ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳ: ಅಧ್ಯಯನಕ್ಕೆ ಕೋರಿಕೆ

Last Updated 27 ಜನವರಿ 2017, 19:30 IST
ಅಕ್ಷರ ಗಾತ್ರ
ಕಂಬಳ ಆಚರಣೆಯಲ್ಲಿ ಕಾಲವೇ ಹಲವು ಸುಧಾರಣೆಗಳನ್ನು ಮಾಡಿದೆ. ಅಲ್ಲದೆ ತಕ್ಕ ತಿಳಿವಳಿಕೆ ನೀಡಿ, ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ಕಂಬಳ ಆಚರಣೆಯನ್ನು ಸಾಂಸ್ಕೃತಿಕವಾಗಿ ಹೇಗೆ ನಡೆಸಬಹುದು ಎನ್ನುವ ಬಗ್ಗೆ ಅಧ್ಯಯನವೊಂದನ್ನು ಬೀದರ್‌ನ ಪಶುವೈದ್ಯಕೀಯ ವಿಶ್ವವಿದ್ಯಾಲಯದ ತಂಡ ನಡೆಸಿದೆ.
 
2015ರ ಫೆಬ್ರುವರಿ 15ರಂದು ಕರಾವಳಿಯ ವಿವಿಧೆಡೆ ಭೇಟಿ ನೀಡಿದ್ದ ತಂಡ, ‘ಇದು ಜಾತಿಭೇದವಿಲ್ಲದ ಕ್ರೀಡೆಯಾಗಿದೆ. ರೈತಾಪಿ ಜನರು ಬೇಸಾಯಕ್ಕೆ ಕೋಣಗಳನ್ನು ಬಳಸುವುದು ಅನಿವಾರ್ಯವೇ ಆಗಿದೆ. ಆದ್ದರಿಂದ ಅವುಗಳೊಂದಿಗೆ ಸಂಭ್ರಮಿಸುವ ಕಂಬಳ ಧಾರ್ಮಿಕ ಆಚರಣೆ, ನಂಬಿಕೆಯನ್ನೂ ಆಧರಿಸಿದೆ’ ಎಂಬ ವಿಷಯವನ್ನು ಅಧ್ಯಯನದಲ್ಲಿ ಉಲ್ಲೇಖಿಸಿದೆ. 
 
ಜಲ್ಲಿಕಟ್ಟುವಿಗಿಂತ ಕಂಬಳ ಆಚರಣೆ ಭಿನ್ನವಾಗಿದೆ ಎನ್ನುವುದನ್ನು ವಿವರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಈ ವರದಿ ಆಧಾರದಲ್ಲಿ ಸರ್ಕಾರ 2015ರ ಡಿಸೆಂಬರ್‌ 17ರಂದು ಷರತ್ತುಬದ್ಧ ಕಂಬಳ ಆಚರಣೆಗೆ ಅವಕಾಶ ಕಲ್ಪಿಸಿತು. ಸರ್ಕಾರಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿಡಿಯೊಗ್ರಾಫ್‌ ಮಾಡಿ, ಕೋಣಗಳಿಗೆ ಹೊಡೆಯದೇ ಕಂಬಳದ ಆಚರಣೆ ನಡೆಯಿತು. ಆದರೆ ಮತ್ತೆ ‘ಪೆಟಾ’ ಕಡೆಯಿಂದ ಆಕ್ಷೇಪ ವ್ಯಕ್ತವಾದ್ದರಿಂದ ಈ ಬಾರಿ ಕಂಬಳ ಆಚರಣೆಯೇ ನಿಂತುಹೋಯಿತು. 
 
ಕಂಬಳ ಗದ್ದೆಯನ್ನು ಕೃಷಿ ಕುಟುಂಬ ಅಕ್ಕರೆಯಿಂದ ನೋಡಿಕೊಳ್ಳುತ್ತದೆ. ಅದಕ್ಕೆ ಹೊಂದಿಕೊಂಡಂತೆ ಹತ್ತಾರು ಆಚರಣೆ, ನಂಬಿಕೆಗಳಿವೆ. ಇನ್ನು ಕಂಬಳದ ಕೋಣಗಳನ್ನು ಮುದ್ದು ಮಕ್ಕಳಂತೆ ಸಾಕುವ ಮತ್ತು ಕಂಬಳ ಪ್ರಕ್ರಿಯೆಗೆ ಪೂರಕವಾಗಿ ಇರುವ ನಾಗಾರಾಧನೆ ಮತ್ತು ದೈವಾರಾಧನೆಯನ್ನು ಸಮಗ್ರವಾಗಿ ಅಧ್ಯಯನ ಮಾಡುವುದು ಅತ್ಯಗತ್ಯ. ಈ ಅಧ್ಯಯನ ನಡೆಸಲು ಅವಕಾಶ ಕಲ್ಪಿಸುವಂತೆ ಕರಾವಳಿ ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ಸರ್ಕಾರ, ಅಧ್ಯಯನಕ್ಕೆ ಅವಕಾಶ ನೀಡಲು ಅನುಮತಿ ನೀಡುವಂತೆ ಕೋರಿ ಹೈಕೋರ್ಟ್‌ಗೆ ವಿವರ ಸಲ್ಲಿಸಿದೆ. 
 
ತುಳುನಾಡಿನ ಊರುಗಳಲ್ಲಿ ಉಳಿದಿರುವ, ಅಳಿದಿರುವ ಕಂಬಳಗಳು ಸೇರಿದಂತೆ, ಪ್ರಸ್ತುತ ನಡೆಯುತ್ತಿರುವ ಆಧುನಿಕ ಶೈಲಿಯ ಕಂಬಳಗಳು ಮತ್ತು ಒಟ್ಟು ಕೃಷಿ ಜೀವನಶೈಲಿಯಲ್ಲಿ ಕಂಬಳ ಹೇಗೆ ಹಾಸುಹೊಕ್ಕಾಗಿದೆ ಎಂಬ ಬಗ್ಗೆ ಸರ್ಕಾರ ಅಧ್ಯಯನವನ್ನು ನಡೆಸಬೇಕು. 
– ಗುಣಪಾಲ ಕಡಂಬ
ಕಂಬಳ ಅಕಾಡೆಮಿ ಸಂಯೋಜಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT