ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ್ಲಿಕಟ್ಟು ವಿವಾದದ ಸುತ್ತ...

Last Updated 27 ಜನವರಿ 2017, 19:30 IST
ಅಕ್ಷರ ಗಾತ್ರ
ತಮಿಳು ವೇದ ಎಂದೇ ಕರೆಯಲಾಗುವ ‘ತಿರುಕ್ಕುರಳ್’ನಲ್ಲಿ ಹಸು ಮಾನವನ ಆಸ್ತಿ ಎಂದು ಹೇಳಲಾಗಿದೆ. ಮಾನವ ಹಾಗೂ ಜಾನುವಾರುಗಳ ಈ ರೀತಿಯ ಸಮಾಜೋ– ಸಂಸ್ಕೃತಿ ಸಂಬಂಧಕ್ಕೆ ಸಾವಿರಾರು ವರ್ಷಗಳ ನಂಟಿದೆ. ಮೂಲತಃ ನಮ್ಮ ಸಮಾಜವೇ ಪ್ರಾಣಿಸ್ನೇಹಿ. ಪಂಚತಂತ್ರದ ಕಥೆಗಳನ್ನೇ ನೋಡಿ.
 
ಪ್ರಾಣಿಗಳು ಮಾತನಾಡುತ್ತವೆ. ಭಾವನೆಗಳನ್ನು ಹಂಚಿಕೊಳ್ಳುತ್ತವೆ. ಜನಪದರ ಪ್ರಕಾರ ದೇವರ ಅವತಾರವೇ ಪ್ರಾಣಿ. ಆದುದರಿಂದಲೇ ದೇವರವಾಹನವಾಗಿ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ವ್ಯವಸಾಯದಲ್ಲಿ, ಹೈನುಗಾರಿಕೆಯಲ್ಲಿ ಹೆಚ್ಚು ಉಪಯುಕ್ತವಾಗುವ ಗೋವು ಜನಪದರಿಗೆ ಉಪೋತ್ಪನ್ನ. ತಿರುವಳ್ಳುವರ್ ಗೋವನ್ನು ಆಸ್ತಿ ಎಂದಾಗಲೇ ಗೋವಿನ ಆರ್ಥಿಕ ಆಯಾಮ ತೆರೆದುಕೊಳ್ಳುತ್ತದೆ. 
 
ಕ್ರಿಸ್ತಪೂರ್ವದಲ್ಲೇ ಇದ್ದ ಜಲ್ಲಿಕಟ್ಟು ಕ್ರೀಡೆ ಪೌರುಷದ ಸಂಕೇತವಾಗಿದ್ದರೂ ಹಣದ ಥೈಲಿಯ ಆಮಿಷ, ಸಾಮಾಜಿಕ ಸ್ಥಾನಮಾನ ಗಳಿಸುವ ಹಿನ್ನೆಲೆಯನ್ನೊಳಗೊಂಡಿದ್ದರಿಂದ ಇದರ ಹಿನ್ನೆಲೆ ಆರ್ಥಿಕ ಆಯಾಮವನ್ನೇ ಪಡೆದಿತ್ತು. ಮಹಾರಾಷ್ಟ್ರದಲ್ಲಿ ಎತ್ತಿನಬಂಡಿ ರೇಸ್, ಕೇರಳದಲ್ಲಿ ಆನೆಗಳ ಆಟ, ಕರ್ನಾಟಕದಲ್ಲಿ ಕಂಬಳ ಇವೆಲ್ಲವನ್ನೂ ಗ್ರಾಮೀಣ ಕ್ರೀಡೆಗಳ ಪಟ್ಟಿಯಲ್ಲಿ ಸೇರಿಸಿದ್ದರೂ ಇವೆಲ್ಲವೂ ಕೃಷಿ ಆಧಾರಿತ ಸಂಪ್ರದಾಯವಷ್ಟೇ ಅಲ್ಲ ಗ್ರಾಮೀಣ ಪ್ರದೇಶದ ಜನರಿಗೆ ಪೂರಕ ಉದ್ಯಮವಾಗಿಯೂ ಇವೆ. ಅವರ ಆರ್ಥಿಕ ಪರಿಸ್ಥಿತಿಯನ್ನು ಇವು ಸುಧಾರಿಸುತ್ತದೆ. ಎರಡೂವರೆ ಸಾವಿರ ವರ್ಷಗಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಇಂತಹ ಗ್ರಾಮೀಣ ಆಟಗಳ ಹಿಂದೆ ಸಾಂಸ್ಕೃತಿಕ ಸಂವೇದನಾಶೀಲತೆಯೂ ಇದೆ. ಸ್ಪೇನ್‌ನಲ್ಲಿ, ಹಾಲೆಂಡಿನಲ್ಲಿ ಗೂಳಿ ಕಾಳಗ ನೋಡಲು ಟಿಕೆಟ್ ಬೇಕು. ಅಲ್ಲಿ ಕೊಬ್ಬಿದ ಗೂಳಿಯನ್ನು ಕೂರಂಬಿನಿಂದ ತಿವಿದು, ತಿವಿದು ರಕ್ತ ಸೋರುವ ಗೂಳಿಯನ್ನು, ಅದು ಅನುಭವಿಸುವ ವೇದನೆಯನ್ನು ನೋಡಿ ವಿಕೃತಾನಂದ ಪಡೆಯುವ ಜನರೇ ಇದ್ದಾರೆ. ಗೂಳಿಯ ಡುಬ್ಬವನ್ನು ಕೈಗಳಲ್ಲೇ ಬಾಚಿತಬ್ಬಿ ಅದನ್ನು ತಡೆಯುವುದು, ಅದರ ಕೊಂಬಿಗೆ ಕಟ್ಟಿರುವ ಬಾವುಟವನ್ನು ಕಿತ್ತುಕೊಳ್ಳುವ ಮೂಲಕ ವೀರ, ಶೂರ ಎನ್ನಿಸಿಕೊಳ್ಳುವುದು ತಮಿಳುನಾಡಿನ ಜಲ್ಲಿಕಟ್ಟಿನ ಶೈಲಿ. 
 
ಜಲ್ಲಿಕಟ್ಟುವಿನಲ್ಲಿ ಓಡಿಸುವುದಕ್ಕಾಗೇ ವಿಶೇಷ ತಳಿ ಗೂಳಿಯನ್ನು ಸಾಕುವುದಾಗಿರಬಹುದು, ಕಂಬಳದ ಕೋಣವಾಗಿರಬಹುದು ಎರಡರಲ್ಲೂ ಸ್ಥಳೀಯ ತಳಿಗಳನ್ನು ವೃದ್ಧಿಸುವುದು ರೈತರ ಉದ್ದೇಶ. ಕಟ್ಟುಮಸ್ತಾಗಿ ಬೆಳೆದುನಿಂತ ಜಲ್ಲಿಕಟ್ಟು ಹೋರಿಗಳಿಗೆ ಬ್ರೆಜಿಲ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಬೇಡಿಕೆಯಿದೆ. ಯಾರ ಕೈಗೂ ಸಿಗದೆ, ತಾನೇ ತಾನಾಗಿ ವಿಜೃಂಭಿಸುವ ಗೂಳಿಗಳು ರಾಜಮರ್ಯಾದೆ ಪಡೆಯುತ್ತವಲ್ಲದೆ, ಇವುಗಳನ್ನು ಬೀಜದ ಗೂಳಿಯನ್ನಾಗಿ ತಳಿವೃದ್ಧಿಗೆ ಬಳಸಲಾಗುತ್ತದೆ.
 
ಮಾರುಕಟ್ಟೆಯಲ್ಲಿ ಇಂತಹ ಗೂಳಿಗಳಿಗೆ ಲಕ್ಷಗಟ್ಟಲೆ ಬೆಲೆ ಇದೆ. ಜಲ್ಲಿಕಟ್ಟುವಿನಲ್ಲಿ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ನಡೆಯುವುದರಿಂದ ಹಲವಾರು ಅಕ್ರಮಗಳೂ ನಡೆಯುತ್ತವೆ. ಗೂಳಿಗಳಿಗೆ ಮಾದಕವಸ್ತು ಕೊಡುವುದು, ಕೆರಳುವಂತೆ ಮಾಡುವುದು ಮೊದಲಾದವು ಈ ಆಟದ ಮತ್ತೊಂದು ಮುಖ. ಇವೆಲ್ಲಾ ಒಳಿತು ಕೆಡುಕುಗಳ ನಡುವೆಯೂ ದೇಶೀಯ ತಳಿ ಉಳಿಸುವ ಕೆಲಸ ಇದರಿಂದಾಗುತ್ತಿದೆ.
 
ದೇಶದ ಸುಮಾರಷ್ಟು ಗೋತಳಿಗಳು ಈಗಾಗಲೇ ಮಾಯವಾಗಿದ್ದು, ಉಳಿದಿರುವ ಸುಮಾರು ನಲವತ್ತರಷ್ಟು ಸ್ಥಳೀಯ ತಳಿಗಳನ್ನು ಪೋಷಿಸದಿದ್ದರೆ ಅವೂ ವಿನಾಶದ ಅಂಚಿಗೆ ಸಾಗುತ್ತವೆ. ಸಂಕ್ರಾಂತಿಯಿಂದ ಆರಂಭಿಸಿ ಐದು ತಿಂಗಳ ಕಾಲ ನಡೆಯುವ ಜಲ್ಲಿಕಟ್ಟು ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸುವ ತಳಿಗಳು, ಉಳಿದ ಸಮಯದಲ್ಲಿ ಉಪೋತ್ಪನ್ನವಾಗುತ್ತವೆ. ಗೂಳಿಗಳು ಹಿಂಸಾತ್ಮಕ ಆಟಗಳಿಗೆ ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್ 2014ರಲ್ಲಿ ಜಲ್ಲಿಕಟ್ಟುವಿಗೆ ನಿಷೇಧ ಹೇರಿದ ನಂತರ ವಿಶೇಷ ತಳಿ ಸಾಕುವುದನ್ನೇ ಕಾಯಕ ಮಾಡಿಕೊಂಡಿದ್ದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಕೊಂಡರು. ತಮಿಳರ ಅಸ್ಮಿತೆ ಹಾಗೂ ಅನನ್ಯತೆಯ ಸಂಕೇತವಾದ ಈ ಆಟವನ್ನು ನಿಷೇಧಿಸಿದ್ದರ ಬಗ್ಗೆ ಈ ಆಟಕ್ಕೆ ಪ್ರಖ್ಯಾತವಾದ ಅಲಂಗಾನಲ್ಲೂರು (ಮದುರೆ ಜಿಲ್ಲೆ), ಪುದುಕೋಟೈ, ತಂಜಾವೂರು, ಸೇಲಂ, ಶಿವಗಂಗೆಗಳಲ್ಲಿನ ರೈತಾಪಿ ವರ್ಗದಲ್ಲಿ ಒಳಗೇ ಅಸಮಾಧಾನ ಹೊಗೆಯಾಡುತ್ತಿತ್ತು. ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿ, ವಿದೇಶಿ ಮೂಲದ ‘ಪೆಟಾ’ ಬಗ್ಗೆ ಕೋಪವಿತ್ತು. ಸ್ಥಳೀಯ ತಳಿ ಪೂರ್ತಿ ನಶಿಸಿಹೋಗುವಂತೆ ಮಾಡಿ, ಡೇರಿ ಉದ್ಯಮವನ್ನು ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರ ನಿಷೇಧದ ಹಿಂದಿದೆ ಎಂಬ ಗುಮಾನಿಯೂ ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಿದವು. ಗ್ರಾಮೀಣ ಬದುಕಿನಿಂದ ದೂರವಿರುವ ಜನ ಮಾತ್ರ ಜಲ್ಲಿಕಟ್ಟು ನಿಷೇಧಕ್ಕೆ ಬೆಂಬಲ ಕೊಡುತ್ತಾರೆ ಎಂಬ ಭಾವನೆಯೂ ಬಲಿಯುವಂತಾಯಿತು.
 
 
ಜಲ್ಲಿಕಟ್ಟು ನಿಷೇಧದ ನಂತರ ಗ್ರಾಮವಾಸಿಗಳು ಹಾಗೂ ನಗರವಾಸಿಗಳ ನಡುವಿನ ಅಂತರದ ಪ್ರಶ್ನೆ ಬಹುವಾಗಿ ಚರ್ಚೆಗೊಳಗಾಯಿತು. ನಗರವಾಸಿಗಳಿಗೆ ಗ್ರಾಮದ ಸಂಸ್ಕೃತಿಯ ಕಲ್ಪನೆ ಇಲ್ಲ. ವಾತಾನುಕೂಲ ಕೊಠಡಿಗಳಲ್ಲಿ ಕುಳಿತು ರೈತರು ಯಾವ ಬೆಳೆ ಬೆಳೆಯಬೇಕು, ಯಾವ ರೀತಿ ಗೊಬ್ಬರ ಚೆಲ್ಲಬೇಕು ಎಂಬೆಲ್ಲಾ ನೀತಿ ರೂಪಿಸುವ ಜನರಿಗೆ ಗ್ರಾಮೀಣ ಬದುಕಿನ ನೈಜ ಚಿತ್ರಣ ಗೊತ್ತಿಲ್ಲ. ನಗರದಲ್ಲಿ ಮರ ಕಡಿದರೆ ಮಾತ್ರ ಪರಿಸರದ ಬಗ್ಗೆ ಮಾತನಾಡುತ್ತಾರೆ. ಕೆರೆಗಳನ್ನು ಮುಚ್ಚಿ ಬಹುಮಹಡಿ ಕಟ್ಟಡ ಕಟ್ಟುತ್ತಾರೆ. ರಾಜ ಕಾಲುವೆಯನ್ನು ಅತಿಕ್ರಮಣ ಮಾಡಿಕೊಂಡು ನೈಸರ್ಗಿಕ ದ್ರೋಹ ಮಾಡುತ್ತಾರೆ. ನಗರದ ರಸ್ತೆಗಳಲ್ಲಿ ಬೀಡಾಡಿ ದನಗಳು ಟ್ರಾಫಿಕ್‌ ಜಾಮ್ ಮಾಡುತ್ತಿವೆ ಎಂದು ವ್ಯವಸ್ಥೆಯ ವಿರುದ್ಧ ಹರಿಹಾಯುತ್ತಾರೆ. ಇಂತಹ ಜನ ಜಲ್ಲಿಕಟ್ಟು ಆಟದಲ್ಲಿ ಜನ ಸಾಯುತ್ತಿದ್ದಾರೆ ಎಂದು ಆಪಾದಿಸುತ್ತಾರೆ.
 
ನಗರಗಳಲ್ಲಿ ನಡೆಯುವ ಕುದುರೆ ರೇಸಿನಲ್ಲಿ ಕಾಲು ಮುರಿದುಕೊಂಡ ಕುದುರೆಗಳನ್ನು ನಿರ್ದಾಕ್ಷಿಣ್ಯವಾಗಿ ಗುಂಡೇಟಿನಿಂದ ಕೊಲ್ಲುವ ವರ್ತನೆಗಳು ಬಯಲಿಗೇ ಬರುವುದಿಲ್ಲ ಎಂಬ ಚರ್ಚೆಗಳು ವ್ಯಾಪಕವಾಗಿ ನಡೆದವು. ಜಲ್ಲಿಕಟ್ಟು ನಿಷೇಧ ಕೋರಿ ಸುಪ್ರೀಂ ಕೋರ್ಟಿಗೆ ಮೊರೆ ಹೋದವರ ಪ್ರಕಾರ ಈ ಗ್ರಾಮೀಣ ಕ್ರೀಡೆಯಲ್ಲಿ ಕ್ರೌರ್ಯವಿದೆ, ಸಾರ್ವಜನಿಕರಿಗೂ ರಕ್ಷಣೆ ಇಲ್ಲ. ಆದರೆ ಕಳೆದ ಹತ್ತು ವರ್ಷಗಳಲ್ಲಿ ನಡೆದ ಜಲ್ಲಿಕಟ್ಟು ಆಟದಲ್ಲಿ ಗೂಳಿ ತಿವಿತದಿಂದಲೋ, ಕಾಲ್ತುಳಿತದಿಂದಲೋ ಸತ್ತವರ ಸಂಖ್ಯೆ ಸುಮಾರು ನೂರು ಎನ್ನಬಹುದು. ಮೊನ್ನೆ ನಿಷೇಧ ತೆರವಿನ ನಂತರ ಪುದುಕೋಟೆ ಬಳಿಯ ರಾಪೂಸೈನಲ್ಲಿ ನಡೆದ ಜಲ್ಲಿಕಟ್ಟು ಆಟದಲ್ಲಿ ಗೂಳಿ ತಿವಿದು ಇಬ್ಬರು ಸತ್ತರು. (ಇದು ತಮಿಳುನಾಡಿನ ಆರೋಗ್ಯ ಸಚಿವರ ಕ್ಷೇತ್ರ) ಅಲ್ಲಿ ಜಲ್ಲಿಕಟ್ಟು ನಡೆಸುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಾಗಿತ್ತು.
 
ಎರಡೂವರೆ ಸಾವಿರ ವರ್ಷಗಳ ಹಿಂದೆ ಮುಲ್ಲೈ ಎಂಬುದು ತಮಿಳುರಾಷ್ಟ್ರ. ಶೌರ್ಯದ ಸಂಕೇತವಾಗಿ ಅಂದು ರೂಪಿಸಿದ ಕೊಬ್ಬಿದ ಗೂಳಿಗಳನ್ನು ತಡವುವ ಈ ಆಟ, ಈಗ ಭಾರತದ ಬೇರಾವ ಭಾಗದಲ್ಲೂ ಇಲ್ಲ. ಸಂಕ್ರಾಂತಿಗೆ ಕೊಂಡ ಹಾಯಿಸುವ ಪದ್ಧತಿ ಇದೆಯೇ ಹೊರತು, ಗೂಳಿ ಹಿಡಿಯಲು ಯುವಕರನ್ನು ಸಜ್ಜುಗೊಳಿಸುವ ಕಲೆ ಇಲ್ಲ. 
 
ಪೊಂಗಲ್ ಎಂದೇ ಕರೆಯಲಾಗುವ ಸಂಕ್ರಾಂತಿಯನ್ನು ತಮಿಳುನಾಡಿನಲ್ಲಿ ಮೂರು ದಿನಗಳ ಕಾಲ ಆಚರಿಸುತ್ತಾರೆ. ಮೊದಲನೆಯ ದಿನ ಹೊಸ ಅಕ್ಕಿಯಿಂದ ಮಾಡಿದ ಪೊಂಗಲ್‌ ಅನ್ನು ಉಕ್ಕಿಸುತ್ತಾರೆ. ಎರಡನೇ ದಿನ ನಡೆಯುವುದೇ ಮಾಟ್ಟುಪೊಂಗಲ್. ಇದರ ಆಕರ್ಷಣೆಯೇ ಜಲ್ಲಿಕಟ್ಟು. ಮದುರೆ, ತಂಜಾವೂರು, ಸೇಲಂಗಳಲ್ಲಿ ಈ ಆಚರಣೆಯನ್ನು ‘ವಡಿಮಜುವಿರಟ್ಟು’ ಎನ್ನುತ್ತಾರೆ. ಶಿವಗಂಗೆ ಮತ್ತು ಮದುರೆಯ ಕೆಲ ಭಾಗಗಳಲ್ಲಿ ಇದನ್ನು ‘ವೇಲಿವಿರಟ್ಟು’ ಎಂದೂ, ಇನ್ನುಳಿದ ಭಾಗಗಳಲ್ಲಿ ‘ವಾಟಂ ಮಂಜುವಿರಟ್ಟು’ ಎಂದೂ ಕರೆಯುತ್ತಾರೆ. ನಗರ ಪ್ರದೇಶ ಬಿಟ್ಟು ಗ್ರಾಮೀಣ ಭಾಗದ ಬಹುತೇಕ ಹಳ್ಳಿಗಳು ಜಲ್ಲಿಕಟ್ಟು ಸಂಭ್ರಮದಲ್ಲಿರುತ್ತವೆ. ಈ ಆಟ ನೋಡಲು, ಬೇರೆ ಬೇರೆ ಊರುಗಳಲ್ಲಿ ಹೋಗಿ ನೆಲೆಸಿರುವ ಸ್ಥಳೀಯರೆಲ್ಲಾ ವಾಪಸು ಬಂದಿರುತ್ತಾರೆ. ಬೆಂಗಳೂರಿನಿಂದಲೂ ಬಹುತೇಕ ಕಾರ್ಮಿಕರು ಪೊಂಗಲ್‌ಗೆ ಹೋದವರು ಇನ್ನೂ ಮರಳಿಲ್ಲ. ತಮ್ಮದೇ ಅಸ್ಮಿತೆ, ಅನನ್ಯತೆಯ ಈ ಆಟ ಸಾಂಸ್ಕೃತಿಕ ಆಚರಣೆಯೇ ಹೊರತು, ಯಜಮಾನ ಸಂಸ್ಕೃತಿಯದಲ್ಲ ಎನ್ನುವುದು ಜಲ್ಲಿಕಟ್ಟು ಪರ ವಾದ.
 
ನಿಷೇಧ ಸಂಸ್ಕೃತಿಯೇ ಜನ ವಿರೋಧಿ. ಜಲ್ಲಿಕಟ್ಟುವನ್ನು ನಿಷೇಧಿಸುವುದಕ್ಕಿಂತ ನಿಯಂತ್ರಣ ಮಾಡುವುದು ಸಾಧ್ಯವಿರಲಿಲ್ಲವೇ? 2010ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶ ನಿಯಂತ್ರಣವೇ ಆಗಿತ್ತು. ಜಲ್ಲಿಕಟ್ಟು ವರ್ಷಕ್ಕೆ ಐದು ತಿಂಗಳು ಮಾತ್ರ ನಡೆಯಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅದರ ಪ್ರಕಾರ ಜಲ್ಲಿಕಟ್ಟು ಏರ್ಪಡಿಸುವವರು ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಿತ್ತು. ಆಟ ವೀಕ್ಷಿಸಲು ಮಂಡಳಿಯ ಪ್ರತಿನಿಧಿಯೊಬ್ಬನನ್ನು ಕಳುಹಿಸಲಾಗುತ್ತಿತ್ತು. ಜಲ್ಲಿಕಟ್ಟು ವ್ಯವಸ್ಥಾಪಕರು ಎರಡು ಲಕ್ಷ ಠೇವಣಿ ಇಡಬೇಕಿತ್ತು. ಎತ್ತುಗಳು ಗಾಯಗೊಂಡರೆ ಅವುಗಳ ಚಿಕಿತ್ಸೆಗೆ ಈ ಠೇವಣಿಯನ್ನು ಬಳಸಲಾಗುತ್ತಿತ್ತು. ಜಾರಿಯಲ್ಲಿದ್ದ ಈ ನಿಯಮಗಳಿಗೆ ಕುತ್ತು ತಂದದ್ದು ಪರಿಸರ ಮತ್ತು ಅರಣ್ಯ ಸಚಿವಾಲಯ. ಈ ಆಟಕ್ಕೆ ಗೂಳಿ ಬಳಸುವುದನ್ನು ಇಲಾಖೆ ನಿಷೇಧಿಸಿತು. ಆದರೆ ಇದನ್ನು ಜಲ್ಲಿಕಟ್ಟು ವ್ಯವಸ್ಥಾಪಕರು ನಿರ್ಲಕ್ಷಿಸಿದರು. 2014ರಲ್ಲಿ ಭಾರತೀಯ ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿ, ಜಲ್ಲಿಕಟ್ಟುವಿನ ಕ್ರೌರ್ಯದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಮೂಲಕ ನಿಷೇಧಕ್ಕೆ ಕಾರಣವಾದದ್ದು ಇತಿಹಾಸ. ಮೂರು ವರ್ಷಗಳ ನಂತರ ಈ ಕ್ರಮಕ್ಕೆ ಪ್ರತೀಕಾರ ತೆಗೆದುಕೊಂಡದ್ದು ಕೂಡ ತಮಿಳರ ವಿಶೇಷ ಶೈಲಿಯೇ ಆಗಿದೆ.
 
ಪ್ರತೀ ಬಾರಿ ತಮಿಳುನಾಡಿನಲ್ಲಿ ಪೊಂಗಲ್ ಸಮಯದಲ್ಲಿ ಏನಾದರೊಂದು ಗಲಾಟೆ ಇದ್ದೇ ಇರುತ್ತದೆ. ಈ ಜನವರಿಯಲ್ಲಿ ನಡೆದ ಪ್ರತಿಭಟನೆಗೆ ಬೇರೆ ಬೇರೆಯದೇ ಆದ ಆಯಾಮವಿತ್ತು. ಜಯಲಲಿತಾ ಇಲ್ಲದ ತಮಿಳುನಾಡು, ನಾಯಕತ್ವವಿಲ್ಲದ ಪಕ್ಷಗಳು, ಅಧಿಕಾರಕ್ಕಾಗಿ ಆಡಳಿತ ಪಕ್ಷದ ತೆರೆಮರೆಯಲ್ಲಿ ನಡೆಯುತ್ತಿರುವ ಕತ್ತಿ ಮಸೆಯುವ ಆಟ ಇವೆಲ್ಲಾ ಒಂದುಗೂಡಿದ್ದವು. ಇಲ್ಲದಿದ್ದರೆ ತಮಿಳುನಾಡಿನಲ್ಲಿ ಈ ತೆರನ ಪ್ರತಿಭಟನೆ ನಡೆಯುತ್ತಲೇ ಇರಲಿಲ್ಲವೇನೋ. ಎಪ್ಪತ್ತರ ದಶಕದಲ್ಲಿ ಹಿಂದಿ ವಿರೋಧಿ ಚಳವಳಿ ನಡೆದ ನಂತರ, ಮತ್ತೆ ಅದೇ ರೀತಿ ಎಲ್ಲ ವರ್ಗದ ಜನ ಬೀದಿಗಿಳಿದಿದ್ದಾರೆ. ಶತಮಾನದ ಈ ಜನಪದ ಆಟ ನಮ್ಮ ಸಂಸ್ಕೃತಿ ಎಂದು ಹೇಳುತ್ತಾ, ರೈತ ಸಮೂಹವಷ್ಟೇ ಅಲ್ಲ, ವ್ಯಾಪಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು, ಆಟೊ ಚಾಲಕರು, ಟೆಕ್ಕಿಗಳು, ಸಿನಿಮಾ ಕಲಾವಿದರು, ತಂತ್ರಜ್ಞರು, ಕ್ರೀಡಾಪಟುಗಳು, ಚೆಸ್ ಆಟಗಾರರು ಹೀಗೆ ಅಚ್ಚರಿಯ ವಲಯದ ಜನರು ಪ್ರತಿಭಟನೆಗೆ ಕೈಜೋಡಿಸಿದ್ದು ಈ ಭುಗಿಲಿಗೆ ಸಾಮಾಜಿಕ– ರಾಜಕೀಯ ಲೇಪ ನೀಡಿತು. ನಾಯಕತ್ವವಿಲ್ಲದ ಈ ಪ್ರತಿಭಟನೆ ಯಾರ ವಿರುದ್ಧ? 
 
ಸುಪ್ರೀಂ ಕೋರ್ಟ್ ಜಲ್ಲಿಕಟ್ಟನ್ನು ನಿಷೇಧಿಸಿ ಮೂರು ವರ್ಷಗಳೇ ಕಳೆದಿವೆ. ಆದರೆ ಕೇಂದ್ರ ಸರ್ಕಾರದಿಂದ ತಮಿಳುನಾಡಿಗೆ ಅನ್ಯಾಯವಾಗುತ್ತಿದೆ ಎಂಬಂತೆ ಪ್ರತಿಭಟನೆಗೆ ಕೇಂದ್ರಬಿಂದುವೊಂದನ್ನು ಮೂಡಿಸಲು ಆಡಳಿತಾರೂಢ ಪಕ್ಷದ ಮುಖಂಡರು ಹಲವಾರು ತೇಪೆಗಳನ್ನು ಹೆಣೆಯಲಾರಂಭಿಸಿದರು. ಕಾವೇರಿ ಜಲವಿವಾದ, ಶ್ರೀಲಂಕಾದಲ್ಲಿ ತಮಿಳರ ಮಾರಣಹೋಮ, ಶ್ರೀಲಂಕಾ ನೌಕಾ ಕಾವಲು ಪಡೆಯಿಂದ ತಮಿಳು ಮೀನುಗಾರರ ಹತ್ಯೆ ಮೊದಲಾದ ವಿಷಯಗಳಲ್ಲಿ ಕೇಂದ್ರದಿಂದ ತಮಿಳರಿಗೆ ಅನ್ಯಾಯವಾಗಿದೆ, ಈಗ ಜಲ್ಲಿಕಟ್ಟು ನಿಷೇಧಿಸುವ ಮೂಲಕ ತಮಿಳರ ಸಂಸ್ಕೃತಿಯ ಕೊಲೆಯಾಗುತ್ತಿದೆ ಎಂದು ಪ್ರತಿಭಟನೆಯ ಸ್ವರೂಪವನ್ನು ಆಡಳಿತ ಪಕ್ಷ ಮಾಡಿತಾದರೂ ಎಲ್ಲ ವಿವಾದವೂ ಸನ್ನಿವೇಶವನ್ನು ಸರಿಯಾಗಿ ನಿಭಾಯಿಸದ ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ಅವರ ವಿರುದ್ಧವೇ ಬಂದು ನಿಲ್ಲುತ್ತಿತ್ತು. 
 
ಕೇಂದ್ರ ಸರ್ಕಾರ ಹಾಗೂ ಪ್ರಸ್ತುತ ಆಡಳಿತ ಪಕ್ಷ ಎರಡೂ ಪ್ರತಿಭಟನಾಕಾರರ ಸಿಟ್ಟಿನ ಮೂಲವಾಗಿದ್ದವು ಎನ್ನುವುದನ್ನು ಗಮನಿಸಬೇಕು. ಪ್ರತಿಭಟನೆಯಲ್ಲಿ ಯಾವುದೇ ಪಕ್ಷದ ಬಾವುಟಗಳಿರಲಿಲ್ಲ. ಕಾರ್ಯಕರ್ತರಿರಲಿಲ್ಲ. ನಾಯಕರ ಚಿತ್ರಗಳೂ ಇರಲಿಲ್ಲ. ಆದರೆ ಮುಖ್ಯ ಪ್ರತಿಪಕ್ಷವಾದ ಡಿಎಂಕೆ ಭುಗಿಲೆದ್ದಿದ್ದ ಈ ಪ್ರತಿಭಟನೆಗೆ ಎಷ್ಟು ಸಾಧ್ಯವೋ ಅಷ್ಟು ತುಪ್ಪ ಸುರಿದು, ಗೌರವಾನ್ವಿತ ಅಂತರವನ್ನು ಕಾಯ್ದುಕೊಂಡಿತು. 
 
ಜಲ್ಲಿಕಟ್ಟು ಮೂಲಕ ಆ ಪಕ್ಷವೂ ರಾಜಕೀಯ ದಾಳವೊಂದನ್ನು ಉರುಳಿಸಿತ್ತು. ಜಯಲಲಿತಾ ನಂತರ ತಮಿಳುನಾಡಿನಲ್ಲಿ ಉದ್ಭವಿಸಿರುವ ರಾಜಕೀಯ ಶೂನ್ಯವನ್ನು ಯುಕ್ತಿಯಿಂದಲೋ, ಶಕ್ತಿಯಿಂದಲೋ ಬಳಸಿಕೊಳ್ಳಬೇಕೆಂಬ ಕಾತರದಲ್ಲಿರುವ ಬಿಜೆಪಿಗೆ ಈ ಪ್ರತಿಭಟನೆ ಅನಿರೀಕ್ಷಿತ. ನಾಯಕತ್ವದ ಮುಂಚೂಣಿಯಿಂದ ಎರಡು ಹೆಜ್ಜೆ ಹಿಂದೆ ನಿಂತು, ಯುವ ತಮಿಳರ ಪಡೆಯನ್ನು ಮುಂಚೂಣಿಗೆ ತಳ್ಳುವ ಮೂಲಕ ಕಳಗಂಗಳು ರಾಷ್ಟ್ರೀಯ ಪಕ್ಷಗಳ ಪಿತೂರಿಯನ್ನು ತಡೆಯಲು, ಅಭೂತಪೂರ್ವ ಜನಸಂಘಟನೆಯನ್ನು ಗುರಾಣಿಯ ರೀತಿ ಬಳಸಿಕೊಂಡದ್ದು ರಾಜಕೀಯ ದೊಡ್ಡಾಟವೇ ಸರಿ.
 
**
ನಾಣ್ಯದ ಚೀಲ!
* ಜಲ್ಲಿಕಟ್ಟು ಎಂಬುದು ಜಲ್ಲಿ (ನಾಣ್ಯಗಳು) ಮತ್ತು ಕಟ್ಟು (ಚೀಲ) ಎಂಬ ಪದಗಳಿಂದ ಬಂದಿದೆ.
 
* ಪುರಾತನ ಸಾಹಿತ್ಯವಾದ ‘ತಮಿಳುಸಂಗಂ’ನಲ್ಲಿ ಜಲ್ಲಿಕಟ್ಟು ಆಚರಣೆಯನ್ನು ‘ಎರುತಳುವುದಲ್’ ಎಂದು ಉದಾಹರಿಸಲಾಗಿದೆ ಅಂದರೆ, ಕೊಂಬಿಗೆ ನಾಣ್ಯಗಳ ಥೈಲಿಯನ್ನು  ಕಟ್ಟಿಕೊಂಡು, ಗುಟುರು ಹಾಕುತ್ತಾ ಬಿರುಗಾಳಿಯಂತೆ ನುಗ್ಗಿ ಬರುತ್ತಿರುವ ಗೂಳಿಯನ್ನು ತಬ್ಬಿಹಿಡಿದು ಅದರ ವೇಗಕ್ಕೂ, ಕೊಬ್ಬಿಗೂ ಕಡಿವಾಣ ಹಾಕಬೇಕು.
 
* ಅಂತಹ ವೀರನ ಕೈಗೆ ನಾಣ್ಯಗಳ ಥೈಲಿ ಸೇರುತ್ತಿತ್ತು.
 
* ಜಲ್ಲಿಕಟ್ಟು ಈಗ ಚೀಲದ ನಾಣ್ಯಗಳಿಗಷ್ಟೇ ಸೀಮಿತವಾಗಿಲ್ಲ.
 
* ಗೂಳಿಯ ಮೇಲೆ ಬೃಹತ್‌ ಮೊತ್ತದ ಬೆಟ್ಟಿಂಗ್‌ ಕಟ್ಟುವವರಿದ್ದಾರೆ.
 
**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT