ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಂಗಿ ಹೆಣ್ಣಿಗೆ ಪ್ರವಾಸ ಗಗನಕುಸುಮವೇ!

Last Updated 27 ಜನವರಿ 2017, 19:30 IST
ಅಕ್ಷರ ಗಾತ್ರ

ಲೇಹ್ ಲಡಾಕಿಗೆ ಹೋಗಿದ್ದಾಗಿನ ಫೋಟೊಗಳನ್ನು ಪರಿಚಿತರೊಬ್ಬರು ಫೇಸ್‌ಬುಕ್ಕಿನಲ್ಲಿ ಹಾಕಿದ್ದರು. ಸುಂದರವಾದ ಹತ್ತಾರು ಚಿತ್ರಗಳು. ಸಹಜವಾಗಿಯೇ ಕೇಳಿದ್ದೆ, ‘ಎಲ್ಲಿ ಕುಟುಂಬ ಕಾಣಿಸುತ್ತಿಲ್ಲ? ಎಂದು. ಅಷ್ಟೇ ಸಹಜವಾಗಿ ಅವರೂ ‘ವರ್ಷಕ್ಕೊಮ್ಮೆ ಕುಟುಂಬದೊಂದಿಗೆ ಪ್ರವಾಸ ಹೋದರೆ, ಹೀಗೆ ಒಬ್ಬನೇ ಕೂಡ ಒಂದು ಟೂರ್ ಹೋಡಿತೀನಿ’ – ಎಂದು ತಣ್ಣಗೆ ಅಂದಾಗ ‘ಅಬ್ಬಾ, ಗಂಡುಜೀವವೇ! ನೀನೆಷ್ಟು ಅದೃಷ್ಟಶಾಲಿ’ ಎಂದು ಅನಿಸಿತು.

ನಾನೂ ಅಂದೆ: ‘ನನಗೂ ಹಾಗೇ ಹೋಗಬೇಕೆನ್ನುವ ಆಸೆ’. ಕೂಡಲೇ ಅವರು ‘ಇಲ್ಲಮ್ಮಾ ಬೇಡ, ನಮ್ಮ ಜನ ಸರಿ ಇಲ್ಲ. ಹೆಣ್ಣುಮಕ್ಕಳು ಹಾಗೆಲ್ಲ ಹೋಗುವಂಥ ವಾತಾವರಣವಿಲ್ಲ ನೋಡು’ ಎಂದಾಗ ಒಂದು ದೃಷ್ಟಿಯಿಂದ ಒಪ್ಪದೇ ಇರಲು ಸಾಧ್ಯವಾಗಿರಲಿಲ್ಲ.

ಹೌದಲ್ಲವೇ? ಹೆಣ್ಣೊಬ್ಬಳು ಹೀಗೆ ಮನಸ್ಸು ಬಯಸಿದ ಕಡೆ ಸಹಜವಾಗಿ ಪ್ರಯಾಣಿಸಲು ನಮ್ಮ ಸಮಾಜದಲ್ಲಿ ವಾತಾವರಣ ಸೃಷ್ಟಿಯಾಗಿದ್ದೇ ಇಲ್ಲ! ಬಹುಶಃ ಸಮಾಜದ ಮನಃಸ್ಥಿತಿಗಳು ಆಕಾರ ಪಡೆದುಕೊಳ್ಳುವ ರೀತಿಯನ್ನು ಗಮನಿಸುತ್ತಿದ್ದರೆ ಇನ್ನು ನೂರು ವರ್ಷಗಳಾದರೂ ಈ ಪರಿಸ್ಥಿತಿಯಲ್ಲಿ ಬದಲಾವಣೆ  ಸಾಧ್ಯವಿಲ್ಲವೇನೋ!

ಯಾತ್ರೆ, ಪ್ರವಾಸಗಳು ಮನಸ್ಸಿನ ವಿಸ್ತಾರವನ್ನು ಹೆಚ್ಚಿಸುವ ಮೆಟ್ಟಿಲುಗಳು. ಅದೂ ನಮ್ಮ ದೇಶದ ಸಂಪ್ರದಾಯದಲ್ಲೇ ಯಾತ್ರೆಗೆ ಅದರದ್ದೇ ಆದ ಸಾಂಸ್ಕೃತಿಕ, ಧಾರ್ಮಿಕ ಆಯಾಮವಿದೆ. ಭೌಗೋಳಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಮನಸ್ಸಿಗೆ ಆಗುವ ಸಂತೃಪ್ತಿಯಂತೂ ಶಬ್ದಗಳಲ್ಲಿ ವರ್ಣಿಸಲು ಆಗದು.

ವಿದೇಶದಿಂದ ಇಲ್ಲಿಗೆ ಬರುವ ಸಾವಿರಾರು ಪ್ರವಾಸಿಗಳ ಕಣ್ಣಲ್ಲಿ ಜಗತ್ತಿನ ಉದ್ದಗಲಗಳು ಕುಣಿಯುತ್ತಿದ್ದರೆ ಇಲ್ಲಿನ ಹೆಣ್ಣುಮಕ್ಕಳು ಒಬ್ಬಂಟಿಯಾಗಿ ಕೆಲಸ ಮುಗಿಸಿ ಮನೆ ತಲುಪಿದರೆ ಸಾಕು ಎಂಬಂತಹ ಸ್ಥಿತಿ ಇರುವಾಗ ಪ್ರವಾಸ–ಯಾತ್ರೆಯಂತಹ ಗಗನಕುಸುಮಕ್ಕೆ ಆಶಿಸಬಹುದೇ ಎನ್ನುವ ಸಂಶಯವೂ ಮೂಡುತ್ತದೆ.

ಪ್ರವಾಸ, ಯಾತ್ರೆಗಳು ಗಂಡಿನ ಬುದ್ಧಿಕೋಶವನ್ನು ತುಂಬಿದರೆ ಇಂತಹ ಪ್ರಯಾಣಗಳು ಹೆಣ್ಣಿನ ಭಾವಕೋಶವನ್ನು ಉಕ್ಕಿಸುತ್ತವೆ. ಆಕೆಯಿಂದ ಆನಂದದ ನಿಟ್ಟುಸಿರೊಂದು ಹೊರಹೊಮ್ಮುವುದು ಖಂಡಿತ. ಕೌಟುಂಬಿಕ ಅಗತ್ಯಗಳ ಕಡೆಗೇ ಸದಾ ಯೋಚನೆಗಳನ್ನು ಮಾಡಿಕೊಂಡು ತನ್ನ ಒಳಗಿನ ಅಗತ್ಯಗಳಿಗೆ ತಿಲಾಂಜಲಿ ಬಿಡುವ ಹೆಣ್ಣಿಗೆ ದೂರದ ಬೆಟ್ಟದ ಮೇಲೆ ಹಾಗೇ ಸುಮ್ಮನೆ ಕುಳಿತು ಕಣ್ಣಿಗೆಟುಕುವ ಪ್ರಪಂಚವನ್ನು ಮನಸ್ಸು ತುಂಬಿಸಿಕೊಳ್ಳುವ ತೀರದ ಬಯಕೆ ಇದ್ದೇ ಇರುತ್ತದೆ. 

ವಿಚಿತ್ರ ಅನ್ನಿಸಿದರೂ ಸುಳ್ಳಲ್ಲ, ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಹೀಗೆ ‘ಅಲೆಮಾರಿಯಂತೆ ಸುತ್ತಬೇಕು’ ಎಂಬ ವಾಂಛೆ ಮೂಡಿಯೇ ಇರುತ್ತದೆ. ಒಬ್ಬಂಟಿಯಾಗಿಯೇ ಯಾಕೆ ಹೋಗಬೇಕು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಈ ಅಲೆಮಾರಿತನ ಮನುಷ್ಯನನ್ನು ಮುಕ್ತವಾಗಿಸುತ್ತದೆ, ವಿಮೋಚನೆಯ ದಾರಿ ತೋರಿಸುತ್ತದೆ. ವಿಮೋಚನೆಯೆಂದರೆ ಆತ್ಮವಿಶ್ವಾಸದೊಂದಿಗೆ ಬದುಕುವುದು; ಮುಕ್ತತೆ ಎಂದರೆ ಸ್ವತಂತ್ರವಾಗಿ ಧೈರ್ಯದಿಂದ ಬದುಕುವುದು.

ತನ್ನ ದೇಹದ ಶಕ್ತಿಯೊಂದಿಗೆ ಮನಸ್ಸಿನ ಶಕ್ತಿಯ ಅರಿವೂ ಪ್ರವಾಸದಿಂದಲೇ ಆಗುವುದು. ಹಳೆಯ ಹಲವು ಸಿಕ್ಕುಗಳು ಬಿಚ್ಚಿಕೊಂಡು ಹೊಸ ಲಹರಿ ಮೂಡುವುದೇ ಪ್ರವಾಸಗಳಿಂದ ಅಲ್ಲವೇ? ಹಿರಿಯರು ಹಿಂದೆ ಅನುಸರಿಸುತ್ತಿದ್ದ ‘ದೇಶ ಸುತ್ತು ಕೋಶ ಓದು’ ಮಾತಿನ ಅರ್ಥವೇ ಅದು. ಮನಸ್ಸು ತುಂಬಿಸಿಕೊಳ್ಳುವುದು.

‘ಪೀಕು’ ಹಿಂದಿ ಚಲನಚಿತ್ರದಲ್ಲಿ ನಾಯಕಿಗೆ ನಾಯಕ ಹೇಳುವ ‘ಡ್ರೈವಿಂಗ್ ಲಿಬರೇಟ್ಸ್ ಎ ವುಮನ್’ ಮಾತೂ ಇದೇ ಜಾಯಮಾನದ್ದು. ಪ್ರವಾಸವೂ ಹೆಣ್ಣನ್ನು ಯಾವುದೋ ಗಂಟುಗಳಿಂದ ಮುಕ್ತವಾಗಿಸುತ್ತದೆ. ಮುಖ್ಯವಾಗಿ ಹೆಣ್ಣುಮಕ್ಕಳು ಬದುಕಿಡೀ ಸಣ್ಣ ಪುಟ್ಟ ಹೆಜಿಟೇಶನ್‌ಗಳನ್ನು ಜೀವಿಸಿಕೊಂಡೇ ಇರುತ್ತಾರೆ.

ಎಂಥದೋ ಒಂದು ಕಟ್ಟಿಡುವ ಗುಣ, ಪುಟ್ಟಪುಟ್ಟ ಆಸೆಗಳನ್ನು ನಿಗ್ರಹಿಸಿಕೊಂಡು ಬದುಕುವ ಮಹಿಳೆಗೆ ಪ್ರಾಯಶಃ ಇಂಥ ಪ್ರವಾಸಗಳಿಂದ ಸ್ವಲ್ಪ ಮುಕ್ತಿಯ ಭಾವ ಬರಬಹುದೇನೊ ಎಂದು ಕಾಣುತ್ತದೆ. ಈ ಹೊತ್ತಿನ ಅತ್ಯಂತ ಒಳ್ಳೆಯ, ಸಂವೇದನಾಶೀಲ ಲೇಖಕಿ, ಕಥೆಗಾರ್ತಿ ನೇಮಿಚಂದ್ರರ ಅನೇಕ ಬರಹಗಳು ಪ್ರವಾಸದ ಬಹಳಷ್ಟು ಝಲಕ್ಕುಗಳನ್ನು, ಒಳಹೊರಗನ್ನು ಸಮರ್ಥವಾಗಿ  ಮೂಡಿಸಿವೆ. 

ಆದರೆ ಇಲ್ಲೂ ಹೆಣ್ಣು–ಗಂಡೆಂಬ ಭೇದ ಕಾಣಬೇಕೆ ಎಂಬ ಮಾತಿಗೆ ಪೂರಕವಾಗಿರುವ ನಿದರ್ಶನಗಳಿವೆ. ತುಂಬು ಕುಟುಂಬದ ರವಿ, ಕೃಷಿಕ; ಕಟ್ಟುನಿಟ್ಟಿನ ಹಾಗೂ ಇನ್ನೂ ಮಗನನ್ನು ಬೇಜವಾಬ್ದಾರಿಯವನೆಂದೇ ಭಾವಿಸುತ್ತಿದ್ದ ಅಪ್ಪನೊಂದಿಗೆ ಏಗಲು ಸಾಧ್ಯವಾಗದೇ, ಸೀದಾ ಹೊರಟದ್ದು ಹಿಮಾಲಯಕ್ಕೆ.

ನಾಲ್ಕು ವರ್ಷಗಳ ನಂತರ ವಾಪಾಸು ಬಂದ ಮಗನನ್ನು ‘ಎಲ್ಲಿದ್ದೆ, ಹೇಗಿದ್ದೆ’? ಎಂದು ಕೇಳುವ ಅಗತ್ಯ ಯಾರಿಗೂ ಬೀಳಲಿಲ್ಲ. ಆಗೊಮ್ಮೆ, ಈಗೊಮ್ಮೆ ಅಕ್ಕನಿಗೆ ಫೋನ್ ಮಾಡಿ, ‘ಚಾರ್ ಧಾಮ್ ಯಾತ್ರೆ ಮುಗಿಸಿದೆ, ಈಗ ಕೈಲಾಸದೆಡೆಗೆ ಹೊರಡುತ್ತಿದ್ದೇನೆ’ – ಹೀಗೆ ವರದಿಗಳು ಮುಟ್ಟುತ್ತಿದ್ದು ರವಿಯ ಅಮ್ಮ ಸದ್ಯ ಎಲ್ಲೋ ಬದುಕಿದ್ದಾನೆ ಎಂದು ನೆಮ್ಮದಿಯಲ್ಲಿ ಇದ್ದರು.

ನಂತರ ಮದುವೆಯೊಂದರಲ್ಲಿ ಸಿಕ್ಕಿದ್ದ ರವಿಯ ಬಾಯಲ್ಲಿ ಅವನ ಪ್ರವಾಸದ ರೋಚಕ ಕಥೆಗಳನ್ನು ಕೇಳಿದ್ದಾಗ ‘ಅಬ್ಬಾ ಗಂಡೇ, ನಿನಗಿರುವ ಪ್ರಿವಿಲೇಜ್ ನೋಡು’ ಎಂದೆನಿಸಿದ್ದೂ ಸುಳ್ಳಲ್ಲ. ನಾಲ್ಕು ವರ್ಷಗಳ ನಂತರ ಬಂದ ರವಿಗೆ ಭಾರೀ ಆತಿಥ್ಯ ಸಿಕ್ಕಿತೇ ಹೊರತು ಯಾರೂ ನೀನು ‘ಯಾರೊಂದಿಗೆ ಹೋಗಿದ್ದೆ, ಹೇಗಿದ್ದೆ?’ ಎನ್ನುವ ಪ್ರಶ್ನೆ ಯಾರಿಂದಲೂ ಬರದೇ ಹೋಯಿತು. ಕೆಲವರಂತೂ ರವಿಯ ಯಾತ್ರೆ ರೋಚಕ ಬದುಕಿನ ಭಾವವೆಂದೇ ಹೇಳಿದ್ದೂ ಇದೆ.

ಅಮೃತಾ ಬುದ್ಧಿವಂತೆ, ಇಂಜಿನಿಯರಿಂಗ್ ಮುಗಿಸಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಜಾಣೆ, ಅವಳ ಎಫೀಶಿಯನ್ಸಿ, ಅವಳನ್ನು ನಾಲ್ಕಾರು ತಿಂಗಳುಗಳ ಕಾಲ ಕೆನಡಾಗೆ ಹೋಗುವ ಅವಕಾಶವಿತ್ತಾಗ ಅಮೃತಾ ಮನೆಯವರು ಖುಷಿ ಪಡುವ ಬದಲು ಆಕಾಶವೇ ತಲೆ ಮೇಲೆ ಬಿದ್ದಂತೇ ಯೋಚನೆಗೆ ಬಿದ್ದರು. ‘ಅಷ್ಟು ದೂರ, ಒಬ್ಬಳೇ, ಅದೂ ಇನ್ನೂ ವಿವಾಹವಾಗಿಲ್ಲ’ ಇಂತಹ ಹತ್ತಾರು ಕಾರಣಗಳನ್ನು ಮುಂದುಮಾಡಿ ಎಷ್ಟು ಸಾಧ್ಯವೋ ಅಷ್ಟು ಆ ಅವಕಾಶವನ್ನು ಒಪ್ಪಿಕೊಳ್ಳಲು ಮೊದಲು ನಿರಾಕರಿಸಲಾಯಿತು. 

ಹತ್ತಾರು, ಪ್ರಾಮೀಸ್‌ಗಳು, ದಿನಕ್ಕೆ ಕನಿಷ್ಠ ನಾಲ್ಕು ಬಾರಿಯಾದ್ರೂ ಕರೆ ಮಾಡುವೆ ಎಂದು ಮಾತು ತೆಗೆದುಕೊಂಡು ಕೊನೆಗೂ ಕಳಿಸಲಾಯಿತು. ಹೋಗಿ ಬರುವವರೆಗೂ, ಬಂದಮೇಲೂ ವಿಮಾನ ನಿಲ್ದಾಣದಲ್ಲಿ ಮಾಡುವ ಸ್ಕಾನಿಂಗ್‌ಗಿಂತಲೂ ಹೆಚ್ಚು ಬಾರಿ ಅವಳು ಸಂಬಂಧಿಗಳ ಕಣ್ಣಿನ ಸ್ಕಾನಿಂಗಿಗೆ ಒಳಗಾಗಬೇಕಾಯಿತು. ‘ಒಬ್ಬಳೇ ಹೋಗಿ ಬಂದ್ಯಂತೆ! ಪರ್ವಾಗಿಲ್ಲ ನೀನು’.

ಮೆಚ್ಚುಗೆಗಿಂತ ಹೆಚ್ಚು ಅಲ್ಲಿದ್ದದು ಕುಹಕದ ಕುತೂಹಲ.  ಇದೇ ಗಂಡಿನ ಸ್ವಾತ್ರಂತ್ಯಕ್ಕೂ, ಹೆಣ್ಣಿನ ಸ್ವಾತಂತ್ರ್ಯಕ್ಕೂ ಇರುವ ವ್ಯತ್ಯಾಸ. ಈ ವ್ಯತ್ಯಾಸ ವರ್ಗದಿಂದ ವರ್ಗಕ್ಕೆ ಸಂಸ್ಕೃತಿಯಿಂದ ಸಂಸ್ಕೃತಿಗೆ, ನಗರದಿಂದ ಗ್ರಾಮೀಣ ಪ್ರದೇಶ ಎಂಬ ಮಾನಸಿಕತೆಗೂ ಅವಲಂಬಿಸಿದೆ ಎಂದುಕೊಂಡರೂ ವ್ಯತ್ಯಾಸವಿರುವುದಂತೂ ಸತ್ಯ.

ಆಮೇಲೆ ಭೇಟಿಯಾಗಿದ್ದ ಅಮೃತಾ, ‘ಅಕ್ಕಾ, ನೀನೊಮ್ಮೆ ಎಲ್ಲಿಗಾದರೂ ಸರಿ, ಹೀಗೆ ಒಬ್ಬಳೇ ಹೋಗಿ ಬರುವ ಅವಕಾಶವಿದ್ದರೆ ಖಂಡಿತ ಬಿಡಬೇಡ. ನಿನ್ನಲ್ಲಿರುವ ಮುಕ್ತವ್ಯಕ್ತಿಯ ಪರಿಚಯ ನಿನಗಾಗುತ್ತದೆ’ ಎಂದಾಗ ಪ್ರವಾಸದ ನಿಜ ದರ್ಶನವಾದ ಅನುಭೂತಿ ಸಿಕ್ಕಿತ್ತು. ಹಿರಿಯ ಸ್ನೇಹಿತೆ, ಆಹಾರತಜ್ಞೆ ಡಾ. ಎಚ್. ಎಸ್. ಪ್ರೇಮಾ ಅವರದ್ದು ಬೇರೆಯೇ ಪ್ರವಾಸದರ್ಶನ. ಹಲವು ದಶಕಗಳಿಂದ ಒಬ್ಬೊಬ್ಬರೇ ಓಡಾಡಿ ಬದುಕಿನ ಸಮೃದ್ಧತೆಯನ್ನು ದ್ವಿಗುಣ ಮಾಡಿಕೊಳ್ಳುತ್ತಿರುವ ಇವರಿಗೆ ಇದುವರೆಗೂ ಅಂತಹ ಕೆಟ್ಟ ಅನುಭವಗಳಾಗಿಲ್ಲ.

ಅಲ್ಲದೇ ಪ್ರಪಂಚ, ಸುಂದರ ಮತ್ತು ವಿಶ್ವಾಸಾರ್ಹವೂ ಆಗಿದೆ. ಮುಖ್ಯವೇನೆಂದರೆ ಪ್ರವಾಸ ಹೋಗುವ ಹೆಣ್ಣುಮಕ್ಕಳು ಸುರಕ್ಷತೆ, ವಸತಿ ಮುಂತಾದವುಗಳ ಪ್ಲಾನಿಂಗ್, ಸರಿಯಾದ ರೀತಿಯಲ್ಲಿ ಮಾಡಿಕೊಳ್ಳಬೇಕು ಎನ್ನುತ್ತಾರೆ. ‘ಒಬ್ಬಳೇ ಹೀಗೆ ಪ್ರವಾಸ ಹೋಗುವಾಗ ನನ್ನನ್ನು ನಾನು ಅರ್ಥ ಮಾಡಿಕೊಳ್ಳುತ್ತೀನಿ. ಇಂಥ ಪ್ರವಾಸ ನಂಗೆ ಧೈರ್ಯ ಕೊಡುತ್ತದೆ, ವಾಪಾಸ್ ಬಂದ ಮೇಲೆ ನಾನು ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚು ಕಾಣುತ್ತದೆ.

ಜೊತೆಗೆ ಬೇರೆಯವರನ್ನು ಅರ್ಥ ಮಾಡಿಕೊಳ್ಳಲು ಸಹಾಯ ಆಗುತ್ತೆ. ಅಂದ್ರೆ ಒಬ್ಬಳೆ ಪ್ರವಾಸ ಮಾಡುವಾಗ ನಂಗೆ ಸಮಸ್ಯೆಗಳು ಬಂದಿರುತ್ತವೆ. ಆದ್ದರಿಂದ ಬೇರೆಯವರ ಇನ್ನೊಂದು ರೀತಿಯ ಸಮಸ್ಯೆಗೆ ಅರ್ಥ ಮಾಡಿಕೊಳ್ಳಲು ಇದು ನೆರವಾಗುತ್ತದೆ’ ಎಂದು ಹೇಳುವ ಪ್ರೇಮಾ, ನಾವು ಮಾಡುವ ವೃತ್ತಿಯೂ ನಮ್ಮ ಬದುಕನ್ನು ಸ್ವೀಕರಿಸುವ ವಿಧಾನಗಳನ್ನು ಕಲಿಸಿಕೊಡುತ್ತದೆ ಎನ್ನುತ್ತಾರೆ. ನಗರದಲ್ಲಿ ಹುಟ್ಟಿ ಬೆಳೆದ ಹೆಣ್ಣುಮಕ್ಕಳ ಮಾನಸಿಕತೆಗೂ, ಹಳ್ಳಿಯ ಹೆಣ್ಣುಮಕ್ಕಳ ಮಾನಸಿಕತೆಗೂ ಹಾಗೇ ಹೊರಗೆ ದುಡಿಯುವ ಮತ್ತು ಗೃಹಿಣಿಯರ ಮಾನಸಿಕತೆಗೂ ಭಿನ್ನವಾಗಿರುತ್ತದೆ ಎಂದೇ ಹೇಳುತ್ತಾರೆ. 

ಆದರೆ ಪ್ರತಿಯೊಂದನ್ನು ಗಂಡನನ್ನು ಕೇಳಿಯೋ, ಮನೆಯವರನ್ನು ಕೇಳಿಯೇ ತೀರ್ಮಾನಿಸುವ ಹೆಣ್ಣುಮಕ್ಕಳ ಮನಃಸ್ಥಿತಿಯೂ ಗೌರವಾರ್ಹವೇ. ‘ಆಲಂಬನೆ’ ಬದುಕಿನ ಬಹುದೊಡ್ಡ ಶಕ್ತಿ. ಮನುಷ್ಯನಿಗಂತೂ ಪರಸ್ಪರ ಆಲಂಬನೆಯಿಲ್ಲದೆ ಬದುಕು ಅಸಾಧ್ಯ. ಆದ್ದರಿಂದ ‘ಹೇಳಿ ಹೋಗು’ವ, ಕೇಳಿ ಹೋಗುವ ಸಂಬಂಧಗಳಲ್ಲಿ ಪ್ರೀತಿಭರಿತ ಆಲಂಬನೆಯೂ ಕಾರಣವಾಗುತ್ತದೆ. ಗಂಡನನ್ನು ಬಿಟ್ಟು ಒಂದು ಫಿಲಂ ಕೂಡ ನೋಡಲ್ಲ ಎನ್ನುವ ಗೆಳತಿ ಸುಧಾ ಮೇಲೂ ಅಕ್ಕರೆ ಮೂಡುತ್ತದೆ. ಕೊನೆಗೆ ಎಲ್ಲವೂ ಅವರವರ ಭಾವಕ್ಕೇ ಅಲ್ಲವೇ? 

ಈಗ ಹೆಣ್ಣುಮಕ್ಕಳು ಪ್ರವಾಸದ ಸುಖಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ, ನಿಜ. ಅಜ್ಜಿ, ಅಮ್ಮಂದಿರ ಕಾಲದ ಕೂತಲ್ಲೇ ಬತ್ತಿ ಹೊಸೆಯುತ್ತಾ ಕಾಶಿವಿಶ್ವನಾಥನನ್ನೂ, ರಾಮೇಶ್ವರದ ಯಾತ್ರೆಯನ್ನೂ ಊಹಿಸಿಕೊಂಡು ಸಂತೃಪ್ತಿ ಪಡೆಯುವ ಸಂಕಷ್ಟವಿಲ್ಲ. ಆದರೂ ಹೀಗೆ ಏಕಾಏಕಿ ‘ಹೊರಡುವ’ ಧೈರ್ಯ ಅವಳಿಗೆ ಬಂದೀತೇ? ಕೈತುಂಬ ದುಡಿಯುವ ಹೆಣ್ಣು ಕೂಡ ಕೊನೇ ಪಕ್ಷ ಹದಿನೈದು ದಿನಗಳ ಮೊದಲು ಕೇಳುವ, ಹೇಳುವ, ಹೊರಡುವ ತಯಾರಿ ಮಾಡಲೇಬೇಕು.

ಅಷ್ಟರಮಟ್ಟಿಗವಳು ಬಂದಿ. ಇದ್ಯಾಕೋ ಅತಿಯಾದ, ಅಸಂಬದ್ಧ ಆಸೆಗಳು ಎಂದೇ ಹೇಳುವವರೂ ಇರುವ ಇಲ್ಲಿ, ಅಂತಿಮವಾಗಿ ವೈಯಕ್ತಿಕ ನಿರ್ಧಾರಗಳ ಶಕ್ತಿಗೆ ಹೊಣೆಯಾಗಿಸಬೇಕು. ಒಂದಷ್ಟು ಕೆನೆಪದರದಲ್ಲಿರುವ ಹೆಣ್ಣುಮಕ್ಕಳ ಆತ್ಮವಿಶ್ವಾಸ ನೋಡಿ, ಹೆಣ್ಣಿಗೂ ಅವಕಾಶಗಳಿವೆ ಎನ್ನಲು ಸಾಧ್ಯವಿಲ್ಲ. ಬೊಗಸೆ ನೀರಿನಲ್ಲೇ ಗಂಗೆಯನ್ನು ಆವಾಹಿಸುವ ನಮ್ಮಲ್ಲಿ ಯಾತ್ರೆ, ಪ್ರವಾಸ ಬದುಕಿನ ಸಹಜ ಭಾಗವಾಗಲು ಇನ್ನೂ ಸಮಯ ಬೇಕೆನೋ!  

ವಚನಯುಗದ ‘ಅಕ್ಕ’ ಮತ್ತು ವಚನಗಳ ಮೂಲಕ ಮನಸೆಳೆದ ‘ಅವನನ್ನು’ ಹುಡುಕಿಕೊಂಡು ಕಾಶ್ಮೀರದಿಂದ ಬೊಂತಾದೇವಿ – ಇವರಿಬ್ಬರು ಹೀಗೆ ಏಕಾಏಕಿ ಹೊರಟದ್ದು ಬಿಟ್ಟರೆ ನಮ್ಮಲ್ಲಿ ಇನ್ನೂ ಹೆಣ್ಣುಮಕ್ಕಳಿಗೆ ‘ಹೇಳಿ ಹೋಗು ಕಾರಣ’ವೆಂದೇ ಹೇಳಲಾಗುತ್ತಿದೆ. ನಿರ್ಭಿಡೆಯಿಂದ ನಿಶ್ಚಿಂತೆಯಿಂದ ತಂತಮ್ಮ ಬ್ಯಾಕ್‌ಪ್ಯಾಕ್‌ಗಳನ್ನು ಹೇಗಲೇರಿಸಿಕೊಂಡು ಹೊರಡುವ ಧೈರ್ಯದ ವಾತಾವರಣ ಸೃಷ್ಟಿಯಾದರೆ ಸಹಜವಾಗಿಯೇ ಸಮೃದ್ಧವಾಗಿರುವ ಹೆಣ್ಣಿನ ಭಾವಕೋಶ ಮತ್ತಷ್ಟು ಮೆರುಗನ್ನು ತುಂಬಿಕೊಂಡು ಬದುಕಿಗೆ ಬೇಕಾದಷ್ಟು ಚೈತನ್ಯವನ್ನು ತುಂಬಿಕೊಳ್ಳುತ್ತದೆ.

ಗಂಡಿಗೆ ಕುಟುಂಬದ ಸುರಕ್ಷಿತ ಭಾವವನ್ನು ಹೆಣ್ಣು ಕೊಡುತ್ತಿರುವಾಗ ಅವಳ ಇಂತಹ ಆಸೆಗಳಿಗೆ ಗಂಡುಸಮಾಜವೂ ಒದಗಬೇಕು ಅಲ್ಲವೇ! ಅಂತಹ ಒಂದು ಬೆಳಕಿನ ಕಿಂಡಿ ಕುಟುಂಬದಲ್ಲಿಯೂ ಸಮಾಜದಲ್ಲಿಯೂ ತೆರೆಯಬೇಕಾಗಿದೆ.

ಪ್ರವಾಸಕ್ಕೆ ಹೊರಡುವ ಮುನ್ನ...
*ನೀವು ಹೊರಡಲು ಬಯಸುವ ಸ್ಥಳದ ವಿವರಗಳ ಬಗ್ಗೆ ಮೊದಲೇ ತಿಳಿದುಕೊಳ್ಳಿ.
*ಒಂದೆರಡು ಜೊತೆ ಬಟ್ಟೆ ಹೆಚ್ಚಿಗೆ ಇಟ್ಟುಕೊಳ್ಳಿ.
*ಬ್ಯಾಗ್‌ನಲ್ಲಿ ಬ್ರೆಡ್‌, ಬಿಸ್ಕತ್ತು, ಹಣ್ಣು ಇರಲಿ. ಇದರಿಂದ ಆದಷ್ಟು ಹಳ್ಳಿ ಅಥವಾ ಕಾಡು ಪ್ರದೇಶ, ಬೆಟ್ಟಗುಡ್ಡಗಳಿಗೆ ಹೋಗುವುದಾದರೆ ಸಹಾಯವಾಗುತ್ತದೆ.
*ಮೊಬೈಲ್‌ನೊಂದಿಗೆ ಪವರ್‌ಬ್ಯಾಂಕ್‌್ ಅನ್ನು ಪೂರ್ಣವಾಗಿ ಚಾರ್ಜ್‌ ಮಾಡಿಕೊಂಡು ತೆಗೆದುಕೊಂಡು ಹೋಗುವುದು ಉತ್ತಮ.
*ಒಂದಷ್ಟು ಹಣವನ್ನು ಬಿಡಿಸಿ ಇಟ್ಟಕೊಂಡು ಹೋಗಿ. ನೀವು ಹೋಗುವ ಕಡೆ ಎಟಿಎಂ ಇಲ್ಲದೇ ಅಥವಾ ಎಟಿಎಂನಲ್ಲಿ ಹಣವಿಲ್ಲದೇ ಪರದಾಡುವ ಪರಿಸ್ಥಿತಿ ಬರಬಹುದು.
*ಪುಲ್‌ಚಾರ್ಜ್‌ ಹೊಂದಿರುವ ಬ್ಯಾಟರಿ ಇದ್ದರೆ ಜೊತೆಗೆ ತೆಗೆದುಕೊಂಡು ಹೋಗಿ. ಕರೆಂಟು ಇಲ್ಲದೆ ಇದ್ದಾಗ ಪರದಾಟ ಉಂಟಾಗುವುದು ತಪ್ಪುತ್ತದೆ.
*ಒಂದೆರಡು ವಾಟರ್  ಬಾಟಲ್ ಇಟ್ಟುಕೊಳ್ಳುವುದು ಸೂಕ್ತ.
*ಹೆಣ್ಣುಮಕ್ಕಳು ಆದಷ್ಟು ಆಭರಣಗಳನ್ನು ಧರಿಸಿದೇ ಹೋಗುವುದು ಉತ್ತಮ. ಇದರಿಂದ ಒಂದು  ಆಭರಣ ಕಳವಾಗಬಹುದು, ಇಲ್ಲವೇ ಆಭರಣಕ್ಕಾಗಿ ಅಪರಿಚಿತರು ನಿಮ್ಮ ಮೇಲೆ ಹಲ್ಲೆ ನಡೆಸಬಹುದು.
*ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಅತಿಯಾದ ಧೈರ್ಯ ತೋರುವುದು ಒಳ್ಳೆಯದಲ್ಲ. ಎಲ್ಲ ಕಡೆಯಲ್ಲೂ ಕೆಟ್ಟ ಜನರು ಇದ್ದೇ ಇರುತ್ತಾರೆ.
*ಪ್ರವಾಸಕ್ಕೆ ಹೊರಡುವ ಮುನ್ನ ಪ್ರಥಮ ಚಿಕಿತ್ಸೆಯ ಸಾಮಗ್ರಿಗಳನ್ನು ಬ್ಯಾಗ್‌ನಲ್ಲಿರಿಸಿಕೊಳ್ಳಿ.

ನಿಮ್ಮ ಪ್ರವಾಸದ ಅನುಭವಗಳನ್ನು ಹಂಚಿಕೊಳ್ಳಿ...
ಒಂಟಿಯಾಗಿ ಪ್ರವಾಸ ಮಾಡಿದ ಮಹಿಳೆ ನೀವು ಎಂಬ ಹೆಮ್ಮೆ ನಿಮಗಿದೆಯೆ? ಹಾಗಾದರೆ ನಿಮ್ಮ ಪ್ರವಾಸದ ಅನುಭವಗಳ ಸ್ವಾರಸ್ಯಗಳನ್ನೂ ಕಷ್ಟ–ಇಷ್ಟಗಳನ್ನೂ ಭೂಮಿಕಾದಲ್ಲಿ ಹಂಚಿಕೊಳ್ಳಬಹುದು. ನಿಮ್ಮ ಬರಹಗಳು 300 ಪದಗಳನ್ನು ಮೀರದಂತಿರಲಿ. ಇಮೇಲ್‌ ಮೂಲಕವೂ ಲೇಖನಗಳನ್ನು ನಮಗೆ ಕಳುಹಿಸಬಹುದು. ವಿಳಾಸ ಮತ್ತು ದೂರವಾಣಿಸಂಖ್ಯೆಗಳನ್ನು ಕಳುಹಿಸಲು ಮರೆಯದಿರಿ. ಇಮೇಲ್‌: bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT