ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಇವರ ಎರಡನೇ ತಾಯ್ನಾಡು!

ವ್ಯಕ್ತಿ ಸ್ಮರಣೆ
Last Updated 28 ಜನವರಿ 2017, 19:30 IST
ಅಕ್ಷರ ಗಾತ್ರ
ಸೋವಿಯತ್ ಒಕ್ಕೂಟದ ನಾಯಕರಾಗಿದ್ದ ಲಿಯನೆಡ್ ಐಲಿಯೆಚ್ ಬ್ರೆಜ್ನೆವ್ ಅವರು 1973ರ ನವೆಂಬರ್‌ನಲ್ಲಿ ಐದು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿದ್ದರು. ಅವರು ತಮ್ಮ ಭೇಟಿಯ ಎರಡನೆಯ ದಿನ ದೆಹಲಿಯ ಕೆಂಪುಕೋಟೆಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದರು. ಆಗ ಅವರ ಜೊತೆ ಭಾರತದ ಪ್ರಧಾನಿ ಇಂದಿರಾ ಗಾಂಧಿ ಕೂಡ ಇದ್ದರು.
 
ಅವರ ಭಾಷಣ ತೀರಾ ದೀರ್ಘವಾಗಿತ್ತು ಎಂದು ಆಗ ಭಾರತದಲ್ಲಿನ ಅಮೆರಿಕದ ರಾಯಭಾರಿ ಆಗಿದ್ದ ಡೇವಿಡ್ ಪ್ಯಾಟ್ರಿಕ್ ಮೊಯ್ನಿಹಾನ್ ಅವರು ಅಮೆರಿಕದ ಅಧ್ಯಕ್ಷ ರಿಚರ್ಡ್‌ ನಿಕ್ಸನ್ ಅವರಿಗೆ ರವಾನಿಸಿದ್ದ ವರದಿಯಲ್ಲಿ ಹೇಳಿದ್ದರು.
 
ಬ್ರೆಜ್ನೆವ್ ಅವರು ರಷ್ಯನ್ ಭಾಷೆಯಲ್ಲಿ ಮಾತನಾಡಿದರು. ನಿಕ್ಸನ್‌ ಜೊತೆಗಿನ ತಮ್ಮ ಸಂಬಂಧ ಸುಧಾರಿಸುತ್ತಿದೆ, ಭಾರತ ಅಭಿವೃದ್ಧಿ ಹೊಂದಲು ಸೋವಿಯತ್ ಒಕ್ಕೂಟದ ಬೆಂಬಲ ಇರುತ್ತದೆ, ಭಿಲಾಯ್ ಮತ್ತು ಬೊಕಾರೊಗಳಲ್ಲಿ ಉಕ್ಕಿನ ಕಾರ್ಖಾನೆ ನಿರ್ಮಿಸಲು ಸಹಾಯ ನೀಡಲಾಗುತ್ತದೆ ಎಂಬ ವಿಷಯಗಳನ್ನೆಲ್ಲ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಸೋವಿಯತ್ ಒಕ್ಕೂಟದ ನವದೆಹಲಿಯ ರಾಜತಾಂತ್ರಿಕ ಕಚೇರಿಯ ಕಿರಿಯ ಸಿಬ್ಬಂದಿಯೊಬ್ಬರು ಆಗ ಬ್ರೆಜ್ನೆವ್ ಭಾಷಣವನ್ನು ಹಿಂದಿಗೆ ಅನುವಾದಿಸಿದ್ದರು. ಆ ಅನುವಾದಕರ ಬಗ್ಗೆ ಆಗ ಯಾರೂ ಹೆಚ್ಚು ಗಮನ ಕೊಡಲಿಲ್ಲ. ಆದರೆ, ಅಂದು ಬ್ರೆಜ್ನೆವ್ ಭಾಷಣವನ್ನು ಹಿಂದಿಗೆ ಅನುವಾದಿಸಿದ ಅಲೆಕ್ಸಾಂಡರ್ ಮಿಖಾಯ್ಲೊವಿಚ್ ಕಡಕಿನ್ ಅವರು ಮುಂದಿನ ನಾಲ್ಕು ದಶಕಗಳ ಕಾಲ ರಷ್ಯಾ–ಭಾರತ ಸ್ನೇಹದ ಸಂಕೇತವಾಗಿ ಬಾಳಿದರು – ಬ್ರೆಜ್ನೆವ್‌ ಕಾಲವಾಗಿ, ಸೋವಿಯತ್ ಒಕ್ಕೂಟ ಇತಿಹಾಸದ ಪುಟ ಸೇರಿದ ನಂತರವೂ.
 
ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಮಾಲ್ಡೊವಾದ ಕಿಶಿನಾಫ್‌ನಲ್ಲಿ ಜನಿಸಿದ ಕಡಕಿನ್ ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದು 1971ರಲ್ಲಿ, ಸೋವಿಯತ್ ಒಕ್ಕೂಟದ ನವದೆಹಲಿಯ ರಾಜತಾಂತ್ರಿಕ ಕಚೇರಿ ಸಿಬ್ಬಂದಿಯಾಗಿ. ಆಗ ಅವರು ಪರೀಕ್ಷಣಾ ಅವಧಿ ಪೂರೈಸುತ್ತಿದ್ದ ಸಿಬ್ಬಂದಿ ಆಗಿದ್ದರು. ಭಾರತಕ್ಕೆ ಬರುತ್ತಿದ್ದಂತೆಯೇ ಈ ದೇಶದ ಬಗ್ಗೆ ಅವರಲ್ಲಿ ಪ್ರೀತಿ ಬೆಳೆಯಿತು. ಅವರದೇ ಮಾತಿನಲ್ಲಿ ಹೇಳುವುದಾದರೆ, ಭಾರತ ಅವರ ಪಾಲಿನ ‘ಕರ್ಮಭೂಮಿ, ಜ್ಞಾನಭೂಮಿ, ತಪೋಭೂಮಿ ಮತ್ತು ಪ್ರೇಮಭೂಮಿ’ಯಾಯಿತು. ಇದೇ ಭೂಮಿಯಲ್ಲಿ ಅವರು ಜನವರಿ 26ರಂದು ಕೊನೆಯುಸಿರೆಳೆದರು. ಅವರಿಗೆ 67 ವರ್ಷ ತುಂಬಿತ್ತು. ಕೊನೆಯ ಉಸಿರೆಳೆಯುವಾಗಲೂ ಅವರು ಭಾರತದಲ್ಲಿನ ರಷ್ಯಾ ರಾಯಭಾರಿಯಾಗಿದ್ದರು. ಅವರ ಪಾಲಿನ ಎರಡನೆಯ ತಾಯ್ನಾಡು 68ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿತ್ತು.
 
ಅಂತರರಾಷ್ಟ್ರೀಯ ಸಂಬಂಧಗಳ ಕುರಿತ ಮಾಸ್ಕೊ ಸ್ಟೇಟ್‌ ಇನ್‌ಸ್ಟಿಟ್ಯೂಟ್‌ನಿಂದ (ವಿಶ್ವವಿದ್ಯಾಲಯ) ಪದವಿ ಪಡೆದ ಕಡಕಿನ್ 1972ರಲ್ಲಿ ಸೋವಿಯತ್ ರಾಜತಾಂತ್ರಿಕ ಸೇವೆಗೆ ಅಧಿಕೃತವಾಗಿ ಸೇರಿದರು. ಆರಂಭದಲ್ಲಿ 1978ರವರೆಗೆ ಭಾರತದಲ್ಲಿನ ಸೋವಿಯತ್ ರಾಯಭಾರ ಕಚೇರಿಯಲ್ಲಿ ಅವರು ಕರ್ತವ್ಯ ನಿರ್ವಹಿಸಿ, ಮಾಸ್ಕೊಗೆ ಮರಳಿದರು. ನಂತರ 1989ರಲ್ಲಿ ರಾಯಭಾರ ಕಚೇರಿಯ ಉಪ ಮುಖ್ಯಸ್ಥರಾಗಿ ಭಾರತಕ್ಕೆ ವಾಪಸಾದರು. 1991ರಲ್ಲಿ ಸೋವಿಯತ್‌ ಒಕ್ಕೂಟ ಚೂರಾಗಿ, ದೆಹಲಿಯಲ್ಲಿನ ರಾಯಭಾರ ಕಚೇರಿಯು ‘ರಷ್ಯನ್ ಒಕ್ಕೂಟದ ರಾಯಭಾರ ಕಚೇರಿ’ಯಾಗಿ ಬದಲಾದ ಹೊತ್ತಿನಲ್ಲೂ ಅವರು ಅದೇ ಜವಾಬ್ದಾರಿ ಹೊಂದಿದ್ದರು.
 
ಕಡಕಿನ್ ಅವರು 1999ರಿಂದ 2004ರವರೆಗೆ ಭಾರತದಲ್ಲಿನ ರಷ್ಯಾ ರಾಯಭಾರಿಯಾಗಿದ್ದರು. ನಂತರ 2009ರಿಂದ ಸಾಯುವ ದಿನದವರೆಗೂ ಇದೇ ಹೊಣೆ ವಹಿಸಿಕೊಂಡಿದ್ದರು. ನೇಪಾಳ ಮತ್ತು ಸ್ವೀಡನ್‌ನಲ್ಲಿ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದರೂ, ರಾಯಭಾರ ಜೀವನದ ಬಹುಪಾಲು ಅವಧಿಯನ್ನು ಅವರು ಭಾರತದಲ್ಲೇ ಕಳೆದರು. ಸೋವಿಯತ್‌ ಒಕ್ಕೂಟ ಕುಸಿದ ನಂತರ, ರಷ್ಯಾ ಮತ್ತು ಭಾರತದ ನಡುವಣ ಸಂಬಂಧ ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.
 
ಸೋವಿಯತ್ ಒಕ್ಕೂಟ ಮತ್ತು ರಷ್ಯಾದ ನಾಯಕರಾದ ಬ್ರೆಜ್ನೆವ್‌, ಮಿಖಾಯೆಲ್ ಗೊರ್ಬಚೆವ್, ಬೋರಿಸ್ ಯೆಲ್ಸಿನ್, ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭಗಳಲ್ಲಿ ಹಾಗೂ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಅವರು ಮಾಸ್ಕೊಗೆ ಭೇಟಿ ನೀಡಿದ್ದ ಸಂದರ್ಭಗಳಲ್ಲಿ ಕೂಡ ಕಡಕಿನ್ ಪ್ರಮುಖ ಪಾತ್ರ ವಹಿಸಿದ್ದರು. ಕಡಕಿನ್ ಸುದೀರ್ಘ ಕಾಲ ನವದೆಹಲಿಯಲ್ಲಿ ನೆಲೆಸಿದ ಕಾರಣ, ಭಾರತದಲ್ಲಿ ಅವರ ಹೆಸರು ಚಿರಪರಿಚಿತ ಆಯಿತು. ಕಡಕಿನ್ ಮೃತಪಟ್ಟಾಗ ಶೋಕ ಸಂದೇಶ ರವಾನಿಸಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ‘ಕಡಕಿನ್ ಸಾವು ನನಗೆ ಹಾಗೂ ನನ್ನ ಕುಟುಂಬದ ಪಾಲಿಗೆ ವೈಯಕ್ತಿಕ ನಷ್ಟ’ ಎಂದು ಹೇಳಿದರು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಕಡಕಿನ್ ಬಗ್ಗೆ ಅಪಾರ ಗೌರವ ಹೊಂದಿದ್ದರು, ಅವರ ಸ್ನೇಹಕ್ಕೆ ಮಹತ್ವ ನೀಡುತ್ತಿದ್ದರು ಎಂಬುದನ್ನು ಸೋನಿಯಾ ನೆನಪಿಸಿಕೊಂಡರು. 
 
ಕಡಕಿನ್ ಅವರು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ಹಲವು ಹಿಂದಿ ಕೃತಿಗಳನ್ನು ರಷ್ಯನ್ ಭಾಷೆಗೆ ಅನುವಾದಿಸಿದ್ದರು. ‘ಇಲ್ಲಿ ಯಾರಾದರೂ ಅಲಿಪ್ತ ನೀತಿಯನ್ನು ಹಿಂದಿಗೆ ಅನುವಾದಿಸಬಲ್ಲಿರಾ’ ಎಂದು ನವದೆಹಲಿಯಲ್ಲಿನ ರಷ್ಯನ್ ರಾಯಭಾರ ಕಚೇರಿಯಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮಾಷೆ ಧಾಟಿಯಲ್ಲಿ ಪ್ರಶ್ನಿಸಿದ್ದರು. ಅಲ್ಲಿದ್ದವರು ಅನುವಾದಿಸುವ ಮೊದಲೇ, ಕಡಕಿನ್ ಅವರು ಲಘುನಗೆಯೊಂದಿಗೆ ‘ಅದು ಗುಟ ನಿರಪೇಕ್ಷತಾ’ ಎಂದು ಹೇಳಿದ್ದರು.
 
ಭಾರತದ ಇತಿಹಾಸ, ಸಂಸ್ಕೃತಿ, ಸಮಾಜ ಮತ್ತು ರಾಜಕೀಯದ ಬಗ್ಗೆ ಹೊಂದಿದ್ದ ಅಪಾರ ಜ್ಞಾನದ ಕಾರಣಕ್ಕಾಗಿ ಅವರು ಗೌರವ ಸಂಪಾದಿಸಿದ್ದರು. ಸೈಬೀರಿಯಾದಲ್ಲಿ ಭಗವದ್ಗೀತೆಯನ್ನು ನಿಷೇಧಿಸಲಾಗುತ್ತದೆ ಎಂಬ ಸುದ್ದಿ 2011ರಲ್ಲಿ ಬಂತು. ಭಾರತ–ರಷ್ಯಾ ಸಂಬಂಧಕ್ಕೆ ಇದರಿಂದ ಧಕ್ಕೆಯಾಗುತ್ತದೆ ಎಂಬ ಕಳವಳ ವ್ಯಕ್ತವಾಯಿತು. ಆಗ ಕಡಕಿನ್ ಆಡಿದ ಮಾತು ಭಾರತದ ಹಲವರಿಗೆ ಇಷ್ಟವಾಯಿತು. ‘ಸುಂದರವಾದ ವಿಶ್ವವಿದ್ಯಾಲಯ ನಗರದಲ್ಲಿ ಇಂಥ ಘಟನೆದುರದೃಷ್ಟಕರ. ಟಾಮ್ಸ್ಕ್‌ (ಸೈಬೀರಿಯಾದ ಅತ್ಯಂತ ಹಳೆಯ ನಗರ) ಜಾತ್ಯತೀತತೆ ಮತ್ತು ಧರ್ಮ ಸಹಿಷ್ಣುತೆಗೆ ಹೆಸರಾಗಿದೆ. ಇಂಥ ನಗರದ ಪಕ್ಕದಲ್ಲೂ ಅವಿವೇಕಿಯೊಬ್ಬ ಇರುವಂತಿದೆ. ಇದು ನಿಜಕ್ಕೂ ಬೇಸರದ ಸಂಗತಿ’ ಎಂದಿದ್ದರು ಕಡಕಿನ್.
 
ಭಾರತ ಮತ್ತು ರಷ್ಯಾ ಸಂಬಂಧವು ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಅಣುಶಕ್ತಿ ಕ್ಷೇತ್ರಗಳಲ್ಲಿ ಸಹಕಾರ ಹೊಂದಿರುವ ‘ವಿಶೇಷ ಬಾಂಧವ್ಯ’ವಾಗಿ ಪರಿವರ್ತನೆಯಾಗುವುದರ ಹಿಂದೆ ಕಡಕಿನ್ ಶ್ರಮ ಇತ್ತು. ಭಾರತವು ಅಮೆರಿಕದ ಜೊತೆ ಹೆಚ್ಚಿನ ರಕ್ಷಣಾ ಒಪ್ಪಂದ ಮಾಡಿಕೊಳ್ಳುತ್ತಿದ್ದರೂ, ರಷ್ಯಾ ಮತ್ತು ಪಾಕಿಸ್ತಾನದ ನಡುವೆ ಮಿಲಿಟರಿ ಸಹಕಾರ ಹೆಚ್ಚುತ್ತಿದ್ದರೂ, ಭಾರತ ಹಾಗೂ ರಷ್ಯಾ ನಡುವಣ ಸಂಬಂಧಕ್ಕೆ ಸರಿಸಾಟಿ ಯಾವುದೂ ಇಲ್ಲ, ಈ ಸಂಬಂಧ ಹಾಗೆಯೇ ಇರಲಿದೆ ಎಂಬುದು ಕಡಕಿನ್ ನಂಬಿಕೆಯಾಗಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತ ಕಳೆದ ವರ್ಷ ನಡೆಸಿದ ನಿರ್ದಿಷ್ಟ ದಾಳಿಯನ್ನು ಕಡಕಿನ್ ಬೆಂಬಲಿಸಿದ್ದರು. ಇವೆಲ್ಲ ಸಂಗತಿಗಳನ್ನು ಪರಿಗಣಿಸಿ ಮೋದಿ ಅವರು ಕಡಕಿನ್ ಬಗ್ಗೆ ‘ಭಾರತದ ನಿಜವಾದ ಸ್ನೇಹಿತ’ ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದಿದ್ದು ಆಶ್ಚರ್ಯದ ಸಂಗತಿಯೇನೂ ಅಲ್ಲ.
 
‘ಒಂದು ದಿನ ಡಾರ್ಜಿಲಿಂಗ್‌ನಲ್ಲಿದ್ದಾಗ ನನ್ನಲ್ಲೊಂದು ಆಲೋಚನೆ ಮೂಡಿತು. ಭಾರತವನ್ನು ಶೋಧಿಸುವುದೆಂದರೆ ಹಿಮಾಲಯ ಪರ್ವತದ ಎತ್ತರ ಅಳೆದಂತೆಯೇ ಸರಿ. ವ್ಯಕ್ತಿ ಎಷ್ಟೇ ಎತ್ತರಕ್ಕೆ ಹೋದರೂ, ದಿಗಂತ ಇನ್ನಷ್ಟು ವಿಸ್ತರಿಸಿಕೊಳ್ಳುತ್ತ ಸಾಗುತ್ತದೆ. ಶೃಂಗದ ತುತ್ತತುದಿಗೆ ಹೋದಾಗ ಮಾತ್ರ ಅತ್ಯದ್ಭುತವಾದ ವಿಶಾಲದೃಶ್ಯ ಕಣ್ಣಿಗೆ ಬೀಳುತ್ತದೆ’ ಎಂದಿದ್ದರು ಕಡಕಿನ್. ಅಲ್ಲದೆ, ‘ಭಾರತ ನನ್ನ ಜೀವನದ ಎರಡನೆಯ ತಾಯ್ನಾಡು’ ಎಂದು ಮೆಚ್ಚಿಕೊಂಡಿದ್ದರು. ಸ್ವೆತೊಸ್ಲಾವ್ ರೋರಿಚ್ ಮತ್ತು ದೇವಿಕಾ ರಾಣಿ ಅವರ ಕುಟುಂಬದ ಸ್ನೇಹಿತ ಆಗಿದ್ದ ಕಡಕಿನ್, ಬೆಂಗಳೂರಿನ ತಾತಗುಣಿ ಎಸ್ಟೇಟ್‌ ಸಂರಕ್ಷಿಸುವ ವಿಚಾರದಲ್ಲಿ ಆಸಕ್ತಿ ಹೊಂದಿದ್ದರು. ಅಲ್ಲದೆ, ಹಿಮಾಚಲ ಪ್ರದೇಶದಲ್ಲಿರುವ ನಿಕೊಲಾಸ್ ರೋರಿಚ್ ಸ್ಮಾರಕ ಸಂರಕ್ಷಿಸಬೇಕು ಎಂಬುದೂ ಅವರ ಕಳಕಳಿಯಾಗಿತ್ತು.
 
‘ಭಾರತ ಮತ್ತು ರಷ್ಯಾ ದೇಶಗಳಲ್ಲಿ ಬಹಳ ಸಾಮ್ಯತೆ ಇದೆ. ನಮ್ಮನ್ನು ಬೇರೆ ಮಾಡಲು ಯಾರಿಂದಲೂ ಆಗದು’ ಎಂದು ಕಡಕಿನ್ ಅವರು ಒಮ್ಮೆ ‘ಪ್ರಜಾವಾಣಿ’ ಸಮೂಹದ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ರಾಯಭಾರಿ ಕಡಕಿನ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT