ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಮಾರುಕಟ್ಟೆ: ಪಾರ್ಕಿಂಗ್‌ ಮಾಫಿಯಾ?

ಟೆಂಡರ್‌ ಕರೆದಿಲ್ಲ, ಸಂಬಂಧ ಇಲ್ಲ ಎನ್ನುವ ಅಧಿಕಾರ ವರ್ಗ
Last Updated 28 ಜನವರಿ 2017, 11:02 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆ ಎದುರು ನಿಲ್ಲಿಸಲಾಗುವ ವಾಹನಗಳಿಂದ ನಿತ್ಯ ಪಾರ್ಕಿಂಗ್‌ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ ಈ ಸಂಬಂಧ ಯಾವುದೇ ಟೆಂಡರ್‌ ಕರೆದಿಲ್ಲ. ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುತ್ತಾರೆ ಮಾರುಕಟ್ಟೆಯ ಅಧಿಕಾರಿಗಳು.

ಮಾರುಕಟ್ಟೆಗೆ ರಾಮನಗರ ಮಾತ್ರವಲ್ಲದೆ ದೂರದ ಜಿಲ್ಲೆಗಳು, ಹೊರ ರಾಜ್ಯಗಳಿಂದಲೂ ನಿತ್ಯ ನೂರಾರು ರೈತರು ಬಂದು ಹೋಗುತ್ತಾರೆ. ಇವರಲ್ಲದೆ ರೀಲರ್‌ಗಳು, ಅಧಿಕಾರಿಗಳು ಸಾರ್ವಜನಿಕರೂ ಭೇಟಿ ಕೊಡುತ್ತಾರೆ.

ಮಾರುಕಟ್ಟೆ ಮುಂದೆ ದಿನಕ್ಕೆ ಸುಮಾರು 400–500 ದ್ವಿಚಕ್ರ ವಾಹನಗಳು ನಿಲುಗಡೆ ಆಗುತ್ತಿವೆ. ಹೀಗೆ ನಿಲ್ಲುವ ವಾಹನಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ ಯಾರಿಗಾಗಿ ಈ ಶುಲ್ಕ? ಟೆಂಡರ್ ಕರೆಯಲಾಗಿದೆಯೇ? ಎಂಬ ಬಗ್ಗೆ ಮಾಹಿತಿ ಇಲ್ಲ. ಸದ್ಯ ಪ್ರತಿ ವಾಹನಕ್ಕೆ ₹10 ಶುಲ್ಕ ವಿಧಿಸಲಾಗುತ್ತಿದೆ. ಈ ಹಣವೇ ದಿನವೊಂದಕ್ಕೆ ಸಾವಿರಾರು ರೂಪಾಯಿಗಳಷ್ಟು ಸಂಗ್ರಹವಾಗುತ್ತಿದೆ.

ನಮಗೆ ಸಂಬಂಧವಿಲ್ಲ: ಶುಕ್ರವಾರ ಉಪನಿರ್ದೇಶಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಉಪನಿರ್ದೇಶಕ ಕೆ. ಶಶಿಧರ್‌ ಅವರನ್ನು ಮಾರುಕಟ್ಟೆಯಲ್ಲಿನ ಪಾರ್ಕಿಂಗ್‌ ವ್ಯವಸ್ಥೆ ಕುರಿತು ಪ್ರಶ್ನಿಸಿದರು. ಆದರೆ ಅವರು ಅದಕ್ಕೆ ಸಮಂಜಸ ಉತ್ತರ ನೀಡಲಿಲ್ಲ. ‘ಮಾರುಕಟ್ಟೆ ವತಿಯಿಂದ ಯಾರಿಗೂ ಟೆಂಡರ್‌ ನೀಡಿಲ್ಲ. ಅದೆಲ್ಲ ಕಂಪೌಂಡ್ ಹೊರಗೆ ನಡೆಯುತ್ತಿರುವ ಕಾರಣ ನಮ್ಮ ಗಮನಕ್ಕೆ ಬಂದಿಲ್ಲ. ಯಾರೋ ಹೊರಗಿನವರು ಮಾಡುತ್ತಿರಬಹುದು’ ಎಂದು ಅವರು ಹೇಳಿದರು.

ರಸೀದಿ ಮೂಲಕ ವ್ಯವಹಾರ: ಅಂದ ಹಾಗೆ ಪಾರ್ಕಿಂಗ್‌ ಶುಲ್ಕವಾಗಿ ₹8 ನಿಗದಿ ಪಡಿಸಿಕೊಂಡಿದ್ದು, ಅದನ್ನು ಸಂಗ್ರಹಿಸುವವರು ₹10 ಪಡೆಯುತ್ತಿದ್ದಾರೆ. ಯಾರಿಗಾಗಿ ಈ ಶುಲ್ಕ ಕಲೆಹಾಕಲಾಗುತ್ತಿದೆ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ‘ಕೆ.ಆರ್’ ಎಂಬ ಹೆಸರಿನಲ್ಲಿ ಇದಕ್ಕಾಗಿ ರಸೀತಿಯನ್ನು ಸಹ ನೀಡಲಾಗುತ್ತಿದೆ.

ಟೆಂಡರ್ ಇಲ್ಲದೆಯೇ ಮಾರುಕಟ್ಟೆ ಮುಂದೆ ಅನ್ಯರು ಶುಲ್ಕ ಸಂಗ್ರಹಿಸುತ್ತಿರುವ ಕಾರಣ ಸರ್ಕಾರಕ್ಕೆ ನಷ್ಟ ಉಂಟಾಗಿದೆ. ಇದನ್ನು ತಪ್ಪಿಸಿ ಟೆಂಡರ್‌ ಕರೆದು ಶುಲ್ಕ ನಿಗದಿ ಮಾಡಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT