ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಹೀರಾತು ಆಗಲಿದೆ ಉದ್ಯೋಗಕ್ಕೂ ಅವಕಾಶ

Last Updated 29 ಜನವರಿ 2017, 19:30 IST
ಅಕ್ಷರ ಗಾತ್ರ

ನಾನು ಇತ್ತೀಚೆಗೆ ನನ್ನ ನೆಚ್ಚಿನ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಅನ್ನು ವೀಕ್ಷಿಸುವುದರಲ್ಲಿ ಮಗ್ನನಾಗಿದ್ದೆ. ನನ್ನ ಸ್ನೇಹಿತರೊಬ್ಬರು  ಬ್ರಸೆಲ್ಸ್ ಏರ್‌ಲೈನ್ಸ್‌ನ ಜಾಹೀರಾತಿನ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಜಾಹೀರಾತನ್ನು ವೀಕ್ಷಿಸಿದ ನಾನು ಕೆಲವು ಕ್ಷಣ ದಂಗಾಗಿ ಹೋದೆ. ಆಹಾ! ಎಂಥ ಅದ್ಭುತ ಕಲ್ಪನೆ!! ಜಾಹೀರಾತಿನ ಸ್ವರೂಪವೇ ಹೀಗಿರಬಹುದೇನೋ? ಒಂದು ಕಂಪೆನಿಯು ತನ್ನ ಗ್ರಾಹಕರ ಬಗೆಗಿನ ಕಾಳಜಿಯನ್ನು ಈ ರೀತಿಯೂ ವ್ಯಕ್ತಪಡಿಸಲು ಸಾಧ್ಯವೇ? – ಎಂಬ ಅನುಮಾನ ಮೂಡಿತು.

ಅದೇ ರೀತಿ ಜಾಹೀರಾತು ವೀಕ್ಷಕರಲ್ಲಿ ಒಂದು ರೀತಿಯ ಸೋಜಿಗವನ್ನುಂಟುಮಾಡಿ ಮನಸ್ಸು ಗೆಲ್ಲುವಲ್ಲಿ ’ಕ್ಯಾಮಲಿನ್ ಪರ್ಮನೆಂಟ್ ಮಾರ್ಕರ್’ (Camlin Permanent Market), ಪಂಜಾಬ್ ಮೆಟ್ ಜೀವವಿಮೆ (Punjab Met Life Insurance), ಓ.ಎಲ್.ಎಕ್ಸ್. (OLX) ಫೆವಿಕಾಲ್, ನಮ್ಮೆಲ್ಲರನ್ನು ಒಮ್ಮೆಲೇ ನಗೆಗಡಲಲ್ಲಿ ತೇಲಿಸುವಂತಹ ಜೆ. ಕೆ. ಸೂಪರ್ ಸಿಮೆಂಟ್ – ಹೀಗೆ ಜಾಹೀರಾತುಗಳ ಪಟ್ಟಿಯು ಬೆಳೆಯುತ್ತಲೇ ಹೋಗುತ್ತದೆ. ಇತ್ತೀಚಿಗೆ ವಿದ್ಯಾರ್ಥಿಗಳು ಅದರಲ್ಲೂ ಅನಿಮೇಶನ್ ಜಾಹೀರಾತು ಉದ್ಯಮದಲ್ಲಿ ತಮ್ಮ ಕೆರಿಯರ್ – ಜೀವನಪಥವನ್ನು – ರೂಪಿಸಿಕೊಳ್ಳುವಲ್ಲಿ ಹೆಚ್ಚು ಉತ್ಸುಕರಾಗಿದ್ದಾರೆ.

ಜಾಹೀರಾತು ಎಂದರೆ ಸಂಸ್ಥೆಗಳು ಅಥವಾ ಕಂಪೆನಿಗಳು ತಾವು ತಯಾರಿಸಿರುವ ಉತ್ಪನ್ನ ಹಾಗೂ ತಾವು ನೀಡುವ ಸೇವೆಗಳ ಬಗ್ಗೆ ಗ್ರಾಹಕರ ಗಮನ ಸೆಳೆಯಲು ಹಾಗೂ ಅವರನ್ನು ಕೊಂಡುಕೊಳ್ಳುವಂತೆ ಪ್ರೇರೇಪಿಸುವ ಉದ್ದೇಶದಿಂದ ವಿಭಿನ್ನವಾಗಿ ಸಂದೇಶವನ್ನು ರವಾನಿಸಲು ಉಪಯೋಗಿಸುವ ದೃಶ್ಯ-ಶ್ರವಣ ಮಾಧ್ಯಮ.

“Advertising is the art of conveying a message to the Mass. Advertisements generally persuade people about commercial product & services and even draw attention towards social issues.’ ಭಾರತದ ಆರ್ಥಿಕತೆ ದಿನೇ ದಿನೇ ಸದೃಢವಾಗಿ ಬೆಳೆಯತ್ತಿರುವಂತೆ, ಜಾಹೀರಾತು ಮಾಧ್ಯಮದ ಕಡೆಯೂ ವಿದ್ಯಾರ್ಥಿಗಳು ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ. ಜಾಹೀರಾತು ಉದ್ಯಮದಲ್ಲಿ ವಿದ್ಯಾರ್ಥಿಯು ಖಂಡಿತವಾಗಿಯೂ ಒಂದು ಲಾಭದಾಯಕ ಉದ್ಯೋಗವನ್ನು ನಿರೀಕ್ಷಿಸಬಹುದು.

ಎಂಥವರಿಗೆ?
ಜಾಹೀರಾತು ಸಂಸ್ಥೆಗಳು ವಿಶೇಷವಾದ ಸೃಜನಶೀಲತೆ, ವಿಶಿಷ್ಟ ಪ್ರತಿಭೆವುಳ್ಳ, ಸ್ವಂತ ಆಲೋಚನೆಗಳನ್ನು ಒರೆಗೆ ಹಚ್ಚುವ ಅದೇ ರೀತಿ ಒಂದು ತಂಡದಲ್ಲಿ ಅತ್ಯುತ್ತಮ ಸದಸ್ಯನಾಗಿ ತಂಡದ ಅಭಿವೃದ್ಧಿಗೆ ಹಗಲಿರುಳೂ ಶ್ರಮಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ. ಜಾಹೀರಾತು ಸಂಸ್ಥೆಗಳಲ್ಲಿ ಉದ್ಯೋಗವನ್ನು ಬಯಸುವ ವಿದ್ಯಾರ್ಥಿಗಳು ಈ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು.

ಯಾವ ಕೋರ್ಸ್?
ಕೆಲವು ಪ್ರತಿಷ್ಠಿತ ಜಾಹೀರಾತು ಸಂಸ್ಥೆ ಹಾಗೂ ತರಬೇತಿ ಕೇಂದ್ರಗಳು:
Oglive and Mather (ಆಗ್ಲಿವ್ & ಮ್ಯಾಥರ್), ರೀಡ್ಯೂಫುಶನ್ (Rediffusion), ಎಂ. ಐ.ಸಿ. ಎ., ಜೆ. ಡಬ್ಲ್ಯೂ.ಟಿ.,Satchi & Satchi (ಸಾಚಿ & ಸಾಚಿ), ಮ್ಯಾಡಿಸನ್ ವರ್ಡ್ ಇಂಡಿಯಾ (Madison World India) ಮುಂತಾದವು.
ಕೋರ್ಸ್ ಮುಗಿಸಿದ ತಕ್ಷಣವೇ ಕೆಲಸಬೇಕಾದಲ್ಲಿ ಕೆಲಸದ ಮೇಲಿನ ತರಬೇತಿ (On the job training) ಅತ್ಯವಶ್ಯಕ. ಹೀಗಾಗಿ ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಇಂಟರ್ನ್‌ಶಿಪ್‌ ಮಾಡಬೇಕಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಭಾಷೆ, ಸಂವಹನ ಕೌಶಲ, ರೇಖಾಚಿತ್ರ ರಚನೆ ಹಾಗೂ ವಿನೂತನ ಚಿಂತನೆಗಳಲ್ಲಿ ಹೆಚ್ಚಿನ ಸೃಜನಶೀಲತೆಯನ್ನು ಮೆರೆಯಬೇಕು. ಇವು ಜಾಹೀರಾತು ಸಂಸ್ಥೆಗಳ ಪ್ರಥಮ ಆದ್ಯತೆಯಾಗಿರುತ್ತದೆ.

ಅರ್ಹತೆ
ಸ್ನಾತಕೋತ್ತರ ಪದವಿಗಾಗಿ ಯಾವುದೇ ಪದವಿ ಕನಿಷ್ಠ ಶೇ. 50 ಅಂಶಗಳೊಂದಿಗೆ ಇರಬೇಕಾಗುತ್ತದೆ. ಸಂಸ್ಥೆಯವರು  ಪ್ರವೇಶಪರೀಕ್ಷೆ ಹಾಗೂ ಸಂದರ್ಶನದ ಮೂಲಕವೂ ಅಭ್ಯರ್ಥಿಗಳನ್ನು ಆರಿಸಬಹುದು. ಹಾಗೆಯೇ ಪದವಿಗಾಗಿ ಪಿ.ಯು. ಅಥವಾ
10+ 2 ತತ್ಸಮಾನ ವಿದ್ಯಾರ್ಹತೆ ಇರಬೇಕು.
ಈ ಉದ್ಯಮದಲ್ಲಿ ಕರಿಯರ್ ಮಾಡಿಕೊಳ್ಳಲು ಇಚ್ಛಿಸುವವರು ನಿರ್ಧಾರ ತೆಗೆದುಕೊಳ್ಳುವಿಕೆ (Decision making skill) ಕೌಶಲವನ್ನು ಅಭಿವೃದ್ಧಿಪಡಿಸಿಕೊಂಡಿರಬೇಕು.

ಒಂದು ಜಾಹೀರಾತು ಉದ್ಯಮಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ನಡೆಸುವ ಒಂದು ಸಂಸ್ಥೆ ಯಾವ ರೀತಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಬಹುದು?
1) ಪರಿಣಾಮಕಾರಿ ಸಂವಹನ ಕೌಶಲ (Effective Communication skills)
2) ನಿರೂಪಣೆ ಹಾಗೂ ನಿರ್ವಹಣೆ (Presentation & Management)
3) ತಂಡದ ಅಭಿವೃದ್ಧಿ ಹಾಗೂ ನಾಯಕತ್ವ ಗುಣಗಳು (Team Development and Leadership skills)
4) ಒತ್ತಡ ನಿರ್ವಹಣೆ (Stress Management)
5) ಮನಗಾಣಿಸುವುದು (Persuasiveness)
6) ಆತ್ಮವಿಶ್ವಾಸ ಬೆಳವಣಿಗೆ (Confidence Building)
7) ಸ್ಪರ್ಧಾತ್ಮಕತೆ (Competitiveness)

ಹಲವಾರು ದೇಶೀಯ ಹಾಗೂ ಬಹುರಾಷ್ಟ್ರೀಯ ಜಾಹೀರಾತು ಕಂಪನಿ ಹಾಗೂ ಏಜೆನ್ಸಿಗಳಿಗೆ ವಿಶೇಷವಾದ ವಿದ್ಯಾರ್ಹತೆಯುಳ್ಳ ಹಾಗೂ ಅನುಭವವುಳ್ಳ ಮಾನವ ಸಂಪನ್ಮೂಲದ ಆವಶ್ಯಕತೆ ಖಂಡಿತ ಇದೆ. ಹೀಗಿದ್ದರೂ ವ್ಯಕ್ತಿಗತ ಸೃಜನಶೀಲತೆ ಹಾಗೂ ಹೊಸ ನವನವೀನ ಕಲ್ಪನೆಗಳಿಗೆ ಜೀವಕೊಡುವ ಸಾಮರ್ಥ್ಯವುಳ್ಳವರಿಗೆ ಮೊದಲ ಆದ್ಯತೆ.

ಶುಲ್ಕ ಹಾಗೂ ಖರ್ಚು
ಶುಲ್ಕ ಹಾಗೂ ಖರ್ಚುಗಳು ವಿದ್ಯಾರ್ಥಿಗಳು ಆರಿಸಿಕೊಳ್ಳುವ ವಿದ್ಯಾಲಯ ಹಾಗೂ ತರಬೇತಿ ಕೇಂದ್ರದ ಮೇಲೆ ಅವಲಂಬಿತವಾಗಿರುತ್ತದೆ.

ವಿದ್ಯಾರ್ಥಿವೇತನ: ವಿದ್ಯಾರ್ಥಿವೇತನ ಕೇವಲ ಬೆಳರೆಣಿಕೆ ವಿದ್ಯಾರ್ಥಿಗಳಿಗೆ, ಅದೂ ತಮ್ಮ ವ್ಯಾಸಂಗದಲ್ಲಿ ಶ್ರೇಷ್ಠತೆಯನ್ನು ತೋರಿದವರಿಗೆ ಮಾತ್ರ ಸಿಗುವ ಸಾಧ್ಯತೆ ಇದೆ.

ಉದ್ಯೋಗಾವಕಾಶ: ಈ ಉದ್ಯಮದ ಉದ್ಯೋಗಾಂಕ್ಷಿಗಳು ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಬಹುದು. ದಿನಪತ್ರಿಕೆ, ನಿಯತಕಾಲಿಕೆ, ಟೀವಿ, ರೇಡಿಯೋ, ಮಾರುಕಟ್ಟೆ ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸ ಸಿಗುವ ಸಾಧ್ಯತೆ ಹೆಚ್ಚು ಹಾಗೂ ಸ್ವತಂತ್ರವಾಗಿಯೂ (Freelancer) ತಮ್ಮ ಸೇವೆಯನ್ನು ನೀಡಬಹುದು.

ವಿದ್ಯಾರ್ಥಿಗಳು ಜಾಹೀರಾತು ಮ್ಯಾನೇಜರ್ (Advertising Manager), ಮಾರಾಟ ಮ್ಯಾನೇಜರ್ (Sales Manager), ಸಾರ್ವಜನಿಕ ಸಂಪರ್ಕ ನಿರ್ದೇಶಕರು (Public Relation Directior), ಸೃಜನಶೀಲ ನಿರ್ದೇಶಕರು (Creative Director), ಕಾಪಿರೈಟರ್ (Copy Writer), ಮಾರುಕಟ್ಟೆ ಸಂವಹನ ನಿರ್ದೇಶಕರು (Marketing Communication Director)) ಮುಂತಾದ ಹುದ್ದೆಗಳನ್ನು ನಿರೀಕ್ಷಿಸಬಹುದು.

ವೇತನ: ಅಗತ್ಯಕ್ಕೆ ಅನುಗುಣವಾಗಿ ಹಾಗೂ ಹೆಚ್ಚು ಸಾಮರ್ಥ್ಯವುಳ್ಳ ವ್ಯಕ್ತಿಗಳಿಗೆ ಸೂಕ್ತ ವೇತನಕ್ಕೆ ಜಾಹೀರಾತು ಉದ್ಯಮದಲ್ಲಿ ನಿರ್ಬಂಧವೇ ಇಲ್ಲ. ಹೀಗಿದ್ದರೂ ಕಂಪೆನಿ ಅಥವಾ ಏಜೆನ್ಸಿಗಳ ಗಾತ್ರ, ವಹಿವಾಟು, ಕಾರ್ಯಕ್ಷೇತ್ರ, ಜನಪ್ರಿಯತೆ ಉದ್ಯೋಗಿಗಳ ವೇತನವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆರಂಭದಲ್ಲೇ  ಈಗಿನ ಮಾರುಕಟ್ಟೆಯಲ್ಲಿ ತಿಂಗಳಿಗೆ ಸುಮಾರು ಮೂವತ್ತು ಸಾವಿರ ರೂಪಾಯಿಗಳನ್ನು ಅಪೇಕ್ಷಿಸಬಹುದು. ನೀವು ಮಾಡುವ ಕೆಲಸದಲ್ಲಿ ಗುಣಮಟ್ಟ, ಅನುಭವ ಹೆಚ್ಚಿದಲ್ಲಿ, ನೀವು ಹೆಚ್ಚು ವೇತನವನ್ನು ಕಡಿಮೆ ಸಮಯದಲ್ಲಿಯೇ ಅಪೇಕ್ಷಿಸಬಹುದು.
ಗಿರೀಶ ಯರಲಕಟ್ಟಿಮಠ
(ಲೇಖಕರು ಸಹಾಯಕ ಪ್ರಾಧ್ಯಾಪಕ)

***

ಜಾಹೀರಾತು ಸಂಸ್ಥೆಗಳು ವಿವಿಧ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳನ್ನು ತಮ್ಮ ಸಂಸ್ಥೆಗಳ ವಿವಿಧ ವಿಭಾಗಗಳಿಗೆ ನೇಮಕಾತಿ ಮಾಡಿಕೊಳ್ಳುತ್ತವೆ. ಈ ವಿಭಾಗಗಳು ಹೀಗಿವೆ:

1) ಗ್ರಾಹಕಸೇವೆ
2) ಸ್ಟುಡಿಯೋ
3) ಮಾಧ್ಯಮ
4) ಹಣಕಾಸು
5) ಛಾಯಾಚಿತ್ರೀಕರಣ
6) ಪ್ರೊಡಕ್ಷನ್‌
1) ಗ್ರಾಹಕಸೇವೆ: ಎಂ.ಬಿ.ಎ. (ಮಾರ್ಕೆಟಿಂಗ್) ಅಥವಾ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಪದವಿ ಪಡೆದುಕೊಂಡಿರುವವರನ್ನು ಆದ್ಯತೆ ನೀಡುತ್ತಾರೆ.
2) ಸ್ಟುಡಿಯೋ: ಈ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಸಂಸ್ಥೆಗಳು ‘ವಾಣಿಜ್ಯಕಲೆ’(Commercial Art)ಯಲ್ಲಿ ಪದವಿ ಮುಗಿಸಿರುವವರನ್ನು ಅಥವಾ ಲಲಿತಕಲೆಗಳಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ (Bachelor of Fine Arts or Master of Fine Arts) ಪಡೆದುಕೊಂಡವರನ್ನು ನೇಮಿಸಿಕೊಳ್ಳುತ್ತಾರೆ.
3) ಮಾಧ್ಯಮ: ಈ ವಿಭಾಗದಲ್ಲಿ ಕೆಲಸ ಮಾಡಲು ಸಿದ್ಧರಿರುವವರು ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಅಥವಾ ಎಂ.ಬಿ.ಎ. ಇನ್ ಮೀಡಿಯಾ ಮ್ಯಾನೇಜ್‌ಮೆಂಟ್ ಪದವಿಯನ್ನು ಹೊಂದಿರಬೇಕಾಗಿರುತ್ತದೆ.
4) ಹಣಕಾಸು: ಸಿ.ಎ., ಐ.ಸಿ.ಡಬ್ಲ್ಯೂ., ಎಂ.ಬಿ.ಎ. (ಹಣಕಾಸು) ಮಾಡಿರುವ ವಿದ್ಯಾರ್ಥಿಗಳು ಈ ವಿಭಾಗದಲ್ಲಿ ಕೆಲಸ ನಿರೀಕ್ಷಿಸಬಹುದು.
5) ಛಾಯಾಚಿತ್ರ: ದೃಶ್ಯ-ಶ್ರವಣ ಮಾಧ್ಯಮದಲ್ಲಿ ಕೌಶಲ ಪಡೆದಿರಬೇಕು.
6) ಪ್ರೊಡಕ್ಷನ್‌: ಪ್ರಿಂಟಿಂಗ್ ಹಾಗೂ ಪ್ರೀ-ಪ್ರೆಸ್ ಪ್ರಕ್ರಿಯೆಯಲ್ಲಿ (Production) ಒಂದು ಕೋರ್ಸ್ ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT