ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ ಬಾಸ್‌! ಜನ ಯಾಕೆ ನೋಡುತ್ತಾರೆ?

Last Updated 28 ಜನವರಿ 2017, 19:30 IST
ಅಕ್ಷರ ಗಾತ್ರ

ಕಿರುತೆರೆಯ ರಿಯಾಲಿಟಿ ಷೋಗಳಲ್ಲಿ ‘ಬಿಗ್‌ ಬಾಸ್‌’ ಹೆಚ್ಚು ಜನಪ್ರಿಯ. ಸುಮಾರು 40 ದೇಶಗಳಲ್ಲಿ, ಒಂದಲ್ಲಾ ಒಂದು ಭಾಷೆಯಲ್ಲಿ ನಿರಂತರವಾಗಿ ಪ್ರಸಾರಗೊಳ್ಳುವ ಕಾರ್ಯಕ್ರಮವಿದು. ಕನ್ನಡದಲ್ಲೇ ಈವರೆಗೆ ‘ಬಿಗ್‌ ಬಾಸ್‌’ನ ನಾಲ್ಕು ಆವೃತ್ತಿಗಳು ರೂಪುಗೊಂಡಿವೆ. ಕೋಟ್ಯಂತರ ಜನ ‘ಬಿಗ್‌ ಬಾಸ್‌’ ಕಾರ್ಯಕ್ರಮವನ್ನು ಪ್ರತಿದಿನವೂ ನೋಡುತ್ತಾರೆ.

ಸೆಲೆಬ್ರಿಟಿಗಳ ಅಳು–ನಗು, ಸಂಯಮ–ಸಿಡುಕುಗಳು ಮಹತ್ವದ ವಿದ್ಯಮಾನ ಎನ್ನುವಂತೆ ಚರ್ಚಿಸುತ್ತಾರೆ. ಟೀವಿ ಧಾರಾವಾಹಿಗಳಿಂದ ದೂರ ಇರುವವರು ಕೂಡ, ‘ಬಿಗ್‌ ಬಾಸ್‌’ ಸೀಜನ್‌ನಲ್ಲಿ ಟೀವಿ ಮುಂದೆ ಕೂರುತ್ತಾರೆ. ಹಾಗಾದರೆ ‘ಬಿಗ್‌ ಬಾಸ್‌’ನಲ್ಲಿ ಇರುವ ಆಕರ್ಷಣೆಯಾದರೂ ಏನು? ಜನ ಯಾಕಾಗಿ ‘ಬಿಗ್‌ ಬಾಸ್‌’ ನೋಡುತ್ತಾರೆ?

‘ಬಿಗ್‌ ಬಾಸ್‌’ ಷೋನ ಪರಿಕಲ್ಪನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದು ಒಂದಲ್ಲಾ ಒಂದು ಬಗೆಯಲ್ಲಿ ನಮ್ಮ ಅಂತರಂಗ–ಬಹಿರಂಗವನ್ನು ಆವರಿಸಿಕೊಂಡಿರುವುದು ಕಾಣಿಸುತ್ತದೆ. ಸರಳವಾಗಿ ಹೇಳುವುದಾದರೆ, ‘ಬಿಗ್‌ ಬಾಸ್‌’ ಎನ್ನುವುದು ನಮ್ಮನ್ನು ನಮಗೆ ಕಾಣಿಸುವಂತೆ, ವಿಶೇಷವಾಗಿ ನಮ್ಮ ವಿಕಾರಗಳನ್ನು ಮುಖಕ್ಕೆ ಹಿಡಿಯುವಂತೆ ರೂಪುಗೊಂಡಿರುವ ಕಾರ್ಯಕ್ರಮ.

‘ಬಿಗ್‌ ಬಾಸ್‌’ನ ಹಂದರವನ್ನು ಗಮನಿಸಿ. ಎಲ್ಲ ಸೌಕರ್ಯಗಳೂ ಇರುವ ಮನೆಯೊಂದರಲ್ಲಿ ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ವ್ಯಕ್ತಿಗಳು ವಾಸವಾಗಿರುತ್ತಾರೆ. ಹೊರ ಜಗತ್ತಿನ ವಿದ್ಯಮಾನಗಳಿಂದ ದೂರವಾಗಿ ಮನೆಯ ಚೌಕಟ್ಟಿನಲ್ಲಿ ಸ್ವಬಂಧನಕ್ಕೆ ಒಳಗಾಗುವ ಇವರು ‘ಬಿಗ್‌ ಬಾಸ್‌’ನ ಆಜ್ಞಾನುವರ್ತಿಗಳು. ಈ ‘ಬಿಗ್‌ ಬಾಸ್‌’ ಕಣ್ಣಿಗೆ ಕಾಣುವ ವ್ಯಕ್ತಿಯೇನಲ್ಲ. ಮಾತಿನ ಮೂಲಕವೇ ಆತ ‘ಮನೆ’ಯನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳುತ್ತಾನೆ.

ಇದೊಂದು ರೀತಿಯಲ್ಲಿ ‘ಯಕ್ಷಪ್ರಶ್ನೆ’ ಪ್ರಸಂಗ! ಅಶರೀರವಾಣಿಯ ಮಾತನ್ನು ಮೀರಿದ ನಾಲ್ವರು – ಭೀಮಾರ್ಜುನ, ನಕುಲ–ಸಹದೇವರು ಸರೋವರದಲ್ಲಿನ ನೀರು ಕುಡಿದು ಜೀವ ಕಳೆದುಕೊಂಡರೆ, ವಿವೇಕಿಯಾದ ಧರ್ಮರಾಜ ಯಕ್ಷನ ಪ್ರಶ್ನೆಗಳಿಗೆ ಸಾವಧಾನದಿಂದ ಉತ್ತರಿಸಿ, ತಾನೂ ಬದುಕಿ – ತಮ್ಮಂದಿರನ್ನೂ ಬದುಕಿಸಿಕೊಳ್ಳುತ್ತಾನೆ. ‘ಬಿಗ್‌ ಬಾಸ್‌’ನಲ್ಲೂ ಇಂಥ ಅಶರೀರವಾಣಿ ಇರುತ್ತದೆ (ಇದು ‘ಮಾತಿನ ಕಾಲ’).

ಆದೇಶಗಳನ್ನು ಪಾಲಿಸದವರು ಧರ್ಮಜನ ಸೋದರರಂತೆ ಮನೆಯಿಂದ ನಿರ್ಗಮಿಸುತ್ತಾರೆ – ಎಲಿಮಿನೇಷನ್ ಆಗುತ್ತಾರೆ. ಆದರೆ, ಈ ಆಧುನಿಕ ಯಕ್ಷಪರೀಕ್ಷೆಯಲ್ಲಿ ಧರ್ಮರಾಯನಿಗೆ ಅವಕಾಶವೇ ಇಲ್ಲ. ಸ್ವಂತ ಉಳಿವಷ್ಟೇ ಇಲ್ಲಿ ಮುಖ್ಯವಾಗುತ್ತದೆ. ತನ್ನ ಉಳಿವಿಗಾಗಿ ಇತರರನ್ನು ಮನೆಯಿಂದ ಹೊರದಬ್ಬುವ ತಂತ್ರಗಾರಿಕೆಯೂ ಇಲ್ಲಿ ಮುಖ್ಯವಾಗುತ್ತದೆ.

ಲಕ್ಷುರಿಯ ಬೆನ್ನೇರಿ…
ಹುಲ್ಲಹಾಸು, ಈಜುಕೊಳ ಒಳಗೊಂಡ ಆಕರ್ಷಕ ಮನೆ ‘ಬಿಗ್‌ ಬಾಸ್‌’ನದು. ಆದರೆ, ಹೊರ ಜಗತ್ತಿನೊಂದಿಗಿನ ಸಂಪರ್ಕವನ್ನು ಮನೆ ಕಡಿದುಕೊಂಡಿರುತ್ತದೆ. ಲೌಕಿಕ ಸುಖಗಳ ಬೆನ್ನುಬಿದ್ದ ನಾವು ನಮ್ಮ ಕರುಳುಬಳ್ಳಿ ಸಂಬಂಧಗಳನ್ನು ತೊರೆದುಕೊಳ್ಳುವ ವ್ಯಂಗ್ಯ ಇಲ್ಲಿರುವಂತಿದೆ. ‘ಬಿಗ್‌ ಬಾಸ್‌’ ಮನೆಯನ್ನೇ ಒಂದು ಜಗತ್ತು ಎಂದುಕೊಳ್ಳುವುದಾದರೆ, ಅಲ್ಲಿರುವವರೆಲ್ಲ ಸ್ಪರ್ಧಾತ್ಮಕ ಜಗತ್ತಿನ ಹುರಿಯಾಳುಗಳು.

‘ಲಕ್ಷುರಿ ಬಜೆಟ್‌’ ಎಟುಕಿಸಿಕೊಳ್ಳಲು ಯಾವ ಕಸರತ್ತಿಗಾದರೂ ಎದೆಗೊಡಲು ಸಿದ್ಧರಾದವರು. ಈ ಮನೆ ಎನ್ನುವ ವಿಶ್ವ, ಸ್ಪರ್ಧೆ, ಲಕ್ಷುರಿಯ ಆಮಿಷ – ಇವೆಲ್ಲ ಮನೆಯಾಚೆಗೆ ಇರುವ ನಮ್ಮ ಬದುಕೂ ಅಲ್ಲವೇನು? ‘ಬಿಗ್‌ ಬಾಸ್‌’ ಸ್ಪರ್ಧಿಗಳ ಪಾತ್ರವನ್ನು ನಾವು ಹೊರಜಗತ್ತಿನಲ್ಲಿ ಬೇರೆ ಬೇರೆ ರೂಪಗಳಲ್ಲಿ ನಿರ್ವಹಿಸುತ್ತಿಲ್ಲವೇನು?

ಹೀಗೂ ಯೋಚಿಸೋಣ: ನಮ್ಮ ದೇಶವನ್ನೇ ‘ಬಿಗ್‌ ಬಾಸ್‌’ ಮನೆ ಹಾಗೂ ಪ್ರಧಾನಿಯನ್ನೇ ‘ಬಿಗ್‌ ಬಾಸ್‌’ ಎಂದು ಕಲ್ಪಿಸಿಕೊಂಡರೆ, ವರ್ತಮಾನದ ಸಂಗತಿಗಳೇ ರಿಯಾಲಿಟಿ ಷೋ ರೂಪದಲ್ಲಿದೆ ಎನ್ನಿಸುತ್ತದೆ. ಅಶರೀರವಾಣಿಗೂ ‘ಮನದ ಮಾತು’ (ಮನ್‌ ಕಿ ಬಾತ್) ಪರಿಕಲ್ಪನೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ‘ಲಕ್ಷುರಿ ಬಜೆಟ್’ ಎನ್ನುವುದು ‘ಅಚ್ಛೇ ದಿನ್’ ಸಂಭ್ರಮದ ರೂಪವಷ್ಟೇ.

ತಕರಾರಿಗೆ, ಭಿನ್ನಮತಕ್ಕೆ ಎರಡು ಕಡೆಯೂ ಅವಕಾಶವಿಲ್ಲ. ರಿಯಾಲಿಟಿ ಷೋನಲ್ಲಿ ಎದುರಾಡಿದವರಿಗೆ ಶಿಕ್ಷೆ, ‘ಎಲಿಮಿನೇಷನ್’ನ ಅಪಾಯ. ದೇಶವೆಂಬ ಮನೆಯ ಷೋನಲ್ಲಿ ಭಿನ್ನಮತೀಯರಿಗೆ ‘ದೇಶದ್ರೋಹಿ’ ಎನ್ನುವ ಪಟ್ಟ; ಕೆಲವರಿಗೆ ಪಾಕಿಸ್ತಾನದ ಟಿಕೆಟ್ ಭಾಗ್ಯ!

‘ಬಿಗ್‌ ಬಾಸ್‌’ನ ರೂಪರೇಷೆಗಳಲ್ಲಿ ಪ್ರಜಾಪ್ರಭುತ್ವದ ಆಶಯಗಳಿಗೆ ಅವಕಾಶವಿಲ್ಲ. ‘ಬಿಗ್‌ ಬಾಸ್‌’ ಸರ್ವಾಧಿಕಾರದ ಹೊರತು, ಅಲ್ಲಿ ಜನಸಾಮಾನ್ಯರ ಅಭಿಪ್ರಾಯಗಳಿಗೆ ಕಿಮ್ಮತ್ತಿಲ್ಲ. ವರ್ತಮಾನದ ಇಂದಿನ ಸಂದರ್ಭವೂ ಭಿನ್ನವಾಗಿಯೇನೂ ಇಲ್ಲ. ಪ್ರಜಾಪ್ರಭುತ್ವದ ಪ್ರಯೋಗಶಾಲೆಗಳಲ್ಲೇ ಸರ್ವಾಧಿಕಾರದ ಒಲವು ಗಾಢವಾಗುತ್ತಿರುವ ಸಂದರ್ಭ ಇಂದಿನದು. ಈ ಒಲವಿಗೆ ಜನಪ್ರಿಯ ಉದಾಹರಣೆಗಳು – ಭಾರತದ ಮೋದಿ ಹಾಗೂ ಅಮೆರಿಕದ ಟ್ರಂಪ್‌.

ಕಿರುತೆರೆಯ ರಿಯಾಲಿಟಿ ಷೋ ಜನರ ಸಹಭಾಗಿತ್ವವನ್ನೂ ನಿರೀಕ್ಷಿಸುತ್ತದೆ. ‘ಬಿಗ್‌ ಬಾಸ್‌’ ಮನೆಯಲ್ಲಿ ತಮಗೆ ಬೇಕಾದ ಸೆಲೆಬ್ರೆಟಿಯನ್ನು ಉಳಿಸಿಕೊಳ್ಳಲು ವೀಕ್ಷಕರು ‘ಎಸ್‌ಎಂಎಸ್‌’ ಮೂಲಕ ಮತ ಚಲಾಯಿಸಬಹುದು. ಆದರೆ, ಹೀಗೆ ಚಲಾವಣೆಯಾದ ಮತಗಳ ಲೆಕ್ಕ ಬಹಿರಂಗವಾದ ಉದಾಹರಣೆಯೇ ಇಲ್ಲ. ಅಂದರೆ, ಜನರ ಭಾಗವಹಿಸುವಿಕೆ ಕೂಡ ‘ಬಿಗ್‌ ಬಾಸ್‌’ ಅಪೇಕ್ಷೆಯ ಚೌಕಟ್ಟಿಗೇ ಒಳಪಟ್ಟಿರುತ್ತದೆ. ‘ಬಿಗ್‌ ಬಾಸ್‌’ ಹೇಳಿದ್ದೇ ಜನರ ‘ಬಹುಮತ’ವಾಗಿ ಬಿಂಬಿತಗೊಳ್ಳುತ್ತದೆ.

ಅಂತರಂಗಕ್ಕೊಂದು ಕನ್ನಡಿ
ಮನುಷ್ಯನ ಮನಸಿನ ಅಧ್ಯಯನಕ್ಕೆ ‘ಬಿಗ್‌ ಬಾಸ್’ ಒಂದು ಒಳ್ಳೆಯ ವೇದಿಕೆ ಎನ್ನುವ ಒಂದು ನಂಬಿಕೆಯಿದೆ. ಈ ಷೋನಲ್ಲಿ ಭಾಗಿಯಾಗುವ ಸ್ಪರ್ಧಿಗಳ ಮನೋಬಲ ಪರೀಕ್ಷೆಗೆ ಒಳಗಾಗುತ್ತದೆ. ಸಂವಹನ, ದಿನಚರಿಯಲ್ಲಿನ ಶಿಸ್ತು, ಊಟದಲ್ಲಿನ ಅಚ್ಚುಕಟ್ಟುತನ, ತಂತ್ರಗಾರಿಕೆ, ಒತ್ತಡವನ್ನು ನಿಭಾಯಿಸಬಲ್ಲ ಚಾಕಚಕ್ಯತೆ, ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಮರ್ಪಕ ತೀರ್ಮಾನ ಕೈಗೊಳ್ಳುವ ಜಾಣ್ಮೆ – ಇದೆಲ್ಲದರ ಅನಾವರಣಕ್ಕೂ ‘ಬಿಗ್‌ ಬಾಸ್‌’ ಮನೆಯಲ್ಲಿ ಅವಕಾಶವಿದೆ.

ಆಟದ ರೂಪದಲ್ಲಿ ‘ಬಿಗ್‌ ಬಾಸ್‌’ ನೀಡುವ ಚಟುವಟಿಕೆಗಳು ಅನೇಕ ಸಂದರ್ಭದಲ್ಲಿ ಸ್ಪರ್ಧಿಗಳ ಅಹಂಕಾರದ ನಿರಸನಕ್ಕೆ ಕಾರಣವಾಗುವಂತಿರುತ್ತವೆ ಹಾಗೂ ಆತ್ಮಾಭಿಮಾನಕ್ಕೆ ಸವಾಲು ಒಡ್ಡುತ್ತವೆ. ‘ನಾನು’ ಎನ್ನುವುದನ್ನು ಅಳಿಸುತ್ತಲೇ ಪೋಷಿಸುವುದು ‘ಬಿಗ್‌ ಬಾಸ್‌’ನ ವಿಶೇಷ.

ಇಲ್ಲಿಗೆ ಬರಲಿಕ್ಕೆ ಒಬ್ಬೊಬ್ಬರಿಗೆ ಒಂದೊಂದು ಕಾರಣ. ಕೆಲವರಿಗೆ ಧೂಮಪಾನ, ಮದ್ಯಪಾನದಂತಹ ವ್ಯಸನಗಳಿಂದ ದೂರವಾಗಲು ‘ಬಿಗ್‌ ಬಾಸ್‌’ ಮನೆ ‘ಡಿ ಅಡಿಕ್ಷನ್ ಸೆಂಟರ್’ನಂತೆ ಕಾಣಿಸುತ್ತದೆ. ಮತ್ತೆ ಕೆಲವರಿಗೆ ‘ಬಿಗ್‌ ಬಾಸ್‌’ನಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯವಾಗುವ, ಆ ಮೂಲಕ ಸಿನಿಮಾಗಳಲ್ಲಿ ಅವಕಾಶ ಪಡೆಯುವ ಹಂಬಲ. ಅನೇಕರು ‘ಕೋಪ ಕಡಿಮೆ ಮಾಡಿಕೊಳ್ಳಲಿಕ್ಕೆ ಇಲ್ಲಿಗೆ ಬಂದೆ’ ಎನ್ನುತ್ತಾರೆ. ಆದರೆ, ಮನೆಗೆ ಬಂದವರು ಕೋಪವನ್ನು ಹೆಚ್ಚಿಸಿಕೊಳ್ಳುವ ಪ್ರಸಂಗಗಳೇ ಅಲ್ಲಿ ಹೆಚ್ಚು ಸೃಷ್ಟಿಯಾಗುತ್ತವೆ.

ಕ್ಯಾಮೆರಾಗಳ ಮುಂದೆ ಹೀರೊಗಳಾಗಿ ಕಾಣಿಸಿಕೊಳ್ಳಲು ‘ಬಿಗ್‌ ಬಾಸ್‌’ ಮನೆಯಲ್ಲಿನ  ಸ್ಪರ್ಧಿಗಳು ಪೈಪೋಟಿ ನಡೆಸುತ್ತಾರೆ. ಕನ್ನಡ ‘ಬಿಗ್‌ ಬಾಸ್‌’ ನಾಲ್ಕನೇ ಆವೃತ್ತಿಯ ಸ್ಪರ್ಧಿಗಳಲ್ಲೊಬ್ಬರಾದ ಪ್ರಥಮ್‌ಗೆ, ಪ್ರಚಾರಪ್ರಿಯತೆಗಾಗಿ ‘ಬಿಗ್‌ ಬಾಸ್‌’ ಮನೆಗೆ ಬಂದೆ ಎಂದು ಹೇಳಿಕೊಳ್ಳಲು ಯಾವ ಹಿಂಜರಿಕೆಯೂ ಇಲ್ಲ. ‘ಬಿಗ್‌ ಬಾಸ್‌’ ಹೇಳಿದರೆ ಸಗಣಿ ಬೇಕಾದರೂ ತಿನ್ನುವೆ ಎನ್ನುವ ಅವರ ಮಾತು, ಸುದ್ದಿಯಲ್ಲಿರಲು ಜನ ಏನೆಲ್ಲ ಮಾಡಬಲ್ಲರು ಎನ್ನುವುದಕ್ಕೆ ಉದಾಹರಣೆಯಂತಿದೆ.

ಈ ನಡವಳಿಕೆಗೂ ಕ್ಯಾಮೆರಾಗಳ ಎದುರು ಭಾವುಕತೆ–ವೀರಾವೇಶದಿಂದ ಮಾತನಾಡುವ ರಾಜಕಾರಣಿಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಅಳು, ನಗು, ಸಿಟ್ಟು, ಸಂಯಮ, ಪ್ರೇಮ, ದ್ವೇಷ – ಎಲ್ಲ ಭಾವಗಳೂ ಕ್ಯಾಮೆರಾಕ್ಕಾಗಿ ಅನಾವರಣಗೊಳ್ಳುತ್ತವೆ. ಒಬ್ಬರು ಇನ್ನೊಬ್ಬರನ್ನು ಎಲಿಮಿನೇಷನ್‌ ಉರುಳಿಗೆ ದೂಡಲು ಹಂಬಲಿಸುವ ಆಟದಲ್ಲಿ ನೈತಿಕತೆಗೆ, ಕ್ರೀಡಾ ಮನೋಭಾವಕ್ಕೆ ಅವಕಾಶವಾದರೂ ಎಲ್ಲಿಯದು? ಮಾನಸಿಕವಾಗಿ ಒಬ್ಬರನ್ನೊಬ್ಬರು ಘಾಸಿಗೊಳಿಸುವ, ಅಪಮಾನಗೊಳಿಸುವ, ಚಾರಿತ್ರ್ಯಹರಣ ಮಾಡುವ ಆಟಗಳನ್ನು ‘ಬಿಗ್‌ ಬಾಸ್‌’ ರಂಜನೆ ಎಂದು ಬಿಂಬಿಸುತ್ತದೆ. ಆತ್ಮರತಿ ಪ್ರವೃತ್ತಿಯನ್ನು ಉತ್ತೇಜಿಸುತ್ತದೆ.

ಷೋನಲ್ಲಿನ ಮೃಗೀಯ ಪ್ರವೃತ್ತಿಯ ರಂಜನೆ ನಮ್ಮೊಳಗಿನ ಮೃಗತ್ವವನ್ನು ತಣಿಸುತ್ತಿರುವುದೇ ‘ಬಿಗ್‌ ಬಾಸ್‌’ ಜನಪ್ರಿಯತೆಗೆ ಕಾರಣವಾಗಿರಬಹುದು. ನೆರೆಹೊರೆಯವರ ಕೊರತೆಗಳನ್ನು ನೋಡಿ ನಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳುವ ಮನಸ್ಥಿತಿಯೂ (ಪಕ್ಕದ ಮನೆಯವರ ಕುರಿತ ಅನಗತ್ಯ ಕುತೂಹಲವೂ) ‘ಬಿಗ್ ಬಾಸ್’ ಜನಪ್ರೀತಿಗೆ ಕಾರಣಗಳಲ್ಲೊಂದಾಗಿರಬಹುದು.

ಖಾಸಗೀತನ ಜಗಜ್ಜಾಹೀರು
ವ್ಯಕ್ತಿಯ ಖಾಸಗೀತನವನ್ನು ಜಗಜ್ಜಾಹೀರುಗೊಳಿಸುವುದು ‘ಬಿಗ್‌ ಬಾಸ್‌’ ಷೋದ ಮತ್ತೊಂದು ವಿಶೇಷ. ಹಾಗೆ ನೋಡಿದರೆ ಆಧುನಿಕತೆಯ ಕಬಂಧಬಾಹುಗಳಿಗೆ ಒಪ್ಪಿಸಿಕೊಂಡಿರುವ ನಾವು ‘ಪ್ರೈವಸಿ’ಯನ್ನು ಎಷ್ಟರಮಟ್ಟಿಗೆ ಉಳಿಸಿಕೊಂಡಿದ್ದೇವೆ? ಮೊಬೈಲ್‌ ಫೋನ್‌ಗಳು ಮನುಷ್ಯದೇಹದ ಆರನೇ ಇಂದ್ರಿಯದ ರೂಪು ತಳೆದುಬಿಟ್ಟಿವೆ. ಆಡಿದ್ದು, ನೋಡಿದ್ದನ್ನೆಲ್ಲ ಅಕ್ಷರಗಳ ಮೂಲಕವೋ ಸೆಲ್ಫಿಗಳ ಮೂಲಕವೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇವೆ. ನಮ್ಮ ವೈಯಕ್ತಿಕ ವಿವರಗಳೂ ಬೆರಳಚ್ಚೂ ಅಕ್ಷಿಪಟಲದ ಅಸ್ಥಿಪಂಜರವೂ ಎಲ್ಲೆಲ್ಲಿಯೋ ನಮೂದಾಗಿರುತ್ತವೆ.

ಇಂಟರ್ನೆಟ್‌ನ ‘ಸರ್ಚ್‌ ಎಂಜಿನ್’ ನಮ್ಮ ಸುಪ್ತಮನದ ಅಪೇಕ್ಷೆಗಳ ಕನ್ನಡಿಯಾಗಿರುತ್ತದೆ. ಖಾಸಗೀತನವನ್ನು ಪ್ರಜ್ಞಾಪೂರ್ವಕವಾಗಿ ಭಂಗಪಡಿಸುವುದು ಈ ಯುಗದ ಲಕ್ಷಣಗಳಲ್ಲೊಂದಾಗಿ ಇರುವಂತಿದೆ. ಈ ನಿಟ್ಟಿನಲ್ಲಿಯೂ ‘ಬಿಗ್‌ ಬಾಸ್‌’ ನಮ್ಮ ಮನಸಿಗೆ ಹತ್ತಿರವಾದುದು. ಮನೆಯಲ್ಲಿ ಬಂಧಿಯಾದ ಸೆಲೆಬ್ರೆಟಿಗಳು ನಮ್ಮೆದುರು ಬೆತ್ತಲಾಗುವುದನ್ನು ನೋಡುವುದು ಯಾರಿಗೆ ತಾನೆ ಇಷ್ಟವಿಲ್ಲ?

ಮದುವೆ ಎನ್ನುವುದು ಸಾರ್ವಜನಿಕ ಸಮಾರಂಭ ಆಗಿರುವಂತೆ ಖಾಸಗಿ ಸಂಭ್ರಮವೂ ಹೌದಲ್ಲವೇ? ಈ ಮದುವೆಯ ಸಂಭ್ರಮಕ್ಕೂ ‘ಬಿಗ್ ಬಾಸ್‌’ ಮನೆ ವೇದಿಕೆ ಆಗಿರುವುದಿದೆ. ಹಿಂದಿಯ ‘ಬಿಗ್‌ ಬಾಸ್‌’ 10ನೇ ಆವೃತ್ತಿ ಮದುವೆಯೊಂದಕ್ಕೆ ಕಲ್ಯಾಣ ಮಂಟಪವಾಯಿತು. 

ಮೊನಾಲಿಸಾ ಎನ್ನುವ ಸ್ಪರ್ಧಿ ಹಾಗೂ ಬೋಜ್‌ಪುರಿ ನಟ ವಿಕ್ರಂ ಸಿಂಗ್ ರಜಪೂತ್‌ ಮದುವೆ ‘ಬಿಗ್‌ ಬಾಸ್‌’ ಮನೆಯಲ್ಲಿ ನಡೆಯಿತು. ಅತಿಥಿಯಾಗಿ ಮನೆಗೆ ಬಂದಿದ್ದ ವಿಕ್ರಂ ಸಿಂಗ್‌ ಹಾಗೂ ಮನೆಯಲ್ಲಿದ್ದ ಮೊನಾಲಿಸಾ ನಡುವಣ ಪ್ರೇಮವನ್ನು ತಿಳಿದ ‘ಬಿಗ್‌ ಬಾಸ್‌’ – ಇಬ್ಬರ ಒಪ್ಪಿಗೆಯ ಮೇರೆಗೆ ಮದುವೆಯನ್ನು ನಡೆಸಿದರು.

ವಧುವರರ ಕೆಲವು ಸಂಬಂಧಿಗಳೂ ಮದುವೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ‘ಬಿಗ್ ಬಾಸ್‌’ ಪಾಲಿಗೆ ಮದುವೆ ಕೂಡ ಜನರಂಜನೆಯ ದಾಳವಾದುದು ಹೀಗೆ.

‘ಬಿಗ್ ಬಾಸ್‌’ ಜನರ ಭಾವನೆಗಳನ್ನು ಕೆರಳಿಸುವ ಯಾವ ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ. ಮನಸ್ಸಿನ ‘ಇಣುಕು’ವ ವ್ಯಸನಕ್ಕೆ ಈ ಷೋ ಸಾಕಷ್ಟು ವ್ಯಂಜನ ಒದಗಿಸುತ್ತದೆ. ನಮ್ಮನ್ನು ನಮಗೆ ಕಾಣಿಸಲು ಹಾಗೂ ನಮ್ಮಂತೆಯೇ ಇತರರನ್ನೂ ಕಾಣಿಸಲು ‘ಬಿಗ್‌ ಬಾಸ್‌’ ಪ್ರಯತ್ನಿಸುತ್ತದೆ. ಹೀಗೆ ನಮ್ಮನ್ನು ನಾವು ನೋಡಿಕೊಂಡು ಸಂಭ್ರಮಿಸುವುದು, ಮೈಮರೆಯುವುದು ಸಾಧ್ಯವಿರುವ ಕಾರಣಕ್ಕೇ ‘ಬಿಗ್ ಬಾಸ್‌’ ಹೆಚ್ಚು ಜನಪ್ರಿಯ. 

ಆರ್ವೆಲ್ ಬಿತ್ತಿದ ಬೀಜ
‘ಬಿಗ್‌ ಬಾಸ್‌’ನ ಮೂಲ ಜಾರ್ಜ್‌ ಆರ್ವೆಲ್‌ನ ‘1984’ ಹೆಸರಿನ ಕಾದಂಬರಿ. 1948ರಲ್ಲಿ ಪ್ರಕಟಗೊಂಡ ಈ ಕಾದಂಬರಿ, ತಾನು ಬದುಕುತ್ತಿರುವ ಸಮಾಜ ಕೆಲವು ದಶಕಗಳ ನಂತರ ಹೇಗಿರಬಹುದು ಎನ್ನುವುದರ ಕುರಿತು ಆರ್ವೆಲ್‌ನ ಊಹೆಯ ಮೇಲೆ ರೂಪುಗೊಂಡ ಕೃತಿ. ಈ ಕಲ್ಪನಾ ಜಗತ್ತಿನಲ್ಲಿ ‘ಬಿಗ್‌ ಬ್ರದರ್‌’ ಎನ್ನುವ ನಿರಂಕುಶ ಅರಸನಲ್ಲಿದ್ದಾನೆ. ಆತನ ಇಚ್ಛೆಯಂತೆ ಪ್ರಜೆಗಳು ನಡೆದುಕೊಳ್ಳಬೇಕಿದೆ.

ಎದುರಾಡಿದವರಿಗೆ, ಆಜ್ಞಾನುವರ್ತಿಗಳಾಗಿ ನಡೆದುಕೊಳ್ಳದವರಿಗೆ ಉಳಿಗಾಲವಿಲ್ಲ (‘ಬಿಗ್ ಬಾಸ್’ ಭಾಷೆಯಲ್ಲಿ ‘ಎಲಿಮಿನೇಷನ್’). ಈ ‘ಬಿಗ್‌ ಬ್ರದರ್‌’ ಕಥಾನಕವೇ ‘ಬಿಗ್‌ ಬಾಸ್‌’ಗೆ ಮೂಲ. ನೆದರ್ಲೆಂಡ್‌ನ ‘ಎಂಡಮಾಲ್‌’ ಈ ಕಾರ್ಯಕ್ರಮವನ್ನು ರೂಪಿಸಿತು. ಮೊದಲಿಗೆ ಡಚ್‌ ಭಾಷೆಯಲ್ಲಿ ಪ್ರಸಾರಗೊಂಡ ‘ಬಿಗ್‌ ಬಾಸ್‌’ ನಂತರ ವಿಶ್ವದ ಬೇರೆ ಬೇರೆ ದೇಶ–ಭಾಷೆಗಳನ್ನು ಆವರಿಸಿಕೊಂಡಿತು.

ಹತಾಶೆಗಳ ಪ್ರಕ್ಷೇಪಣೆಯ ದರ್ಶನ
ಕ್ರಿಕೆಟ್ ಕ್ರೀಡಾಂಗಣದಲ್ಲಿ ನೆರೆದ ಪ್ರೇಕ್ಷಕರನ್ನು ಪದೇ ಪದೇ ಕ್ಯಾಮೆರಾ ತೋರಿಸುವುದನ್ನು ಕಂಡಿದ್ದೇವೆ. ಇದೂ ಅದೇ ಬಗೆಯದ್ದು. ‘ಮ್ಯಾನುಫ್ಯಾಕ್ಚರ್ಡ್ ಎಮೋಷನ್ಸ್’ ಅಥವಾ ‘ಉತ್ಪಾದಿತ ಭಾವನೆಗಳು’ ಎಂದು ಇವನ್ನು ಕರೆಯಬಹುದು. ಸಮೂಹ ಸನ್ನಿ ಸೃಷ್ಟಿಸುವ ಕ್ರಿಯೆ ಇದು. ಸಾಮಾಜಿಕ ಜಾಲತಾಣಗಳು ಕೂಡ ಇಂದು ಜನ ‘ಸ್ಮಾರ್ಟ್ ಆಗದಂತೆ’ ನೋಡಿಕೊಳ್ಳಲಾರಂಭಿಸಿವೆ. ಅದೇ ಜಾಯಮಾನದ ಕಾರ್ಯಕ್ರಮ ‘ಬಿಗ್ ಬಾಸ್’.

ಮನಶ್ಶಾಸ್ತ್ರದಲ್ಲಿ ‘ಪ್ರೊಜೆಕ್ಷನ್’ ಎನ್ನುವ ಒಂದು ಪದವಿದೆ. ಹತಾಶೆಗಳನ್ನು ನಿಯಂತ್ರಿಸಿಕೊಳ್ಳುವ ಸುರಕ್ಷಾ ಪ್ರಕ್ರಿಯೆಗೆ ಇದು ಎಡೆಮಾಡಿಕೊಡುತ್ತದೆ. ಈಗ ‘ಬಿಗ್ ಬಾಸ್’ನಲ್ಲಿ ಇರುವವರಿಗೆ ಹತಾಶೆ ಇರುತ್ತದೆ. ಅದನ್ನು ನೋಡುಗರಿಗೆ ಆಯ್ಕೆಯನ್ನೇ ನೀಡದೆ ವಾಹಿನಿ ನಿಯಂತ್ರಿಸುತ್ತಾ ಹೋಗುತ್ತದೆ. ಇದಕ್ಕೆ ದೊಡ್ಡ ಮಾರ್ಕೆಟ್ ಇದೆ. ಮಾನಸಿಕ ಚಿಕಿತ್ಸೆ ನೀಡುವಾಗ ನಾವು ಇಂಥ ಸುರಕ್ಷಾ ಪ್ರಕ್ರಿಯೆಯನ್ನು ಸ್ವಲ್ಪ ಮಟ್ಟಿಗೆ ಬೆಂಬಲಿಸುತ್ತೇವೆ.

ಯಾಕೆಂದರೆ, ಅದು ಸಮಸ್ಯೆ ಅನುಭವಿಸುತ್ತಿರುವವರ ಮನಸ್ಸಿಗೆ ಹಿತ ನೀಡುತ್ತದೆ. ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಅದು ಮಾರುಕಟ್ಟೆಯ ಚೌಕಟ್ಟಿನೊಳಗೆ ಆಗುತ್ತಿದೆಯಷ್ಟೆ. ಮನಸ್ಸು ನೊಣವಿದ್ದಂತೆ. ಅದು ಕಾಲಿನ ಮೇಲಿನ ಕೀವು ಗಾಯದ ಮೇಲೆಯೇ ಕೂರುವುದು. ಜನಪ್ರಿಯತೆಯನ್ನು ‘ಚೀಪ್’ ಎಂದು ಪ್ರಾಜ್ಞರು ಕರೆದಿರುವುದರಿಂದ ‘ಬಿಗ್ ಬಾಸ್’ ಅದೇ ತಂತ್ರಕ್ಕೆ ಕಟ್ಟುಬಿದ್ದಿರುವ ಕಾರ್ಯಕ್ರಮ.

ಹತಾಶೆಗಳ ಪ್ರಕ್ಷೇಪಣೆಯನ್ನು ಕಾಪಾಡಿಕೊಳ್ಳುವ ಸುರಕ್ಷಾ ಪ್ರಕ್ರಿಯೆ ಎಂದು ಈ ಕಾರ್ಯಕ್ರಮವನ್ನು ನಿಸ್ಸಂಶಯವಾಗಿ ಬಣ್ಣಿಸಬಹುದು. ‘ಮಾಸ್ಟರ್ ಶೆಫ್’ ಕೂಡ ಅಂಥದ್ದೇ ಇನ್ನೊಂದು ಕಾರ್ಯಕ್ರಮ. ಅದನ್ನು ನೋಡುವ ಯುವಕ–ಯುವತಿಯರಿಗೆ ನಮ್ಮ ದೇಶದ ಖಾದ್ಯಗಳ ಪರಿಚಯ ಅಷ್ಟಾಗಿ ಇರುವುದಿಲ್ಲ.
ಪ್ರಕ್ಷೇಪಣೆ ಹಾಗೂ ಸುರಕ್ಷಾ ಪ್ರಕ್ರಿಯೆಗೆ ಮಾರುಕಟ್ಟೆ ಇರುವುದರ ಫಲವಾಗಿ ‘ಬಿಗ್ ಬಾಸ್’ ಇಷ್ಟೆಲ್ಲ ಮಂಥನಕ್ಕೆ ಒಳಪಡುತ್ತಿದೆಯಷ್ಟೆ.
-ಎಂ. ಶ್ರೀಧರಮೂರ್ತಿ
ಪ್ರಾಧ್ಯಾಪಕರು ಮತ್ತು ಆಪ್ತಸಮಾಲೋಚಕರು

*
ಸ್ಪರ್ಧಿಗಳ ಪಾಲಿಗೆ ‘ಬಿಗ್‌ ಬಾಸ್’ ವೈಯಕ್ತಿಕವಾಗಿ ತುಂಬಾ ಆಳ ಪ್ರಭಾವ ಬೀರುತ್ತದೆ. ತಮ್ಮ ವೈಯಕ್ತಿಕ ವಿಚಾರಗಳ ಕುರಿತು ಯೋಚಿಸಲು ಬೇಕಾದಷ್ಟು ಸಮಯ ಸಿಕ್ಕುತ್ತದೆ. ಮನೆಯೊಳಗೆ ಒಬ್ಬರಿಗೊಬ್ಬರನ್ನು ಹೋಲಿಸಿ ನೋಡುವ ಪ್ರವೃತ್ತಿಯಿರುವುದರಿಂದ ಟಾಸ್ಕ್‌ಗಳಲ್ಲಿ ಪ್ರತಿಯೊಬ್ಬರೂ ಗೆಲ್ಲುವ ಪ್ರಯತ್ನ ಮಾಡುತ್ತಾರೆ. ಅಂಥ ಸಂದರ್ಭದಲ್ಲಿ ತಮ್ಮ ಶಕ್ತಿ–ಮಿತಿಯನ್ನು ಕಂಡುಕೊಳ್ಳುತ್ತಾರೆ. ತಾವು ಯಾವ ವಿಭಾಗದಲ್ಲಿ ಇನ್ನಷ್ಟು ಪ್ರಬಲವಾಗಿ ಬೆಳೆಯಬೇಕು ಎಂದು ಕಂಡುಕೊಳ್ಳಲು, ತಮ್ಮನ್ನು ತಾವು ಅರ್ಥ ಮಾಡಿಕೊಳ್ಳಲು ಒಳ್ಳೆಯ ಸಮಯ ಅದು.
–ವಿಜಯ್ ರಾಘವೇಂದ್ರ, ಕನ್ನಡದ ‘ಬಿಗ್‌ಬಾಸ್’ ಮೊದಲ ಆವೃತ್ತಿಯ ವಿಜೇತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT