ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯ ಮೇಜರ್‌ ಪಾರು

Last Updated 27 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದ ಗುರೆಜ್‌ ವಲಯದ ಗಂಧೇರ್ಬಲ್‌ ಜಿಲ್ಲೆಯ ಸೋನಾಮಾರ್ಗ್‌ ಸೇನಾ ಕ್ಯಾಂಪ್‌ ಸಮೀಪ ಸಂಭವಿಸಿದ ಹಿಮಕುಸಿತದಲ್ಲಿ ಬೆಳಗಾವಿ ಮೂಲದ ಸೇನಾಧಿಕಾರಿ, ಮೇಜರ್‌ ಶ್ರೀಹರಿ ಕುಗಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತೀವ್ರ ಅಸ್ವಸ್ಥಗೊಂಡಿರುವ ಅವರಿಗೆ ಸೇನಾ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 115ನೇ ಮಹಾರ್‌ ಬೆಟಾಲಿಯನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರು ಕೆಲ ತಿಂಗಳ ಹಿಂದೆಯಷ್ಟೇ ಸೋನಾಮಾರ್ಗ್ ಸೇನಾ ಕ್ಯಾಂಪ್‌ಗೆ ನಿಯುಕ್ತಿಗೊಂಡಿದ್ದರು.

‘ಬುಧವಾರ ಬೆಳಗಿನಜಾವ ಹಿಮಕುಸಿತ ಸಂಭವಿಸಿದ್ದು, ಇವರೊಂದಿಗೆ 97 ಯೋಧರು ಹಿಮದಡಿಯಲ್ಲಿ ಸಿಲುಕಿಕೊಂಡಿದ್ದರು. ಸತತ ಎರಡು ಗಂಟೆ ಸಾವು–ಬದುಕಿನ ನಡುವೆ ಹೋರಾಟ ನಡೆಸಿದ ಶ್ರೀಹರಿ, ಹಿಮರಾಶಿಯಿಂದ ಕೈ ಹೊರಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆ ವೇಳೆಗೆ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಸಹಾಯಕ್ಕೆ ಧಾವಿಸಿ, ರಕ್ಷಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವುದಕ್ಕೆ ಕಷ್ಟವಾಗಿರುವುದರಿಂದ ಸೇನಾ ಶಿಬಿರದಲ್ಲಿಯೇ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಬಂದಿದೆ’ ಎಂದು ಅವರ ತಂದೆ, ಬೆಳಗಾವಿಯ ಹಿಂದವಾಡಿಯ ನಿವಾಸಿ, ಸೇನಾಪಡೆಯ ನಿವೃತ್ತ ಸುಬೇದಾರ್‌ ಅನಂತ ಕುಗಜಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

‘ನಾನು ಅಲ್ಲಿಗೆ ಹೋಗಬೇಕು ಎಂದುಕೊಂಡಿದ್ದೆ. ಆದರೆ, ದುರ್ಗಮ ಪ್ರದೇಶವಾಗಿದ್ದರಿಂದ ಹೋಗುವುದಕ್ಕೆ ಆಗುತ್ತಿಲ್ಲ. ರಕ್ಷಣಾ ಇಲಾಖೆಯ ಹೆಲಿಕಾಪ್ಟರ್‌ ಬಳಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಹರಿಯೂ ಕರೆ ಮಾಡಿದ್ದ. ತಾನು ಚೆನ್ನಾಗಿದ್ದು, ಅದೃಷ್ಟವಶಾತ್‌  ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಹೇಳಿದ್ದಾನೆ’ ಎಂದರು.

ಇಲ್ಲಿನ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುವ ಶ್ರೀಹರಿ, ಸೇನೆ ಸೇರುವ ಮುನ್ನ ಬೆಳಗಾವಿಯಲ್ಲಿ ಪರಿಸರ ಸಂರಕ್ಷಣೆಯ ಅರಿವು ಹಾಗೂ ಹೋರಾಟದ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಭೀಮಗಡ ಅಭಯಾರಣ್ಯ ಹಾಗೂ ಜೀವವೈವಿಧ್ಯ ಸಂರಕ್ಷಣೆಗಾಗಿ ಜನಜಾಗೃತಿ ಕಾರ್ಯಕ್ರಮ ನಡೆಸಿ ಗಮನ ಸೆಳೆದಿದ್ದರು. ಸಹೋದರಿ ಪಂಕಜಾ ಕೂಡ ರಾಜಸ್ತಾನದಲ್ಲಿ ಮೇಜರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT