ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಹೆಯಿಂದ ಹೊರಬಂದ ಹೊಸ ಪಿತಾಮಹ!

Last Updated 28 ಜನವರಿ 2017, 19:30 IST
ಅಕ್ಷರ ಗಾತ್ರ

ಪ್ರಸ್ತುತ ಏಕೈಕ ಮಾನವ ಪ್ರಭೇದ ‘ಹೋಮೋ ಸೇಪಿಯನ್‌’. ಅಂದರೆ ನಮ್ಮ ಈವರೆಗಿನ ವಿಕಸನದ ಹಾದಿ ಸುದೀರ್ಘ ಮತ್ತು ಸಂಕೀರ್ಣ ಎಂಬುದು ಸುಸ್ಪಷ್ಟ. ಪೂರ್ವ ಮಾನವರ, ಆದಿ ಮಾನವರ ಮಾನವ ಪಿತಾಮಹರ ಹೇರಳ ಅವಶೇಷಗಳ ಆಧಾರದಿಂದ ಮಾನವೇತಿಹಾಸದ ಈ ಅಂಶಗಳು ನಿಚ್ಚಳ.

ಅಂತಹ ಆಕರಗಳ ಅಧ್ಯಯನದಿಂದ ಬಹುಮಟ್ಟಿಗೆ ನಿರ್ಧಾರವಾಗಿರುವಂತೆ ಮಾನವ ವಂಶ ಮೂಲತಃ ವಾನರರಿಂದ–ವಿಶೇಷವಾಗಿ ಚಿಂಪಾಂಜಿಗಳಿಂದ– ಪ್ರತ್ಯೇಕವಾಗಿ ಕವಲೊಡೆದದ್ದು ಈಗ್ಗೆ 5.5 ರಿಂದ 6.5 ದಶಲಕ್ಷ ವರ್ಷ ಹಿಂದೆ. ಹಾಗೆ ಮೊದಲಿಗೆ ಮೈದಳೆದ ಮಾನವ ರೂಪಿಗಳು ದೈಹಿಕವಾಗಿ ವಾನರ ಮತ್ತು ಮಾನವರ ಸಂಕರದಂತೆ ಸೃಷ್ಟಿಗೊಂಡು ಕ್ರಮೇಣ ಹಂತ ಹಂತವಾಗಿ ಮಾರ್ಪಟ್ಟು, ರೂಪಾಂತರಗೊಂಡು ಕಡೆಗೆ ಪರಿಪೂರ್ಣ ಮಾನವರಾಗಿ ವಿಕಸನಗೊಂಡಿರುವುದು ಪಳೆಯುಳಿಕೆಗಳಿಂದ ಸೃಷ್ಟವಾಗಿದೆ.

ಈಗ್ಗೆ 5.2 ದಶಲಕ್ಷ ವರ್ಷಗಳ ಹಿಂದೆ ಅವತರಿಸಿದ ‘ಆರ್ಡಿಪಿತೀಕಸ್‌ ಕಡಬ್ಬಾ’ ಮತ್ತು ಆ ನಂತರದ ಈಗ್ಗೆ 4.4 ದಶಲಕ್ಷ ವರ್ಷ ಹಿಂದಿನ ಕಾಲದಲ್ಲಿದ್ದ ‘ಆರ್ಡಿಪಿತೀಕಸ್‌ ರ್‍ಯಾಮಿಡಸ್‌’ (ಚಿತ್ರ–1) ಪ್ರಭೇದಗಳು ಮಾನವ ವಂಶದ ಆದ್ಯ ಪ್ರವರ್ತಕ ಪ್ರಭೇದಗಳೆಂದು– ಹಾಗೆಂದರೆ ನಮ್ಮ ಮೂಲ ಪಿತಾಮಹರೆಂದು ಮಾನವಶಾಸ್ತ್ರಜ್ಞರು ನಿರ್ಧರಿಸಿದ್ದಾರೆ.

‘ಆರ್ಡಿಪಿತೀಕಸ್‌ ರ್‍ಯಾಮಿಡಸ್‌’ನಿಂದ ಮುನ್ನಡೆದ ಮಾನವ ವಂಶದಲ್ಲಿ ಈಗ್ಗೆ ಮೂರುವರೆ ದಶಲಕ್ಷ ವರ್ಷ ಹಿಂದಿನ ಸುಮಾರಿಗೆ ‘ಅಸ್ಟ್ರಲೋಪಿತೀಕಸ್‌ ಅಫರೆನ್ಸಿಸ್‌’ (ಚಿತ್ರ–2,8,11) ಮತ್ತು ಅದರ ಸರಿಸುಮಾರು ಸಮಕಾಲೀನ ‘ಅಸ್ಟ್ರಲೋಪಿತೀಕಸ್‌ ಗಾರ್ಹಿ’ (ಚಿತ್ರ–3) ಪ್ರಭೇದಗಳು ಜನ್ಮ ತಳೆದುವು.

ಅಲ್ಲಿಂದ ಮುಂದೆ ಈಗ್ಗೆ 1.9 ದಶಲಕ್ಷ ವರ್ಷ ಹಿಂದೆ ‘ಹೋಮೋ ಇರೆಕ್ಟಸ್‌’ ಪ್ರಭೇದ (ಚಿತ್ರ–5,10,13) ಮತ್ತು ಅದರದೇ ಉಪಪ್ರಭೇದಗಳಂತಿದ್ದ ‘ಹೋಮೋ ಹ್ಯಾಬಿಲಿಸ್‌’, ‘ಹೋಮೋ ರುಡಾಲ್ಫೆನ್ಸಿಸ್‌’ ಮತ್ತು ‘ಹೋಮೋ ಎರ್ಗಾಸ್ಟರ್‌’ (ಚಿತ್ರ–14) ಸೃಷ್ಟಿಗೊಂಡುವು.

ಹೋಮೋ ಇರೆಕ್ಟಸ್‌ ನಂತರ ಕ್ಷಿಪ್ರ ಅಂತರಗಳಲ್ಲಿ ‘ಹೋಮೋಹೈಡೆಲ್‌ಬರ್ಗೆನ್ಸಿಸ್‌’, ‘ಹೋಮೋ ನಿಯಾಂಡರ್‌ ಥಾಲೆನ್ಸಿಸ್‌ (ಚಿತ್ರ–4)  ಮತ್ತು ಕ್ರೋಮ್ಯಾನನ್‌ ಪ್ರಭೇದಗಳು (ಚಿತ್ರ–6) ಬಂದ ನಂತರ ಅವತರಿಸಿ, ಜಗವನ್ನೆಲ್ಲ ಆಕ್ರಮಿಸಿರುವ ಈಗಿನ ಏಕೈಕ ಪ್ರಭೇದ ‘ಹೋಮೋಸೇಪಿಯನ್ಸ್‌’ – ಅದೇ ನಾವು.

ವಿಪರ್ಯಾಸ ಏನೆಂದರೆ ಈ ವರೆಗೆ ಪತ್ತೆಯಾಗಿರುವ ನಮ್ಮ ಪಿತಾಮಹರ ವಿಕಸನದ ಸುದೀರ್ಘ ಸರಪಳಿಯಲ್ಲಿ ಬಹು ಮಹತ್ವದ ಭಾರೀ ಕೊಂಡಿಯೊಂದು ಲಭ್ಯವಾಗದೆ ತೀವ್ರ ಗೋಜಲೊಂದು ಸೃಷ್ಟಿಗೊಂಡಿದೆ.

‘ಹೋಮಿನಿನ್‌’ಗಳ, ಎಂದರೆ ನಮ್ಮ ಪಿತಾಮಹ ಪ್ರಭೇದಗಳ ಪರಮ ಪ್ರಧಾನ ಮತ್ತು ನಿರ್ಣಾಯಕ ಲಕ್ಷಣವಾದ ‘ದ್ವಿಪಾದಿತ್ವ’ (ಎಂದರೆ ಎರಡೇ ಕಾಲುಗಳ ಮೇಲೆ ನಿಲ್ಲಬಲ್ಲ, ನಡೆದಾಡಬಲ್ಲ ಸಾಮರ್ಥ್ಯ) ಬಹುಮಟ್ಟಿಗೆ ಪರಿಪೂರ್ಣಾವಾಗಿ ಮೈಗೂಡಿದ್ದ, ಈಗ್ಗೆ 3.5 ದಶಲಕ್ಷ ವರ್ಷ ಹಿಂದಿನ ‘ಅಸ್ಸ್ರಲೋಪಿತೀಕಸ್‌ ಅಫರೆನ್ಸಿಸ್‌’ ಪ್ರಭೇದದ ನಂತರ ಈಗ್ಗೆ 1.9 ದಶಲಕ್ಷ ವರ್ಷ ಹಿಂದಿನ ‘ಹೋಮೋ ಇರೆಕ್ಟಸ್‌’ ಪ್ರಭೇದದವರೆಗೆ ಸುಮಾರು ಹದಿನಾರು ಲಕ್ಷ ವರ್ಷ ಅವಧಿಯ ನಡುವಣ ಯಾವುದೇ ಕಾಲದ ಬೇರಾವುದೇ ನಮ್ಮ ಪಿತಾಮಹರ ಅವಶೇಷ ಒಂದೂ ಸಿಕ್ಕಿಲ್ಲ!

ಇದು ಅತ್ಯಂತ ಗೋಜಲಿನ ವಿಷಯ ಏಕೆಂದರೆ ‘ಅಸ್ಸ್ರಲೋಪಿತೀಕಸ್‌ ಅಫರೆನ್ಸಿಸ್‌’ ಸಂಪೂರ್ಣ ದ್ವಿಪಾದಿಯಾಗಿತ್ತಾದರೂ ಅದು ‘ಬುದ್ಧಿವಂತಿಕೆ’ಯ ಯಾವ  ಲಕ್ಷಣವನ್ನೂ ಹೊಂದಿರಲಿಲ್ಲ. ಬೆಂಕಿಯ ಬಳಕೆ ಆಯುಧ–ಉಪಕರಣಗಳ ತಯಾರಿಯ–ಬಳಕೆಯ ಯಾವುದೇ ಸಾಮರ್ಥ್ಯವೂ ಆ ಪ್ರಭೇದಕ್ಕೆ ಪ್ರಾಪ್ತವಾಗಿರಲಿಲ್ಲ.

ತದ್ವಿರುದ್ಧವಾಗಿ ‘ಹೋಮೋ ಇರೆಕ್ಟಸ್‌’ ತುಂಬ ಬುದ್ಧಿವಂತ ಆಗಿತ್ತು. ಬೆಂಕಿಯನ್ನು ಬಳಸುವುದೇ ಅಲ್ಲದೆ ನಾನಾವಿಧ ಶಿಲಾಯುಧಗಳನ್ನೂ ಇತರ ಬೇಟೆ ಸಾಧನಗಳನ್ನೂ ತಯಾರಿಸುವ ಮತ್ತು ಉಪಯೋಗಿಸುವ ಕೌಶಲ್ಯಗಳು ಅದಕ್ಕೆ ಕರಗತವಾಗಿತ್ತು (ಚಿತ್ರ–7ರ ಸಾಲಿನ ಮೂರೂ ಚಿತ್ರಗಳನ್ನು ಗಮನಿಸಿ); ಅದಕ್ಕೆಲ್ಲ ಅವಶ್ಯವಾದ ದೊಡ್ಡ ಮೆದುಳನ್ನೂ ಆ ಪ್ರಬೇದ ಪಡೆದಿತ್ತು!

ಅಸ್ಟ್ರಲೋಪಿತೀಕಸ್‌ ಅಫರೆನ್ಸಿಸ್‌ ನಂತಹ ಪುರಾತನ ಮಾನವ ಪ್ರಭೇದವೊಂದು ನೇರವಾಗಿ, ಇದ್ದಕ್ಕಿದ್ದಂತೆ ಹೋಮೋ ಇರೆಕ್ಟಸ್‌ನಂತಹ ಬುದ್ಧಿವಂತ, ಕೌಶಲ್ಯಯುತ ಪ್ರಭೇದವಾಗಿ ವಿಕಸನಗೊಳ್ಳುವುದು ನಿಸರ್ಗನಿಯಮಗಳ ಪ್ರಕಾರ ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟ ಹೌದಲ್ಲ? ಹಾಗೆಂದರೆ ಈ ಎರಡೂ ಮಾನವ ಪಿತಾಮಹರ ನಡುವಣ ಕಾಲಾವಧಿಯಲ್ಲಿ ಇನ್ನೂ ಒಂದೆರಡಾದರೂ ಪ್ರಭೇದಗಳಿದ್ದಿರಲೇಬೇಕು ತಾನೇ?

ವಿಸ್ಮಯ ಏನೆಂದರೆ ಅಂತಹದೊಂದು ಪ್ರಭೇದದ ರೋಮಾಂಚನಕಾರೀ ಪತ್ತೆ ಅತ್ಯಂತ ಅನಿರೀಕ್ಷಿತವಾಗಿ, ಅತ್ಯಂತ ಆಕಸ್ಮಿಕವಾಗಿ ತೀರ ಇತ್ತೀಚೆಗೆ ಸಂಭವಿಸಿದೆ! ‘ಮಾನವ ವಂಶದ ತೊಟ್ಟಿಲು’ ಎಂದೇ ಹೆಸರಾಗಿರುವ ಆಫ್ರಿಕ ಖಂಡದ, ‘ದಕ್ಷಿಣ ಆಫ್ರಿಕ’ ದೇಶದ ಸುಪ್ರಸಿದ್ಧ ಜೋಹಾನ್ಸ್‌ ಬರ್ಗ್‌ ನಗರದಿಂದ ನಲವತ್ತೈದು ಕಿ.ಮೀ. ದೂರದಲ್ಲಿ ‘ರೈಸಿಂಗ್‌ ಸ್ಟಾರ್‌’ ಎಂಬ ಹೆಸರಿನ ಸುಪ್ರಸಿದ್ಧ ಗುಹಾವ್ಯೂಹವೊಂದಿದೆ. ಅದರೊಳಗಿನ ಎಲ್ಲ ಗುಹಾವಿಶೇಷಗಳ ಅನ್ವೇಷಣೆಯನ್ನು ಇಬ್ಬರು ಹವ್ಯಾಸೀ ಸಾಹಸಿಗಳು ಕೈಗೊಂಡಿದ್ದರು. 

 ಇಸವಿ 2013ರ ಸೆಪ್ಟೆಂಬರ್‌ 13 ರಂದು ಈ ಗುಹಾನ್ವೇಷಕರಿಗೆ ಆ ಗುಹಾವ್ಯೂಹದ ಭಾರೀ ಆಳದ ಅತ್ಯಂತ ಕಿರಿದಾದ ಹಾದಿಯಾಚಿನ ಕೊಠಡಿಯೊಂದರಲ್ಲಿ ಮನುಷ್ಯರ ಮೂಳೆಗಳ ರಾಶಿ ಗೋಚರವಾಯಿತು. ಆ ಸುದ್ದಿ ಮತ್ತು ಚಿತ್ರಗಳನ್ನು ಕಂಡೊಡನೆ ಆ ಮೂಳೆಗಳನ್ನು ಹೊರತರುವ ಕಾರ್ಯವನ್ನು ನಡೆಸಿದ ಮಾನವ ಶಾಸ್ತ್ರಜ್ಞರ ತಂಡ ಅಲ್ಲಿಂದ ಮನುಷ್ಯರಿಗೆ ಸೇರಿದ ಒಟ್ಟು 1550 ಅವಶೇಷಗಳನ್ನು ಸಂಗ್ರಹಿಸಿದರು.

 ‘ತಲೆ ಬುರುಡೆಗಳು, ದವಡೆಗಳು,, ಹಲ್ಲುಗಳು, ಪಾದಗಳು ಇತ್ಯಾದಿ.’ ಅವನ್ನೆಲ್ಲ ಜೋಡಣೆಗೊಳಿಸಿದೊಡನೆ ತಜ್ಞರಿಗೆ ಅರಿವಾದ ಪರಮಾಶ್ಚರ್ಯ ಏನೆಂದರೆ ಆ ಮನುಷ್ಯರದು ಆ ವರೆಗೂ ಅಜ್ಞಾತವಾಗಿದ್ದ, ಸಂಪೂರ್ಣ ವಿಭಿನ್ನವಾದ ಪ್ರಭೇದವಾಗಿತ್ತು. ಹಾಗೆಂದರೆ ಹೊಸದೊಂದು ನಮ್ಮ ಪಿತಾಮಹ ಪ್ರಭೇದ ಪತ್ತೆಯಾಗಿತ್ತು; ಗುಹೆಯಿಂದ ಹೊರಬಂದಿತ್ತು. ‘ರೈಸಿಂಗ್‌ ಸ್ಟಾರ್‌’ ಗುಹೆಯಲ್ಲಿ ಪತ್ತೆಯಾದ ಈ ಪಿತಾಮಹ ಪ್ರಭೇದಕ್ಕೆ ‘ಹೋಮೋ ನಲೆಡಿ’ ಎಂಬ ಅಭಿಧಾನವನ್ನೂ ನೀಡಲಾಯಿತು.

ಪತ್ತೆಯಾದಾಗಿನಿಂದಲೂ ತೀವ್ರ ಅಧ್ಯಯನಕ್ಕೆ ಒಳಗಾಗಿರುವ ಈ ನಮ್ಮ ಪಿತಾಮಹ ‘ಹಫಮೋ ನಲೆಡಿ’ಯ ಪ್ರಧಾನ ವೈಶಿಷ್ಟ್ಯಗಳು ಮತ್ತು ಮಾನವ ವಿಕಾಸದ ಹಾದಿಯಲ್ಲಿ ಅದರ ಮಹತ್ವಗಳು ಏನೆಂದು ಗಮನಿಸಿ:

* ‘ಹೋಮೋ ನಲೆಡಿ’ಯ ತಲೆ ಬುರುಡೆಯ ಆಕಾರ, ಮಿದುಳಿನ ಗಾತ್ರ ಮತ್ತು ಮುಖಲಕ್ಷಣಗಳು (ಚಿತ್ರ–9) ಅಸ್ಟ್ರಲೋಪಿತೀಕಸ್‌ ಅಫರೆನ್ಸಿಸ್‌ಗಿಂತ ಹೋಮೋ ಇರೆಕ್ಟಸ್‌ ಅನ್ನೇ ಹೆಚ್ಚು ಹೋಲುತ್ತದೆ (ಆಸ್ಟ್ರಲೋಪಿತೀಕಸ್‌ ಅಫರೆನ್ಸಿಸ್‌, ಹೋಮೋ ನಲೆಡಿ ಮತ್ತು ಹೋಮೋ ಇರೆಕ್ಟಸ್‌ ಪ್ರಭೇದಗಳ ಶರೀರಗಳ ಹೋಲಿಕೆಯನ್ನು ಚಿತ್ರ–11,12,13 ಗಮನಿಸಿ). ಹಾಗೆಂದರೆ ಈ ಪ್ರಭೇದ ಅ. ಅಫರೆನ್ಸಿಸಸ್ನ ನಂತರದ ಆದರೆ ಹೋಮೋ ಇರೆಕ್ಟಸ್‌ನ ಪೂರ್ವದ ಪ್ರಭೇದವೇ ಆಗಿದ್ದಿರಬೇಕು.

* ಹೋಮೋ ನಲೆಡಿಯ ಹಸ್ತ, ಮಣಿಕಟ್ಟು, ಹೆಬ್ಬೆರಳ ರಚನೆ ಅ. ಅಫರೆನ್ಸಿಸ್‌ಗಿಂತ ಭಿನ್ನವಾಗಿದೆ; ಆಯುಧ–ಉಪಕರಣಗಳ ಬಳಕೆಗೆ ಸೂಕ್ತವಾಗುವಂತಿದೆ. ಕಾಲುಗಳು ಮತ್ತು ತೋಳುಗಳ ದೊಡ್ಡ ಮೂಳೆಗಳು ತೆಳ್ಳಗಿದ್ದು ಉದ್ದವಾಗಿದ್ದು ಎರಡು ಕಾಲುಗಳ ನಿಲುವು ನಡಿಗೆಗಳಿಗೆ ಅ. ಅಫರೆನ್ಸಿಸ್‌ಗಿಂತ ಹೆಚ್ಚು ಪ್ರಶಸ್ತವಾಗಿವೆ; ಹೋಲೋ ಇರೆಕ್ಟಸ್‌ ಪ್ರಭೇದವನ್ನೇ ಹೆಚ್ಚು ಹೋಲುವಂತಿವೆ.

* ಹೋಮೋ ನಲೆಡಿಯ ಶರೀರದ ಮೇಲಾರ್ಧ (ಎಂದರೆ ಸೊಂಟದಿಂದ ಮೇಲಿನ ಭಾಗ) ಹೋಮೋ ಇರೆಕ್ಟಸ್‌ಗಿಂತ ಹೆಚ್ಚು ಪ್ರಾಚೀನ ವಿನ್ಯಾಸವನ್ನೂ, ಅದರ ಶರೀರದ ಕೆಳ ಅರ್ಧ ಹೋಮೋ ಇರೆಕ್ಟಸ್‌ಗೆ ಹೋಲುವ ವಿನ್ಯಾಸವನ್ನೂ ಪಡೆದಿವೆ. ಹಾಗಾಗಿ ಹೋಮೋ ನಲೆಡಿ ಪ್ರಭೇದ ಹೋಮೋ ಇರೆಕ್ಟಸ್‌ಗಿಂತ ಸ್ವಲ್ಪ ಪ್ರಾಚೀನ–ಕಾಲದ್ದೆಂಬುದು ನಿಸ್ಸಂಶಯ.

* ಹೋಮೋ ನಲೆಡಿಯ ಕಾಲದ ನಿಖರ ನಿರ್ಧಾರ ಇನ್ನೂ ಸಾಧ್ಯವಾಗಿಲ್ಲವಾದರೂ ಅದರ ಅಸ್ಥಿಪಂಜರದ ರಚನಾ ಸ್ವರೂಪದ ಪರೋಕ್ಷ ಆಧಾರಗಳಿಂದ ಈ ಪ್ರಭೇದದ ಕಾಲ ಈಗ್ಗೆ ಎರಡರಿಂದ ಎರಡೂವರೆ ದಶಲಕ್ಷ ವರ್ಷ ಹಿಂದಿನದು ಎಂದು ಅಂದಾಜಿಸಲಾಗಿದೆ. ಈ ನಿರ್ಧಾರ ಸರಿಯಿದ್ದರೆ ಈ ಪ್ರಭೇದವೇ ಅ. ಅಫರೆನ್ಸಿಸ್‌ ಮತ್ತು ಹೋಮೋ ಇರೆಕ್ಟಸ್‌ಗಳ ನಡುವಣ ಕೊಂಡಿ ಎಂಬುದು ಸಾಬೀತಾಗುತ್ತದೆ.

ಅದೆಲ್ಲ ಏನೇ ಇರಲಿ, ‘ಹೋಮೋ ನಲೆಡಿ’ ಈ ವರೆಗೂ ಅಜ್ಞಾತವಾಗಿದ್ದ ನಮ್ಮದೇ ಹೊಸದೊಂದು ಪಿತಾಮಹ ಎಂಬುದಂತೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT