ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರ ಕ್ರಿಕೆಟ್‌ನ ಸಿಹಿ, ಕಹಿ ನೆನಪುಗಳು...

Last Updated 29 ಜನವರಿ 2017, 19:30 IST
ಅಕ್ಷರ ಗಾತ್ರ

ಹು‘ಸರ್ಕಾರಿ ನೌಕರಿ ಕೊಡಿ’ಟ್ಟಿದ ಕೆಲ ವರ್ಷಗಳ ಬಳಿಕ ಅಂಬೆಗಾಲಿಡುತ್ತಾ, ಏಳುತ್ತ, ಬೀಳುತ್ತ ಸ್ವತಂತ್ರ ವಾಗಿ ನಡೆಯಲು ಪ್ರಯತ್ನಿಸುತ್ತ ಹೀಗೆ ಹಂತಹಂತವಾಗಿ ಪ್ರಗತಿ ಕಾಣುವ ಮಗುವಿನ ಹಾಗೆ ಅಂಧರ ಕ್ರಿಕೆಟ್‌ ಇತ್ತೀಚಿನ ವರ್ಷಗಳಲ್ಲಿ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದೆ.

14 ವರ್ಷಗಳ ಹಿಂದೆ ಕ್ರಿಕೆಟ್‌ ಆಡಲು ಆರಂಭಿಸಿದಾಗ ಈ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುತ್ತೇನೆ ಅಂದುಕೊಂಡಿರಲಿಲ್ಲ. ಅಂಧರ ಕ್ರಿಕೆಟ್‌  ಇದೆ ಎಂಬುದೇ ತುಂಬಾ ಜನಕ್ಕೆ ಗೊತ್ತಿರಲಿಲ್ಲ. ಅಂಧ ಕ್ರಿಕೆಟಿಗರ ಬದುಕಿನಲ್ಲಿಯೂ ಒಂದಲ್ಲಾ ಒಂದು ದಿನ ಬೆಳಕು ಮೂಡುತ್ತದೆ ಎನ್ನುವ ಭರವಸೆಯೂ ಇರಲಿಲ್ಲ.

ಆದರೆ ಹೋದ ವಾರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ವಿಷಯ ತಿಳಿದಾಗ ನನ್ನೆಲ್ಲಾ ತಪ್ಪು ಕಲ್ಪನೆಗಳು ದೂರಾದವು. ಇದು ನನಗೆ ಸಿಕ್ಕ ಪ್ರಶಸ್ತಿಯಷ್ಟೇ ಅಲ್ಲ, ನನ್ನಂತೆ ಅಂಧನಾಗಿದ್ದುಕೊಂಡು ಎತ್ತರದ ಸಾಧನೆ ಮಾಡಬೇಕೆನ್ನುವ ಛಲ ತೊಟ್ಟ ಪ್ರತಿಯೊಬ್ಬನಿಗೂ ಲಭಿಸಿದ ಗೌರವ. ಇದರಿಂದ ಬೇರೆ ಅಂಧ ಕ್ರಿಕೆಟಿಗರಿಗೂ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ಬಂದಿದೆ.

ಈ ಪ್ರಶಸ್ತಿಗೆ ಆಯ್ಕೆಯಾಗುವುದಕ್ಕೂ ಮೊದಲೇ ನಮ್ಮ ತಂಡದ ಆಟಗಾರರು ಸಂಭ್ರಮದಲ್ಲಿದ್ದೆವು. ಎರಡು ದಿನಗಳ ಹಿಂದೆ ಆರಂಭವಾದ ಅಂಧರ ಎರಡನೇ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಸಡಗರದಲ್ಲಿದ್ದೆವು. ಆಗ ನಾನು ನಾಲ್ಕು ವರ್ಷಗಳ ಹಿಂದಿನ ಖುಷಿಯ ದಿನಗಳನ್ನು ಮನಸ್ಸಿನಲ್ಲಿಯೇ ಮೆಲುಕು ಹಾಕುತ್ತಿದ್ದೆ.

ಚೊಚ್ಚಲ ಚುಟುಕು ವಿಶ್ವಕಪ್‌ಗೂ ಮೊದಲೇ ಮೂರು ಏಕದಿನ ವಿಶ್ವಕಪ್‌ಗಳಲ್ಲಿ ಆಡಿ ಬಂದಿದ್ದ ಭಾರತ ತಂಡಕ್ಕೆ ಹೊಸ ಅನುಭವಗಳ ಗುಚ್ಛ ಲಭಿಸಿತ್ತು. ಏಕೆಂದರೆ ಟೆಸ್ಟ್‌ ಮತ್ತು ಏಕದಿನ ಮಾದರಿಗಳ ಮೇಲಿನ ಪ್ರೀತಿ ಸೊರಗಿ ಟ್ವೆಂಟಿ–20 ಕ್ರಿಕೆಟ್‌ ಮೇಲೆ ಆಕರ್ಷಣೆ ಬೆಳೆದಿರುವ ದಿನಗಳಿವು. ಆದ್ದರಿಂದ ಅಂಧರಿಗೂ ಚುಟುಕು ಕ್ರಿಕೆಟ್ ಆಡಿಸಿದರೆ ಬೇಗನೆ ಖ್ಯಾತಿ ಲಭಿಸುತ್ತದೆ ಎನ್ನುವುದು ಭಾರತ ಅಂಧರ ಕ್ರಿಕೆಟ್‌ ಸಂಸ್ಥೆಯ ಆಶಯವಾಗಿತ್ತು.

ಇದೇ ಲೆಕ್ಕಾಚಾರದೊಂದಿಗೆ ವಿಶ್ವಕಪ್‌ ಕೂಡ ನಡೆದು ಯಶಸ್ಸು ಕಂಡಿತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ತವರಿನಲ್ಲಿಯೇ ಪ್ರಶಸ್ತಿ ಜಯಿಸಿದ್ದರಿಂದ ನಮ್ಮ ಸಂಭ್ರಮ ಇಮ್ಮಡಿಗೊಂಡಿತ್ತು. ಬೆಂಗಳೂರಿನ ಕ್ರಿಕೆಟ್‌ ಪ್ರೇಮಿಗಳು ನೀಡಿದ ಅಪಾರ ಬೆಂಬಲ ಮತ್ತು ಟ್ರೋಫಿ ಗೆದ್ದಾಗ ತೋರಿದ ಪ್ರೀತಿಯಿಂದ ಅಂಧರ ಕ್ರಿಕೆಟ್‌ ಬಗ್ಗೆ ಸಾಕಷ್ಟು ಜನರಲ್ಲಿ ಅರಿವು ಮೂಡತೊಡಗಿತು.

ಇದಾದ ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿಯೂ ಭಾರತ ಪ್ರಶಸ್ತಿ ಗೆದ್ದುಕೊಂಡಿತು. ಈ ಎರಡೂ ವಿಶ್ವಕಪ್‌ ಅಂಧರ ಕ್ರಿಕೆಟ್‌ ಅನ್ನು ನೋಡುವ ದೃಷ್ಟಿಕೋನ ಬದಲಿಸಿತು.

ಸಾಮಾಜಿಕ ಜಾಲತಾಣದ ನೆರವು
1998ರಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ ನಡೆದಿತ್ತು. ದೆಹಲಿಯಲ್ಲಿ ನಡೆದ ಆ ಟೂರ್ನಿ ಬಗ್ಗೆ ಹೆಚ್ಚು ಜನರಿಗೆ ತಿಳಿಯಲೇ ಇಲ್ಲ. ನಾಲ್ಕು ವರ್ಷಗಳ ಬಳಿಕ ಮತ್ತೊಂದು ವಿಶ್ವಕಪ್‌ಗೆ ಚೆನ್ನೈ ಆತಿಥ್ಯ ವಹಿಸಿತ್ತು. ಆಗಲೂ ಸಿಕ್ಕ ಬೆಂಬಲ ಅಷ್ಟಕ್ಕಷ್ಟೇ.

ಆದ್ದರಿಂದ ಯಾವ ನಿರೀಕ್ಷೆಯೂ ಇಲ್ಲದೇ ನಮ್ಮ ಪಾಡಿಗೆ ನಾವು ಕ್ರಿಕೆಟ್ ಆಡಿಕೊಂಡು ಇದ್ದೆವು. ಹಲವು ಬಾರಿ ಪಾಕಿಸ್ತಾನ, ಇಂಗ್ಲೆಂಡ್‌ ದೇಶಗಳಿಗೆ ಹೋಗಿ ಏಕದಿನ ಸರಣಿ ಆಡಿಬಂದೆವು. ಆ ದೇಶಗಳೂ ಭಾರತಕ್ಕೆ ಬಂದು ಸರಣಿ ಆಡಿದವು. ಆದರೂ ಅಂಧರ ಕ್ರಿಕೆಟ್‌ ಬೆಳೆಯುವ ಯಾವ ಲಕ್ಷಣಗಳೂ ಗೋಚರಿಸಲಿಲ್ಲ.  ಪ್ರಾಯೋಜಕರೂ ಸಿಗುತ್ತಿರಲಿಲ್ಲ.

ಹೀಗೆಯೇ ಮುಂದುವರಿದರೆ ನಮ್ಮ ಬದುಕಿನಂತೆ ಅಂಧರ ಕ್ರಿಕೆಟ್‌ ಕೂಡ ಮೂಲೆಗುಂಪಾಗುತ್ತದೆ ಎನ್ನುವ ಆತಂಕದಿಂದ ಹೊಸ ಪ್ರಯೋಗಗಳನ್ನು ಮಾಡಲು ಆರಂಭಿಸಿದೆವು. ನಾವು ಆಡಿದ ಪಂದ್ಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿದೆವು. ಪಂದ್ಯಗಳ ವಿಡಿಯೊ ತುಣುಕುಗಳನ್ನು ಯೂ ಟ್ಯೂಬ್‌ನಲ್ಲಿ ಹಾಕಿದೆವು. ಆಗ ನಿಧಾನವಾಗಿ ನಮ್ಮ ಯೋಜನೆಗೆ ಫಲ ಲಭಿಸತೊಡಗಿತು.

ಅಂತರ್ಜಾಲದಲ್ಲಿ ವಿಡಿಯೊ ನೋಡು ವವರ ಸಂಖ್ಯೆ ಹೆಚ್ಚಾಯಿತು. ಜೊತೆಗೆ ಅಂಧರ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡ ಬೇಕು ಎನ್ನುವ ಯೋಚನೆ ಜನರಲ್ಲಿ ಬರತೊಡಗಿತಾದರೂ ಅದನ್ನು ತೋರು ಗೊಟ್ಟಿರಲಿಲ್ಲ. 2012 ಮತ್ತು 2014ರಲ್ಲಿ ಗೆದ್ದ ವಿಶ್ವಕಪ್‌ ಟ್ರೋಫಿ ನಮ್ಮ ಕ್ರಿಕೆಟ್‌ನ ಚಿತ್ರಣವನ್ನೇ ಬದಲಿಸಿತು. ಎರಡು ವರ್ಷಗಳ ಹಿಂದೆ ಗೆದ್ದ ಏಕದಿನ ವಿಶ್ವಕಪ್‌ ಮರೆಯಲು ಸಾಧ್ಯವೇ ಇಲ್ಲ. ಏಕೆಂದರೆ ಫೈನಲ್‌ನಲ್ಲಿ ಪಾಕಿಸ್ತಾನ ತಂಡ ನೀಡಿದ್ದ 389 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿ ಜಯಭೇರಿ ಮೊಳಗಿಸಿದ್ದೆವು.

ಹಿಂದಿನ ನಾಲ್ಕು ವರ್ಷಗಳಿಂದ ಅಂಧರ ಕ್ರಿಕೆಟ್‌ ಅನ್ನು ಎಲ್ಲರೂ ಗುರುತಿಸುತ್ತಿದ್ದಾರೆ. ಆರಂಭದ ವರ್ಷಗಳಲ್ಲಿ ವಿಶ್ವಕಪ್‌ ಯಶಸ್ಸು ಕಾಣದೇ ಇದ್ದಾಗ ಹಲವಾರು ಜನ ಕೈ ಹಿಡಿದು ನಡೆಸಿದ್ದಾರೆ. ಅದರಲ್ಲಿ ಜಾರ್ಜ್ ಅಬ್ರಾಹಂ ಮತ್ತು ಜಿ.ಕೆ. ಮಹಾಂತೇಶ್ ಅವರ ಪಾತ್ರ ದೊಡ್ಡದು. ಅಬ್ರಾಹಂ ಅವರು ವಿದೇಶಗಳಿಗೆ ಹೋಗಿ ಅಂಧರ ಕ್ರಿಕೆಟ್‌ನ ಮಹತ್ವವನ್ನು ಸಾರಿ ಹೇಳಿದ್ದರು.

ವಿಶ್ವಕಪ್‌ನ ಪಂದ್ಯಗಳು ಹೆಚ್ಚು ಜನಪ್ರಿಯತೆ ಪಡೆಯಲು ಎಲ್ಲಾ ರಾಷ್ಟ್ರಗಳ ಬೆಂಬಲ ಬೇಕೆಂದು ಕೋರಿದರು. ಆ ಬಳಿಕ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ವಿಶ್ವ ಟೂರ್ನಿಗೆ ಆತಿಥ್ಯ ವಹಿಸಲು ಮುಂದೆ ಬಂದವು. ಇದುವರೆಗೂ 1998 (ದೆಹಲಿ), 2002 (ಚೆನ್ನೈ), 2006 (ಪಾಕಿಸ್ತಾನ) ಮತ್ತು 2014 (ಕೇಪ್‌ಟೌನ್‌, ದಕ್ಷಿಣ ಆಫ್ರಿಕಾ) ನಾಲ್ಕು ಸಲ ಏಕದಿನ ವಿಶ್ವಕಪ್‌ ನಡೆದಿವೆ.

ಆತಂಕದ ನಡುವೆಯೇ ಸಾಗುತ್ತಿದೆ ಕ್ರಿಕೆಟ್‌
ಇತ್ತೀಚಿನ ವರ್ಷಗಳಲ್ಲಿ ಅಂಧರ ಕ್ರಿಕೆಟ್ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆಯಾದರೂ ಕುಸಿದು ಬೀಳುವ ಆತಂಕ ಹೊತ್ತುಕೊಂಡೇ ಮುನ್ನಡೆಯಬೇಕಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನ ದೇಶಗಳ ಕ್ರಿಕೆಟ್‌ ಮಂಡಳಿಗಳು ಅಲ್ಲಿನ ಅಂಧರ ಕ್ರಿಕೆಟ್‌ಗೆ ಬೆಂಬಲ ನೀಡುತ್ತಿವೆ. ಆದರೆ ವಿಶ್ವದ ಶ್ರೀಮಂತ ಮಂಡಳಿ ಎನಿಸಿರುವ ಬಿಸಿಸಿಐ ಮಾತ್ರ ಅಂಧರ ಕ್ರಿಕೆಟ್‌ಗೆ ಮಾನ್ಯತೆ ನೀಡುವ ಬಗ್ಗೆ ಪೊಳ್ಳು ಭರವಸೆಯನ್ನು ನೀಡುತ್ತಲೇ ಇದೆ.

ಇದು ನಮ್ಮ ದೇಶದಲ್ಲಷ್ಟೇ ಇರುವ ಸಮಸ್ಯೆಯಲ್ಲ. 2014ರ ಅಂಧರ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸಿತ್ತು. ಇದಕ್ಕೆ ಅಲ್ಲಿನ ಕ್ರಿಕೆಟ್‌ ಮಂಡಳಿ ಟೂರ್ನಿ ಆಯೋಜಿಸಲು ಬೇಕಾಗುವ ಒಟ್ಟು ಹಣದಲ್ಲಿ ಅರ್ಧ ಖರ್ಚು ಭರಿ ಸುವುದಾಗಿ ಭರವಸೆ ಕೊಟ್ಟಿತ್ತು.

ಟೂರ್ನಿ ಆರಂಭವಾಗಲು ಕೆಲ ದಿನಗಳಷ್ಟೇ ಬಾಕಿಯಿದ್ದಾಗ ಯಾವ ಹಣವನ್ನೂ ನೀಡುವುದಿಲ್ಲ ಎಂದು ಕ್ರಿಕೆಟ್‌ ದಕ್ಷಿಣ ಆಫ್ರಿಕಾ ಹಿಂದಕ್ಕೆ ಸರಿದ ಕಾರಣ ವಿಶ್ವಕಪ್‌ನಂತಹ ಮಹತ್ವದ ಟೂರ್ನಿಯೇ ರದ್ದಾಗುವ ಅಪಾಯದಲ್ಲಿತ್ತು. ಆದರೂ ಅಲ್ಲಿನ ಅಂಧರ ಕ್ರಿಕೆಟ್‌ ಸಂಸ್ಥೆ ಸಾಕಷ್ಟು ಪಡಿಪಾಟಲು ಪಟ್ಟು ಟೂರ್ನಿ ನಡೆಸಿತು. ಹೀಗೆ ಅನೇಕ ಸಮಸ್ಯೆಗಳು ಇವೆ. ಆದ್ದರಿಂದ ಬಿಸಿಸಿಐ ಮಾನ್ಯತೆ ಕೊಟ್ಟರೆ ಪ್ರಾಯೋಜಕರಾದರೂ ಸಿಗುತ್ತಾರೆ.

‘ಸರ್ಕಾರಿ ನೌಕರಿ ಕೊಡಿ’
‘ನನ್ನದು ಅಂಧ ಕುಟುಂಬ. ಅಪ್ಪ, ಅಮ್ಮ ಅಂಧತ್ವದಲ್ಲಿಯೇ ಬದುಕು ಮುಗಿಸಿದರು. ಇಷ್ಟು ವರ್ಷ ನನ್ನ ಜೀವನ ದೊಡ್ಡಪ್ಪನ ಮೇಲೆ ಅವಲಂಬಿತವಾಗಿತ್ತು. ಇತ್ತೀಚಿಗೆ ಅವರೂ ತೀರಿಕೊಂಡರು. ಇದೇ ಚಿಂತೆಯಲ್ಲಿ ದೊಡ್ಡಮ್ಮ ಕೂಡ ಮೃತಪಟ್ಟರು. ಹೀಗಾಗಿ ಅನಾಥ ಭಾವ ಕಾಡುತ್ತಿದೆ. ಮುಂದಿನ ಜೀವನ ಹೇಗೆ ಎನ್ನುವ ಚಿಂತೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ  ನೌಕರಿ ನೀಡಬೇಕು’ ಎಂದು ಶೇಖರ್ ನಾಯ್ಕ ಮನವಿ ಮಾಡಿಕೊಂಡಿದ್ದಾರೆ.

‘ಏಕದಿನ ವಿಶ್ವಕಪ್‌ ಗೆದ್ದಾಗ ಮೊದಲ ಬಾರಿಗೆ ರಾಜ್ಯ ಸರ್ಕಾರ ನಗದು ಹಣ ನೀಡಿ ಬೆಂಬಲಿಸಿದೆ. ಆಗಲೂ ನೌಕರಿ ಕೊಡುವ ಬಗ್ಗೆ ಭರವಸೆ ನೀಡಿತ್ತು. ಈಗಲಾದರೂ  ಕೆಲಸ ಕೊಡಲಿ. ಇಲ್ಲವಾದರೆ ಬದುಕು ನಿಭಾಯಿಸಲು ಕಷ್ಟವಾಗುತ್ತದೆ’ ಎಂದೂ ಅವರು ನೋವು ತೋಡಿಕೊಂಡಿದ್ದಾರೆ.

ಶೇಖರ್‌ ನಾಯ್ಕ ಪರಿಚಯ
ಶಿವಮೊಗ್ಗ ಜಿಲ್ಲೆಯ ಹರಕೆರೆ ತಾಂಡದವರಾದ ಶೇಖರ್‌ ಅವರು  ಮೂರು ಏಕದಿನ ಮತ್ತು ಒಂದು ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತ ಅಂಧರ ತಂಡವನ್ನು ಮುನ್ನಡೆಸಿದ್ದಾರೆ.

2002ರಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯವಾಡಿದ ಶೇಖರ್, ಬಿ–1 ದರ್ಜೆಯ ಆಟಗಾರ. ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಅಂಧತ್ವದಲ್ಲಿಯೇ ಬದುಕು ಕಳೆದು ಹೋಗಬಾರದು ಎನ್ನುವ ಕಾರಣದಿಂದ ಹವ್ಯಾಸಕ್ಕಾಗಿ ಕ್ರಿಕೆಟ್ ಆಡಲು ಆರಂಭಿಸಿದ ಶೇಖರ್‌ ಹಂತಹಂತವಾಗಿ ವೃತ್ತಿಪರ ಆಟಗಾರನಾಗಿ ಬದಲಾದರು. ಆಟದ ಬಗ್ಗೆ ಹೊಂದಿದ್ದ ಛಲ ಮತ್ತು ಬದ್ಧತೆ ಅವರನ್ನು ಈ ಮಟ್ಟಕ್ಕೆ ಕರೆದುಕೊಂಡು ಬಂದಿದೆ.

ಭಾರತ ಅಂಧರ ತಂಡ ಆಡಿರುವ ಅಂತರರಾಷ್ಟ್ರೀಯ ಪಂದ್ಯಗಳು

*1998:  ಏಕದಿನ ವಿಶ್ವಕಪ್‌ನಲ್ಲಿ ಎಂಟು ಪಂದ್ಯಗಳು
*2002: ಏಕದಿನ ವಿಶ್ವಕಪ್‌ನಲ್ಲಿ ಎಂಟು ಪಂದ್ಯಗಳು
*2004: ಪಾಕಿಸ್ತಾನ ತಂಡದ ಜೊತೆ ಐದು ಪಂದ್ಯಗಳ ಏಕದಿನ ಸರಣಿ
*2005: ಪಾಕಿಸ್ತಾನದ ಎದುರು ಐದು ಪಂದ್ಯಗಳ ಏಕದಿನ ಸರಣಿ
*2006:  ಪಾಕಿಸ್ತಾನ ಎದುರು ಐದು ಪಂದ್ಯಗಳ ಏಕದಿನ ಸರಣಿ
*2007: ಇಂಗ್ಲೆಂಡ್‌ ಎದುರು ಐದು ಪಂದ್ಯಗಳ ಏಕದಿನ ಸರಣಿ
*2011: ಪಾಕಿಸ್ತಾನ ಎದುರು ಒಟ್ಟು ಹತ್ತು ಪಂದ್ಯಗಳ ಏಕದಿನ ಸರಣಿ
*2012: ಪಾಕಿಸ್ತಾನ ಎದುರು ಮೂರು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳ ಸರಣಿ
*2012: ಟ್ವೆಂಟಿ–20 ವಿಶ್ವಕಪ್‌ನಲ್ಲಿ 11 ಪಂದ್ಯ
*2013: ಪಾಕಿಸ್ತಾನ ಎದುರು ಮೂರು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳ ಸರಣಿ
*2014: ಏಕದಿನ ವಿಶ್ವಕಪ್‌ನಲ್ಲಿ ಹತ್ತು ಪಂದ್ಯಗಳು
*2015 ಇಂಗ್ಲೆಂಡ್ ಎದುರು ಮೂರು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳ ಸರಣಿ
*2015: ಏಷ್ಯಾ ಕಪ್‌ನಲ್ಲಿ ಆರು ಟ್ವೆಂಟಿ–20 ಪಂದ್ಯಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT