ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಚಾರಕ್ಕೆ ಕಾಲೇಜು ರಂಗೋತ್ಸವ

ಕೊಪ್ಪಳ: ಕಾರ್ಯಕ್ರಮ ಉದ್ಘಾಟನೆ, ಜನಪ್ರತಿನಿಧಿಗಳ ಬರುವಿಕೆಗಾಗಿ ಅರ್ಧದಿನ ಕಾಲಹರಣ
Last Updated 28 ಜನವರಿ 2017, 8:25 IST
ಅಕ್ಷರ ಗಾತ್ರ

ಕೊಪ್ಪಳ: ಉದ್ಘಾಟನೆ, ಜನಪ್ರತಿನಿಧಿಗಳ ಓಲೈಕೆ ಇತ್ಯಾದಿಗಾಗಿಯೇ ಅರ್ಧದಿನ ಕಾಲಹರಣ ಮಾಡಿ ಕಾಟಾಚಾರದ ಕಾಲೇಜು ರಂಗೋತ್ಸವ ಮತ್ತು ಜನಪದ ನೃತ್ಯ ಪ್ರದರ್ಶನ ಶುಕ್ರವಾರ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಬುರ್ಗಿಯ ರಂಗಾಯಣದ ಸಹಯೋಗದಲ್ಲಿ ಆಯೋಜಿಸಲಾದ ಕಾಲೇಜು ರಂಗೋತ್ಸವ ಸಾಂಸ್ಕೃತಿಕ ಶಿಸ್ತನ್ನು ಮರೆಯಿತು ಎಂದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ತೀವ್ರ ಬೇಸರ ವ್ಯಕ್ತಪಡಿಸಿದರು.

ನಿಗದಿಯಂತೆ ಕಾರ್ಯಕ್ರಮ ಬೆಳಿಗ್ಗೆ 10ಕ್ಕೆ ಇಲ್ಲಿನ ನೌಕರರ ಸಾಂಸ್ಕೃತಿಕ ಭವನದಲ್ಲಿ ಶುರುವಾಗಬೇಕಿತ್ತು. ಶಾಸಕರಿಗೆ ಕರೆ ಮಾಡಿದ ಸಂಘಟಕರು ಅವರ ಆಗಮನಕ್ಕೆ ಕಾದರು. ಇಷ್ಟಾಗುವಾಗಲೇ ವೇಳೆ 12.30 ಕಳೆದಿತ್ತು. ಹಲವು ಕಾರ್ಯಕ್ರಮ ಮುಗಿಸಿ ಬಂದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಕೊನೆಗೂ ಉದ್ಘಾಟನೆ ನೆರವೇರಿಸಿ ಯಥಾ ಪ್ರಕಾರ ಭಾಷಣ ಮುಗಿಸಿದರು. ಮಧ್ಯೆ ಮಧ್ಯೆ ಕೆಲವು ಜಾನಪದ ನೃತ್ಯ ಪ್ರದರ್ಶನಗಳು ನಡೆದವು.

ವಿದ್ಯಾರ್ಥಿಗಳ ಗೋಳು: ನೃತ್ಯ, ನಾಟಕದ ಪೂರ್ವಸಿದ್ಧತೆ, ವೇಷಭೂಷಣಕ್ಕೆ ಸರಿಯಾದ ಗ್ರೀನ್‌ ರೂಂ ಇರಲಿಲ್ಲ ಕೊಪ್ಪಳದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ತಾಂತ್ರಿಕವಾಗಿಯೂ ವಿಫಲ: ರಂಗೋತ್ಸವಕ್ಕೆ ಬೇಕಾದಂತೆ ವೇದಿಕೆಯನ್ನು ಸಜ್ಜುಗೊಳಿಸಿರಲಿಲ್ಲ. ಧ್ವನಿ – ಬೆಳಕೂ ನಾಟಕಕ್ಕೆ ಬೇಕಾದಂತೆ ಅಳವಡಿಸಿರಲಿಲ್ಲ. ಕೊನೇ ಪಕ್ಷ ಅಂಕದ ಪರದೆಯನ್ನಾದರೂ ಕಟ್ಟಬೇಕಿತ್ತು. ಇದೆಲ್ಲದರ ಕೊರತೆಯಿಂದ ನಾಟಕಕ್ಕೆ ಸೆಟ್‌ ಜೋಡಿಸುವುದು ಸಾಧ್ಯವಾಗಲಿಲ್ಲ. ನಮ್ಮ ಸಿದ್ಧತೆಗೆ ತಕ್ಕಂತೆ ಪರಿಪೂರ್ಣವಾದ ಪ್ರದರ್ಶನ ಕೊಡಲು ಸಾಧ್ಯವಾಗಲಿಲ್ಲ. ಒಟ್ಟಾರೆ ಉತ್ಸವ ಎಲ್ಲ ದೃಷ್ಟಿಯಲ್ಲಿ ವಿಫಲವಾಗಿದೆ ಎಂದು ಇದೇ ಕಾಲೇಜಿನ ವಿದ್ಯಾರ್ಥಿಗಳು ತೀವ್ರ ಬೇಸರ ವ್ಯಕ್ತಪಡಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಕರಿಯಪ್ಪ ಮೇಟಿ, ಮುಖಂಡ ಗುರುರಾಜ್‌ ಹಲಗೇರಿ, ಹೋರಾಟಗಾರ ಶಿವಾನಂದ ಹೊದ್ಲೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ರಂಗೋತ್ಸವದ ಜಿಲ್ಲಾ ಸಂಚಾಲಕ ಸಿ.ವಿ.ಜಡಿಯವರ, ನಿರ್ಣಾಯಕರಾದ ಐ.ಕೆ.ಕಮ್ಮಾರ, ರಾಘವೇಂದ್ರರಾವ್‌, ಜಿ.ಕೆ.ಹೊನ್ನಾಯ್ಕರ್‌, ಬಾಬಣ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT