ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧ್ಯತೆ ನಡುವೆ ಮಿತಿ ಗುರುತಿಸುವ ‘ಯಾನ’

ಕಲಾ ಕಾಲೇಜು; ಡಾ.ಎಸ್.ಎಲ್.ಭೈರಪ್ಪ ಅವರ ಸಾಹಿತ್ಯದ ವಿಚಾರ ಸಂಕಿರಣದಲ್ಲಿ ಲೇಖಕ ದಿವಾಕರ ಹೆಗಡೆ ಅಭಿಮತ
Last Updated 28 ಜನವರಿ 2017, 10:36 IST
ಅಕ್ಷರ ಗಾತ್ರ

ಬಾಗಲಕೋಟೆ: ‘ವಿಜ್ಞಾನದ ಸಾಧ್ಯತೆ­ಗಳನ್ನು ಹೇಳುತ್ತಲೇ ಅದರ ಮಿತಿ ಗುರು­ತಿಸುವ ಸಂಗತಿಯಿಂದಾಗಿಯೇ ಡಾ.­ಎಸ್‌.­­ಎಲ್‌.­ಭೈರಪ್ಪ ಅವರ ಯಾನ ಕಾದಂಬರಿಯ ವಸ್ತು ವಿಷಯ ಓದು­ಗರನ್ನು ಸೆಳೆಯುತ್ತದೆ’ ಎಂದು ಲೇಖಕ ದಿವಾಕರ ಹೆಗಡೆ ಅಭಿಪ್ರಾಯಪಟ್ಟರು.

ಇಲ್ಲಿನ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಡಾ.ಎಸ್.ಎಲ್.ಭೈರಪ್ಪ ಅವರ ಸಾಹಿತ್ಯ ಕುರಿತಾದ ವಿಚಾರ ಸಂಕಿರಣ­ದಲ್ಲಿ ‘ಯಾನದೊಳಗಿನ ಯಾನಗಳು’ ವಿಷಯದ ಬಗ್ಗೆ ಮಾತನಾಡಿದರು.

‘ವಿಜ್ಞಾನಿ ದೇವಸ್ಥಾನಕ್ಕೆ ಹೋಗ­ಬಾರದೇ ಎಂಬ ವಿಚಾರ ವಿಜ್ಞಾನ ಕ್ಷೇತ್ರ­ದಲ್ಲಿ ಎತ್ತರಕ್ಕೆ ಹೋದಂತೆ ನಮ್ಮನ್ನು ಅನಿವಾ­ರ್ಯವಾಗಿ ಕಾಡುತ್ತದೆ. ಈ ತಾತ್ವಿಕ ಪ್ರಶ್ನೆಯನ್ನು ಯಾನ ಕಾದಂಬರಿ­ಯಲ್ಲಿ ಕಾಣುತ್ತೇವೆ. ಬಹಿರಂಗದ ಲಾಭ ನೋಡುತ್ತಲೇ ಅಂತರಂಗವನ್ನು ಪ್ರಶ್ನಿಸಿ­ಕೊಳ್ಳಲು ಸಾಹಿತ್ಯ ದೊಡ್ಡ ಅವಕಾಶವಾ­ಗಿದೆ. ಎಲ್ಲದಕ್ಕೂ ಪರ್ಯಾಯ ಇಲ್ಲವೇ ತಾಂತ್ರಿಕ ಪರಿಹಾರ ಶೋಧನೆ ಮಾಡು­ತ್ತಾ ಹೋದರೆ ನಾವು ಸಹಜ ಪ್ರವೃತ್ತಿ ಕಳೆದುಕೊಳ್ಳುತ್ತೇವೆ ಎಂಬ ಎಚ್ಚರ ‘ಯಾನ’ದ ಆಶಯವಾಗಿದೆ’ ಎಂದರು.

‘ಅನಾದಿಯಿಂದ ಅನಂತದವರೆಗೆ ನಡೆದುಕೊಂಡು ಹೋಗುವ ಹಾದಿಯಲ್ಲಿ ಯಾನ ಪರಿಕಲ್ಪನೆ ಮಹತ್ವದ್ದಾಗಿದೆ. ಫ್ರಾಕ್ಸಿಮಾ ಸೆಂಟಾರಿಯ ಬಳಿಗೆ ರೊಬೊ­ಗಳನ್ನು ಕಳುಹಿಸಿದ್ದರೆ ಅದು ಕೇವಲ ಮಾಹಿತಿ ಆಗುತ್ತಿತ್ತು. ಆದರೆ ಮಾಹಿತಿ­ಯೊಂದಿಗೆ ಮನುಷ್ಯ ತೊಡಗಿ­ಕೊಂಡಾಗ ಅದು ಕಥೆಯಾಗುತ್ತದೆ ಎಂಬುದು ಕಾದಂಬರಿಯಿಂದ ವೇದ್ಯವಾ­ಗುತ್ತದೆ’ ಎಂದರು.

‘ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿಗಳಲ್ಲಿ ಸ್ತ್ರೀ’ ವಿಷಯದ ಬಗ್ಗೆ ಮಾತ­ನಾಡಿದ ಅಂಕಣಕಾರ್ತಿ ಸಹನಾ ವಿಜಯಕುಮಾರ, ‘ಭೈರಪ್ಪನವರ ಕಾದಂ­­­­ಬ­­­ರಿ­­ಗಳಲ್ಲಿನ ಸ್ತ್ರೀ ಪಾತ್ರಗಳು ಅವರ ಜೀವನ ದರ್ಶನದಿಂದಲೇ ಸಾಕ್ಷಾ­ತ್ಕಾರಗೊಂಡವು. ಆದ್ದರಿಂದ ಆ ಪಾತ್ರ­ಗಳು ಎಲ್ಲಾ ಕಾಲಕ್ಕೂ ದೇಶ–ಭಾಷೆಗಳ ಗಡಿ ಮೀರಿ ಪ್ರಸ್ತುತವಾಗುತ್ತವೆ. ಇದ­ಕ್ಕೆಲ್ಲಾ ಭೈರಪ್ಪನವರ ಮೇಲೆ ಕಡು–ಕಷ್ಟ­ಗಳ ನಡುವೆ ಸಕಾರಾತ್ಮಕ ಧೋರಣೆ ಹೊಂದಿದ್ದ ತಾಯಿ ಗೌರಮ್ಮನವರ ಪ್ರಭಾ­ವವೇ ಕಾರಣ’ ಎಂದರು. ‘ತಾಯಿ­ಯೊಬ್ಬರ ನಿಷ್ಠೆ, ಬುದ್ಧಿ, ತಾಳ್ಮೆ, ವಿವೇಚನೆ ಮಗನಿಗೆ ಕಷ್ಟಸಾಧ್ಯ­ವಾದ ಗಮ್ಯವನ್ನು ತಲುಪುವ ಭಾವಶಕ್ತಿ­   ಆಕೆ­ಯ ಅನು­ಪಸ್ಥಿತಿಯಲ್ಲಿ ನೀಡ­ಬಲ್ಲುದು ಎಂಬುದಕ್ಕೆ ಸ್ವತಃ ಭೈರಪ್ಪ­ ನವರೇ ಸಾಕ್ಷಿ’ ಎಂದರು.

‘ಭೈರಪ್ಪನವರ ಕಾದಂಬರಿಗಳಲ್ಲಿ ವಸ್ತು ಮತ್ತು ತಂತ್ರದ ಹೊಂದಾಣಿಕೆ’ ವಿಷಯದ ಬಗ್ಗೆ ಮಾತನಾಡಿದ ಲೇಖಕ ಡಾ.ಅಜಕ್ಕಳ ಗಿರೀಶ ಭಟ್, ‘ಕಥಾವಸ್ತು ಹೇಗೆ ಓದುಗನನ್ನು ತಲುಪುತ್ತದೆ ಎಂಬುದು ಮುಖ್ಯ. ಈ ದಾಟಿಕೊಂಡು ಬರುವ ಪ್ರಕ್ರಿಯೆಯೇ ತಂತ್ರ’ ಎಂದರು.

ಭೈರಪ್ಪ ಅವರ ಕಾದಂಬರಿಗಳಲ್ಲಿ ಸಮಾನಾಂತರ ಕಥೆ, ಉಪಕಥೆ, ನಂಬಿಕೆ, ಕಥೆಯೊಳಗಿನ ಕಥೆ ಹೀಗೆ  ಒಂದಲ್ಲಾ ಒಂದು ಸತ್ಯದ ಶೋಧನೆ ಕಾಣಲು ಸಾಧ್ಯವಾಗಿದೆ.ಇತಿಹಾಸ, ವರ್ತ­ಮಾನ ಹೀಗೆ ಎಲ್ಲಾ ಸಂದರ್ಭ­ಗಳಲ್ಲೂ ಸತ್ಯಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಸುಳ್ಳನ್ನು ಮೌಲ್ಯವಾಗಿ ತತ್ಕಾಲದ ಅವಶ್ಯಕತೆಯಾಗಿ ಒಪ್ಪಿಕೊಂಡರೆ ಅದು ಇಡೀ ಮೌಲ್ಯ ವ್ಯವಸ್ಥೆಯ ದಾರಿ ತಪ್ಪಿಸುವ ಸಾಧ್ಯತೆ ಇದೆ ಎಂಬ ಎಚ್ಚರವನ್ನು ಅವರ ಕಾದಂಬರಿಗಳ ವಸ್ತು–ವಿಷಯಗಳು ಒಳ­ಗೊಂಡಿವೆ’ ಎಂದರು.

‘ಸೃಜನೇತರ ಸಾಹಿತ್ಯ­ದಲ್ಲಿ ಚಿಂತ­ನೆಯ ನೆಲೆಗಳು’ ವಿಷ­ಯದ ಬಗ್ಗೆ ಡಾ.ಶ್ರೀಧರ ಹೆಗಡೆ ಭದ್ರನ್ ಮಾತನಾ­ಡಿದರು. ನಂತರ ‘ಮಂದ್ರ’ ಕಾದಂಬರಿ ಆಧಾರಿತ ಹಿಂದೂಸ್ತಾನಿ ಶಾಸ್ತ್ರೀಯ ರಾಗಗಳನ್ನು ಹುಬ್ಬಳ್ಳಿಯ ರಾಜೇಶ್ವರಿ ಪಾಟೀಲ ಪ್ರಸ್ತುತ ಪಡಿಸಿ­ದರು. ರಾಗ, ಅರ್ಥ ಹಾಗೂ ಭಾವದ ವಿಶ್ಲೇಷಣೆಯನ್ನು ದಿವಾಕರ ಹೆಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT