ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನಿತೆಯರ ಕಂಗಳಲ್ಲಿ ವಿಶ್ವಕಪ್ ಕನಸು

Last Updated 29 ಜನವರಿ 2017, 19:30 IST
ಅಕ್ಷರ ಗಾತ್ರ

ತಮಿಳು ಭಾಷಿಕ ಕುಟುಂಬದ ಆ ಹುಡುಗಿ ಬರೋಬ್ಬರಿ ಎಂಟು ವರ್ಷ ಶಾಸ್ತ್ರೀಯ ನೃತ್ಯ ಅಭ್ಯಾಸ ಮಾಡಿದ್ದಳು. ಕಲಾಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡುವ ಪ್ರತಿಭೆಯೂ ಇತ್ತು. ಆದರೆ ಕಾಲ್ಗೆಜ್ಜೆ ತೆಗೆದಿಟ್ಟು ಕ್ರಿಕೆಟ್ ಪ್ಯಾಡ್ ಕಟ್ಟಿಕೊಂಡು ಅಂಗಳಕ್ಕೆ ಬಂದ ಹುಡುಗಿ ಮಹಿಳಾ ಕ್ರಿಕೆಟ್‌ನ ‘ಸಚಿನ್ ತೆಂಡೂಲ್ಕರ್’ ಆಗಿ ಬೆಳೆದಳು.

ಕಳೆದ 18 ವರ್ಷಗಳಿಂದ ಭಾರತದ ವನಿತೆಯರ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯಾಗಿರುವ ಮಿಥಾಲಿ ರಾಜ್ ಅವರೇ ಆ ಬಾಲಕಿ. 1999ರಲ್ಲಿ ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದಾಗಿನಿಂದಲೂ ಅವರಿಗಿರುವ ಏಕೈಕ ಕನಸು ವಿಶ್ವಕಪ್ ವಿಜಯ. ಐದು ವಿಶ್ವಕಪ್ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸಿರುವ ಮಿಥಾಲಿ ಕನಸು ಇನ್ನೂ ಕೈಗೂಡಿಲ್ಲ. 2005ರಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಂದಿರಲಿಲ್ಲ.

ಆಗ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮಿಥಾಲಿ ನಾಯಕತ್ವದ ತಂಡ ಫೈನಲ್ ಪ್ರವೇಶಿಸಿತ್ತು. ಆದರೆ, ಬಲಿಷ್ಠ ಆಸ್ಟ್ರೇಲಿಯಾ ಎದುರು ಸೋತಿತ್ತು. 2013ರಲ್ಲಿಯೂ ಮಿಥಾಲಿ ಅವರ ಏಕಾಂಗಿ ಹೋರಾಟಕ್ಕೆ ಫಲ ದೊರೆತಿರಲಿಲ್ಲ. ಈಗ ಮತ್ತೊಮ್ಮೆ ಕನಸು ಗರಿಗೆದರಿದೆ.

ಫೆಬ್ರುವರಿ 7ರಿಂದ 21ರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಆಡುವ ಭಾರತ ತಂಡದ ಸಾರಥ್ಯವನ್ನು ಮಿಥಾಲಿ ವಹಿಸಲಿದ್ದಾರೆ. ಈ ಟೂರ್ನಿಯಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳನ್ನು ಜೂನ್ 24 ರಿಂದ ಜುಲೈ 23ರವರೆಗೆ ಇಂಗ್ಲೆಂಡ್‌ನಲ್ಲಿ ನಡೆಯುವ ಐಸಿಸಿ ವನಿತೆಯರ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗುವುದು. 5 ಮತ್ತು 6ನೇ ಸ್ಥಾನ ಪಡೆದ ತಂಡಗಳು ಐಸಿಸಿ ಮಹಿಳೆಯ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಸ್ಥಾನ ಪಡೆಯಲಿವೆ.

ಅರ್ಹತಾ ಟೂರ್ನಿಯ ಎ ಗುಂಪಿನಲ್ಲಿ ಭಾರತ ಆಡಲಿದೆ. ಶ್ರೀಲಂಕಾ, ಐರ್ಲೆಂಡ್, ಜಿಂಬಾಬ್ವೆ ಮತ್ತು ಥಾಯ್ಲೆಂಡ್ ತಂಡಗಳು ಈ ಗುಂಪಿನಲ್ಲಿವೆ. ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂ ಗಿನಿ ದೇಶಗಳ ತಂಡಗಳು ಇವೆ. ಆರು ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಈಗಾಗಲೇ ವಿಶ್ವಕಪ್ ಟೂರ್ನಿಗೆ ನೇರಪ್ರವೇಶ ಗಿಟ್ಟಿಸಿವೆ. 

ಕ್ರಿಕೆಟ್‌ ಆಟದ ಸಂಧ್ಯಾಕಾಲದಲ್ಲಿರುವ 34 ವರ್ಷದ ಮಿಥಾಲಿ ಅವರಿಗೆ ತಂಡವನ್ನು ವಿಶ್ವಕಪ್‌ ಕನಸು ನನಸು ಮಾಡಿಕೊಳ್ಳುವ ಛಲದಲ್ಲಿದ್ದಾರೆ. ಅದಕ್ಕಾಗಿ ಮೊದಲು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವತ್ತ ಚಿತ್ತ ನೆಟ್ಟಿದ್ದಾರೆ.

ಅರ್ಹತೆ ಗಿಟ್ಟಿಸುವ ವಿಶ್ವಾಸ
ಅನುಭವಿ ಮತ್ತು ಪ್ರತಿಭಾನ್ವಿತ ಯುವ ಆಟಗಾರ್ತಿಯರು ಇರುವ ಈ ಬಾರಿಯ ತಂಡವು ಅರ್ಹತಾ ಟೂರ್ನಿಯಲ್ಲಿ ಫೈನಲ್ ಹಂತ ತಲುಪುವ ವಿಶ್ವಾಸದಲ್ಲಿದೆ.

ಐಸಿಸಿ ಶ್ರೇಷ್ಠಾಂಕ ಪಟ್ಟಿಯ ಬ್ಯಾಟ್ಸ್‌ವುಮನ್‌ಗಳಲ್ಲಿ ಮಿಥಾಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರಷ್ಟೇ ಅನುಭವಿ ಆಟಗಾರ್ತಿ ಜೂಲನ್ ಗೋಸ್ವಾಮಿ ಬೌಲರ್‌ಗಳ ಯಾದಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 177 ವಿಕೆಟ್‌ಗಳನ್ನು ಗಳಿಸಿರುವ ಅನುಭವಿ ಮಧ್ಯಮವೇಗಿ ಜೂಲನ್ ತಂಡದ ಬೌಲಿಂಗ್ ಸಾರಥ್ಯದ ಹೊಣೆ ಹೊತ್ತಿದ್ದಾರೆ. ಅವರಿಗೆ ಜೊತೆ ನೀಡಲು ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್, ಲೆಗ್‌ಸ್ಪಿನ್ನರ್ ಪೂನಮ್ ಯಾದವ್, ಏಕ್ತಾ ಬಿಷ್ಟ್ ಇದ್ದಾರೆ. 

ಆದರೆ, ಭಾರತದ ಪ್ರಮುಖ ಶಕ್ತಿಯೆಂದರೆ ಬ್ಯಾಟಿಂಗ್. ನಾಯಕಿ ಮಿಥಾಲಿ, ಹರ್ಮನ್‌ಪ್ರೀತ್ ಕೌರ್, ಕನ್ನಡತಿ ವೇದಾ ಕೃಷ್ಣಮೂರ್ತಿ, ತಿರುಷಕಾಮಿನಿ, ವಿಕೆಟ್‌ಕೀಪರ್–ಬ್ಯಾಟ್ಸ್‌ವುಮನ್ ಸುಷ್ಮಾ ವರ್ಮಾ, ಹೊಸ ಪ್ರತಿಭೆ ಮೋನಾ ಮೆಷ್ರಮ್, ಶಿಖಾ ಪಾಂಡೆ ಬ್ಯಾಟಿಂಗ್ ಬಲವಾಗಿದ್ದಾರೆ. 24 ವರ್ಷದ ಸುಷ್ಮಾ ಅವರಿಗೆ ಮೊದಲ ವಿಶ್ವಕಪ್ ಟೂರ್ನಿ ಆಡುವ ಛಲವಿದೆ.

ಅಲ್ಲದೇ ಎ ಗುಂಪಿನಲ್ಲಿ ಇರುವ ತಂಡಗಳು ಭಾರತಕ್ಕೆ ಹೋಲಿಕೆ ಮಾಡಿದರೆ ಅಷ್ಟೊಂದು ಬಲಶಾಲಿಗಳಲ್ಲ. ಭಾರತದ ಆಟಗಾರ್ತಿಯರಿಗೆ ಇರುವಷ್ಟು ಅನುಭವವೂ ಅವರಿಗೆ ಇಲ್ಲ. ಇತ್ತೀಚೆಗೆ ಬಿಸಿಸಿಐ ಕೂಡ ಮಹಿಳೆಯರ ಕ್ರಿಕೆಟ್‌ ಬೆಳವಣಿಗೆಗೆ ಹೆಚ್ಚಿನ ಆಸಕ್ತಿ ವಹಿಸಿದೆ.

ಆಧುನಿಕ ತಂತ್ರಜ್ಞಾನ ಮತ್ತು ತರಬೇತಿಗಳನ್ನು ಒದಗಿಸುತ್ತಿದೆ. ಇದರಿಂದಾಗಿ ಮಹಿಳಾ ಕ್ರಿಕೆಟ್‌ನತ್ತ ಒಲವು ತೋರುವವರ ಸಂಖ್ಯೆಯೂ ಬೆಳೆಯುತ್ತಿದೆ. ಅದರಿಂದಾಗಿ ತಂಡವು ಬಲಿಷ್ಠವಾಗಿ ಬೆಳೆಯುತ್ತಿದೆ. ಆದರೆ, ನಾಕೌಟ್‌ ಹಂತದಲ್ಲಿ ನಿಜವಾದ ಸವಾಲು ಭಾರತಕ್ಕೆ ಎದುರಾಗುವ ಸಾಧ್ಯತೆ ಇದೆ.

ಹರ್ಮನ್ ಮಿಂಚು
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಈಗ ಪ್ರಖರವಾಗಿ ಬೆಳಗುತ್ತಿರುವ ಹೆಸರು ಹರ್ಮನ್‌ಪ್ರೀತ್ ಕೌರ್ ಅವರದ್ದು. ಪಂಜಾಬ್‌ನ ಮೊಗಾ ಗ್ರಾಮದ ಹುಡುಗಿ ಭಾರತ ತಂಡದ ಆಲ್‌ರೌಂಡರ್ ಆಗಿ ಹಲವು ಜಯಗಳಿಗೆ ಕಾರಣರಾಗಿದ್ದಾರೆ. ಚುರುಕಾಗಿ ಫೀಲ್ಡಿಂಗ್ ಮಾಡುವ ಹರ್ಮನ್‌ಪ್ರೀತ್ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಬಹುತೇಕ ದೇಶಗಳ ಬೌಲರ್‌ಗಳಿಗೆ ಸವಾಲಾಗಿದೆ.

ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಟೂರ್ನಿಯಲ್ಲಿ ಹರ್ಮನ್ ಅವರ ಅಬ್ಬರದ ಬ್ಯಾಟಿಂಗ್ ಕ್ರಿಕೆಟ್‌ಪ್ರೇಮಿಗಳ ಮನಗೆದ್ದಿತ್ತು. ಆ ಟೂರ್ನಿಯಲ್ಲಿ ಪಂದ್ಯಶ್ರೇಷ್ಠ ಆಟಗಾರ್ತಿ ಗೌರವ ಪಡೆದ ಭಾರತದ ಪ್ರಥಮ ಆಟಗಾರ್ತಿ ಅವರಾಗಿದ್ದರು.

‘ಪ್ರತಿಯೊಂದು ಮಾದರಿಯಲ್ಲಿಯೂ ತಂಡಕ್ಕೆ ಉಪಯುಕ್ತವಾಗುವ ಆಟವಾಡುವ ಛಲ ನನ್ನದು. ಹೋದ ಬಾರಿ ವಿಶ್ವಕಪ್‌ನಲ್ಲಿ ಚೆನ್ನಾಗಿ ಆಡಿದ್ದೆವು. ಈ ಬಾರಿಯೂ ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದು ವಿಶ್ವಕಪ್‌ ಟೂರ್ನಿಗೆ ಹೋಗುತ್ತೇವೆ. ಅಲ್ಲಿಯೂ ಫೈನಲ್ ತಲುಪುವ ವಿಶ್ವಾಸ ನಮಗಿದೆ’ ಎಂದು ಹರ್ಮನ್ ಈಚೆಗೆ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಹೋದ ವರ್ಷ ವೆಸ್ಟ್‌ ಇಂಡೀಸ್  ಎದುರು ವಿಜಯವಾಡದಲ್ಲಿ ನಡೆದಿದ್ದ ಟೂರ್ನಿಯಲ್ಲಿ  ಮಿಥಾಲಿ ಅನುಪಸ್ಥಿತಿಯಲ್ಲಿ ಹರ್ಮನ್‌  ನಾಯಕತ್ವ ವಹಿಸಿದ್ದರು. ಮಿಥಾಲಿ, ಜೂಲನ್ ಅವರ ನಂತರ ಭಾರತದ ವನಿತೆಯರ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಪ್ರತಿಭಾನ್ವಿತ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಹರ್ಮನ್ ಅವರಿಂದ ಸಾಕಷ್ಟು ನಿರೀಕ್ಷೆಗಳು ಇವೆ.

ತಂಡದ ಪೂರ್ಣಾವಧಿ ನಾಯಕಿಯಾಗುವ ಮುನ್ನ ಮಿಥಾಲಿ ರಾಜ್ ಅವರಿಗೆ ವಿಶ್ವಕಪ್ ಕಾಣಿಕೆ ನೀಡುವ ಆಸೆಯೂ ಹರ್ಮನ್‌ಗೆ ಇದೆ. ಅದಕ್ಕಾಗಿ ತಮ್ಮ ಸಂಪೂರ್ಣ ಸಾಮರ್ಥ್ಯ ಪಣಕ್ಕೆ ಒಡ್ಡಲು ಸಿದ್ಧರಾಗಿದ್ದಾರೆ.

ಕನ್ನಡತಿಯರ ಕರಾಮತ್ತು
ಐಸಿಸಿ ಬೌಲರ್‌ಗಳ ಶ್ರೇಷ್ಠಾಂಕ ಪಟ್ಟಿಯಲ್ಲಿ ಹತ್ತನೇ ಸ್ಥಾನ ಹೊಂದಿರುವ ರಾಜೇಶ್ವರಿ ಗಾಯಕವಾಡ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಪ್ರಮುಖ ಶಕ್ತಿಯಾಗಿರುವ ವೇದಾ ಕೃಷ್ಣಮೂರ್ತಿ ಅವರು ಕರ್ನಾಟಕದ ಪ್ರತಿಭೆಗಳು.

ವಿಜಯಪುರದ ರಾಜೇಶ್ವರಿ ಎಡಗೈ ಸ್ಪಿನ್ ಬೌಲಿಂಗ್‌ನಲ್ಲಿ ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ. ಅವರು 2014ರಲ್ಲಿ ಶ್ರೀಲಂಕಾ ಎದುರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಹೋದ ವರ್ಷ ವಿಂಡೀಸ್ ಎದುರಿನ ಸರಣಿಯಲ್ಲಿ ರಾಜೇಶ್ವರಿ ಮತ್ತು ವೇದಾ ಅವರ ಆಟದಿಂದ ಕ್ಲೀನ್‌ಸ್ವೀಪ್ ಗೆಲುವು ಸಾಧ್ಯವಾಗಿತ್ತು.

ವೇದಾ ಅವರ ಬ್ಯಾಟಿಂಗ್ ಶೈಲಿಯು ಆಕರ್ಷಕ ಮತ್ತು ಕಾಪಿಪುಸ್ತಕದ ಕೌಶಲ್ಯಗಳಿಂದ ತುಂಬಿರುವುದು ಅವರ ಯಶಸ್ಸಿನ ಗುಟ್ಟು. ದಕ್ಷಿಣ ಭಾರತದ ಕ್ರಿಕೆಟಿಗರ ಪ್ರಮುಖ ಅಸ್ತ್ರವಾದ ಕವರ್‌ ಡ್ರೈವ್ ಮತ್ತು ಸ್ಕ್ವೇರ್‌ಕಟ್‌ಗಳಲ್ಲಿ ವೇದಾ ಕೂಡ ಪರಿಣತಿ ಸಾಧಿಸಿದ್ದಾರೆ. ಡೆತ್ ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವ ಮತ್ತು ರನ್‌ ಕೊಳ್ಳೆ ಹೊಡೆಯುವ ಕಲೆ ಅವರಿಗೆ ಇದೆ. ಅದರಿಂದಾಗಿಯೇ ಅವರು ತಂಡದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿದ್ದಾರೆ.

ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಆಡಲಿರುವ ತಂಡ
ಮಿಥಾಲಿ ರಾಜ್ (ನಾಯಕಿ), ಏಕ್ತಾ ಬಿಷ್ಟ್, ರಾಜೇಶ್ವರಿ ಗಾಯಕವಾಡ್, ಜೂಲನ್ ಗೋಸ್ವಾಮಿ, ಹರ್ಮನ್‌ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ, ಮೋನಾ ಮೆಷ್ರಮ್, ಶಿಖಾ ಪಾಂಡೆ, ಸುಕನ್ಯಾ ಪರಿದಾ, ದೀಪ್ತಿ ಶರ್ಮಾ, ಎಂ.ಡಿ. ತಿರುಷಕಾಮಿನಿ, ದೇವಿಕಾ ವೈದ್ಯ, ಸುಷ್ಮಾ ವರ್ಮಾ, ಪೂನಮ್ ಯಾದವ್, ಕೋಚ್: ಪೂರ್ಣಿಮಾ ರಾವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT