ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್‌ ಸಮಸ್ಯೆ ಇತ್ಯರ್ಥಕ್ಕೆ ರೈತರ ಆಗ್ರಹ

ರೇಷ್ಮೆಗೂಡು ಮಾರುಕಟ್ಟೆ ಅವ್ಯವಸ್ಥೆಗೆ ಅಸಮಾಧಾನ
Last Updated 28 ಜನವರಿ 2017, 11:00 IST
ಅಕ್ಷರ ಗಾತ್ರ

ರಾಮನಗರ: ಚೆಕ್‌ ಬೌನ್ಸ್‌ನಿಂದ ರೇಷ್ಮೆ ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕರ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿದರು.

ಮಾರುಕಟ್ಟೆಯ ಉಪನಿರ್ದೇಶಕ ಕೆ. ಶಶಿಧರ್ ಅವರಿಗೆ ತಮ್ಮ ಅಹವಾಲು ಸಲ್ಲಿಸಿದ ಮುಖಂಡರು, ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಸಮಸ್ಯೆ ಉದ್ಬವಿಸಿದೆ ಎಂದು ಆರೋಪಿಸಿದರು. ‘ರೇಷ್ಮೆಗೂಡು ಖರೀದಿಗೆ ಬದಲಾಗಿ ರೀಲರ್‌ಗಳು ರೈತರಿಗೆ ನೀಡುತ್ತಿರುವ ಚೆಕ್‌ಗಳು ಬೌನ್ಸ್ ಆಗುತ್ತಿವೆ. ಎರಡು ತಿಂಗಳಿನಿಂದಲೂ ಈ ಸಮಸ್ಯೆ ಎದುರಿಸುತ್ತಿದ್ದರೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಖರೀದಿಯ ನಂತರದ 10–15 ದಿನಗಳ ದಿನಾಂಕವಿರುವ ಚೆಕ್‌ ನೀಡಲಾಗುತ್ತಿದ್ದು,ಇದರಿಂದ ಸಕಾಲಕ್ಕೆ ರೈತರಿಗೆ ಹಣ ಸಿಗುತ್ತಿಲ್ಲ. ಹೀಗಾಗಿ ಖರೀದಿಯಾದ ದಿನದಂದೇ ಚೆಕ್‌ ನೀಡಬೇಕು. ಅದು ತಿರಸ್ಕೃತಗೊಂಡರೆ ರೀಲರ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ಮಾರುಕಟ್ಟೆಯಲ್ಲಿ ಮೊದಲಿನಿಂದಲೂ ದಳ್ಳಾಳಿಗಳ ಹಾವಳಿ ವಿಪರೀತವಾಗಿದೆ. ನಿತ್ಯ 300–400 ಕೆ.ಜಿ.ಯಷ್ಟು ಗೂಡು ಕಳ್ಳತನವಾಗುತ್ತಿದೆ. ಹೀಗಿದ್ದರೂ ರಕ್ಷಣೆ ಇಲ್ಲ.ಸಿಸಿಟಿವಿ ಕ್ಯಾಮೆರಾ ಕಾರ್ಯ ನಿರ್ವಹಿಸುತ್ತಿಲ್ಲವೇ‘ ಎಂದು ಪ್ರಶ್ನಿಸಿದರು.

‘ಇಲ್ಲಿನ ಎಲ್ಲ ಅವ್ಯವಸ್ಥೆಗಳನ್ನು ಸರಿಪಡಿಸಿ ಮಾರುಕಟ್ಟೆಗೆ ಕಾಯಕಲ್ಪ ನೀಡಬೇಕು. ದೂರದಿಂದ ಬರುವ ರೈತರ ಅನುಕೂಲಕ್ಕಾಗಿ ಉಪಾಹಾರ ಗೃಹ ತೆರೆಯಬೇಕು.ಮಾರುಕಟ್ಟೆಯಲ್ಲಿನ ಭದ್ರತೆ ಹೆಚ್ಚಿಸಿ, ಸಂಬಂಧ ಇಲ್ಲದವರನ್ನು ದೂರವಿಡಬೇಕು. ಅಧಿಕಾರಿಗಳು ಹೆಚ್ಚು ಚುರುಕಿನಿಂದ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

‘ಚೆಕ್‌ ಸಮಸ್ಯೆ ಸಂಬಂಧ ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ರೈತರಿಗೆ ಹಣ ಕೊಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಉಳಿದ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು’ ಎಂದು ಉಪನಿರ್ದೇಶಕರು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಮುಖಂಡರಾದ ಎಸ್‌.ಆರ್‌. ನಾಗರಾಜು, ಜಿ.ವಿ.ಪದ್ಮನಾಭ, ರುದ್ರದೇವರು, ಪ್ರವೀಣ್‌ಗೌಡ, ರಾಮಾಂಜನೇಯ, ಲೀಲಾವತಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT