನು ಮೊಗಚಿ ಹಾಕಿ, ಇಂಟರ್‌ನೆಟ್ಟನ್ನು ಜಾಲಡಿಸಿದಾಗ ಹಲವು ಆಶ್ಚರ್ಯದ ಸಂಗತಿಗಳು ನನ್ನನ್ನು ಕಾಗೆಪ್ರೇಮಿಯನ್ನಾಗಿಸಿತು.

ಪ್ರಪಂಚದ ಹೆಚ್ಚಿನ ಎಲ್ಲ ದೇಶಗಳಲ್ಲಿ ಕಾಣಸಿಗುವ ಹಾಗೂ ಅತ್ಯಂತ ಬುದ್ಧಿವಂತ ಪಕ್ಷಿ ಎಂಬ ಕೀರ್ತಿ ಯಾರಿಗೆ ಸಲ್ಲುತ್ತದೆಂದು ನಿಮಗೆ ಗೊತ್ತೇ? ಅದೇ ಒಂದು ಕಾಲದಲ್ಲಿ ಅನಿಷ್ಟ ಎಂದು ಕರೆಸಿಕೊಂಡ, ನಾನು ಈ ಮೊದಲೇ ಊಹಿಸಿ ಬರೆದಿರುವ ತ್ರಿಕಾಲಜ್ಞಾನಿ ಕಾಗೆಗಳು! ತೊಂದರೆಗಳನ್ನು ನೀವಾರಿಸುವ ಗುಣ ಹೊಂದಿದ್ದು, ಉತ್ತಮ ಸಂಪರ್ಕ ನೈಪುಣ್ಯವಿರುವ ಪಕ್ಷಿ ಎಂದೂ ಬೆಟ್ಟು ಮಾಡಿ ತೋರಿಸಬಹುದಂತೆ. ಇನ್ನು ನೆನಪಿನ ಶಕ್ತಿಯಲ್ಲಿ, ಒಮ್ಮೆ ನೋಡಿದ ಮನುಷ್ಯನ ಮುಖವನ್ನು ಮರೆಯುವುದಿಲ್ಲವಂತೆ.

ಮೊದಮೊದಲು ಕಾಳು–ಬೆಳೆಗಳನ್ನು ತಿನ್ನುವ ಕಾಗೆಗಳನ್ನು ಮನುಷ್ಯ ಮತ್ತು ಬೆಳೆಗಳ ಶತ್ರುಗಳೆಂದು ಭಾವಿಸಿದ್ದರೂ ಈಗೀಗ ಬೆಳೆಗಳನ್ನು ನಾಶ ಮಾಡುವ ಕೀಟಗಳನ್ನು ತಿಂದು ರೈತನ ಮಿತ್ರ ಎಂದೂ ಗುರುತಿಸಲಾಗಿದೆ.  ಪರಿಸರದಲ್ಲಿ ಸತ್ತು ಬಿದ್ದಿರುವ ಪ್ರಾಣಿ, ಪಕ್ಷಿ, ಕಸಗಳನ್ನು ತಿಂದು ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಸಹಾಯಮಾಡುತ್ತವೆ.

‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವ ಗಾದೆಯನ್ನು ‘ಆಡು ಮುಟ್ಟದ ಸೊಪ್ಪಿಲ್ಲ, ಕಾಗೆ ತಿನ್ನದ ವಸ್ತುಗಳಿಲ್ಲ’ ಎಂದು ಹಿಗ್ಗಿಸಬಹುದೇನೊ? ಬೆಂಗಳೂರಿನ ಪರಿಸರವನ್ನು ಸ್ವಚ್ಛವಾಗಿಡಲು ಇಲ್ಲಿಗೆ ಇನ್ನಷ್ಟು ಕಾಗೆಗಳನ್ನು ತಂದುಬಿಟ್ಟರೆ ಹೇಗೆ?

ಆದರೆ ನನಗೀಗ ಒಂದೇ ವ್ಯಥೆ. ಪರಿಸರಮಿತ್ರ – ಎಂದು ಗುರುತಿಸಲಾಗಿರುವ ಕಾಗೆಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.  ಮನುಷ್ಯನ ತಿನ್ನುವ ಆಹಾರದಲ್ಲಿ ವಿಷದ ಅಂಶ ಜಾಸ್ತಿಯಾಗುತ್ತಿದಂತೆ ಅವನಿಗೆ ಎಲ್ಲ ತರಹದ ಕಾಯಿಲೆ–ಕಸಾಲೆಗಳು ಅಂಟಿಕೊಳ್ಳುತ್ತಿದ್ದರೆ, ಅವನು ತಿಂದು ಬಿಸಾಡಿನ ಆಹಾರಪದಾರ್ಥಗಳನ್ನು ತಿನ್ನುತ್ತಿರುವ ಕಾಗೆಗಳ ಸಂತತಿಯೇ ನಾಶವಾಗುತ್ತಿದೆ. ಎಲ್ಲಿ ಹೋದವು ನನ್ನ ಬಾಲ್ಯವನ್ನು ಕದ್ದ ಕಾಗೆಗಳು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT