ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಸಘಟಿತ ಕಾರ್ಮಿಕರಿಗೆ ನೆರವು ನೀಡಿ

Last Updated 28 ಜನವರಿ 2017, 11:01 IST
ಅಕ್ಷರ ಗಾತ್ರ

ರಾಮನಗರ: ‘ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ಭವಿಷ್ಯ ನಿಧಿ ಒದಗಿಸಿಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎನ್.ಉಮೇಶ್ ಒತ್ತಾಯಿಸಿದರು.

ನಗರದ ಗುರುಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಜಿಲ್ಲಾ ದರ್ಜಿ ಕಾರ್ಮಿಕರ ಸಂಘದ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ₹2.50 ಕೋಟಿ ಅಸಂಘಟಿತ ಕಾರ್ಮಿಕರಿದ್ದು, ಯೋಜನೆ ಜಾರಿಯಾದಲ್ಲಿ ಅವರಿಗೆ ಸಾಮಾಜಿಕ ಭದ್ರತೆ ಸಿಗಲಿದೆ. ಅಸಂಘಟಿತರಿಗೆ ಭವಿಷ್ಯ ನಿಧಿ, ಇಎಸ್‌ಐ, ಪಿಂಚಣಿ ಸೌಲಭ್ಯಕ್ಕಾಗಿ ಕಾರ್ಮಿಕ ಸಂಘಟನೆ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿವೆ’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರ ಬಜೆಟ್‌ ಮಂಡಿಸುವ ಸಂದರ್ಭದಲ್ಲಿ ₹10 ರಿಂದ 15 ಕೋಟಿಯಷ್ಟು ಹಣವನ್ನು ಭವಿಷ್ಯ ನಿಧಿಗೆ ನೀಡುತ್ತದೆ. ಇದರಿಂದ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ನೀಡಲು ಸಾಧ್ಯವಾಗುವುದಿಲ್ಲ. ಆದರೆ ಕೇಂದ್ರ ಸರ್ಕಾರ ಇಲ್ಲಿಯವರೆವಿಗೂ ಕಾರ್ಮಿಕ ಭವಿಷ್ಯ ನಿಧಿಗೆ ಹಣವನ್ನು ಬಿಡುಗಡೆ ಮಾಡಿಲ್ಲ’ ಎಂದು ಆರೋಪಿಸಿದರು. ಪ್ರಸಕ್ತ ವರ್ಷದ ಬಜೆಟ್‌ನಲ್ಲಿಯೇ ಭವಿಷ್ಯ ನಿಧಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

‘ರಾಜ್ಯದದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು  ಪುರುಷ ಹಾಗೂ ಮಹಿಳಾ ದರ್ಜಿಗಳು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಕಾಯಕ ನಿಧಿ ಯೋಜನೆಯಡಿ ನಿವೃತ್ತಿ ವೇತನ, ಉಚಿತ ನಿವೇಶನ, ವಸತಿ ಯೋಜನೆ ಜಾರಿಗೊಳಿಸಬೇಕು. ಮಹಿಳಾ ಕಾರ್ಮಿಕರಿಗೆ ಕನಿಷ್ಠ ವೇತನ, ವಿಶ್ರಾಂತಿ ಗೃಹ, ಗುರುತಿನ ಚೀಟಿ, ಆಮ್ ಆದ್ಮಿ ಭೀಮಾ ಯೋಜನೆ, ಬೋನಸ್, ಗ್ರಾಚ್ಯುಟಿ, ವಿಮೆ ಸೌಲಭ್ಯ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಪ್ರಸ್ತುತ ಸಂದರ್ಭದಲ್ಲಿ ದರ್ಜಿಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಸಿದ್ಧ ಉಡುಪು  ಇಂದು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿರುವುದರಿಂದ ಜನರು ಬಟ್ಟೆಗಳನ್ನು ಹೊಲಿಸುವವರು ಕಡಿಮೆಯಾಗುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಒಳಗೊಂಡ ಗಾರ್ಮೆಂಟ್ಸ್‌ಗಳಿಂದ ಸಿದ್ಧ ಉಡುಪುಗಳು ಹೊರಬರುತ್ತಿವೆ. ಇಂತಹ ಸಂದರ್ಭದಲ್ಲಿ ದರ್ಜಿಗಳು ಕೌಶಲವನ್ನು ರೂಢಿಸಿಕೊಳ್ಳಬೇಕಿದೆ’ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ದರ್ಜಿಗಳನ್ನು ಸನ್ಮಾನಿಸಲಾಯಿತು. ರಾಮನಗರ ಜಿಲ್ಲಾ ದರ್ಜಿ ಕಾರ್ಮಿಕರ ಸಂಘದ ಅಧ್ಯಕ್ಷ ರಿಜ್ವಾನ್‌ಖಾನ್‌, ಉಪಾಧ್ಯಕ್ಷ ಆರ್. ಯತೀಶ್‌ಕುಮಾರ್, ಖಜಾಂಚಿ ಫೈರೋಜ್‌ಖಾನ್‌, ಪದಾಧಿಕಾರಿಗಳಾದ ಅಯೂಬ್‌ಪಾಷಾ, ಅಸ್ಲಂಪಾಷಾ, ಅಯೂಬ್‌ಆಲಿಖಾನ್, ನರೇಂದ್ರಬಾಬು, ಎಟಿಡಿಸಿ ತರಬೇತಿ ಕೇಂದ್ರದ ಅಧಿಕಾರಿಗಳಾದ ಗಣೇಶ್, ಶ್ವೇತಾ, ಕೈಗಾರಿಕೆ ಇಲಾಖೆಯ ಶಿವಲಿಂಗಯ್ಯ, ಸಿಐಟಿಯು ಪದಾಧಿಕಾರಿಗಳಾದ ರಾಘವೇಂದ್ರ, ಸ್ವಾಮಿರಾಜ್‌, ಮಹಾಂತೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT