ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳ ಬರೀ ರೇಸ್‌ ಅಲ್ಲ

ಜನಪದ ಕ್ರೀಡೆ ವಿವಾದ
Last Updated 27 ಜನವರಿ 2017, 19:30 IST
ಅಕ್ಷರ ಗಾತ್ರ

ಕಂಬಳ ನಡೆಸುವುದಕ್ಕಾಗಿ ಕಾನೂನು ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂ ಕೋರ್ಟ್ ನಿಷೇಧವಿದ್ದ ಕಾರಣ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೆ ತಂದು ಈ ಆಚರಣೆಗೆ ಅನುವು ಮಾಡಿಕೊಟ್ಟಿರುವ ತಮಿಳುನಾಡು ಮಾದರಿ ರಾಜ್ಯದಲ್ಲೂ ಹೊಸ ಚರ್ಚೆಗೆ ನಾಂದಿಯಾಗಿದೆ.

ಕಂಬಳ ನಿಷೇಧವನ್ನು ವಿರೋಧಿಸಿ ಮೂಡುಬಿದಿರೆಯಲ್ಲಿ ಇಂದು (ಜ. 28) ಸಂಘಟಿತ ಹಕ್ಕೊತ್ತಾಯ ಸಮಾವೇಶವೂ ನಡೆಯಲಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಈ ಜನಪದ ಕ್ರೀಡೆಗಳ ಸಾಂಸ್ಕೃತಿಕ ಮಹತ್ವ, ಪ್ರಸ್ತುತತೆ ಕುರಿತ ಜಿಜ್ಞಾಸೆ.

**
ದೀರ್ಘವಾದ ಮಳೆಗಾಲದ ಕೃಪೆಯಿಂದ ಭತ್ತದ ಕೃಷಿಯನ್ನೇ ನಂಬಿಕೊಂಡಿದ್ದ ಕರಾವಳಿಯಲ್ಲಿ ಕಂಬಳದ ಆಚರಣೆ ನಾಗ ಮತ್ತು ದೈವಾರಾಧನೆಯೊಂದಿಗೆ ಧಾರ್ಮಿಕ ವಿಧಿಯಾಗಿಯೇ ಗುರುತಿಸಿಕೊಂಡಿದೆ. ಮಳೆಗಾಲ ಮುಗಿಯುತ್ತಿದ್ದಂತೆಯೇ ತುಂಬು ಮಾತೃ ಕಳೆಯಿಂದ ನಳನಳಿಸುವ ಭೂಮಿತಾಯಿ ಮಡಿಲಲ್ಲಿ ಪ್ರಕೃತಿಯ ವಿಕಾಸವನ್ನೂ, ಆ ಮೂಲಕ ಮಾನವ ಸಂತಾನದ ಅಭಿವೃದ್ಧಿಯ ನಿವೇದನೆಯನ್ನೂ ಮಾಡಿಕೊಳ್ಳುವ ರೈತಾಪಿ ಆಚರಣೆಯಾಗಿ ಕರಾವಳಿಯಲ್ಲಿ ಕಂಬಳ ಗುರುತಿಸಿಕೊಂಡಿದೆ. 
 
1969ಕ್ಕೂ ಮುನ್ನ ಊರು ಊರುಗಳಲ್ಲಿ ಕಂಬಳ ಕೃಷಿಕರ ಜಾತ್ರೆಯಂತೆ ನಡೆಯುತ್ತಿತ್ತು. ಆದರೆ 1969ರ ಬಳಿಕ ಕಂಬಳದ ಆಚರಣೆಗೆ ವೈಭವದ ಕಳೆ ಬಂದು ಸ್ಪರ್ಧಾತ್ಮಕವಾಗಿ ನಡೆಯಲು ಶುರುವಾಯಿತು. ಈ ವೈಭವದ ದಿನಗಳನ್ನು ಕಾಣುತ್ತಿದ್ದಂತೆಯೇ ನಿಷೇಧ ಎನ್ನುವ ಪೆಡಂಭೂತ ಎದುರಾಗಿ ಕಂಬಳದ ಕುರಿತು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. 
 
ಕಂಪ+ ಪೊಲ (ಕಂಬೊಲ ಅಥವಾ ಕಂಬುಲ) ಅಂದರೆ ಕೆಸರಿರುವ ಗದ್ದೆ ಎನ್ನುವ ಅರ್ಥ ಕಂಬಳಕ್ಕಿದೆ. ಸಾಮಾನ್ಯವಾಗಿ ಕಂಬಳ ಕ್ರೀಡೆಯನ್ನು ಜಾನಪದ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಚರ್ಚಿಸಲಾಗುತ್ತದೆ. ಆದರೆ ಅಧ್ಯಯನಗಳನ್ನು ಗಮನಿಸಿದಾಗ ಕಂಬಳದಲ್ಲಿ ಫಲವಂತಿಕೆಯ ಆಶಯ ಎದ್ದು ಕಾಣುತ್ತದೆ. 
 
ಕಂಬಳದೊಂದಿಗೆ ತಳಕು ಹಾಕಿಕೊಂಡಿರುವ ದೈವಿಕ ಪರಿಕಲ್ಪನೆಗಳೆಲ್ಲವೂ ಸೃಷ್ಟಿಯ ಆಶಯವನ್ನು ಎತ್ತಿ ಹಿಡಿಯುವಂಥವಾಗಿವೆ. ಕೆಸರು ಗದ್ದೆಯನ್ನು ಸೃಷ್ಟಿ ಕಾರ್ಯಕ್ಕೆ ಸಜ್ಜು ಮಾಡುವ ಕ್ರಿಯೆಯನ್ನು ದೈವಿಕ ಆಶೋತ್ತರದೊಂದಿಗೆ ಸಂಭ್ರಮಿಸುವ ಕ್ರಿಯೆಯಾಗಿಯೂ ಇದು ಗೋಚರಿಸುತ್ತದೆ. ತುಳುನಾಡಿನ ಜನಪದ ಪರಂಪರೆಯ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿದ ಡಾ. ಪುರುಷೋತ್ತಮ ಬಿಳಿಮಲೆ ಅವರ ‘ಕರಾವಳಿ ಜಾನಪದ’ ಕೃತಿಯಲ್ಲಿ ಈ ಉಲ್ಲೇಖವಿದೆ. 
 
‘ಸಾಮಾನ್ಯವಾಗಿ ಕಂಬಳ ಗದ್ದೆಗೆ ಮೊದಲು ಯಜಮಾನನ ಕೋಣಗಳು ಇಳಿಯುತ್ತವೆ. ಇವನ್ನು ಮುಹೂರ್ತದ ಕೋಣ (ಮೂರ್ತದ ಎರು) ಎಂದು ಗುರುತಿಸಿ ಕಂಬಳದ ಬಳಿಯೇ ಕಟ್ಟಲಾಗುತ್ತದೆ. ಬಳಿಕ ಯಜಮಾನ ಕಂಬಳದಲ್ಲಿ ನಾಗಪೂಜೆಯನ್ನು ಹಿಂಗಾರ (ಅಡಕೆ ಹೂವು) ಅರ್ಪಿಸಿ ಮಾಡಬೇಕು. ಹಿಂಗಾರವು ಫಲವಂತಿಕೆಯ ಸಂಕೇತವಾಗಿ, ಕೇರಳ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಗೌರವ ಪಡೆದಿದೆ. ಮದುವೆಗೂ ಹಿಂಗಾರದ ಹಾರವನ್ನು, ಹಿಂಗಾರ ಇರಿಸಿದ ಕಲಶವನ್ನು ಬಳಸುವುದುಂಟು. ಹಾಗಾಗಿ ನಾಗಪೂಜೆ ಮತ್ತು ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ಅಗತ್ಯವಾಗಿ ಹಿಂಗಾರವನ್ನು ಕಟ್ಟುವುದನ್ನು ಕಾಣಬಹುದು’ ಎಂದು ಬಿಳಿಮಲೆ ಉಲ್ಲೇಖಿಸುತ್ತಾರೆ. 
 
ಹಿಂದೆಲ್ಲ ಕಂಬಳ ನಡೆಯುವ ಹಿಂದಿನ ದಿನ ರಾತ್ರಿ ಕೊರಗರು ‘ಪನಿಕುಲ್ಲುವ’ (ರಾತ್ರಿ ಇಬ್ಬನಿಯಲ್ಲಿ ಡೋಲು ಬಾರಿಸುತ್ತಾ ಹಾಡುತ್ತಾ ನಲಿಯುತ್ತಾ ಇರುವ ಪ್ರಕ್ರಿಯೆ) ಪದ್ಧತಿ ಆಚರಣೆಯಲ್ಲಿತ್ತು.
 
 
ಹೀಗೆ ‘ಪನಿಕುಲ್ಲುವ’ ಕೊರಗರಿಗೆ ನಿಂಬೆ ಹಣ್ಣನ್ನು ಗೌರವ ರೂಪದಲ್ಲಿ ನೀಡಲಾಗುತ್ತದೆ. ಈ ನಿಂಬೆ ಹಣ್ಣು ಕೂಡ ಫಲವಂತಿಕೆಯ ಮತ್ತೊಂದು ಸಂಕೇತ. ಕಂಬಳ ಕ್ರೀಡೆ ಮುಗಿದ ಮೇಲೆ, ಕಂಬಳದ ಮಧ್ಯದಲ್ಲಿ ನೆಡುವ ಕಂಬ, ಅಂದರೆ ನಾಗಧ್ವಜಕ್ಕೆ ಅರಸಿನ ಪೂಸಿ, ಕಂಬಳಕ್ಕೆ ಹಾಲೆರೆಯುವಾಗಲೂ ಈ ಭೂಮಿ ತಾಯಿಯು ಸೃಷ್ಟಿಕಾರ್ಯಕ್ಕೆ ಪೂರಕವಾಗಿರಲಿ ಎಂಬ ಬೇಡಿಕೆಯನ್ನು ದೈವದೇವರಲ್ಲಿ ಸಲ್ಲಿಸಲಾಗುತ್ತದೆ.  ಕಂಬಳ ಗದ್ದೆಗೆ ಮುಟ್ಟಾದ ಹೆಂಗಸರು ಇಳಿಯಬಾರದು ಎಂಬ ಆಚರಣೆ ಎಲ್ಲ ಕಡೆ ಇದೆ. ವಂಡಾರು ಕಂಬಳ ನಡೆಯುವ ಮುನ್ನ ಮದುವೆಯಾದವರಿಗೆ ಕಂಬಳ ಮುಕ್ತಾಯವಾಗುವ ತನಕ ಶೋಭನ ಮಾಡಬಾರದು ಎಂಬ ರೂಢಿಯೂ ಇದೆ. ಈ ಎಲ್ಲ ಆಚರಣೆಗಳನ್ನು ನೋಡಿದರೆ, ಒಂದು ಊರಿನಲ್ಲಿ, ಮೊದಲು ಪ್ರಕೃತಿಯು ಸೃಷ್ಟಿ ಕಾರ್ಯಕ್ಕೆ ಸಜ್ಜಾಗಲಿ, ಆ ಮೂಲಕ ಮಾನವ ಸಂತಾನದ ಅಭಿವೃದ್ಧಿಗೆ ಕಾರಣವಾಗಲಿ. ನಾವೆಲ್ಲ ಪ್ರಕೃತಿಯು ಪೊರೆಯುವ ಕಂದಮ್ಮಗಳು ಎಂಬ ದೀರ್ಘ ಆಶಯ ಇರುವುದನ್ನು ಬಿಳಿಮಲೆ ಗುರುತಿಸುತ್ತಾರೆ.  
 
ವಡ್ಡಂಬೆಟ್ಟ ಕಂಬಳ ನಡೆದ ಬಳಿಕ ಜಡ್ಡು ಬಿತ್ತುವುದು ಎಂದರೆ ಜೊಳ್ಳು ಬೀಜವನ್ನು ಬಿತ್ತುವ ಆಚರಣೆ ಇದೆ. ಕಂಬಳದ ಮಹಿಮೆ ಎಷ್ಟೆಂದರೆ ಜೊಳ್ಳು ಬಿತ್ತಿದರೂ ಊರಿನಲ್ಲಿ ಫಲ ಚಿಗುರುವುದು ಎಂಬ ಆಶಯ ಇದರ ಹಿಂದೆ ಇರಬಹುದು. ಹೆಚ್ಚಿನ ಊರುಗಳಲ್ಲಿ ಕೃಷಿ ಚಟುವಟಿಕೆ ಕಡಿಮೆಯಾಗಿದೆ. ಆದರೆ ಊರಿನ ದೈವಾರಾಧನೆ, ನಾಗಾರಾಧನೆಯ ಸಂದರ್ಭದಲ್ಲಿ ಕಂಬಳದ ನೀರನ್ನು ಮನೆಯ ಜಾನುವಾರುಗಳಿಗೆ ಚಿಮುಕಿಸುವ ‘ಶಾಸ್ತ್ರ’ವನ್ನು ಮಾಡಲಾಗುತ್ತದೆ. 
 
ಮೂಲ್ಕಿ ಅರಸು ಕಂಬಳ ನಡೆಸುವ ದುಗ್ಗಣ್ಣ ಸಾವಂತರ ಅರಸರು ಕೂಡ ಫಲವಂತಿಕೆಯ ಆಶಯವನ್ನು ಒಪ್ಪುತ್ತಾರೆ. ಊರಿನ ಕೃಷಿ ಚಟುವಟಿಕೆಯಲ್ಲಿ ಎಲ್ಲರ ಸಹಭಾಗಿತ್ವಕ್ಕೆ ಅವಕಾಶ ನೀಡುವ ಕಂಬಳ ಸಾಮರಸ್ಯದ ಸಂಕೇತ. ಇಡೀ ಊರೇ ಕಂಬಳದ ಬಗ್ಗೆ ಭಕ್ತಿಯನ್ನು ಇರಿಸಿಕೊಂಡಿರುತ್ತದೆ. ಆದ್ದರಿಂದ ಕಂಬಳವೆಂದರೆ ಕೇವಲ ಕೋಣಗಳ ಓಟವಲ್ಲ, ಕೋಣಗಳ ಓಟ ಕಂಬಳದ ಒಂದು ಭಾಗವಷ್ಟೆ ಎನ್ನುವುದನ್ನು ಅವರು ವಿವರಿಸುತ್ತಾರೆ. 
 
‘ಕೊರಗರ ಪನಿಕುಲ್ಲುವ ಆಚರಣೆ ಇಂದು ಪ್ರಸ್ತುತವಲ್ಲ. ಕಂಬಳವನ್ನು ಮುಂದುವರೆಸುವುದೇ ಆದರೆ ಕೊರಗರ ಆಚರಣೆಯನ್ನು ಕೈಬಿಟ್ಟು ಮುಂದುವರೆಸಬೇಕು’ ಎಂಬುದು ಡಾ. ಬಿಳಿಮಲೆ ಅವರ ಅಭಿಪ್ರಾಯ. 
 
‘ಕಂಬಳ ಮುಗಿದ ಬಳಿಕ ಆ ಗದ್ದೆಗೆ ಯಾರೂ ಇಳಿಯುವಂತಿಲ್ಲ. ಮಾರನೆಯ ದಿನ ದೇವರ ಪ್ರಾರ್ಥನೆಯ ಬಳಿಕ ಅದರಲ್ಲಿ ನಾಟಿ ಕಾರ್ಯವನ್ನು ಮಹಿಳೆಯರು ನಡೆಸುತ್ತಾರೆ. ತುಳುನಾಡಿನ ದೈವಗಳ ಸಾಹಸ, ಪಾಲನೆ– ಪೊರೆಯುವಿಕೆಗೆ ಸಂಬಂಧಿಸಿದ ಪಾಡ್ದನಗಳನ್ನು ಹಾಡುತ್ತಾ ನಾಟಿ ಕಾರ್ಯ ಸಾಗುತ್ತದೆ. ವಿಶಾಲ ಗದ್ದೆಯಾದ್ದರಿಂದ ಕಂಬಳ ಗದ್ದೆಯ ನಾಟಿ ಎಂದರೆ ಇಡೀ ಊರಿಗೇ ಸಂಭ್ರಮವಾಗಿರುತ್ತದೆ. ಕಂಬಳದ ಯಜಮಾನ ಪಾಯಸದ ಊಟವನ್ನೇ ಅವತ್ತು ಬಡಿಸುವುದು ರೂಢಿ’ ಎಂದು ಹೇಳುತ್ತಾರೆ ಕಂಬಳ ನಾಟಿಯಲ್ಲಿ ಭಾಗವಹಿಸಿದ ಹಿರಿಯಾಕೆ ಲಲಿತಮ್ಮ. 
 
ಮನೆಯ ದೈವದ ಪ್ರಸಾದದೊಂದಿಗೆ ಕಂಬಳ ನಡೆಯುವ ದಿನವನ್ನು ನಿಗದಿ ಮಾಡಿದ ಬಳಿಕ, ಅದರ ಸುದ್ದಿಯನ್ನು ಊರಿಗೆ ಸಾರುವ ಕೆಲಸವನ್ನು ಕೊರಗರು ಮಾಡುತ್ತಾರೆ. ಊರೆಲ್ಲ ಸುತ್ತಿದ ಬಳಿಕ ರಾತ್ರಿ ಕಂಬುಲದ ಬಳಿ ‘ಪನಿಕುಲ್ಲುವ ಪದ್ಧತಿ’ ಮತ್ತು ಬೆಳಿಗ್ಗೆ ಕಂಬಳ ಗದ್ದೆಯಲ್ಲಿಯೂ ಕೋಣಗಳಂತೆ ನಟಿಸಿ ಕೆಸರು ಗದ್ದೆಯಲ್ಲಿ ಓಡುವ ಪದ್ಧತಿ ಹಿಂದೆ ಇತ್ತು. ಆದರೆ ಈಗ ಅಂತಹ ಆಚರಣೆಗಳೆಲ್ಲವೂ ನಿಂತಿವೆ. ಪುರಾತನ ಕಾಲದಲ್ಲಿ ಸಾಮಾಜಿಕ ಚಟುವಟಿಕೆಗಳು ಜಾತಿ ಆಧಾರಿತವಾಗಿಯೇ ನಡೆಯುತ್ತಿದ್ದುದರಿಂದ ಅವೆಲ್ಲ ನಡೆಯುತ್ತಿದ್ದವು. ಆದರೆ ಈಗ ಸುಧಾರಣೆಗಳಾದ ಬಳಿಕ ಅಂತಹ ಆಚರಣೆಗಳು ಕಡಿಮೆಯಾಗಿವೆ ಎನ್ನುವುದು ಕಂಬಳ ಅಕಾಡೆಮಿ ಅಧ್ಯಕ್ಷ ಗುಣಪಾಲ ಕಡಂಬ ಅವರ ವಿವರಣೆ.  
 
‘ವೈದ್ಯನಾಥ ದೇವಸ್ಥಾನದ ಬಳಿ ನಡೆಯುವ ‘ಕೊಕ್ಕಡ ಕೋರಿ’ ಕಂಬಳದಲ್ಲಿ, ವಂಡಾರು ಬೀಡು ಕಂಬಳದಲ್ಲಿ ಎಷ್ಟೋ ವಿಧದ ಹರಕೆಗಳನ್ನು ಹೇಳಿಕೊಂಡು ಊರು ಪರವೂರ ಜನರು ಬಂದು ಭಕ್ತಿಭಾವದಿಂದ ಹರಕೆ ತೀರಿಸುವ ವಿಧಾನಗಳಿವೆ. ಇವೆಲ್ಲವೂ ಕಂಬಳದ ಅರ್ಥವನ್ನು ಇನ್ನಷ್ಟು ವಿಶಾಲಗೊಳಿಸುತ್ತವೆ. ಕೋರ್ಟು ಪ್ರಸ್ತುತ ಕೇವಲ ಕೋಣಗಳ ರೇಸ್‌ ಎಂಬರ್ಥದಲ್ಲಿ ಕಂಬಳವನ್ನು ಪರಿಗಣಿಸಿರುವುದು ಬೇಸರ. ಈ ಪರಿಸ್ಥಿತಿ ತುಳುನಾಡ ಸಂಸ್ಕೃತಿಗೆ ಆಘಾತಕಾರಿ’ ಎಂದು ಕಡಂಬ ಬೇಸರಿಸುತ್ತಾರೆ. 
 
‘ಕಂಬಳದ ಕೋಣಗಳ ಜಾಗದಲ್ಲಿ ಮನುಷ್ಯರನ್ನು ಕಲ್ಪಿಸಿಕೊಂಡು ನೋಡಿ. ಅವುಗಳ ಮನಸ್ಥಿತಿ ಹೇಗಿರುತ್ತದೆ ಎಂಬುದು ಗೊತ್ತಾಗುತ್ತದೆ’ ಎನ್ನುತ್ತಾರೆ ವಕೀಲರಾದ ಆಶಾ ನಾಯಕ್‌. ಕಂಬಳದ ಸಾಂಸ್ಕೃತಿಕ ಹಿನ್ನೆಲೆಯನ್ನು ಒಪ್ಪಿಕೊಳ್ಳಬಹುದಾದರೂ, ಈ ಕ್ರೀಡೆಯಿಂದ ಅವುಗಳಿಗೆ ಹಿಂಸೆ ಆಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವುದು ಕೂಡ ಕಾನೂನು ವ್ಯವಸ್ಥೆಗೆ ತೊಂದರೆಯೇ ಎಂಬುದು ಅವರ ಅಭಿಪ್ರಾಯ. 
 
ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರೂ, ಕಂಬಳದಲ್ಲಿ ಕೋಣಗಳಿಗೆ ಹೊಡೆಯುವ ಪರಿಪಾಠವನ್ನು ಬಿಡಬೇಕು ಎಂಬ ಸುಧಾರಣೆಯ ಆಶಯವನ್ನು ಹೊಂದಿದ್ದಾರೆ. 
 
ಕಂಬಳ ಆಚರಣೆಯಲ್ಲಿ ಸುಧಾರಣೆಗೆ ಅವಕಾಶವಿದೆ ಎನ್ನುವುದನ್ನು ಕಂಬಳದ ಕೋಣಗಳನ್ನು ಓಡಿಸಿ ನೂರಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದ ವಿಜಯ ಕುಮಾರ್‌ ಜೈನ್‌ ಅವರು ಒಪ್ಪುತ್ತಾರೆ. ಸರ್ಕಾರ ಷರತ್ತುಬದ್ಧವಾಗಿ ಕಂಬಳ ನಡೆಸಲು ಅವಕಾಶ ಕೊಟ್ಟಾಗಲೂ ಕರಾವಳಿಯಲ್ಲಿ ಸರ್ಕಾರಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಎಲ್ಲ ಷರತ್ತು ಅನ್ವಯಿಸಿ ಕಂಬಳ ನಡೆಸಲಾಗಿದೆ. ಆದರೂ ಮತ್ತೆ ನಿಷೇಧದ ಮಾತು ಸರಿಯಲ್ಲ ಎಂಬುದು ಅವರ ಮಾತು. 
 
ಸ್ವತಃ ಕಂಬಳ ಆಯೋಜಿಸುವ ಶಾಸಕ ಅಭಯಚಂದ್ರ ಜೈನ್‌ ಅವರ ಪ್ರಕಾರ, ಕರಾವಳಿಯ ಸಾಂಸ್ಕೃತಿಕ ಅಸ್ಮಿತೆಯಾಗಿದ್ದ ಕಂಬಳಕ್ಕೆ ಸರ್ಕಾರವೂ ನೆರವು ನೀಡಿದ್ದುಂಟು. ಅದನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಬೇಕು ಎಂಬ ಒತ್ತಾಯಕ್ಕೆ ಕರಾವಳಿ ಮುಂದಾಗುವಾಗ, ನಿಷೇಧದ ಮಾತನಾಡುವುದು ಸರಿಯಲ್ಲ.
 
**
ಓಡುವ, ಅದ ನೋಡುವ ಈ ಪರಿ
ಕಂಬಳದ ಪ್ರಧಾನ ಭಾಗದಲ್ಲಿ ಕೋಣಗಳು ವಯಸ್ಸಿನ ಆಧಾರದಲ್ಲಿ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಓಡುತ್ತವೆ. ಕೋಣಗಳ ಹೆಗಲಿಗೆ ನೊಗ ಕಟ್ಟಿ ಅಲ್ಲಿಂದ ಹಗ್ಗ ಹಿಡಿದುಕೊಂಡು ಕೋಣ ಓಡಿಸುವುದು ‘ಬಲ್ಲ್‌ದ ವಿಭಾಗ’ (ಹಗ್ಗದ ವಿಭಾಗ). ನೊಗಕ್ಕೆ ಗೋರು ಹಲಗೆಯನ್ನು ಕಟ್ಟಿ ಆ ಹಲಗೆಯ ಮೇಲೆ ಒಬ್ಬನು ನಿಂತು ಓಡಿಸುವುದು ಅಡ್ಡಪಲಾಯಿ ವಿಭಾಗ. (ಅಡ್ಡ ಹಲಗೆ)

ಕೋಣಗಳ ನೊಗಕ್ಕೆ ನೇಗಿಲು ಕಟ್ಟಿ ಉಳುವ ಸ್ಥಿತಿಯಲ್ಲೇ ಓಡಿಸುವುದು ನೇಗಿಲ ಓಟ. ಈ ಮೂರು ವಿಭಾಗಗಳಲ್ಲಿ ಕೋಣ ಓಡುವ ವೇಗಕ್ಕೆ ಆದ್ಯತೆ. ‘ಕಣೆ ಪಲಾಯಿ’ ವಿಭಾಗದಲ್ಲಿ ನೇಗಿಲಿಗೆ ಗೋರು ಹಲಗೆ ಕಟ್ಟಿ, ಓಡಿಸುವಾತ ಇದರ ಮೇಲೆ ಓರೆಯಾಗಿ ನಿಂತು ಓಡಿಸುವಾಗ ತನ್ನ ಕುಶಲತೆಯಿಂದ ಗದ್ದೆಯ ನೀರನ್ನು ಕಂಬಳದ ಮೇಲ್ಭಾಗದಲ್ಲಿ ಕಟ್ಟಿದ ಬ್ಯಾನರ್‌ ಮಾದರಿಯ ನಿಶಾನೆಗೆ ಚಿಮ್ಮಿಸುತ್ತಾನೆ. ಇದು ಅತ್ಯಂತ ಸುಂದರವಾದ ದೃಶ್ಯ.
 
ಸುಮರು 20– 25 ಮೀಟರ್‌ ಅಂತರದಲ್ಲಿ ನಿಶಾನೆಯನ್ನು ವಿವಿಧ ಎತ್ತರದಲ್ಲಿ ಕಟ್ಟಲಾಗುತ್ತದೆ. ಎತ್ತರಕ್ಕೆ ತಕ್ಕಂತೆ ವಿವಿಧ ಬಹುಮಾನ ನಿಗದಿ ಮಾಡಲಾಗುತ್ತದೆ. ಪೂರ್ವಕಾಲದಲ್ಲಿ ಊರ ಕಂಬಳದಲ್ಲಿ ಗೆದ್ದರೆ ಒಂದು ಗೊನೆ ಬಾಳೆಹಣ್ಣೋ, ಎಳನೀರ ಗೊಂಚಲೋ ಕೊಡುವ ಪದ್ಧತಿ ಇತ್ತು. ಅರಸು ಕಂಬಳದಲ್ಲಿ ಅರಸು ಆಶೀರ್ವಾದ ರೂಪದಲ್ಲಿ ನಿಂಬೆ ಹಣ್ಣು ಮತ್ತು ವೀಳ್ಯದೆಲೆ ಮಾತ್ರ ಕೊಡುವುದು. ಊರವರು ಸೇರಿ ಗೆದ್ದವರಿಗೆ ಏನಾದರೂ ಆಕರ್ಷಕ ಬಹುಮಾನ ಕೊಡುವ ರೂಢಿ ಆಮೇಲೆ ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT