ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾಗುತ್ತಿರುವ ಸರ್ಕಾರದ ಭಾಗ್ಯದ ಬುಟ್ಟಿ

ಪಡಿತರದ ಬದಲು ಕೈಗೆ ಬರುವ ಕೂಪನ್ ಎಂದಾದರೂ ಕುಟುಂಬಕ್ಕೆ ಭಾಗ್ಯವಾದೀತೇ?
Last Updated 27 ಜನವರಿ 2017, 19:30 IST
ಅಕ್ಷರ ಗಾತ್ರ
ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಮಂತ್ರಿಗಳಿಂದ ಮತ್ತೆ  ಘೋಷಣೆ: ‘ಇನ್ನು ಅನ್ನಭಾಗ್ಯದ ಬದಲು ಕೂಪನ್ ಭಾಗ್ಯ’ ಎಂದು. ಪ್ರಾಯೋಗಿಕವಾಗಿ ಮೊದಲು ಮೂರು ಜಿಲ್ಲೆಗಳಲ್ಲಿ ಜಾರಿ ಮಾಡಿ ನಂತರ ಕ್ರಮೇಣ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವ ಯೋಜನೆ ಎನ್ನುತ್ತಾರೆ ಅವರು. ಪಡಿತರದ ಬದಲು ಕೈಗೆ ಬರುವ ಕೂಪನ್ ಎಂದಾದರೂ ಕುಟುಂಬಕ್ಕೆ ಭಾಗ್ಯವಾದೀತೇ? ಕೂಪನ್‌ನ್ನು ಹೇಗೆ ಭಾಗ್ಯವೆನ್ನಲು ಬರುತ್ತದೆ? ಕಡೆಯಪಕ್ಷ ಇದನ್ನು ಭಾಗ್ಯ ಎಂದು ಹೆಸರಿಸಿ ಬಡವರನ್ನು ಹೀಯಾಳಿಸುವುದನ್ನಾದರೂ ನಿಲ್ಲಿಸಬೇಕು. ಸರ್ಕಾರದ ಭಾಗ್ಯದ ಬುಟ್ಟಿ ಬರಿದಾಗಿ ಬಹಳ ದಿನಗಳಾದವು.
 
ನಾಗರಿಕರಿಗೆ ಆಹಾರ ಕೊಡುವುದನ್ನು ನಿಲ್ಲಿಸಲು ಕರ್ನಾಟಕ ಸರ್ಕಾರವು ಮೂರು ವರ್ಷಗಳಿಂದಲೂ ಸರ್ಕಸ್ ಮಾಡುತ್ತಲೇ ಇದೆ. ಅದೆಷ್ಟು ನಮೂನೆಯ ಆಟಗಳನ್ನು ಆಡಿದೆ ಎಂದರೆ ಬೇರೆ ಬೇರೆ ಜಿಲ್ಲೆಯ ನಾಗರಿಕರಿಗೆ ತಾವೆಲ್ಲ ಒಂದೇ ರಾಜ್ಯದಲ್ಲೇ ಇದ್ದೀವೋ, ತಮ್ಮನ್ನೆಲ್ಲ ಆಳುತ್ತಿರುವ ಸರ್ಕಾರ ಒಂದೇನೋ ಅಥವಾ ಬೇರೆ ಬೇರೆಯದೋ ಎಂದು ಸಂಶಯ ಬರುವಷ್ಟು. ಹಳೆಯ ಕಾರ್ಡು ಸಾಕಿನ್ನು, ಎಲ್ಲರೂ ಹೊಸ ಕಾರ್ಡುಗಳನ್ನು ಮಾಡಿಸಿಕೊಳ್ಳಿ ಎಂದರು. ಹೊಸ ಕಾರ್ಡುಗಳನ್ನು ಮಾಡಿಸಲು ಒಂದೊಂದು ಜಿಲ್ಲೆಯಲ್ಲಿ ಒಂದೊಂದು ದರ. ಉತ್ತರ ಕನ್ನಡದಲ್ಲಿ ಉಚಿತವಿದ್ದರೆ, ಧಾರವಾಡದಲ್ಲಿ ₹ 20. ಬೆಳಗಾವಿ ಜಿಲ್ಲೆಯಲ್ಲಿ ₹ 50 ಕೊಡಬೇಕು. ಒಂದು ಕಡೆ ಮಕ್ಕಳ ಹೆಸರಿದ್ದರೆ ಸಾಕೆನ್ನುತ್ತಾರೆ, ಇನ್ನೊಂದು ಜಿಲ್ಲೆಯಲ್ಲಿ ಮಕ್ಕಳ ಫೋಟೊ ಇಲ್ಲದೆ ನಡೆಯುವುದಿಲ್ಲ ಎನ್ನುತ್ತಾರೆ. ಎಲ್ಲಾ ಆಯಿತೆನ್ನುವಷ್ಟರಲ್ಲಿ ಮತ್ತೆ ಕಾರ್ಡು ಅದ್ಯಾವ ಕಾರಣಕ್ಕೋ ಡಿಲೀಟ್ ಆಗಿರುತ್ತದೆ. ಅಷ್ಟರಲ್ಲಿ ಆನ್‌ಲೈನ್ ಅರ್ಜಿ ತೆಗೆದುಕೊಳ್ಳುವುದು ನಿಂತಿರುತ್ತದೆ. 
 
ಆಹಾರ ಭದ್ರತಾ ಕಾನೂನಿನಲ್ಲಿ ಬಿಪಿಎಲ್, ಎಪಿಎಲ್ ಕಾರ್ಡುಗಳಿಲ್ಲ, ಆದ್ಯತಾ ಗುಂಪು ಇರುತ್ತದೆ ಎನ್ನುತ್ತಾರೆ. ಆದರೆ ಆಹಾರ ಭದ್ರತಾ ಕಾನೂನನ್ನೇ ಜಾರಿ ಮಾಡುತ್ತೇವೆನ್ನುವ ನಮ್ಮ ಸರ್ಕಾರದವರು ಅದೇ ಕಾರ್ಡಿನಲ್ಲಿ ಆದ್ಯತಾ ಗುಂಪು ಎಂದೂ ಅಚ್ಚು ಹಾಕಿಸಿದ್ದಾರೆ, ಬಿಪಿಎಲ್ ಎಂದೂ ಅಚ್ಚು ಹಾಕಿದ್ದಾರೆ.
 
ಕಾರ್ಡು ನವೀಕರಿಸಿ, ಎಸ್ಸೆಮ್ಮೆಸ್ ಕಳಿಸಿ ಸರ್ಕಾರ ಕೇಳಿದ್ದೆಲ್ಲವನ್ನೂ ಮಾಡಿದರೂ ಪಡಿತರ ತರಲೆಂದು ಚೀಲ ಹಿಡಿದು ಹೋದರೆ ‘ಈ ಬಾರಿ ನಿಮ್ಮ ರೇಷನ್ ಬಂದಿಲ್ಲ’ ಎಂದು ಅಂಗಡಿಯಾತನಿಂದ ಕೇಳಬೇಕು. ಯಾಕೆ? ‘ಹೋಗಿ ತಾಲ್ಲೂಕಾಫೀಸಿನಲ್ಲಿ ಕೇಳಿ ಬಾ. ಪಡಿತರ ನೀಡಬೇಕಾದವರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ’.  ಆಧಾರ್ ಸಂಖ್ಯೆ ಲಿಂಕ್ ಆಗಿಲ್ಲ. ಆಹಾರಕ್ಕೂ ಆಧಾರಕ್ಕೂ ಏನು ಸಂಬಂಧ ಎಂದು ಅರ್ಥವಾಗದೆ, ದಿಕ್ಕುಗಾಣದೆ ಬಂದವರು ಬರಿಗೈಯಲ್ಲಿ ಮರಳಬೇಕು. ಆಧಾರ ಎಂದರೇನು? ಆಸರೆಯಾಗುವುದು ಆಧಾರವಾಗುತ್ತದೆ. ಇಲ್ಲಿ ಆಸರೆಯನ್ನೇ ಕಳಚಿ ಹಾಕುತ್ತಿದೆಯಲ್ಲ ಸರ್ಕಾರದ ‘ಆಧಾರ’? ತಾನು ಎಲ್ಲಾ ಕಾಗದ ಪತ್ರಗಳನ್ನು ಕೊಟ್ಟಿದ್ದರೂ, ಅವೆಲ್ಲವೂ ಸರಿ ಇದ್ದರೂ ಈ ‘ಲಿಂಕ್’ ಆಗಿಲ್ಲ ಎಂದರೇನು? ಹೊಸ ಹೊಸ ತಂತ್ರಜ್ಞಾನಗಳು ಬಂದು ಜನರ ಜೀವನವನ್ನು ಇನ್ನಷ್ಟು ಸುಲಭ, ಸರಳಗೊಳಿಸಬೇಕಿತ್ತಲ್ಲ, ಇದೇಕೆ ಮತ್ತೂ ಮತ್ತೂ ಜಟಿಲವಾಗುತ್ತಿದೆ? ಆಧುನಿಕ ಆವಿಷ್ಕಾರಗಳು ಸಂಪರ್ಕ, ಸಂವಹನವನ್ನು ಸರಳಗೊಳಿಸಬೇಕಿತ್ತಲ್ಲ? ಅದೇಕೆ ಮತ್ತೆ ಮತ್ತೆ ತಾಲ್ಲೂಕು ಆಫೀಸಿಗೆ, ಜಿಲ್ಲಾ ಕಚೇರಿಗೆ ಎಡತಾಕುವಂತೆ ಮಾಡುತ್ತಿದೆ? 
 
ಸತ್ಯ ಹೇಳಿದ್ದರೆ ಒಂದು ಸಾರೆ ಹೇಳಿದರೆ ಸಾಕಾಗುತ್ತದೆ. ಆದರೆ ಸರ್ಕಾರ ಹೇಳುತ್ತಿರುವುದು ಸತ್ಯವನ್ನಲ್ಲ, ಸುಳ್ಳನ್ನು. ಸುಳ್ಳುಗಳನ್ನು ಪೋಣಿಸಿ ಪೋಣಿಸಿ ಹೇಳುತ್ತಿದೆ. ಅದು ಸತ್ಯವಲ್ಲವಾದ್ದರಿಂದ ದಿನಕ್ಕೊಂದು ಹೊಸ ಸುಳ್ಳನ್ನು ಹೆಣೆಯಲೇಬೇಕಾಗಿದೆ. ಯಾಕಾಗಿ ಆಡುತ್ತಿದೆ ಇಷ್ಟೆಲ್ಲ ಮೋಸದಾಟವನ್ನು? ದೇಶದ ನಾಗರಿಕರಿಗೆ ಪಡಿತರದಲ್ಲಿ ಆಹಾರವನ್ನು ಕೊಡುವುದು ಅದಕ್ಕೆ ಬೇಕಿಲ್ಲ. ಬೇಕಿಲ್ಲವೆಂದರೇನು, ವಿಶ್ವ ವ್ಯಾಪಾರ ಸಂಘಟನೆ ತನ್ನ ಷರತ್ತುಗಳಿಂದ ಸರ್ಕಾರದ ಕೈ ಬಾಯಿ ಕಟ್ಟಿಹಾಕಿದೆ. ಪಡಿತರ ಕೊಡುವಂಥ, ಪ್ರಾಥಮಿಕ ಆರೋಗ್ಯದಂಥ ಸೇವೆಗಳನ್ನು ಶತಾಯ ಗತಾಯ ನಿಲ್ಲಿಸಲೇಬೇಕು ಎಂದು ಹತ್ತು ವರ್ಷಗಳ ಹಿಂದೆಯೇ ಷರತ್ತು ಹಾಕಿಟ್ಟಿದೆ. ಒತ್ತಡದ ಮೇಲೆ ಒತ್ತಡವಿದೆ ಅದರ ಮೇಲೆ. ವ್ಯಾಪಾರಿ ಒಪ್ಪಂದವದು. ತಪ್ಪಿಸಿಕೊಳ್ಳುವಂತಿಲ್ಲ. ಷರತ್ತಿಗೆ ಮಣಿಯದಿದ್ದರೆ ನಾವು ಕೇಳಿದಂಥ ‘ವಿದೇಶಿ ತಂತ್ರಜ್ಞಾನ’ಗಳು ಲಭ್ಯವಾಗುವುದಿಲ್ಲ. ಅದಕ್ಕಾಗಿ ಮಾಡಲೇಬೇಕು. ಆದರೆ ನಾಗರಿಕರೆದುರು ಸತ್ಯವನ್ನು ಬಿಚ್ಚಿಡಲು ಭಯ. ಯಾವ ರಾಜಕೀಯ ಪಕ್ಷದವರಿಗೂ ಧೈರ್ಯವಿಲ್ಲ. ನಾಳೆ ಚುನಾವಣೆಯಲ್ಲಿ ಗುಡಿಸಿ ಮೂಲೆಗೆ ಚೆಲ್ಲಿಯಾರೆಂಬ ಭಯ. ಅದಕ್ಕೇ ಇಷ್ಟು ಮೋಸದ ಆಟಗಳು. 
 
ಇಲ್ಲೊಂದು ಉದಾಹರಣೆ ನೋಡಿ. 2016ರ ಆಗಸ್ಟ್ 16ರ ಸರ್ಕಾರದ ಆದೇಶದ ಪ್ರಕಾರ ಗ್ರಾಮಾಂತರ ಪ್ರದೇಶಗಳಲ್ಲಿ ಪಡಿತರ ಚೀಟಿ ವಿತರಿಸುವ ಅಧಿಕಾರವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರತ್ಯಾಯೋಜಿಸಿದೆ. ಆದರೆ ಕಾರ್ಡ್ ಬೇಕೆಂದು ಅರ್ಜಿ ಹಾಕುವವರು ಆನ್ ಲೈನ್‌ನಲ್ಲಿಯೇ ಅರ್ಜಿ ನೀಡತಕ್ಕದ್ದು. ಗ್ರಾಮಾಂತರ ಪ್ರದೇಶಗಳಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಲು ಗ್ರಾಮೀಣರಿಗೆ ಎಲ್ಲ ಸೌಲಭ್ಯಗಳನ್ನೂ ಸರ್ಕಾರ ಮಾಡಿಸಿಟ್ಟಿದೆಯೇ? ಕಾರ್ಡು ಮಾಡಿಸಿಕೊಂಡವರು ತಮ್ಮ ಕಾರ್ಡ್ ಸಂಖ್ಯೆಯನ್ನೂ, ಆಧಾರ ಸಂಖ್ಯೆಯನ್ನೂ ಮೆಸೇಜ್ ಮಾಡಬೇಕೆನ್ನುತ್ತದೆ ಇಲಾಖೆ. ಅಂದರೆ ಎಲ್ಲ ಗ್ರಾಮೀಣರ ಬಳಿಯೂ ಮೊಬೈಲ್ ಇದೆ ಎಂಬ ಪೂರ್ವಗ್ರಹ. ವ್ಯವಸ್ಥೆಯನ್ನು ಮಾಡದೆಯೇ ಅದರೊಳಗೆ ಜನರನ್ನು ದೂಡುವುದು ತೀರಾ ಅನಾಗರಿಕ ವಿಧಾನ. ನಾಗರಿಕರ ಹಿತಾಸಕ್ತಿಯಂತೂ ಅದರಲ್ಲಿ ಕಾಣುವುದಿಲ್ಲ.
 
ಇಂಥ ಇನ್ನೊಂದು ಅಸಂಬದ್ಧ ಆದೇಶ ಹೊರಡಿಸುವಾಗ ತನ್ನದೇ ನಾಗರಿಕರನ್ನು ನಮ್ಮ ಪ್ರಜಾ ಸರ್ಕಾರ ವಂಚಕರೆಂದು ಆರೋಪಿಸಿತು. ತಾನು ಕೊಟ್ಟ ಪಡಿತರದ ಕಾಳನ್ನು ಪೇಟೆಯಲ್ಲಿ ಮಾರಿಕೊಳ್ಳುತ್ತಾರೆಂದು ಹೇಳುತ್ತ ಸುಪ್ರೀಂ ಕೋರ್ಟು ಅತ್ಯಂತ ದೀನರಿಗೆಂದು ಪಾಲಿಸಿದ್ದ ಅಂತ್ಯೋದಯ ಕಾರ್ಡುಗಳನ್ನು ಕಿತ್ತುಕೊಂಡಿತು. ಅಂತ್ಯೋದಯ ಕಾರ್ಡುಗಳು ಬೇಡ. ಅದಕ್ಕೆ ಮೊದಲು ಅಂತ್ಯೋದಯ ಕಾರ್ಡ್ ಬೇಕಾಗುವಂಥ ಸಮಾಜ ವ್ಯವಸ್ಥೆ ನಮ್ಮಲ್ಲಿರಬಾರದಲ್ಲವೇ? ಕೆಲವರಿಗೆ ಐದು ಪೀಳಿಗೆಯವರೆಗೆ ಬಂಗಾರವನ್ನೇ ತಿಂದರೂ ಮುಗಿಸಲಾರದಷ್ಟು ಸಂಪತ್ತು, ಇನ್ನು ಕೆಲವರಿಗೆ ಜೀವನಪೂರ್ತಿ ಮಣ್ಣನ್ನೇ ತಿಂದೇನೆಂದರೂ ಹಿಡಿ ಮಣ್ಣು ಕೂಡ ಅವರದಲ್ಲ. ‘ನಮಗೆ ನಿಮ್ಮ ಭಿಕ್ಷಾನ್ನ ಕೊಡುವ ಬಿಪಿಎಲ್, ಎಪಿಎಲ್ ಬೇಡ, ಮೀಸಲಾತಿ ಕೂಡ ಬೇಡ. ತುಂಡು ಭೂಮಿಯನ್ನು ನಮ್ಮ ಹೆಸರಿಗೆ ಮಾಡಿ ಸಾಕು ಬೇರೆ ಏನನ್ನೂ ಕೇಳುವುದಿಲ್ಲ’ ಎನ್ನುತ್ತದೆ ಶೋಷಣೆಗೊಳಗಾದ ಸಮುದಾಯ. ‘ಪಡಿತರವೂ ಬೇಡ, ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಊಟ ಕೊಡುವುದೂ ಬೇಡ, ನಮ್ಮ ಮಕ್ಕಳಿಗೆ ನಾವೇ ಊಟ ಹಾಕುತ್ತೇವೆ. ನಮಗೆ ಕೆಲಸ ಕೊಡಿ, ಸರಿಯಾಗಿ ಕೂಲಿ ಕೊಡಿ’ ಎಂದು ಒಬ್ಬ ಮಹಿಳೆ ಅನ್ನುವಾಗ, ‘ನಾನು ರೇಷನ್ ಅಕ್ಕಿ ಮಾರಿಕೊಂಡಿದ್ದು ಹೌದ್ರೀ, ಆ ಹಣದಲ್ಲಿ ಮಗನಿಗೆಂದು ಪುಸ್ತಕ, ನೋಟ್ ಬುಕ್ ತಂದುಕೊಟ್ಟೆ. ನಾವಂತೂ ಓದಲಿಲ್ಲ, ಮಗನಾದರೂ ಓದಿ ಉದ್ಧಾರವಾಗಲಿ ಎಂದು. ಆದರೆ ಮೊಬೈಲು, ಬೈಕುಗಳ ಶೋಕಿ ವಸ್ತುಗಳ ಆಶೆಗೆ ಬಿದ್ದು ಮಗ ಶಾಲೆಗೆ ಹೋಗದೆ ದುಡಿಯಲು ಹೋಗಿಬಿಟ್ಟ’ ಎಂದು ಕಣ್ಣೀರು ತುಂಬಿ ತಾಯಿ ಹೇಳುವಾಗ ಆಕೆಯ ಕಣ್ಣಲ್ಲಿ ಜಿನುಗುವ ನೋವು, ಅಸಹಾಯಕತೆ, ಅವಮಾನ ಪಟ್ಟಭದ್ರರಿಗೆ ಊಹಿಸಲಿಕ್ಕೆ ಸಾಧ್ಯವಿಲ್ಲ.
 
ನಮ್ಮ ಜನರ ತಾಳ್ಮೆಗಂತೂ ತಲೆಬಾಗಲೇಬೇಕು. ಎಷ್ಟು ಚಿತ್ರಹಿಂಸೆ ಕೊಟ್ಟರೂ ನಾಲ್ಕು ಹಿಡಿ ಅಕ್ಕಿಗೋಸ್ಕರ ಎಲ್ಲ ಅವಮಾನಗಳನ್ನೂ ಸಹಿಸುತ್ತಾರಲ್ಲ? ‘ನೀನು ಈ ದೇಶದ ಪ್ರಜೆ ಹೌದೋ, ಅಲ್ಲವೋ ಎಂದು ಸಾಬೀತು ಮಾಡು’ ಎಂದರೂ ಸಾಬೀತು ಮಾಡಲು ಮುಂದಾಗುತ್ತಾರಲ್ಲ? ಇಷ್ಟಕ್ಕೂ ಯಾವ ಜನ ಇವರು? ಹಳ್ಳಿಗಳಲ್ಲಿನ ಕೃಷಿ ಕೂಲಿಕಾರರು. ಸಣ್ಣ ರೈತರು. ಇವರಿಲ್ಲದೆ ನಮ್ಮ ಆಹಾರ ಭದ್ರತೆಯೇ ಇಲ್ಲ. ಇಡೀ ವರ್ಷವೂ ಮಣ್ಣಿನೊಳಗಾಡಿ, ಕೈ ಕೆಸರು ಮಾಡಿಕೊಂಡು ದುಡಿದು ಅನ್ನದ ಚೀಲವನ್ನೂ ರೊಟ್ಟಿಯ ಬುಟ್ಟಿಯನ್ನೂ ತುಂಬುವವರು ಇವರು. ಬಿಸಿಲೆನ್ನದೆ, ಮಳೆಯೆನ್ನದೆ ದೇಹ ಕಪ್ಪಾಗಿಸಿ, ಚರ್ಮ ಸುಕ್ಕಾಗಿಸಿಕೊಂಡು ದುಡಿದು ದೇಶದ ಧಾನ್ಯದ ಗೋದಾಮು ತುಂಬಿಸುವವರು.  
 
ಸಾವಿರಾರು ರೈತರ ಜೀವನವನ್ನೇ ಮಣ್ಣಾಗಿಸಿದ ಎಂ.ಆರ್.ಪಿ.ಎಲ್.ನಂಥ ಕಂಪೆನಿಗೆ ಸರ್ಕಾರ ಮತ್ತೆ ಸಾವಿರಗಟ್ಟಲೆ ಭೂಮಿ ಕೊಡುವ ಯೋಚನೆ ಮಾಡುತ್ತಿದೆ. ನರಕಸದೃಶ ಪರಿಸರದಲ್ಲಿ ಬದುಕಲಾಗದೇ ಬಾಳುತ್ತಿರುವ ಜನರಿಗೆ ‘ಏನು ಮಾಡಲೂ ಸಾಧ್ಯವಿಲ್ಲ, ಆ ವಾಸನೆಯೊಂದಿಗೆ ಹೊಂದಿಕೊಳ್ಳಬೇಕು’ ಎನ್ನುವ ಜಿಲ್ಲಾಧಿಕಾರಿ ವ್ಯವಸ್ಥೆಯ ಆದ್ಯತೆಯನ್ನು ಸ್ಪಷ್ಟವಾಗಿ ಹೇಳುತ್ತಾರೆ. ಬಡವರಿಗೆ ಬದುಕು ಕೊಡಲಾಗದಿದ್ದರೂ ಬಡವರ ಹಣ ಸರ್ಕಾರಕ್ಕೆ ಬೇಕು. ಹೆಚ್ಚೆಚ್ಚು ಮದ್ಯ ಮಾರಾಟದ ಗುರಿ ಹಾಕಿ ಅಧಿಕಾರಿಗಳಿಗೆ ಗಡುವು ಕೊಡುವ ಸರ್ಕಾರ ಕಾಳಿನ ಬದಲಿಗೆ ಕಾಸು ಕೊಡುವ ಯೋಜನೆಯನ್ನು ಹಾಕಿದ್ದೂ ಮದ್ಯದ ಮೂಲಕ ಅದು ತನ್ನ ಬೊಕ್ಕಸಕ್ಕೆ ಮರಳಿ ಬರಲೆಂದು ಎನ್ನುವುದು ಸ್ಪಷ್ಟವಾಗುತ್ತದೆ. ‘ರೇಷನ್ ಕೊಡುವುದಿಲ್ಲ, ಇನ್ನು ಮೇಲೆ ಹಣ ಕೊಡುತ್ತೇವೆ’ ಎನ್ನುವ ಸರ್ಕಾರ ಉದ್ಯೋಗ ಮಾಡುವ ಜನರಿಗೆ ಯೋಗ್ಯವಾದ ಕೂಲಿಯ ಹಣ ಕೊಡಲಿ. ಕೂಲಿಯ ಹಣವನ್ನು ಸಕಾಲದಲ್ಲಿ ಕೊಡಲಾಗದವರು ರೇಷನ್ ಬದಲಿನ ಹಣವನ್ನು ಕೊಟ್ಟಾರೆಯೇ?
 
ಆಹಾರದ ಬದಲಿಗೆ ಹಣ ಕೊಡುತ್ತೇನೆನ್ನುವ ಸರ್ಕಾರದ ವಿಚಾರ ನಾಗರಿಕರ ಆತ್ಮಾಭಿಮಾನಕ್ಕೆ ಕೊಡುವ ಅತಿದೊಡ್ಡ ಪೆಟ್ಟು. ಆತ್ಮಘಾತಕ ಪೆಟ್ಟು ಅದು. ತನ್ನ ಪ್ರಜೆಗಳನ್ನು ಕೇವಲ ಗುರಿ ಗುಂಪನ್ನಾಗಿಸಿ, ಫಲಾನುಭವಿಯನ್ನಾಗಿ ನೋಡುತ್ತಿದೆಯಲ್ಲ ಸರ್ಕಾರ. ಅದು ಕೊಡುವ ಆಹಾರ ಬೆಳೆಯನ್ನು ಬೆಳೆದವರಾರು? ಜೊಳ್ಳು ನೀತಿಗಳನ್ನು ಮಾಡುತ್ತಿರುವ ಈ ಅಧಿಕಾರಿಗಳೇ? ಬೆಳೆದ ಬೆಳೆಯನ್ನು ಕೊಯ್ದು ರಾಶಿ ಮಾಡಿದವರಾರು? ಈ ಐ.ಎ.ಎಸ್ ಅಧಿಕಾರಿಗಳೇ? ರಾಶಿ ಮಾಡಿದ್ದನ್ನು ತಂದು ಆಹಾರದ ಈ ಗೋದಾಮುಗಳನ್ನು ತುಂಬಿಟ್ಟವರಾರು? 
 
ತನ್ನ ಬೆವರಿನಿಂದ ನೆಲವನ್ನು ತೋಯಿಸಿ ದುಡಿಯುವ ರೈತ, ರೈತ ಮಹಿಳೆ, ಬೆವರು ತೊಟ್ಟಿಕ್ಕಿ ಉಟ್ಟ ಬಟ್ಟೆ ತೋಯುವವರೆಗೂ ಮೂಟೆಗಳನ್ನು ಹೊತ್ತು ಹಾಕುವ ಕೂಲಿಕಾರರು ಸಂಜೆ ಹೊತ್ತಿಗೆ ಕೈತುಂಬ ಕೂಲಿ ಪಡೆದು, ತಮ್ಮ ಮನೆಗೆ ಶಾಂತಿ ಸಮಾಧಾನದಿಂದ ಹಿಂದಿರುಗಿ ಹೊಟ್ತುಂಬ ಉಂಡು ಸುಖನಿದ್ದೆ ಮಾಡಬೇಕಾಗಿತ್ತು. ಆದರೆ ಹಾಗಿಲ್ಲವಲ್ಲ. ದೇಶಕ್ಕೆ ಆಹಾರ ಭದ್ರತೆ ಒದಗಿಸಿದ ಅದೇ ಕೈಗಳು ಚೀಲ ಹಿಡಿದು ಪಡಿತರಕ್ಕಾಗಿ ಸಾಲಲ್ಲಿ ನಿಲ್ಲಬೇಕು. ತನ್ನ ತುತ್ತು ಅನ್ನದ ಪಡಿತರಕ್ಕಾಗಿ ಆನ್‌ಲೈನ್ ಕಾರ್ಡು, ಆಧಾರ್ ಕಾರ್ಡು, ಆಧಾರ್ ಲಿಂಕ್, ಬ್ಯಾಂಕ್ ಖಾತೆ, ಕೂಪನ್ ಎಂದು ಒಂದಾದ ನಂತರ ಒಂದು ಸರತಿಯ ಸಾಲಲ್ಲಿ ನಿಲ್ಲಬೇಕು. ಅಂದಿನ ದುಡಿತವನ್ನೂ, ಕೂಲಿಯನ್ನೂ ಕಳೆದುಕೊಳ್ಳಬೇಕು.
 
ರೈತರು ಬೆಳೆದು, ಕೂಲಿಕಾರರು ರಾಶಿ ಹಾಕಿ, ಹಮಾಲಿಗಳು ತುಂಬಿಟ್ಟಿರುವ ಗೋದಾಮುಗಳಲ್ಲಿನ ಕಾಳನ್ನು ರಕ್ಷಿಸಿಟ್ಟು ಇದೇ ಜನಕ್ಕೆ ವಿತರಿಸುವ ಜವಾಬ್ದಾರಿ ಮಾತ್ರ ತನ್ನದೆಂದು ಸರ್ಕಾರ ಅರಿಯಬೇಕು. ಹೊರತು, ಪಡಿತರವನ್ನು ಕೊಡಬೇಕೋ, ಬೇಡವೋ, ಪಡಿತರ ಕೊಡಲಿಕ್ಕೆ ಯಾವ ಹೊಸ ಷರತ್ತು ಹಾಕಲಿ, ಪಡಿತರದ ಬದಲಿಗೆ ಕೂಪನ್ ಕೊಡುತ್ತೇವೆ ಎಂದು ನಿರ್ಧರಿಸುವ ಅಧಿಕಾರವನ್ನು ಇವರಿಗೆ ಕೊಟ್ಟವರಾರು? ತನಗೆ ವಹಿಸಿರುವ ಜವಾಬ್ದಾರಿಯನ್ನು ಮರೆತು ಹೀಗೆ ಜನರ ಜೀವನದೊಂದಿಗೆ ಆಟವಾಡುವುದು ಮದವೇರುತ್ತಿರುವ ಲಕ್ಷಣ. ಅಥವಾ ನಿಷ್ಠೆ ಬೇರೆಲ್ಲೋ ತಿರುಗಿರುವುದರ ಲಕ್ಷಣ. 
 
ರೋಗದ ಈ ಲಕ್ಷಣ ಬಹು ದಿನಗಳ ಹಿಂದೆಯೇ ಕಂಡಿದೆ. ವಿಶ್ವ ವ್ಯಾಪಾರ ಸಂಘಟನೆಗೆ ದೇಶವು ಮಣಿದು ಮಾರಾಟವಾದ ದಿನಗಳವು. ದೇಶದೆಲ್ಲೆಡೆ ಕಿಚ್ಚೆದ್ದಿತ್ತು ಅಂದು. ಮುಂದಾಗಬಹುದಾದ ಅನಾಹುತಗಳನ್ನು ಕಂಡು ಎಚ್ಚರಿಸಿದ್ದರು ತಿಳಿದವರು. ಆದರೆ ಕಿಚ್ಚು ಬಲು ಬೇಗ ಆರಿಹೋಯಿತು.  ದುಡಿದುಣ್ಣುವ ನಿತ್ಯ ಕಾಯಕದಲ್ಲಿ ಮುಂದೆ ಬರಬಹುದಾದ ಇನ್ನೂ ದೊಡ್ಡ ಗುಲಾಮಿತನದ ಕಲ್ಪನೆ ಬಹುಜನರಿಗೆ ಬರಲಿಲ್ಲ. ಆದರೀಗ ರಕ್ಕಸ ಮನೆ ಬಾಗಿಲಿಗೇ ಬಂದಿದ್ದಾನೆ. ಎದ್ದು, ಅವನನ್ನು ಒದ್ದೋಡಿಸದಿದ್ದರೆ ಗುಲಾಮಿತನದ ಸರಪಳಿ ಬೀಳುವುದಕ್ಕೆ ತಡವಿಲ್ಲ.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT