ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಕಡಿತ; ಬಾಡುತ್ತಿರುವ ಬೆಳೆ

ಹೆಸ್ಕಾಂ ಎದುರು ಬದನಗೋಡ, ಅಂಡಗಿ ಪಂಚಾಯ್ತಿ ವ್ಯಾಪ್ತಿಯ ರೈತರ ಪ್ರತಿಭಟನೆ
Last Updated 28 ಜನವರಿ 2017, 10:34 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಬದನಗೋಡ ಮತ್ತು ಅಂಡಗಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಉಂಟಾಗುತ್ತಿರುವ ವಿದ್ಯುತ್ ಕಡಿತ ಸರಿಪಡಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಹೆಸ್ಕಾಂ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ವಿದ್ಯುತ್ ಕೊರತೆಯಿಂದ ಕೊಳವೆಬಾವಿ ಇದ್ದರೂ ನೀರೆತ್ತಲು ಆಗುತ್ತಿಲ್ಲ. ಇದರಿಂದ ಕೃಷಿ ಬೆಳೆಗಳು ಹಾಳಾಗುತ್ತಿವೆ. ಅಂಡಗಿ ಪಂಚಾಯ್ತಿಯಲ್ಲಿ ಕೊಳವೆಬಾವಿ ಇದ್ದರೂ ಬಳಕೆಗೆ ಬಾರದಂತಾಗಿದೆ. ಇದರಿಂದ ಗ್ರಾಮದ ಜನರಿಗೆ ಕುಡಿಯುವ ನೀರು ಕೊಡಲು ಸಹ ಕಷ್ಟವಾಗಿದೆ ಎಂದು ಅಂಡಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವರಾಜ ನಾಯ್ಕ ದೂರಿದರು.

ಬನವಾಸಿ ಹೋಬಳಿಯಲ್ಲಿ ವಿದ್ಯುತ್ ಸಮಸ್ಯೆ ಮೊದಲಿನಿಂದಲೂ ಇದೆ. ಆದರೆ ಈ ಬಾರಿ ಇದು ಬಿಗಡಾಯಿಸಿದೆ. ಅಡಿಕೆ, ತೋಟ ಗದ್ದೆಗಳು ನೀರಿಲ್ಲದೇ ಒಣಗುತ್ತಿವೆ ಎಂದು ಬದನಗೋಡ     ಪಂಚಾಯ್ತಿ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಹೇಳಿದರು.

ಮನವಿ ಸ್ವೀಕರಿಸಲು ಬಂದ ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ದೀಪಕ್‌ ಕಾಮತ್ ಮಾತನಾಡಿ ‘ಬನವಾಸಿಗೆ 110 ಕೆ.ವಿ. ಸಾಮರ್ಥ್ಯದ ಪ್ರತ್ಯೇಕ ಗ್ರಿಡ್ ಮಂಜೂರು ಆಗಿದೆ. ಹೊಸ ಗ್ರಿಡ್ ಮಾತ್ರ ಈ ಭಾಗದ ಸಮಸ್ಯೆಗೆ ಪರಿಹಾರವಾಗಿದೆ’ ಎಂದರು.

ಇದರಿಂದ ಕೆರಳಿದ ಪ್ರತಿಭಟನಾಕಾರರು ‘ಗ್ರಿಡ್ ಆಗುವ ತನಕ ನಮ್ಮ ತೋಟ, ಗದ್ದೆ ಒಣಗುತ್ತಿದ್ದರೆ ಅದಕ್ಕೆ ಪರಿಹಾರ ನೀಡುವವರು ಯಾರು ? ನಾವು ನಿತ್ಯದ ತುತ್ತಿಗೆ ಏನು ಮಾಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬನವಾಸಿ ಭಾಗದಲ್ಲಿ ರೈತರ 723 ಐಪಿ ಸೆಟ್‌ಗಳನ್ನು ಅಧಿಕೃತಗೊಳಿಸಲಾಗಿದೆ. ಇನ್ನಷ್ಟು ಕೊಳವೆಬಾವಿಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿರುವ ಆರೋಪಗಳಿವೆ. ವಿದ್ಯುತ್ ಬಳಕೆ ಹೆಚ್ಚಾಗಿದ್ದರಿಂದ ಹೆಚ್ಚು ಒತ್ತಡ ಸೃಷ್ಟಿಯಾಗಿ ಸಮಸ್ಯೆ ಬಿಗಡಾಯಿಸಿದೆ ಎಂದು ದೀಪಕ ಕಾಮತ್ ತಿಳಿಸಿದರು.

ಇದಕ್ಕೆ ಮಣಿಯದ ಪ್ರತಿಭಟನಾನಿರತ ರೈತರು ಸಮಸ್ಯೆ ಪರಿಹರಿಸುವ ತನಕ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಕೆಪಿಟಿಸಿಎಲ್ ನಿರ್ದೇಶಕ ದೀಪಕ ದೊಡ್ಡೂರು ಮಧ್ಯ ಪ್ರವೇಶಿಸಿ ಇಲಾಖೆ ತಕ್ಷಣಕ್ಕೆ ಸಾಧ್ಯವಾಗಬಹುದಾದ ಪರಿಹಾರ ಒದಗಿಸಬೇಕು ಎಂದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವ್ಯವಸ್ಥೆ ಸುಧಾರಣೆಯ ಭರವಸೆ ನೀಡಿದರು. ರೈತ ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಸಿ.ಎಫ್. ಈರೇಶ, ರೇವಣ ಸಿದ್ದಪ್ಪ ಗೌಡ, ಚನ್ನಬಸಪ್ಪ ಗೌಡ, ಉದಯ ದೊಡ್ಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT