ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಭಟಿಸುತ್ತಿವೆ ಯಂತ್ರಗಳು; ಕರಗುತ್ತಿವೆ ಬೆಟ್ಟಗಳು

ಗುರುಮಠಕಲ್‌: ಅವ್ಯಾಹತವಾಗಿ ನಡೆಯುತ್ತಿದೆ ಅಕ್ರಮ ಮಣ್ಣು ಸಾಗಾಟ
ಅಕ್ಷರ ಗಾತ್ರ

ಗುರುಮಠಕಲ್: ಪಟ್ಟಣದಿಂದ ಸುಮಾರು 2 ಕಿ.ಮೀ ದೂರದಲ್ಲಿ ತೆಲಂಗಾಣದ ನಾರಾಯಣಪೇಟ ಪಟ್ಟಣಕ್ಕೆ ಹೋಗುವ ರಸ್ತೆ ಹಾಗೂ ಯಾದ ಗಿರಿ ನಗರಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿನ ಗುಡ್ಡಗಳನ್ನು ಜೆಸಿಬಿಗಳಿಂದ ಅಗೆಯಲಾಗುತ್ತಿದೆ. ಅರಣ್ಯ ಇಲಾಖೆಯ ಪ್ರದೇಶ ದಲ್ಲಿರುವ ಬೆಟ್ಟಗಳನ್ನು ಸಹ ಅಗೆದಿದ್ದು, ಬೆಟ್ಟಗಳು ದಿನ ದಿನಕ್ಕೆ ಕರಗುತ್ತಿವೆ.

ನಾರಾಯಣ ಪೇಟ ರಸ್ತೆಯ ವಿಸ್ತರಣೆ ಹಾಗೂ ರಸ್ತೆಯ ನಿರ್ಮಾಣಕ್ಕಾಗಿ ಬೆಟ್ಟಗಳನ್ನು ಅಗೆಯಲಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಪ್ರಕಾರ ರಸ್ತೆಯ ಪಕ್ಕದಲ್ಲಿ ಅಗೆದು ರಸ್ತೆಯ ನಿರ್ಮಾಣಕ್ಕೆ ಬಳಕೆ ಮಾಡಬಹುದಾಗಿದೆ. ಅದಕ್ಕೆ ಟೆಂಡರ್ ಸಮಯದಲ್ಲಿಯೇ ರಾಯಧನ ಪಡೆಯಲಾಗಿರುತ್ತದೆ. ಆದರೆ, ಅಲ್ಲಿಂದ ಬೇರೆಡೆಗೆ ಮಣ್ಣನ್ನು ಸಾಗಿಸುವಂತಿಲ್ಲ.

ಗುರುಮಠಕಲ್ ಸುತ್ತಲಿನ ಬೆಟ್ಟಗಳಲ್ಲಿನ ಮಣ್ಣು ಗಡುಸಾಗಿದ್ದು (ಮೊರುಮ್), ಇಲ್ಲಿನ ಬೆಟ್ಟಗಳನ್ನು ಅಗೆದು ಮಣ್ಣನ್ನು ಬೇರೆಡೆಗೆ ಸಾಗಿಸಿ, ತಮಗೆ ಬೇಕಾದಲ್ಲಿ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ. ಬೆಟ್ಟಗಳನ್ನು ಅಗೆದಿರುವುದರಿಂದ ಮರ, ಗಿಡಗಳು ನಾಶವಾಗಿ ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರವಿಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಯಾದಗಿರಿ ನಗರಕ್ಕೆ ಹೋಗುವ ರಸ್ತೆಯಲ್ಲಿ ಬರುವ ಬೆಟ್ಟಗಳನ್ನು ಖಾಸಗಿ ವ್ಯಕ್ತಿಗಳು ರಾತ್ರೋ ರಾತ್ರಿ ಯಂತ್ರಗಳನ್ನು ಬಳಸಿ ಮಣ್ಣನ್ನು ಅಗೆದು ಮಾರಾಟ ಮಾಡುತಿದ್ದಾರೆ.

ಇದು ಹೀಗೆಯೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಬೆಟ್ಟಗಳು ಸಂಪೂರ್ಣ ಮಾಯವಾಗಿ ಹಸಿರಿಲ್ಲದಂತಾಗುತ್ತದೆ. ಜೊತೆಗೆ ನೈಸರ್ಗಿಕ ಸಂಪತ್ತು ನಾಶವಾಗುವುದರ ಜತೆಗೆ ಪರಿಸರಕ್ಕೆ ಹಾಗೂ ಪಶು ಪಕ್ಷಿಗಳಿಗೆ ಹಾನಿಯಾಗುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಮಹದೇವ್ ಒತ್ತಾಯಿಸಿದರು.

ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿ ಚಂದ್ರಶಾ ನೀರ್ಕಟ್ಟಿಯವರನ್ನು ಸಂಪರ್ಕಿಸಿದಾಗ, ‘ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಯಾವುದೇ ಬೆಟ್ಟಗಳನ್ನು ಅಗೆದಿಲ್ಲ. ಅರಣ್ಯ ಪ್ರದೇಶದಲ್ಲಿ ಬೆಟ್ಟಗಳನ್ನು ಅಗೆದಿರುವ ಕುರಿತು ಪರಿಶೀಲಿಸಲಾಗುವುದು. ಒಂದು ವೇಳೆ ಅರಣ್ಯ ವ್ಯಾಪ್ತಿಯಲ್ಲಿ ಅಗೆದಿರುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT