ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷಡಕ್ಷರಿಗೆ ಸಚಿವ ಸ್ಥಾನ: ಮಠಾಧೀಶರ ಒತ್ತಾಯ

Last Updated 28 ಜನವರಿ 2017, 6:06 IST
ಅಕ್ಷರ ಗಾತ್ರ

ತಿಪಟೂರು: ಮಹದೇವಪ್ರಸಾದ್ ನಿಧನದ ನಂತರ ಖಾಲಿಯಾಗಿರುವ ಸಚಿವ ಸ್ಥಾನವನ್ನು ಶಾಸಕ ಕೆ.ಷಡಕ್ಷರಿ ಅವರಿಗೆ ನೀಡಬೇಕೆಂದು ಹಳೇ ಮೈಸೂರು ಪ್ರಾಂತ್ಯದ 11 ಜಿಲ್ಲೆಗಳ 27 ಮಠಾಧೀಶರು ಒತ್ತಾಯಿಸಿದರು.

ನಗರದ ಷಡಕ್ಷರ ಮಠದಲ್ಲಿ ಶುಕ್ರವಾರ ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಸೇರಿದ್ದ ವಿವಿಧ ಮಠಗಳ 27 ಮಠಾಧೀಶರು ಷಡಕ್ಷರಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು. ಸದ್ಯದಲ್ಲೇ ಮತ್ತಷ್ಟು ಮಠಾಧೀಶರ ಜತೆಗೂಡಿ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು ಎಂದರು.

ರುದ್ರಮುನಿಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಹದೇವಪ್ರಸಾದ್‌ ನಿಧನರಾದ ನಂತರ ಹಳೇ ಮೈಸೂರು ಪ್ರಾಂತ್ಯದಲ್ಲಿ ಷಡಕ್ಷರಿ ಅವರು ವೀರಶೈವ ಸಮಾಜಕ್ಕೆ ಸೇರಿದ ಏಕೈಕ ಶಾಸಕರಾಗಿದ್ದಾರೆ. ಸುದೀರ್ಘ ಅವಧಿಯ ರಾಜಕೀಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಷಡಕ್ಷರಿ ಸಚಿವರಾಗಲು ಯೋಗ್ಯ ವ್ಯಕ್ತಿಯಾಗಿದ್ದಾರೆ’ ಎಂದರು.

‘ಷಡಕ್ಷರಿ ಅವರು ಕ್ರಿಯಾಶೀಲ ಶಾಸಕರೆಂದು ಸ್ವತಃ ಮುಖ್ಯಮಂತ್ರಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಉನ್ನತ ಹುದ್ದೆಗಳನ್ನು ನಿಭಾಯಿಸಿ ಅವರು ಯಶಸ್ವಿಯಾಗಿದ್ದಾರೆ. ಎಲ್ಲ ಜಾತಿ ಜನಾಂಗದವರನ್ನು ಒಟ್ಟಿಗೆ ಕರೆದೊಯ್ದು ಅಭಿವೃದ್ಧಿಗೆ ಪೂರಕವಾಗಿ ಹೊಸ ಯೋಜನೆಗಳನ್ನು ರೂಪಿಸುವ ಮನಸ್ಸು ಹೊಂದಿದ್ದಾರೆ’ ಎಂದರು.

‘ನಲವತ್ತು ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಷಡಕ್ಷರಿ ಅವರು ಈವರೆಗೆ ಯಾವುದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಅಥವ ಸಚಿವ ಸ್ಥಾನ ಕೇಳದೆ ಕ್ಷೇತ್ರದ ಅಭಿವೃದ್ಧಿಗಾಗಿ ಅವಿರತ ದುಡಿದ್ದಾರೆ. ಅವರ ಪಕ್ಷ ನಿಷ್ಠೆಯನ್ನು ವರಿಷ್ಠರು ಪರಿಗಣಿಸಬೇಕು. ಈ ಮೂಲಕ 11 ಜಿಲ್ಲೆಗಳ ವೀರಶೈವ ಸಮುದಾಯಕ್ಕೆ ಕೊರತೆಯಾಗಿರುವ ರಾಜಕೀಯ ಪ್ರಾತಿನಿಧ್ಯ ತುಂಬಬಹುದಾಗಿದೆ’ ಎಂದು ಅವರು ತಿಳಿಸಿದರು.

‘ವೀರಶೈವ ಸಮುದಾಯದ ಪರವಾಗಿ ಮಠಾಧೀಶರು ಈ ನ್ಯಾಯ ಕೇಳುತ್ತಿರುವುದರಲ್ಲಿ ತಪ್ಪಿಲ್ಲವೆಂದು ಭಾವಿಸಿದ್ದೇವೆ. ಶಾಸಕ ಕೆ.ಷಡಕ್ಷರಿ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ರಾಜ್ಯ ಸರ್ಕಾರದ ಗೌರವ ಹೆಚ್ಚುತ್ತದೆ. ಅಲ್ಲದೇ, ಕಾಂಗ್ರೆಸ್ ಪಕ್ಷಕ್ಕೂ ಸಹ ಷಡಕ್ಷರಿ ಅವರಿಗೆ ಸಚಿವ ನೀಡುವುದು ಅನಿವಾರ್ಯವಾಗಿದೆ. ಈಗಾಗಲೇ ತುಮಕೂರು ಜಿಲ್ಲೆಯಿಂದ ಇಬ್ಬರು ಸಚಿವರು ಇದ್ದಾರೆ ಎಂಬುದು ಪ್ರಶ್ನೆಯಲ್ಲ. ಸಮುದಾಯದ ಜನಸಂಖ್ಯೆ ಆಧರಿಸಿ ಸಾಮಾಜಿಕ ನ್ಯಾಯವೂ ಸಿಗಬೇಕು. ಹಾಗೆಂದು ಇದು ಜಾತಿ ಬೆಂಬಲಿತ ಒತ್ತಾಯವಲ್ಲ. ಸಮಾಜದ ಹಿತದೃಷ್ಟಿಯಿಂದ ಮಠಾಧೀಶರು ಸೇರಿ ಈ ಒತ್ತಾಯವನ್ನು ಮಂಡಿಸುತ್ತಿದ್ದೇವೆ’ ಎಂದು ತಿಳಿಸಿದರು.

ಚನ್ನಮಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಧರ್ಮ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ರಾಜಕೀಯದಲ್ಲಿ ಅಸಮತೋಲನ ಉಂಟಾದಾಗ ನ್ಯಾಯ ಕೇಳುವುದೇ ಧರ್ಮ. ಹಾಗಾಗಿ ಮಠಾಧೀಶರು ಒತ್ತಾಯ ಮಂಡಿಸುತ್ತಿರುವುದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ. ಇದು ಸಮುದಾಯ ಪ್ರಜ್ಞೆಯ ಸಂಕೇತವಷ್ಟೆ’ ಎಂದರು.

‘ಷಡಕ್ಷರಿ ಅವರು ಕೇವಲ ಸಮುದಾಯಕಷ್ಟೆ ಸೀಮಿತವಾಗಿಲ್ಲ. ಎಲ್ಲ ಕೆಳಸಮುದಾಯದ ಜಾತಿಗಳ ಹಿತಾಸಕ್ತಿಗೆ ಶ್ರಮಿಸುತ್ತಿರುವ ಜಾತ್ಯತೀತ ಮನೋಭಾವವುಳ್ಳವರಾಗಿದ್ದಾರೆ’ ಎಂದು ಅವರು ಹೇಳಿದರು. ಕೊಡುಗು, ಬೆಂಗಳೂರು, ಕೋಲಾರ, ಹಾಸನ, ಚಿಕ್ಕಮಗಳೂರು, ರಾಮನಗರ ಸೇರಿದಂತೆ 11 ಜಿಲ್ಲೆಗಳ ಮಠಾಧೀಶರು ಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT