ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ವೀರಭದ್ರೇಶ್ವರ ರಥೋತ್ಸವ

ಗಮನ ಸೆಳೆದ ಪಲ್ಲಕ್ಕಿ ಉತ್ಸವ, ಜಾನಪದ ಕಲಾತಂಡಗಳ ಮೆರುಗು, ವಿವಿಧೆಡೆಯ ಭಕ್ತರು ಭಾಗಿ
Last Updated 28 ಜನವರಿ 2017, 7:20 IST
ಅಕ್ಷರ ಗಾತ್ರ

ಹುಮನಾಬಾದ್: ಪಟ್ಟಣದ ರಥ ಮೈದಾನದಲ್ಲಿ ಶುಕ್ರವಾರ ನಡೆದ ಈ ಭಾಗದ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ಜಾತ್ರೆ  ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.

ಹಿರೇಮಠದ ರೇಣುಕ ಗಂಗಾಧರ ಸ್ವಾಮೀಜಿ ರಥದ ಮುಂಭಾಗದಲ್ಲಿ ನೈವೇದ್ಯಕ್ಕೆ ಇಡಲಾಗಿದ್ದ ಎಳ್ಳಿನ ಹೋಳಿಗೆ, ಜೋಳದ ಅನ್ನದ ಮೇಲಿಂದ ಹಾಯ್ದು ರಥದಲ್ಲಿ ಆಸೀನರಾದರು. ಬಳಿಕ ಸಂಪ್ರದಾಯದಂತೆ ವೀರಭದ್ರೇಶ್ವರ ದೇವರ ಭಕ್ತ ಕಲಬುರ್ಗಿ ಶರಣಬಸಪ್ಪ ಕಲ್ಯಾಣಿ ರಥ ಹತ್ತುತ್ತಿದ್ದಂತೆ ರಥೋತ್ಸವಕ್ಕೆ ಚಾಲನೆ ದೊರೆಯಿತು.

ಭಕ್ತರಿಂದ ಕರತಾಡನ, ಜೈಘೋಷ ಕೇಳಿ ಬಂದವು. ವಿಜಯಪುರದ ಸಿದ್ದೇಶ್ವರ ನಂದಿಕೋಲು, ಸೊಲ್ಲಾಪುರದ ಬ್ರಾಸ್‌ಬ್ಯಾಂಡ್‌, ಬೀಳಗಿಯ ಢೋಲು, ಸೇಡೋಳದ ಬೊಂಬೆ ಕುಣಿತ, ಯುವಕರ ನೃತ್ಯ, ಕರಡಿ ಮಜಲು ವಾದ್ಯ, ಹಲಗೆ ವಾದ್ಯ ತಂಡಗಳ ಆಕರ್ಷಕ ಪ್ರದರ್ಶನಗಳು ರಥೋತ್ಸವಕ್ಕೆ ಮೆರುಗು ನೀಡಿದವು.

ಭಕ್ತರು ರಥೋತ್ಸವ ವೀಕ್ಷಿಸಲು ಸುತ್ತಲಿನ ಕಟ್ಟಡಗಳನ್ನು ಏರಿ ಕುಳಿತಿದ್ದು ಕಂಡು ಬಂತು. ರಥ ಸಾಗಿ ಬರುವ ವೇಳೆ ಭಕ್ತರು ಕಲ್ಲು ಸಕ್ಕರೆ, ಖಾರಿಕ, ವಿವಿಧ ಹಣ್ಣುಗಳು ಸೇರಿದಂತೆ ನಾಣ್ಯಗಳನ್ನು ರಥದತ್ತ ಎಸೆದರು. 

ಭೂಸೇನಾ ನಿಗಮ ಅಧ್ಯಕ್ಷ ರಾಜಶೇಖರ ಪಾಟೀಲ, ದೇವಸ್ಥಾನ ಆಡಳಿತಾಧಿಕಾರಿ ಶರಣಬಸ್ಸಪ್ಪ ಕೋಟೆಪ್ಪಗೋಳ್‌, ತಹಶೀಲ್ದಾರ್‌ ಡಿ.ಎಂ.ಪಾಣಿ , ಗೌರವ ಕಾರ್ಯದರ್ಶಿ ವೀರಣ್ಣ ಎಚ್‌.ಪಾಟೀಲ ಇದ್ದರು. ಬೀದರ್‌, ಕಲಬುರ್ಗಿ ಮಾತ್ರವಲ್ಲದೇ ತೆಲಂಗಾಣ, ಮಹಾರಾಷ್ಟ್ರದ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಸಾರ್ವಜನಿಕರು ನಗರದ ಪ್ರಮುಖ ವೃತ್ತಗಳಲ್ಲಿ ದಾಸೋಹ ವ್ಯವಸ್ಥೆ ಕಲ್ಪಿಸಿದ್ದರು.

ಬಿಗಿ ಭದ್ರತೆ: ರಥೋತ್ಸವಕ್ಕೆ  ಬಿಗಿ ಪೊಲೀಸ್‌ ಬಂದೊಬಸ್ತ್‌ ಮಾಡಲಾಗಿತ್ತು. ರಥ ಮೈದಾನ. ದೇವಸ್ಥಾನ ಮುಂಭಾಗ ಹಾಗೂ ಪ್ರಮುಖ ವೃತ್ತಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಪಲ್ಲಕ್ಕಿ ಉತ್ಸವ: ಜ.10ರಂದು ಆರಂಭಗೊಂಡ ಪಟ್ಟಣದ ಸರ್ವಧರ್ಮ ಸಮನ್ವಯತೆ ಖ್ಯಾತಿಯ ವೀರಭದ್ರೇಶ್ವರ ಜಾತ್ರೆ ಕೊನೆ ದಿನದವಾದ ಶುಕ್ರವಾರ ಪಲ್ಲಕ್ಕಿ ಉತ್ಸವದೊಂದಿಗೆ ತೆರೆಕಂಡಿತು.

ಜ.26ರಂದು ರಾತ್ರಿ 9ಕ್ಕೆ ದೇವಸ್ಥಾನದಿಂದ ಹೊರಟ ಪಲ್ಲಕ್ಕಿ ಜ.27ರ ರಾತ್ರಿ 9ಕ್ಕೆ ದೇವಸ್ಥಾನಕ್ಕೆ ಮರಳಿತು. ಜ.14ರಿಂದ 26ರವರೆಗೆ ಜೇರಪೇಟೆ, ಬಪ್ಪಣ್ಣಿ ಓಣಿ, ಅಗ್ನಿಕುಂಡ ಮಾರ್ಗದ ನಿವಾಸಿಗಳಿಗೆ ದರ್ಶನಭಾಗ್ಯ ಕಲ್ಪಿಸಿದ್ದ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಜಾತ್ರೆ ಕೊನೆಯ ಪಲ್ಲಕ್ಕಿ ಸುಭಾಶ್ ರಸ್ತೆ ಮೂಲಕ ತೆರಳಿ ಅಲ್ಲಿನ ಭಕ್ತರಿಗೆ ದರ್ಶನ ಒದಗಿಸಲಾಯಿತು.

ಮುಖ್ಯ ರಸ್ತೆಗೆ ಹೊಂದಿಕೊಂಡ ಪ್ರತಿಯೊಂದು ಓಣಿಗಳಿಂದ ಸಾವಿರಾರು ಭಕ್ತರು ದೇವರಿಗೆ ಶಾಲು ಹೊದಿಸವವರು ಇದ್ದ ಕಾರಣ ಹಿಂದೆಂದಿಗಿಂತ ಈ ಬಾರಿ  ಅತ್ಯಂತ ನಿಧಾನವಾಗಿ ತೆರಳಿತು. ಮುಖ್ಯಮಾರ್ಗದಲ್ಲಿ ಆಯಾ ಮನೆಯವರು ಆಕರ್ಷಕ ರಂಗೋಲಿ ಬಿಡಿಸಿದ್ದರು. ದೇವರ ಪಲ್ಲಕ್ಕಿ ಹೊರುವವರು ಬಿಳಿ ಸಮವಸ್ತ್ರ ಧರಿಸಿದ್ದು ಉತ್ಸವ ಮೆರುಗು ಹೆಚ್ಚಿಸಿತ್ತು.

ದೇವಸ್ಥಾನ ವ್ಯವಸ್ಥಾಪಕ ಮಂಡಳಿಯ ಬಾಬುರಾವ ಪೋಚಂಪಳ್ಳಿ, ವಜಯಕುಮಾರ ಕೋರಿ,  ಶಿವಕುಮಾರ ಸ್ವಾಮಿ ನಿಟ್ಟೂರ್, ರಾಜೇಂದ್ರ ಉಪ್ಪಲ್ಲಿ, ರಾಜು ಶೀಲವಂತ, ಮಲ್ಲಿಕಾರ್ಜುನ  ಮಾಳಶೆಟ್ಟಿ, ಅರವಿಂದ ಅಗಡಿ, ಮಲ್ಲಿಕಾರ್ಜುನ ಮರೂರ್, ವಿಜಯಕುಮಾರ ದುರ್ಗದ್‌, ಸಂಗಯ್ಯ ಸ್ವಾಮಿ, ಶ್ರೀನಿವಾಸ ಇದ್ದರು.

ವೀರಣ್ಣ ವಾರದ್, ವೀರಶೆಟ್ಟಿ ಜೀರ್ಗಿ, ಶಾಂತವೀರ ಯಲಾಲ್, ಮೀನಾಕ್ಷಿ ಯಡವೆ, ಸಿದ್ರಾಮಯ್ಯ ಸ್ವಾಮಿ, ಸುರೇಂದ್ರಕುಮಾರ ಹುಡಗೀಕರ್‌, ದಿಗಂಬರ್‌ ಖಮಿತ್ಕರ್, ಪ್ರಕಾಶ ಸುವರ್ಣಕರ್‌ ಜ.25ರಿಂದ 27ರವರೆಗೆ ಜಾತ್ರೆ ಸಂಬಂಧ ವಿವಿಧೆಡೆಯಿಂದ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಜಾಗೃತಿ ನೀಡುವ ಕೆಲಸದಲ್ಲಿ ಭಾಗಿಯಾಗಿದ್ದು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.

ಕೆಆರ್‌ಐಡಿಎಲ್‌ ವತಿಯಿಂದ ದಾಸೋಹ: ಭೂಸೇನಾ ನಿಗಮ ವತಿಯಿಂದ ನಗರದ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ದಾಸೋಹಕ್ಕೆ ಭೂಸೇನಾ ನಿಗಮ ಅಧ್ಯಕ್ಷ ರಾಜಶೇಖರ ಬಿ.ಪಾಟೀಲ ಚಾಲನೆ ನೀಡಿದರು.

ಕಾರ್ಯನಿರ್ವಾಹಕ ಎಂಜಿನಿಯರ್‌ ರಘುನಾಥರಾವ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಎಂ.ಡಾಕುಳಗಿ, ತಹಶೀಲ್ದಾರ್‌ ಡಿ.ಎಂ.ಪಾಣಿ, ಗ್ರೇಡ್‌(2) ತಹಶೀಲ್ದಾರ್‌ ಜಗನ್ನಾಥ ಪೂಜಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಗೋವಿಂದ, ಕಂಟೆಪ್ಪ ದಾನಾ, ರಾಮರಾವ ಧನಾಜಿ, ವಿನಾಯಕ ಯಾದವ್‌, ಅಪ್ಸರಮಿಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT