ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಬಲವಾದ ‘ಎಡ-ಬಲ’ಗಳ ದೇಶಿ ಅನುಭವ

ಸಂಗತ
Last Updated 27 ಜನವರಿ 2017, 19:30 IST
ಅಕ್ಷರ ಗಾತ್ರ
ಎಡ- ಬಲಗಳ ಬಗ್ಗೆ ಈಗ ಎಡೆಬಿಡದ ಚರ್ಚೆ ನಡೆದಿದೆ. ಚರ್ಚೆ ಅನ್ನುವುದಕ್ಕಿಂತ ಗದ್ದಲ ಎನ್ನುವುದೇ ಮೇಲು. ಈ ಚರ್ಚೆಯ ಹಿಂದೆ ಸಮಸಮಾಜದ ಅಪೇಕ್ಷೆ ಇರಬಹುದಾದರೂ, ಅದು ಎಲ್ಲೋ ಮಸಕು-ಮಸಕಾಗಿರುವ ತೆಳುಗೆರೆ ಮಾತ್ರ.
 
ಎಡ-ಬಲಗಳ ಈಗಿನ ಹೋರಾಟದ ಅಂತಿಮ ಉದ್ದೇಶ ‘ಬಲ’ವಾಗುವುದೇ ಆಗಿರುವುದು ಈ ಗದ್ದಲ-ಹೋರಾಟಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಸ್ಪಷ್ಟವಾಗುತ್ತದೆ. ಅಧಿಕಾರದ ಆಸೆ ಹಾಗೂ ಸಂಪತ್ತಿನ ಸುಲಭ ಗಳಿಕೆಗಳೇ ಇವತ್ತಿನ ಬಹುತೇಕ ಎಲ್ಲ ಗದ್ದಲ- ಹೋರಾಟಗಳ ಗುರಿಯಾಗಿರುವುದರಿಂದ ಅವು ವಿಕೃತ ರೂಪ ಪಡೆಯುತ್ತಿರುವುದು ಸಹಜವೇ ಆಗಿದೆ. ಬಹುಶಃ ಮುಂದೆ ನಡೆಯಬಹುದಾದ ಈ ಅವಾಂತರವನ್ನೆಲ್ಲ ಊಹಿಸಿಯೇ ಅಲ್ಲಮಪ್ರಭು ಹೇಳಿರಬೇಕು- ‘ತಲೆಯಲಟ್ಟುಂಬುದ ಒಲೆಯಲಟ್ಟುಂಬರು’- ಎಂದು. ವಿಚಾರಗಳ ಸಾತ್ವಿಕ-ತಾತ್ವಿಕ ಚರ್ಚೆಯ ಮೂಲಕ ಪರಿಹರಿಸಿಕೊಳ್ಳಬಹುದಾದ ಈ ಎಡ-ಬಲದ ಸಮಸ್ಯೆ ಈಗ ಹೊಡಿ, ಬಡಿಗಳ ಜೊತೆಗೆ ಚಪ್ಪಲಿ ಪ್ರಯೋಗದವರೆಗೂ ಹೋಗಿರುವುದು ಮಾನವಂತ ಸಮಾಜ ನಾಚಿಕೆ ಪಡುವಂತಾಗಿದೆ. ವಿಚಾರಶಕ್ತಿಯ ತಲೆ ಈಗ ಉರಿಯುವ ಒಲೆಯಾಗುತ್ತಿರುವುದೂ ಇದೇ ಕಾರಣಕ್ಕಾಗಿ. ಇಂಥ ಸಂದರ್ಭದಲ್ಲಿ ಎಲ್ಲೆಲ್ಲೂ ಹೊಗೆ ಘನವಾಗುತ್ತಿರುವುದೂ ಸಹಜವೇ. 
 
ಈ ಬಗೆಯ ಚರ್ಚೆ ಆರಂಭವಾದ ಕೂಡಲೇ ಅವುಗಳಿಗೆ ಪರಿಹಾರ ಸೂಚಿಸಲು ನಮ್ಮ ವಿದ್ವಾಂಸರು ಮೊದಲು ಪ್ರಸ್ತಾಪಿಸುವುದು ಪರದೇಶಿ ವಿದ್ವಾಂಸರ ಸಿದ್ಧಾಂತ-ತತ್ವಗಳನ್ನು, ವ್ಯಾಖ್ಯೆಗಳನ್ನು. ಇಂಗ್ಲೆಂಡ್- ಯುರೋಪ್‌ಗಳಲ್ಲೇ ಹುಟ್ಟಿದ್ದಾರೇನೋ ಎಂಬ ಭ್ರಮೆ ಹುಟ್ಟಿಸುವ ಹಾಗೂ ಏನೆಲ್ಲ ಸಮಸ್ಯೆಗಳಿಗೂ ಪಾಶ್ಚಾತ್ಯರಲ್ಲೇ ಉತ್ತರಗಳಿವೆ ಎಂದು ನಂಬಿರುವ ನಮ್ಮ ಹೆಚ್ಚಿನ ಚಿಂತಕರು ಬಾಯಿ ಬಿಟ್ಟರೋ, ತಕ್ಷಣ ಉಸುರುವುದು ಕೇಳುಗರಿಗೆ ಗೊತ್ತಿರಲಾರದ ಟಿಸಕ್-ಪಸಕ್ ಹೆಸರುಗಳನ್ನು. ಪಾಶ್ಚಾತ್ಯ ನಿಲುವಂಗಿ-ಕೋಟುಗಳ ಜೇಬುಗಳಲ್ಲಿ ಕೈ ಇಟ್ಟೇ ಭಾಷಣ ಆರಂಭಿಸುವ ಈ ನಮ್ಮ ಹೆಚ್ಚಿನ ಚಿಂತಕರು ಸಾಕಷ್ಟು ಪುಸ್ತಕಗಳನ್ನು ಓದಿರಬಹುದೇ ಹೊರತು ಇಲ್ಲಿನ ನೆಲದ ದೇಶಿ ಬದುಕನ್ನು ಬಾಳಿದವರೂ ಅಲ್ಲ; ಅರಿತವರೂ ಅಲ್ಲ. ಎಡ-ಬಲಗಳ ಗದ್ದಲವೂ ಇದೇ ಜಾಡಿನಲ್ಲಿ ನಡೆಯುತ್ತಿದೆ. ಕ್ರಿಯಾತ್ಮಕ ಜಾರಿಯ ಸಾಧ್ಯತೆಯಿಲ್ಲದ ಬರೀ ಗೊಳ-ಗೊಳ ಮಾತುಗಳಲ್ಲೇ ಪರ್ಯವಸಾನವಾಗುತ್ತಿರುವ ಈ ಎಡ-ಬಲಗಳ ಚರ್ಚೆಯನ್ನು ಒಂದು ನ್ಯಾಯೋಚಿತ ನೆಲೆಯಲ್ಲಿ ಸಮದೂಗಿಸುವ ಹಾಗೂ ಅವೆರಡರ ನಡುವೆ ಸಮಬಲವನ್ನು ಸಾಧಿಸುವ ದೇಶಿ ಚಿಂತನೆಯ ಬಗ್ಗೆ ಇವರು ಯೋಚಿಸಿದ್ದಾರೆಯೇ?
 
ಒಬ್ಬ ಬಡ ರೈತನಿದ್ದ (ಇದು ಕಥೆಯಲ್ಲ). ಅವನ ಹತ್ತಿರ ಪ್ರೀತಿಯಿಂದ ಸಾಕಿದ ಒಂದು ಎತ್ತು ಇತ್ತು.  ಆತ ಅದನ್ನು ತುಂಬ ಮುತುವರ್ಜಿಯಿಂದ  ಮೇಯಿಸುತ್ತಿದ್ದ. ರೈತನ ಅಕ್ಕರೆಯ ಕೈಜೋಪಾನದಲ್ಲಿ ಎತ್ತು ಸಾಕಷ್ಟು ‘ಬಲ’ಶಾಲಿಯಾಗಿ ಬೆಳೆದಿತ್ತು. ರೈತನಿಗೆ ತನ್ನ ಪೂರ್ವಿಕರಿಂದ ಬಂದಿದ್ದ ತುಂಡು ಹೊಲದಲ್ಲಿ ಬದುಕು ಮಾಡಿಕೊಳ್ಳಬೇಕೆಂಬ ಗಟ್ಟಿ ಬಯಕೆ. ಆದರೆ ಉತ್ತಲು, ಬಿತ್ತಲು ಅವನಲ್ಲಿ ಮತ್ತೊಂದು ಎತ್ತು ಇಲ್ಲ. ಈ ಕಾರಣಕ್ಕಾಗಿಯೇ ಅವನು ತನ್ನ ಹೊಲವನ್ನು ಶ್ರೀಮಂತರಿಗೆ ಒತ್ತೆ ಹಾಕಿ, ತಾನು ಕೂಲಿ-ನಾಲಿ ಮಾಡಿ ಒಪ್ಪೊತ್ತಿನ ರೊಟ್ಟಿಯನ್ನು ಸಂಪಾದಿಸುತ್ತಿದ್ದ. ಹೀಗಿರುವಾಗ ಅವನಿಗೆ ತನ್ನ ಹೊಲದಲ್ಲಿ ಹೇಗಾದರೂ ಮಾಡಿ ಕೃಷಿ ಮಾಡಲೇಬೇಕೆಂಬ ಹುಕಿ ಹುಟ್ಟುತ್ತದೆ. ಒತ್ತೆ ಹಾಕಿದ್ದ ಹೊಲವನ್ನು ಶ್ರೀಮಂತರಿಂದ ಬಿಡಿಸಿಕೊಂಡು ತಾನೇ ರಂಟೆ ಹೂಡುತ್ತಾನೆ. ನೊಗದ ಒಂದು ಕಡೆಗೆ ತಾನು ಸಾಕಿದ್ದ ಎತ್ತನ್ನು ಹೂಡಿ, ಮತ್ತೊಂದು ಕಡೆಯ ನೊಗವನ್ನು ತನ್ನ ಇಬ್ಬರು ಮಕ್ಕಳ ಹೆಗಲ ಮೇಲಿಟ್ಟು ಸಾಗುವಳಿ ಶುರು ಮಾಡುತ್ತಾನೆ. ಈ ವಿಚಿತ್ರ ದೃಶ್ಯ ನೋಡುತ್ತ ಹೋಗುತ್ತಿದ್ದ ದಾರಿಹೋಕರಿಗೆ ಅಚ್ಚರಿ-ದಿಗಿಲು-ಕನಿಕರ. ರೈತ ತನ್ನ ಮಕ್ಕಳ ಹೆಗಲ ಮೇಲೆ ನೊಗ ಹೇರಿದ್ದ ದಾರುಣ ಸ್ಥಿತಿಯನ್ನು ಕಂಡ ಜಮೀನುದಾರನೊಬ್ಬ ಕನಿಕರಪಟ್ಟು, ಆ ರೈತನ ಹತ್ತಿರ ಹೋಗಿ ‘ನಮ್ಮ ಮನೆಯಲ್ಲಿರೋ ಒಂದು ಬಡ ಎತ್ತನ್ನು ಕೊಡುತ್ತೇನೆ, ಜೋಪಾನ ಮಾಡಿಕೊಂಡು ಹೂಡಿಕೋ’  ಎನ್ನುತ್ತಾನೆ. ಹಿಂಡು ದನಗಳಲ್ಲಿ ಜೋಪಾನವಿಲ್ಲದೆ ಸೊರಗಿ ಹೋಗಿದ್ದ ಆ ಒಂದು ಎತ್ತನ್ನು ಪ್ರೀತಿಯಿಂದ ತಂದ ರೈತ, ತಾನು ಸಾಕಿದ್ದ ಎತ್ತಿಗಿಂತ ಹೆಚ್ಚಾಗಿಯೇ ಹಿಂಡಿ, ಮೇವು, ಹಸಿರು ಹುಲ್ಲು ಮೇಯಿಸಿ ಅದು ಮುಂದೆ ಹೆಜ್ಜೆ ಹಾಕುವಂತೆ ಮಾಡುತ್ತಾನೆ. ನೊಗ ಹೊರುವಷ್ಟು ಶಕ್ತಿ ಬಂತೆಂದು ಭಾವಿಸಿ ತನ್ನ ‘ಬಲ’ಶಾಲಿ ಎತ್ತಿನೊಂದಿಗೆ ಅದನ್ನು ಹೂಡುತ್ತಾನೆ. ಆದರೆ ಇನ್ನೂ ‘ಎಡ’ವೇ ಆಗಿದ್ದ ಆ ಮತ್ತೊಂದು ಎತ್ತು ಅಶಕ್ತತೆಯ ಕಾರಣಕ್ಕಾಗಿ ಹೂಡಿದ ಕೂಡಲೇ ಗಳೆ ಎಳೆಯಲಾಗದೆ, ನೆಲ ಹಿಡಿಯತೊಡಗುತ್ತದೆ.
 
ಯೋಚಿಸಿದ ರೈತ ಒಂದು ಉಪಾಯ ಮಾಡುತ್ತಾನೆ. ತನ್ನ ಮನೆಯ ಎತ್ತನ್ನು ಹೂಡಿದ್ದ ನೊಗದ ಭಾಗಕ್ಕೆ ಒಂದು ಹಗ್ಗ ಬಿಗಿದು ಆ ಕಡೆಗೆ ಹೆಚ್ಚು ಭಾರ ಬೀಳುವಂತೆ ‘ಹೂಂಟಿ’ ಹಾಕುತ್ತಾನೆ. ಹಾಗೆ ಮಾಡಿ ಎರಡೂ ಎತ್ತುಗಳನ್ನು ಮತ್ತೆ ಹೂಡಿದಾಗ ‘ಎಡ’  ಎತ್ತು ತನಗೆ ಭಾರವೇ ಇಲ್ಲವೇನೋ ಎಂಬಂತೆ ‘ಬಲ’ಶಾಲಿ ಎತ್ತಿನೊಂದಿಗೆ ನಿಧಾನವಾಗಿ ಹೆಜ್ಜೆ ಹಾಕತೊಡಗುತ್ತದೆ. ಹೀಗೆ ನೊಗ ಹೊರುವುದಕ್ಕೆ ಮೊದಮೊದಲು ಆಸರೆಯಾದ ‘ಎಡ’  ಎತ್ತು ದಿನಗಳೆದ ಹಾಗೆ ರೈತನ ಪ್ರೀತಿಯ ಆರೈಕೆ, ಭಾರವಿಲ್ಲದ ನೊಗದ ಎಳೆತ-ಇವೆಲ್ಲವುಗಳಿಂದಾಗಿ ತನ್ನ ‘ಎಡ’ತನವನ್ನು ನೀಗಿಸಿಕೊಳ್ಳುತ್ತ ‘ಬಲ’ ಎತ್ತಿನೊಂದಿಗೆ ಸಮಹೆಜ್ಜೆಗಳನ್ನು ಹಾಕತೊಡಗುತ್ತದೆ.
 
ಈ ಎಲ್ಲ ಬದಲಾವಣೆಗಳು ನಡೆಯುತ್ತಿದ್ದಾಗಲೂ ರೈತನ ಮನೆಯ ‘ಬಲ’ಶಾಲಿ ಎತ್ತು ತನ್ನ ಮೇಲೆ ಹೆಚ್ಚು ಭಾರ ಬೀಳುತ್ತಿದ್ದರೂ  ಯಾವುದೇ ತಕರಾರು ಇಲ್ಲದೆ, ‘ಎಡ’  ಎತ್ತನ್ನೂ ತನ್ನೊಂದಿಗೆ ಎಳೆದೊಯ್ಯುತ್ತದೆ. ಹೀಗೆ ‘ಎಡ’  ಎತ್ತು ತನ್ನ ಸಮಬಲಕ್ಕೆ ಬರುವಲ್ಲಿ ‘ಬಲ’  ಎತ್ತಿನ ಆಸರೆ, ಸಹಕಾರ, ನೆರವು ತುಂಬಾ ಸಹಾಯಕವಾಗುತ್ತವೆ. ಕೆಲ ದಿನಗಳು ಕಳೆಯುವಷ್ಟರಲ್ಲಿ ‘ಎಡ’  ಎತ್ತೂ ರೈತನ ಪ್ರೀತಿಯ ಆರೈಕೆ ಮತ್ತು ‘ಬಲ’ ಎತ್ತಿನ ಸಹಕಾರಗಳೊಂದಿಗೆ  ತಾನೂ ‘ಬಲ’ ಎತ್ತಿನಷ್ಟೇ ಸಮರ್ಥವಾಗುತ್ತದೆ. ರೈತ ಅತ್ಯಂತ ಸಂತೋಷದಿಂದ ಕೃಷಿ ಮಾಡಿ ಒಂದು ಸುಂದರ ಬದುಕು ಕಟ್ಟಿಕೊಳ್ಳುತ್ತಾನೆ.
 
ಎಡ-ಬಲಗಳ ಚರ್ಚಾಸ್ಪರ್ಧೆಯಲ್ಲಿ ತೊಡಗಿರುವ ಬುದ್ಧಿಜೀವಿಗಳು ಈ ಘಟನೆಯನ್ನು ವಾಸ್ತವವೆಂದು ನಂಬದಿದ್ದರೆ, ಕೊನೇಪಕ್ಷ ಅವರು ಮತ್ತೆ ಮತ್ತೆ ಬಳಸುವ ‘ರೂಪಕ’ದ ಅರ್ಥದಲ್ಲಾದರೂ ಇದನ್ನು ಸ್ವೀಕರಿಸಿದರೆ ಅದರಿಂದ ಅವರಿಗೆ ಒಂದು ಮಹತ್ವದ ಸಂದೇಶ ಖಂಡಿತವಾಗಿಯೂ ಸಿಗುತ್ತದೆ. ಹಾಗೆ ಮಾಡಿದರೆ ಈ ಒಟ್ಟು ಘಟನೆಯ ಪ್ರತಿಯೊಂದು ಹಂತವೂ ಒಂದೊಂದು ಅಪೂರ್ವವಾದ ಅರ್ಥವನ್ನು ಧ್ವನಿಸುವುದು ಅವರ ಗಮನಕ್ಕೆ ಬಂದೀತು.
 
ಎಡ-ಬಲಗಳ ಬಗ್ಗೆ ತೌಡು ಕುಟ್ಟುವಂಥ ಚರ್ಚೆ ಈಗ ಖಂಡಿತ ಅಗತ್ಯವಿಲ್ಲ. ಪರದೇಶಿ ಸಿದ್ಧಾಂತಗಳೂ ನಮಗೆ ಬೇಡ. ಅದಕ್ಕೂ ಹೆಚ್ಚಾಗಿ ಪಾಂಡಿತ್ಯ ಪ್ರದರ್ಶನಕ್ಕಾಗಿ ಇಂಥ ಚರ್ಚೆ ಮಾಡುವುದನ್ನು ನಿಲ್ಲಿಸಿ, ಒಂದು ಸೂಜಿಯ ಮೊನೆಯಷ್ಟಾದರೂ ಸಮಸಮಾಜದ ‘ಕ್ರಿಯಾತ್ಮಕ ಕಾಳಜಿ’ ತೋರಿಸುವ ಪ್ರಯತ್ನ ನಡೆಯಬೇಕಾಗಿದೆ. ವರ್ಗ, ವರ್ಣ, ಲಿಂಗಸಮಾನತೆಯ ಕಾಳಜಿ ನಮಗಿದ್ದರೆ ‘ಎಡ-ಬಲ’ಗಳನ್ನು ಸಮಬಲಗಳನ್ನಾಗಿಸುವಲ್ಲಿ ನಿಜವಾದ ಬದ್ಧತೆ ತೋರಿದವರ ಹೆಜ್ಜೆಗಳನ್ನು ಮರುಶೋಧಿಸಿಕೊಳ್ಳುವ ಕೆಲಸಕ್ಕೆ ನಾವೀಗ ಸಿದ್ಧರಾಗಬೇಕಿದೆ. ನಮ್ಮ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ವಲಯಗಳು ಈಗ ‘ಎಡ’,  ‘ಬಲ’  ಹಾಗೂ ‘ಮಧ್ಯಮ’ ಮಾರ್ಗಗಳೆಂಬ ಮಾತಿನ ವರಸೆಗಳನ್ನು ಬಿಟ್ಟು ನಮ್ಮ ದೇಶಿ ಅನುಭವಗಳು ಕಟ್ಟಿಕೊಡುವ  ಸಮಸಮಾಜದ ಕ್ರಿಯಾಸಿದ್ಧಾಂತಗಳನ್ನು ಅನುಸರಿಸಬೇಕು. ಅಂಥ ಬದ್ಧತೆ ಬರಬಹುದೇ? 
 
ನೊಗ ಹೊತ್ತು ಹೆಗಲು ಕೆತ್ತಿಸಿಕೊಂಡವನ ಅಳಲು ಯಾರಿಗಾದರೂ ಅರ್ಥವಾದೀತೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT