ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ರ ನಾರ್ಯಸ್ತು ಪೂಜ್ಯಂತೆ...!

ಕಟಕಟೆ
Last Updated 28 ಜನವರಿ 2017, 19:30 IST
ಅಕ್ಷರ ಗಾತ್ರ
ಜಪ್ಪಯ್ಯ ಎಂದರೂ ಒಂದಾಗಿ ಬಾಳಲು ಸಾಧ್ಯವೇ ಇಲ್ಲ ಎನ್ನುವ ಸಂದರ್ಭಗಳಲ್ಲಿ, ದಂಪತಿ ಪೈಕಿ ಒಬ್ಬರು ಅಥವಾ ಕೆಲವೊಮ್ಮೆ ಇಬ್ಬರೂ ಕೋರ್ಟ್‌ಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುವುದು ಮಾಮೂಲು. ಈ ಬಗ್ಗೆ ನ್ಯಾಯಾಧೀಶರಿಗೆ ಅರಿವಿದ್ದರೂ ಕಾನೂನಿನಲ್ಲಿ ಹೇಳಿರುವ ಕಾರಣ, ದಂಪತಿಯನ್ನು ಕರೆದು ರಾಜಿಸಂಧಾನ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಮೊದಲೇ ಮನಸ್ಸನ್ನು ಗಟ್ಟಿಮಾಡಿಕೊಂಡು ಬಂದ ದಂಪತಿ ರಾಜಿಗೆ ಸುಲಭದಲ್ಲಿ ಒಪ್ಪುವುದಿಲ್ಲ. ಇಬ್ಬರ ಪೈಕಿ ಒಬ್ಬರು ರಾಜಿಗೆ ಸ್ವಲ್ಪ ಮನಸ್ಸು ಮಾಡಿದರೆ, ಇನ್ನೊಬ್ಬರ ಮನಸ್ಸನ್ನು ಓಲೈಸುವ ಪ್ರಯತ್ನ ನಡೆಯುತ್ತದೆ. ಆದರೆ ಇದು ಸಾಧ್ಯವೇ ಇಲ್ಲದಾಗ ಇಬ್ಬರ ಅನುಮತಿ ಮೇರೆಗೆ  ಕೋರ್ಟ್‌ಗಳು ವಿಚ್ಛೇದನ ಆದೇಶ ಹೊರಡಿಸುತ್ತವೆ. ಇದು ದಿನನಿತ್ಯ ಕೌಟುಂಬಿಕ ಕೋರ್ಟ್‌ಗಳಲ್ಲಿ ಕಾಣುವ ದೃಶ್ಯ.
 
ಆದರೆ ಇಲ್ಲಿ ಹೇಳಹೊರಟಿರುವ ಪ್ರಕರಣ ಸ್ವಲ್ಪ ವಿಭಿನ್ನವಾಗಿದೆ. ನನ್ನ ವೃತ್ತಿ ಜೀವನದಲ್ಲಿ ಕಂಡ ಅಪರೂಪದ ವಿಚ್ಛೇದನ ಪ್ರಕರಣ ಇದು. ಈ ಪ್ರಕರಣದಲ್ಲಿ ಕೋರ್ಟ್‌ನಲ್ಲಿ ರಾಜಿಸಂಧಾನ ನಡೆದಿಲ್ಲ. ಏಕೆಂದರೆ ಮಾಡಿದ ತಪ್ಪಿಗೆ ಹೆದರಿದ ಗಂಡ ಕೋರ್ಟ್‌ಗೆ ಬರಲೇ ಇಲ್ಲ. ಆದ್ದರಿಂದ ಆತನ ಅನುಪಸ್ಥಿತಿಯಲ್ಲಿಯೇ ವಿಚ್ಛೇದನ ಆಯಿತು. ವಿಚ್ಛೇದನವಾದ ಒಂದೂವರೆ ವರ್ಷದ ನಂತರ ರಾಜಿ ಸಂಧಾನ ನಡೆಯಿತು. ಆಗ ಆದದ್ದೇನು? ಎರಡು ಮದುವೆಯ ‘ಭಾಗ್ಯ’ ಪಡೆದಿದ್ದ ಈ ದಂಪತಿಯ ಬಾಳಲ್ಲಿ ನಡೆದಿದ್ದೇನು? 
 
ಬೆಂಗಳೂರಿನ ಲತಾ ಮಧ್ಯಮ ವರ್ಗದ ಕುಟುಂಬದವರು. ಈಕೆ ಭರತನಾಟ್ಯ ಕಲಾವಿದೆ. ಪದವಿ ಪಡೆದ ನಂತರ ನೃತ್ಯ ತರಬೇತಿ ನೀಡುವುದನ್ನು ವೃತ್ತಿಯಾಗಿಸಿಕೊಂಡಿದ್ದರು.
 
ಆರ್ಥಿಕ ಸಂಕಷ್ಟದಿಂದಾಗಿ ತಾವು ಅನುಭವಿಸಿದ ನೋವು–ಕಷ್ಟ ತಮ್ಮ ಮಕ್ಕಳಿಗೂ ಬರಬಾರದು ಎಂದು ಪೋಷಕರು ಅಂದುಕೊಳ್ಳುವುದು ಸಹಜ.  ಅದಕ್ಕಾಗಿ ಹೆಣ್ಣು ಮಗಳು ಇದ್ದರೆ ಆಕೆ ಶ್ರೀಮಂತರ ಮನೆಯ ಸೊಸೆಯಾಗಿ ಹೋಗಲಿ ಎಂದು ಇಷ್ಟಪಡುತ್ತಾರೆ ಅಪ್ಪ–ಅಮ್ಮ. ಶ್ರೀಮಂತರ ಮನೆ ಸೇರಿದರೆ ತಮ್ಮ ಮಗಳು ಸುಖವಾಗಿ ಬಾಳುತ್ತಾಳೆ ಎನ್ನುವ ನಂಬಿಕೆ ಅವರದ್ದು. ಅದೇ ರೀತಿಯ ಕನಸು ಕಂಡರು ಲತಾ ಪೋಷಕರು.
 
ಮಗಳಿಗಾಗಿ ಶ್ರೀಮಂತರ ಮನೆಯ ಹುಡುಕಾಟ ನಡೆಸಿದರು. ಆಗ ಅವರಿಗೆ ಕಂಡದ್ದು ಕೊಯಮತ್ತೂರಿನ ಶ್ರೀಮಂತ ಕುಟುಂಬದ ಕಬ್ಬಿಣದ ವ್ಯಾಪಾರಿ ಅಮಿತ್‌. ಪರಸ್ಪರ ಒಪ್ಪಿಕೊಂಡ ನಂತರ 2009ರಲ್ಲಿ ಇಬ್ಬರ ಮದುವೆ ನಡೆಯಿತು. ಶ್ರೀಮಂತರ ಮನೆಗೆ ಮಗಳನ್ನು ಕೊಡುವುದು ಎಂದರೆ ಸುಮ್ಮನೆಯೇ? ಮದುವೆಯ ವೇಳೆ ತಮ್ಮ ಕೈಲಾದಷ್ಟು ವರದಕ್ಷಿಣೆಯನ್ನೂ ನೀಡಿದರು ಲತಾ ಅವರ ಪೋಷಕರು. ಗಂಡಿನ ಮನೆಯವರು ತೃಪ್ತರಾಗುವಷ್ಟರ ಮಟ್ಟಿಗೆ ಮದುವೆ ಕಾರ್ಯವನ್ನೂ ನೆರವೇರಿಸಿದ್ದರು.
 
ಮದುವೆಯ ನಂತರ ಗಂಡನ ಮನೆಗೆ ಅಂದರೆ ಕೊಯಮತ್ತೂರಿಗೆ ಹೋದರು ಲತಾ. ಇನ್ನೂ ಹೊಸ ಮನೆಗೆ ಹೊಂದಿಕೊಳ್ಳುವಷ್ಟರಲ್ಲಿಯೇ ಅಲ್ಲಿಯ ಪರಿಸರ ನೋಡಿ ಕಂಗೆಟ್ಟು ಹೋದರು ಲತಾ. ಸಂಪ್ರದಾಯಸ್ಥ ಮನೆಯಲ್ಲಿ ಹುಟ್ಟಿದ ಅವರಿಗೆ ಅಲ್ಲಿಗೆ ಹೋದಾಗ ದಿಗ್ಭ್ರಮೆಯಾಯಿತು. ಏಕೆಂದರೆ ಆಕೆಯ ಪತಿ ಅಮಿತ್‌ ಮಾತ್ರವಲ್ಲದೆ ಅವರ ಕುಟುಂಬದ ಎಲ್ಲರೂ ಮನೆಯಲ್ಲಿಯೇ ಪಾರ್ಟಿ ಮಾಡುತ್ತಿದ್ದರು. ಮದ್ಯ ಸೇವಿಸುತ್ತಿದ್ದರು. ಅಮಿತ್‌ ಅವರ ಸ್ನೇಹಿತರು ಸದಾ ಮನೆಯಲ್ಲಿ ತುಂಬಿರುತ್ತಿದ್ದರು, ಯಾವಾಗಲೂ ಕುಡಿದ ಅಮಲಿನಲ್ಲಿಯೇ ಇರುತ್ತಿದ್ದರು. ಇದನ್ನು ನೋಡಿ ಲತಾ ಅವರು ಸುಸ್ತಾಗಿ ಹೋದರು. ಸಾಲದು ಎಂಬುದಕ್ಕೆ ಕುಡಿದಾಗ ಅಮಿತ್‌ ಹಾಗೂ ಆತನ ತಂದೆ–ತಾಯಿ ವರದಕ್ಷಿಣೆಯ ನೆಪವೊಡ್ಡಿ ಲತಾ ಅವರಿಗೆ ವಿಪರೀತ ಹಿಂಸೆ ಕೊಡಲು ಶುರುವಿಟ್ಟುಕೊಂಡರು. ಇದು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು.
 
ಈ ದೌರ್ಜನ್ಯ ಲತಾ ಅವರಿಗೆ ಅಸಹನೀಯ ಎನ್ನಿಸತೊಡಗಿತು. ದೌರ್ಜನ್ಯವನ್ನು ಪ್ರತಿಭಟಿಸಿದಾಗ ಆಕೆಯನ್ನು ಉಪವಾಸ ಇಡುತ್ತಿದ್ದರು. ಹೊಡೆಯುತ್ತಿದ್ದರು. ಅಕ್ಕಪಕ್ಕದ ಮನೆಯವರಿಗೆ ದೌರ್ಜನ್ಯದ ವಿಷಯ ತಿಳಿಸಿಬಿಟ್ಟಾರು ಎನ್ನುವ ಕಾರಣಕ್ಕೆ ಹೊರಗೆ ಹೋಗಲೂ ಬಿಡುತ್ತಿರಲಿಲ್ಲ. ಒಂದು ರೀತಿಯಲ್ಲಿ ಮನೆಯಲ್ಲಿಯೇ ಬಂದಿಯಾದರು ಲತಾ. ಇನ್ನು ತಾವು ಇಲ್ಲಿಯೇ ಇದ್ದರೆ ಎಲ್ಲರೂ ಸೇರಿ ತಮ್ಮನ್ನು ಕೊಂದೇ ಬಿಡುತ್ತಾರೆ ಎಂದು ಲತಾ ಅವರಿಗೆ ಅನಿಸತೊಡಗಿತು.
 
ಅದೊಂದು ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಮನೆ ಬಿಟ್ಟು ಬೆಂಗಳೂರಿನ ಬಸ್ಸು ಹತ್ತಿ ಬಂದೇ ಬಿಟ್ಟರು ಲತಾ. ದೈಹಿಕ ಹಾಗೂ ಮಾನಸಿಕವಾಗಿ ನೊಂದು ಬೆಂದು ಹೋಗಿದ್ದ ಅವರಿಗೆ ಪೋಷಕರು ವೈದ್ಯಕೀಯ ಚಿಕಿತ್ಸೆಯನ್ನು  ಕೊಡಿಸಿದರು. ಅವರು ಹುಷಾರಾದ ಮೇಲೆ ಘಟನೆಯ ಬಗ್ಗೆ ತಮ್ಮ ಹಿತೈಷಿಗಳ ಜೊತೆ ಚರ್ಚಿಸಿದರು. ಎಲ್ಲರೂ ಗಂಡನಿಂದ ವಿಚ್ಛೇದನ ಪಡೆದುಕೊಳ್ಳುವುದೇ ಒಳ್ಳೆಯದು ಎಂದು ಸಲಹೆ ಇತ್ತರು.
 
ಅದರಂತೆಯೇ ಗಟ್ಟಿ ಮನಸ್ಸು ಮಾಡಿಕೊಂಡ ಲತಾ, ವಿಚ್ಛೇದನ ಪಡೆಯುವ ಮನಸ್ಸು ಮಾಡಿದರು. ನನ್ನ ಬಳಿ ಬಂದರು. ವಿಚ್ಛೇದನ ಪ್ರಕರಣದಲ್ಲಿ ತಮ್ಮ ಪರವಾಗಿ ವಕಾಲತ್ತು ವಹಿಸುವಂತೆ ಕೋರಿದರು. ವಿಷಯ ಕೇಳಿ ತಿಳಿದುಕೊಂಡ ನಾನು ಅದಕ್ಕೆ ಒಪ್ಪಿದೆ.
 
ವಿಚ್ಛೇದನ ಕೇಸು ದಾಖಲಾಯಿತು. ಕೋರ್ಟ್‌ನಿಂದ ನೋಟಿಸ್‌ ಹೋಗುತ್ತಲೇ ಅಲ್ಲಿಂದ ದೌಡಾಯಿಸಿ ಬಂದ ಅಮಿತ್‌, ‘ಯಾವುದೇ ಕಾರಣಕ್ಕೂ ವಿಚ್ಛೇದನ ನೀಡಲ್ಲ’ ಎಂದರು. ‘ನಿಮ್ಮ ಜೊತೆ ನಾನು ಬಾಳಲು ಸಾಧ್ಯವೇ ಇಲ್ಲ. ನನಗೆ ವಿಚ್ಛೇದನ ಬೇಕೇ ಬೇಕು’ ಎಂದು ಲತಾ ಹಟ ಹಿಡಿದರು. ‘ನಾನು ವಿಚ್ಛೇದನ ಅರ್ಜಿಗೆ ಸಹಿ ಹಾಕದೇ ಹೋದರೆ ಅದು ಹೇಗೆ ನೀನು ಬೇರೆಯಾಗುತ್ತಿ ನೋಡುವೆ’ ಎಂದರು ಅಮಿತ್‌. ವಿಚ್ಛೇದನದ ಸುದ್ದಿ ಗುಲ್ಲಾಗಿಬಿಟ್ಟರೆ ಎಲ್ಲಿ ತಮ್ಮ ಹಾಗೂ ಮನೆಯವರ ಬಣ್ಣ ಬಯಲಾಗಿಬಿಡುತ್ತದೆಯೋ ಎನ್ನುವ ಆತಂಕ ಅಮಿತ್‌ ಅವರಲ್ಲಿ ಇತ್ತು. ಅದಕ್ಕಾಗಿ ಕೋರ್ಟ್‌ನಿಂದ ನೋಟಿಸ್‌ ಹೋದರೂ ಕೋರ್ಟ್‌ಗೆ ಬರಲಿಲ್ಲ.
 
ವಿಚಾರಣೆ ಮುಂದೆ ಮುಂದೆ ಹೋಗತೊಡಗಿತು. ಆದರೆ ಒಮ್ಮೆಯೂ ಅಮಿತ್‌ ಆಗಲಿ ಅವರ ಪರ ವಕೀಲರಾಗಲಿ ಕೋರ್ಟ್‌ಗೆ ಬರಲೇ ಇಲ್ಲ.  ಇಂಥ ಸಂದರ್ಭಗಳಲ್ಲಿ ಅವರ ಅನುಪಸ್ಥಿತಿಯಲ್ಲಿ (ಎಕ್ಸ್‌ಪಾರ್ಟೆ) ಕೋರ್ಟ್‌ ಆದೇಶ ಹೊರಡಿಸುತ್ತದೆ. ಇಲ್ಲೂ ಹಾಗೆಯೇ ಆಯಿತು. ಅಮಿತ್‌ ಅವರ ಅನುಪಸ್ಥಿತಿಯಲ್ಲಿ ಕೋರ್ಟ್‌ ವಿಚ್ಛೇದನ ಆದೇಶ ಹೊರಡಿಸಿತು. ಲತಾ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
 
ಭರತನಾಟ್ಯ ಕಲಾವಿದೆಯಾಗಿದ್ದ ಲತಾ, ತಮ್ಮ ಮನೆಯಲ್ಲಿಯೇ ಮಕ್ಕಳಿಗೆ ನೃತ್ಯ ತರಬೇತಿ ನೀಡತೊಡಗಿದರು. ಆಗಿದ್ದೆಲ್ಲವೂ ಕೆಟ್ಟ ಕನಸು ಎಂದು ಮರೆಯಲು ಪ್ರಯತ್ನಿಸಿದರು. 
 
ಒಂದೂವರೆ ವರ್ಷ ಹೀಗೆಯೇ ಕಳೆಯಿತು. ಅದೊಂದು ದಿನ ಅಮಿತ್‌ ಇದ್ದಕ್ಕಿದ್ದಂತೆಯೇ ಲತಾ ಮನೆಯಲ್ಲಿ ಧುತ್ತೆಂದು ಪ್ರತ್ಯಕ್ಷರಾದರು! ತಾವು ಕಾಣುತ್ತಿರುವುದು ಕನಸೋ ನನಸೋ ಲತಾ ಅವರಿಗೆ ತಿಳಿಯಲಿಲ್ಲ. ವಿಚ್ಛೇದಿತ ಗಂಡನನ್ನು ನೋಡಿ ಭಯಪಟ್ಟುಕೊಂಡರು ಲತಾ. ಮೊದಲೇ ಅವರ ಅನುಪಸ್ಥಿತಿಯಲ್ಲಿ ಕೋರ್ಟ್‌ ಆದೇಶ ಹೊರಡಿಸಿತ್ತು. ಅದನ್ನೇ ನೆಪವಾಗಿಟ್ಟುಕೊಂಡು ಇನ್ನೇನು ಮಾಡಲು ಅಮಿತ್‌ ಬಂದಿದ್ದಾರೋ ಎಂದು ಅನ್ನಿಸತೊಡಗಿತು. ಒಂದೇ ಕ್ಷಣದಲ್ಲಿ ಏನೆಲ್ಲಾ ಚಿಂತೆಗಳು ಮನದಲ್ಲಿ ನುಸುಳಿ ಬರಸಿಡಿಲು ಬಡಿದಂತಾಯಿತು. 
 
ಬಂದ ಕಾರಣವನ್ನು ಅಮಿತ್‌ ಅವರಿಂದ ಕೇಳಿತಿಳಿಯುವ ಮೊದಲೇ ಅಮಿತ್‌, ಲತಾ ಅವರ ಕೈ ಹಿಡಿದು, ‘ಲತಾ ನನ್ನನ್ನು ಕ್ಷಮಿಸಿಬಿಡು. ನಾನು ದೊಡ್ಡ ತಪ್ಪು ಮಾಡಿದ್ದೇನೆ. ನಿನ್ನನ್ನು ಬಿಟ್ಟು ನಾನು ಇರಲು ಸಾಧ್ಯವಿಲ್ಲ. ನಿನಗೆ ಚಿತ್ರಹಿಂಸೆ ಕೊಟ್ಟಿದ್ದಕ್ಕೆ ನಾನು ಮತ್ತು ಅಪ್ಪ–ಅಮ್ಮ ಎಲ್ಲರಿಗೂ ದೇವರು ಸರಿಯಾದ ಶಾಸ್ತಿ ಮಾಡಿದ್ದಾನೆ. ನೀನು ವಾಪಸ್‌ ಬರದೇ ಹೋದರೆ ನಾವೆಲ್ಲ ಬದುಕಿ ಇರುತ್ತೇವೋ ಇಲ್ಲವೋ ಗೊತ್ತಿಲ್ಲ. ದಯವಿಟ್ಟು ವಾಪಸ್‌ ಬಾ. ನನ್ನ ಅಮ್ಮನೂ ಬದಲಾಗಿದ್ದಾಳೆ. ಅವಳೇ ನಿನ್ನನ್ನು ಕರೆದುಕೊಂಡು ಬರಲು ಹೇಳಿದಳು. ನೀನು ಬಂದು ನಮ್ಮನ್ನೆಲ್ಲಾ ಕ್ಷಮಿಸು’ ಎಂದು ಗದ್ಗದಿತ ದನಿಯಲ್ಲಿ ಗೋಗರೆದರು.
 
ಒಮ್ಮೆಯೂ ಪ್ರೀತಿಯಿಂದ ಮಾತನಾಡಿಸದ (ವಿಚ್ಛೇದಿತ) ಗಂಡನ ಬಾಯಲ್ಲಿ ಈ ರೀತಿಯ ಆಣಿಮುತ್ತುಗಳನ್ನು ಕೇಳಿದಾಗ ಲತಾ ಅವರಿಗೆ ಏನು ಮಾಡಬೇಕು ಎಂದೇ ತೋಚದಂತಾಯಿತು. ಗಂಡನದ್ದು ಮೊಸಳೆ ಕಣ್ಣೀರೋ ನಿಜವಾಗಿಯೂ ಕರೆಯುತ್ತಿದ್ದಾರೋ ಎಂದು ತಿಳಿದುಕೊಳ್ಳಲು ಆಗಲಿಲ್ಲ ಲತಾ ಅವರಿಗೆ. ಅಕ್ಷರಶಃ ಬದುಕನ್ನು ನರಕ ಮಾಡಿದ್ದವರು ಈಗ ಏಕಾಏಕಿ ಬದಲಾಗಿದ್ದಾರೆ ಎಂದರೆ ನಂಬುವುದಾದರೂ ಹೇಗೆ ಅಲ್ಲವೇ? 
 
ನಂತರ ಲತಾ ತಮ್ಮ ಪೋಷಕರ ಜೊತೆ ಚರ್ಚಿಸಿ, ಅಮಿತ್‌ ಅವರನ್ನು ಕರೆದುಕೊಂಡು ನನ್ನ ಬಳಿ ಬಂದರು. ಅಮಿತ್‌ ನಿಜವಾಗಿಯೂ ಬದಲಾಗಿದ್ದಾರೆ ಎಂದು ನನಗೆ ಅನ್ನಿಸಿತು. ಈ ಬದಲಾವಣೆಗೆ ಏನು ಕಾರಣ ಎನ್ನುವುದನ್ನು ಕೇಳಿದಾಗ ಬದಲಾಗಿರಲಿಕ್ಕೂ ಸಾಕು ಎಂದುಕೊಂಡೆ. ಇಬ್ಬರಿಗೂ ಕೌನ್ಸೆಲಿಂಗ್‌ ಮಾಡಿದೆ.  ಅವರಿಬ್ಬರೂ ಪರಸ್ಪರ ಮಾತನಾಡಿಕೊಂಡ ನಂತರ ಲತಾ ಅವರಿಗೂ ಅಮಿತ್‌ ಬಗ್ಗೆ ವಿಶ್ವಾಸ ಮೂಡಿತು.
 
ವಿಚ್ಛೇದನ ಆಗಿ ಹೋಗಿತ್ತಲ್ಲ? ಅದಕ್ಕಾಗಿ ಇಬ್ಬರೂ ಒಟ್ಟಿಗೇ ಬಾಳಬೇಕು ಎಂದರೆ, ಪುನಃ ಅವರಿಬ್ಬರ ವಿವಾಹ ಆಗಬೇಕಿತ್ತು. ಇಬ್ಬರ ಕುಟುಂಬದ ಸಮ್ಮತಿ ಮೇರೆಗೆ ಇಬ್ಬರೂ ಮರುವಿವಾಹ ಆದರು. ಅಲ್ಲಿಗೆ ವಿಚ್ಛೇದನ ಪ್ರಕರಣ ಮದುವೆಯೊಂದಿಗೆ ಸುಖಾಂತ್ಯವಾಯಿತು.
 
ಕೊಯಮತ್ತೂರಿನಲ್ಲಿಯೇ ಅನ್ಯೋನ್ಯವಾಗಿ ಇರುವ ಈ ದಂಪತಿ ಒಂದು ಹೆಣ್ಣು ಮಗುವಿನ ಅಪ್ಪ–ಅಮ್ಮ ಆಗಿದ್ದಾರೆ.  ಇವರಿಬ್ಬರೂ ನನಗೆ ಆಗಾಗ ದೂರವಾಣಿ ಕರೆ ಮಾಡುತ್ತಾರೆ. ಅಮಿತ್‌ ಅವರ ತಾಯಿ ಕೂಡ ಲತಾ ಅವರನ್ನು ಮಗಳಂತೆಯೇ ನೋಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಇವರದ್ದು ಈಗ ‘ಆದರ್ಶ ಕುಟುಂಬ’.
 
ಅಷ್ಟಕ್ಕೂ ಅಮಿತ್‌ ಹಾಗೂ ಅವರ ತಾಯಿಗೆ ಜ್ಞಾನೋದಯ ಆಗಿದ್ದು ಸುಮ್ಮನೇ ಅಲ್ಲ. ಕಾಲವೇ ಪಾಠ ಕಲಿಸುತ್ತದೆ ಎನ್ನಲಾಗುತ್ತದಲ್ಲ. ಇದೂ ಹಾಗೆಯೆ. ಆದರೆ ಆ ‘ಕಾಲ’ ಈ ಕುಟುಂಬಕ್ಕೆ ಲತಾ ಮನೆಬಿಟ್ಟು ಹೋದ ವರ್ಷದೊಳಗೇ ಬಂದುಬಿಟ್ಟಿತ್ತು. ಲತಾ ಮನೆಬಿಟ್ಟು ಹೋದ ಸ್ವಲ್ಪ ತಿಂಗಳಿನಲ್ಲಿಯೇ ಅಮಿತ್‌ ಅವರ ತಂದೆ ತೀರಿಕೊಂಡರು. ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದ ಅಮಿತ್‌ ಕೆಲಸದಲ್ಲಿ ನಷ್ಟ ಅನುಭವಿಸಿದರು. ಅವರಲ್ಲಿದ್ದ ಅಪಾರ ಆಸ್ತಿ ಎಲ್ಲರಲ್ಲೂ ಮದ ತುಂಬಿಸಿತ್ತು. ಆದರೆ ಕುಟುಂಬದ ಸದಸ್ಯರ ನಡುವೆ ನಡೆದ ಆಸ್ತಿ ವಿವಾದದಿಂದಾಗಿ ಅಮಿತ್‌ ಮನೆಯವರಿಗೆ ಏನೂ ಆಸ್ತಿ ದಕ್ಕಲಿಲ್ಲ, ಇದ್ದ ಮನೆಯನ್ನೂ ಮಾರಾಟ ಮಾಡುವ ಪರಿಸ್ಥಿತಿ ಬಂತು. ಅಕ್ಷರಶಃ ಬೀದಿಗೆ ಬಂದರು.
 
ಆಗ ಅವರಿಗೆ ನೆನಪಾಗಿದ್ದು ತಾವು ಲತಾ ಅವರಿಗೆ ನೀಡಿದ್ದ ಕಿರುಕುಳ. ಈ ಕಿರುಕುಳವನ್ನು ನೋಡಿದ್ದ ಅಕ್ಕಪಕ್ಕದವರು, ನೆಂಟರಿಷ್ಟರು ಸುಮ್ಮನೇ ಇರುತ್ತಾರೆಯೇ? ಅಷ್ಟು ವರ್ಷ ಸುಮ್ಮನೇ ಇದ್ದವರು, ‘ಬಿದ್ದವರ ಮೇಲೆ ಒಂದಿಷ್ಟು ಕಲ್ಲು’ ಎನ್ನುವ ಹಾಗೆ ಹಿಂದಿನದನ್ನೆಲ್ಲಾ ನೆನಪು ಮಾಡಿ ಮಾತಿನಲ್ಲಿಯೇ ತಿವಿದರು. ಲತಾ ಅವರಿಗೆ ನೀಡಿದ್ದ ಹಿಂಸೆಯಿಂದಾಗಿಯೇ ಈ ಸ್ಥಿತಿ ಬಂದಿದೆಯೆಂದು ಆಡಿಕೊಂಡರು. ಅದು ನಿಜ ಎನಿಸಿತು ಅಮಿತ್‌ ಹಾಗೂ ಅವರ ತಾಯಿಗೆ. ಆಗ ಪಶ್ಚಾತ್ತಾಪದಲ್ಲಿ ಬೆಂದರು.  ಆಕೆಯನ್ನು ವಾಪಸ್‌ ಕರೆದುಕೊಂಡು ಬಂದರೆ, ಪ್ರಾಯಶ್ಚಿತ್ತಪಡುವ ಜೊತೆಗೆ ತಮಗೂ ಅನುಕೂಲ ಆಗಬಹುದು ಎಂದು ಅವರಿಗೆ ಅನ್ನಿಸಿತು. ಅದಕ್ಕಾಗಿಯೇ ವಿಚ್ಛೇದನವಾದರೂ ಲತಾ ಅವರನ್ನು ವಾಪಸ್‌ ಕರೆದುಕೊಂಡು ಬರುವ ಯೋಚನೆ ಮಾಡಿ ಅದರಂತೆಯೇ ನಡೆದುಕೊಂಡಿದ್ದರು.
 
ಇತ್ತ ಲತಾ ತಮ್ಮ ಬದುಕನ್ನು  ಕಟ್ಟಿಕೊಂಡಿದ್ದರು. ಗಂಡ ಕರೆಯಲು ಬಂದಾಗ ಅವರ ಜೊತೆ ಹೋಗಲು ತುಂಬಾ ಅಳುಕಿದ್ದರು ಕೂಡ. ಬೀದಿಗೆ ಬಂದು ನಿಂತಿದ್ದ ಗಂಡನ ಮನೆಗೆ ಆಕೆ ಹೋಗಲು ಒಪ್ಪದಿದ್ದರೂ ಆಶ್ಚರ್ಯ ಇರಲಿಲ್ಲ. ಆದರೆ ಅಲ್ಲಿಯ ಪರಿಸ್ಥಿತಿ ಕಂಡು ಹೆಂಗರುಳು ಕರಗಿಹೋಯಿತು. ಗಂಡ, ಅತ್ತೆ–ಮಾವ ತಮಗೆ ನೀಡಿದ್ದ ಹಿಂಸೆಯನ್ನು ಮರೆತುಬಿಟ್ಟರು. ಎಲ್ಲರನ್ನೂ ಕ್ಷಮಿಸಿಬಿಟ್ಟರು! 
 
ಈಗ ಅಲ್ಲಿಯೇ ಮಕ್ಕಳಿಗೆ ಭರತನಾಟ್ಯ ತರಬೇತಿ ನೀಡುತ್ತಿದ್ದಾರೆ. ಅಷ್ಟಿಷ್ಟು ಗಳಿಸಿ ಸಂಸಾರವನ್ನು ಸರಿದೂಗಿಸುತ್ತಿದ್ದಾರೆ. ಒಟ್ಟಿನಲ್ಲಿ, ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ’ (ಎಲ್ಲಿ ನಾರಿಯು ಗೌರವಕ್ಕೆ ಪಾತ್ರಳಾಗುತ್ತಾಳೋ ಅಲ್ಲಿ ದೇವತೆಗಳು ನೆಲೆಸುತ್ತಾರೆ) ಎಂಬ ಮಾತು ಈ ಪ್ರಕರಣದಲ್ಲಿ ಸಾಬೀತಾಯಿತು.
ಎಲ್ಲರ ಹೆಸರು ಬದಲಾಯಿಸಲಾಗಿದೆ.
(ಲೇಖಕ ಹೈಕೋರ್ಟ್‌ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT