ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಠಪಾಠ, ಕಲಿಕೆಗೆ ಕಂಟಕ

Last Updated 29 ಜನವರಿ 2017, 19:30 IST
ಅಕ್ಷರ ಗಾತ್ರ

ಪರೀಕ್ಷೆಗಳು ಹತ್ತಿರವಾಗುತ್ತಿವೆ. ಮನೆಯಂಗಳದಲ್ಲಿ ಬೀದಿಗೆಲ್ಲ ಕೇಳಿಸುವಂತೆ ಮಕ್ಕಳ ಓದು. ಹಲವೊಮ್ಮೆ ಉರು ಜೋರು! ಅಂದರೆ ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಬರುವ ಪ್ರಶ್ನೆಗಳನ್ನು ಎದುರಿಸಲು ಸಿದ್ಧರಾಗುವುದು. ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆ ಕಾಣಿಸಿದರಾಯಿತು ಅದರ ಮುನ್ನೆಲೆ ಹಿನ್ನೆಲೆಯ ಗೋಜಿಗೆ ಹೋಗದೆ ಯಾಂತ್ರಿಕವಾಗಿ ಗಿಳಿಪಾಠ ಇಳಿಸುವುದು. ಅಲ್ಲಿಗೆ ಪರೀಕ್ಷೆ, ಜ್ಞಾನದ ಪರೀಕ್ಷೆಯಾಗದೆ ಜ್ಞಾಪಕ ಶಕ್ತಿಯ ಪರೀಕ್ಷೆ ಎಂದಾಯಿತು.

ಶಿಕ್ಷಣವೆಂದರೆ ನೆನಪಿನ ಸಾಮರ್ಥ್ಯವಲ್ಲ. ಕಂಠಪಾಠ ಮಾಡಿ ಹೆಚ್ಚಿನ ಅಂಕಗಳನ್ನು ಗಳಿಸಬಹುದು. ಆದರೆ ಆ ಅಂಕಗಳಿಂದ ಅರಿವು, ವಿವೇಕ ಕಿಂಚಿತ್ತೂ ವೃದ್ಧಿಸದು. ಒಂದು ಟೇಪ್ ರೆಕಾರ್ಡರ್ ಸಹ ಹೇಳಿದ್ದನ್ನು ಮರು ಒಪ್ಪಿಸುತ್ತದೆ. ವಿಪರ್ಯಾಸವೆಂದರೆ ವಿದ್ಯಾರ್ಥಿಗಳಿಗೆ ಕೆಲವು ಬೋಧಕರು, ಪೋಷಕರೇ ಬಾಯಿಪಾಠ ಉತ್ತೇಜಿಸುವುದಿದೆ. ತಮ್ಮ ಜನಪ್ರಿಯತೆಗಾಗಿ ಮಕ್ಕಳ ಉಜ್ವಲ ಭವಿತವ್ಯವನ್ನವರು ಹದಗೆಡಿಸುತ್ತಾರೆಂದೇ ಹೇಳಬೇಕು.

ಶ್ರದ್ಧಾಸಕ್ತಿ ಇಲ್ಲದವರ ಅಸ್ತ್ರ ಕಂಠಪಾಠ. ಕಲಿಯುವ ಕುತೂಹಲ, ಅಸ್ಥೆಯುಳ್ಳವರಿಗೆ ಉರು ಹಚ್ಚುವ ಪ್ರಮೇಯವೇ ಬರದು. ಪಾಠ ಅರ್ಥವಾದರೆ  ನೆನಪಿನಲ್ಲಿ ಅದು ಆಳವಾಗಿಯೇ ಬೇರೂರಿರುತ್ತದೆ. ಬಾಯಿಪಾಠದಿಂದ ನೇರ ಪ್ರಶ್ನೆಗಳನ್ನೇನೋ ಉತ್ತರಿಸಬಹುದು. ಆದರೆ ತಿರುಚಿದ ಪ್ರಶ್ನೆಗಳನ್ನು ಕೇಳಿದರೆ ಅವನ್ನು ಗ್ರಹಿಸಿ ಸಂಬಾಳಿಸುವುದು ಹೇಗೆ? ಬೈಕ್ ರಿಪೇರಿಯವ ಯಾವ ದುರಸ್ತಿಗೆ ಯಾವ ನಂಬರಿನ ಉಪಕರಣ ಅಂತ ಬಾಯಿಪಾಠ ಮಾಡುವುದಿಲ್ಲ.

ಅನುಭವವೇ ಆತನಿಗೆ ಶ್ರೀರಕ್ಷೆ. ಹೋಂವರ್ಕ್, ಪ್ರಾಜೆಕ್ಟ್, ಸೆಮಿನಾರ್, ಪ್ರಾಯೋಗಿಕ ತರಗತಿ, ಸಂಪನ್ಮೂಲ ಉಪನ್ಯಾಸ, ಸಂವಾದ ಇವನ್ನು ಬಹುತೇಕ ವಿದ್ಯಾರ್ಥಿಗಳು ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷ್ಯ ತಳೆಯುತ್ತಾರೆ. ಅವುಗಳಲ್ಲಿ ತನ್ಮಯತೆಯಿಂದ ತೊಡಗಿದರೆ ಖಂಡಿತವಾಗಿಯೂ ಬುದ್ಧಿವಂತರಾಗಬಹುದು.

ವೃಥಾ ಶಿಕ್ಷಣ ಪದ್ಧತಿ ಸಮರ್ಪಕವಾಗಿಲ್ಲ, ಪರೀಕ್ಷಾಕ್ರಮ ಸರಿಯಿಲ್ಲ ಅಂತ ಬೆರಳು ಮಾಡಿ ತೋರಿಸುವ ಮುನ್ನ ವಿದ್ಯಾರ್ಥಿಗಳು, ಬೋಧಕರು, ಪೋಷಕರು ತಮಗಿರುವ ಹೊಣೆಗಾರಿಕೆಯನ್ನು ತಾವು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳುವುದು ಅಗತ್ಯ. ಆ ಬಗ್ಗೆ ಅವಲೋಕಿಸಿಕೊಳ್ಳಬೇಕು, ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

ಶಿಕ್ಷಣದ ಗುರಿ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ. ಅದು ಕೇವಲ ಪಠ್ಯದಿಂದ ಕೈಗೂಡದು. ಸ್ವಂತ ಅಧ್ಯಯನದಿಂದ, ಅನುಭವದಿಂದ, ಸುತ್ತಮುತ್ತಲ ಲಕ್ಷ್ಯದಿಂದ, ಸಮಾಜದಿಂದ ಲಭಿಸುತ್ತದೆ. ಜ್ಞಾಪಕ ಶಕ್ತಿ ಕಡಿಮೆ ಎಂದ ಮಾತ್ರಕ್ಕೆ ದಡ್ಡತನವೆಂದೇನಲ್ಲ. ಮತ್ತೊಮ್ಮೆ, ಮಗದೊಮ್ಮೆ ಓದಬೇಕು, ಮೊದಲಿಗಿಂತ ಪರಿಶ್ರಮಿಸಿ  ಓದಬೇಕು ಎನ್ನುವುದು ಅದರ ಅರ್ಥ. ಪರಿಶೋಧನೆ, ಪುನರಾವರ್ತನೆ ಫಲಕಾರಿ. ಸರ್ವಜ್ಞನೇ ಹೇಳಿದಂತೆ ಬರೆಯದೇ ಓದುವುದು ಅಪ್ರಯೋಜಕ. ವಿಶೇಷವಾಗಿ ಗಣಿತ ಸೂತ್ರಗಳನ್ನು ಅವು ಹೇಗೆ ನಿರೂಪಿತವಾದವು ಎಂದು ಅರ್ಥೈಸಿಕೊಂಡರೆ ನೆನಪಿಡುವ ಅಗತ್ಯವಿಲ್ಲ.

ತಾವಾಗಿಯೇ ದಕ್ಕುತ್ತವೆ. ಒಮ್ಮೆಗೇ ಎಲ್ಲವನ್ನೂ ಓದಿಬಿಡಬೇಕೆನ್ನುವ ಅವಸರ ಸಲ್ಲದು. ಮಾನಸಿಕ ಹಾಗೂ ದೈಹಿಕ ಒತ್ತಡಗಳೇ ವಿದ್ಯಾರ್ಥಿಗಳ ಸಮರ್ಥ ಕಲಿಕೆಗೆ ತೊಡಕುಗಳಾಗಿರುವುದು ಸ್ಪಷ್ಟ. ಒಂದೆಡೆ ಹೆಚ್ಚಿನ ಪಠ್ಯವಿಷಯ ಅವರಲ್ಲಿ ಮಾನಸಿಕ ಉದ್ವೇಗಕ್ಕೆ ಕಾರಣವಾಗುತ್ತದೆ. ಇನ್ನೊಂದೆಡೆ ಪೋಷಕರು ಅವರಿಗೆ ಮನಸ್ಸಿಲ್ಲದಿದ್ದರೂ ಬಲವಂತಿಸಿ ಟ್ಯೂಷನ್‌ಗೆ ಕಳಿಸುತ್ತಾರೆ.

ಶಾಲೆ–ಕಾಲೇಜಿನಲ್ಲಿ ಕಲಿಯದ ತಮ್ಮ ಮಕ್ಕಳು ಟ್ಯೂಷನ್‌ನಲ್ಲಿ ಕಲಿಯುತ್ತಾರೆನ್ನುವುದು ಪೋಷಕರಿಗೆ ಹೇಗೆ ಖಾತರಿಯೊ ಅರ್ಥವಾಗದು. ಮೊದಲಿಗೆ  ಅಂಕಗಳು ಅಧಿಕವಾದಂತೆ ಉತ್ತಮ ಭವಿಷ್ಯವೆಂಬ ಭ್ರಮೆಯಿಂದ  ಪೋಷಕರು ಹೊರಬರಬೇಕು. ಪರೀಕ್ಷೆಯಲ್ಲಿ ತಮ್ಮ ಮಕ್ಕಳು ಪಾಸಾಗಲು ಕನಿಷ್ಠ ಅಂಕಗಳನ್ನು ಪಡೆದರೂ ಸಾಕು.

ಆಯಾ ವಿಷಯಗಳಲ್ಲಿನ ಮೂಲ ಪರಿಕಲ್ಪನೆಗಳನ್ನು ಗ್ರಹಿಸಬೇಕು ಎನ್ನುವ ಇರಾದೆ ಅವರಿಗೆ ಇರಬೇಕು. ಪರೀಕ್ಷೆ ಪೈಪೋಟಿಯಲ್ಲ. ಅದು ಕಲಿಕೆಯ ಆಹ್ಲಾದ, ಆನಂದವನ್ನು ಕೊಲ್ಲಬಾರದು. ವಿದ್ಯಾರ್ಜನೆಗೆ ಪರೀಕ್ಷೆಯೇ ಅಡ್ಡಿ ಎನ್ನುವ ಸ್ಥಿತಿ ಬರಬಾರದು.

ಪರೀಕ್ಷಾರ್ಥಿಗಳ ಆರ್ಭಟ ಗಮನಿಸಿದರೆ ಅವರು ತಾವು ವರ್ಷವಿಡೀ ಅಧ್ಯಯನ, ಮನನ ಮಾಡಿದ್ದನ್ನು ದಾಖಲಿಸಲು ಹೊರಟಿದ್ದಾರೆ ಅಂತ ಅನ್ನಿಸುವುದೇ ಇಲ್ಲ. ಬದಲಿಗೆ ಇಡೀ ಚಿತ್ರಣ ಅಂಕಗಳನ್ನು ಬಾಚಲು ಧಾವಿಸುತ್ತಿರುವ  ಓಟಗಾರರಂತೆ ಭಾಸವಾಗುತ್ತದೆ. ಈ ಸ್ಪರ್ಧೆ ಏನೆಲ್ಲ ನ್ಯೂನತೆಗಳನ್ನು ಸೃಜಿಸಿದೆಯೆಂದರೆ  ವಿದ್ಯಾರ್ಥಿಗಳ ನಡುವೆ ಪಠ್ಯಪುಸ್ತಕ, ಆಕರ ಗ್ರಂಥ, ನಿಘಂಟು, ನೋಟ್ಸ್, ಪ್ರ್ಯಾಕ್ಟಿಕಲ್ ರೆಕಾರ್ಡ್ ವಿನಿಮಯವಾಗುವುದು ವಿರಳ.

ತರಗತಿ, ವೇಳಾಪಟ್ಟಿ ಕುರಿತು ಮಾಹಿತಿಯನ್ನೂ ಹಂಚಿಕೊಳ್ಳರು. ಏಕೆಂದರೆ ಎಲ್ಲಿ ಇನ್ನೊಬ್ಬರು ತನಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿಬಿಡುವರೋ ಎಂಬ ಆತಂಕ! ಸಮೂಹ ಅಧ್ಯಯನ, ಚರ್ಚೆಗೆ ಇನ್ನು ವ್ಯವಧಾನ, ತಾವೆಲ್ಲಿ? ವಿದ್ಯಾರ್ಥಿ ದೆಸೆಯಲ್ಲೇ ಸ್ವಾರ್ಥ, ಸಾಮಾಜಿಕ ಬೇಜವಾಬ್ದಾರಿ ಅಂಕುರಿಸಬಹುದೆನ್ನಲು ಇದು ನಿದರ್ಶನವೆನ್ನೋಣವೇ?

ತಮ್ಮ ಮಕ್ಕಳು ವಿದ್ಯಾಲಯದಿಂದ ವಾಪಸು ಮನೆಗೆ ಬಂದಾಗ ಅವರ ತಂದೆ, ತಾಯಿ ‘ಇವೊತ್ತು ಏನು ಹೇಳಿಕೊಟ್ಟರು? ಏನು ಕಲಿತೆ? ಯಾವದಾದರೂ ಅರ್ಥವಾಗದ್ದು ಉಂಟೇ?’ ಎಂದು ವಿಚಾರಿಸುವುದಿಲ್ಲ. ಅದಕ್ಕೆ ಬದಲಾಗಿ ‘ಇವೊತ್ತು ಯಾವ ಟೆಸ್ಟ್‌ನ ಅಥವಾ ಪರೀಕ್ಷೆಯ ಅಂಕಗಳನ್ನು ಹೇಳಿದರು?

ನಿನಗೆಷ್ಟು ಬಂದಿವೆ?’ ಎಂತಲೇ ಕೇಳುತ್ತಾರೆ. ಬೋಧಕರೇ ತರಗತಿಯಲ್ಲಿ ಇಂಥದ್ದು ಓದಿ, ಇಂಥದ್ದು ಬಿಡಬಹುದು ಅಂತ ಪಠ್ಯಪುಸ್ತಕದಲ್ಲಿ ಗುರುತು ಹಾಕಿಸುವುದಿದೆ.  ಮೂಲತಃ ಮುಖ್ಯ-ಅಮುಖ್ಯ ಎಂಬ ತಾರತಮ್ಯವೇ ಅರ್ಥಹೀನ. ಪಠ್ಯದಲ್ಲಿ ಒಂದು ಅಧ್ಯಾಯಕ್ಕೂ ಇನ್ನೊಂದಕ್ಕೂ ಪರಸ್ಪರ ಸಂಬಂಧವಿರುತ್ತದೆ. ನಿರಂತರತೆ ಇರುತ್ತದೆ. ಇಂಥದ್ದು ಅಮುಖ್ಯ ಎನ್ನುವುದಾದರೆ ಅಂಥದ್ದನ್ನೇಕೆ ಪಠ್ಯದಲ್ಲಿರಿಸಿದರು?

ಅಂತೆಯೇ ಹಳೆಯ ಪ್ರಶ್ನೆಪತ್ರಿಕೆಗಳ ಕಟ್ಟನ್ನಿರಿಸಿಕೊಂಡು ಈ ವರ್ಷ ಯಾವುದನ್ನು ಕೇಳಬಹುದು– ಬಿಡಬಹುದು ಎನ್ನುವ ಅಂದಾಜಿಗೆ ಜೋತುಬೀಳುವುದು ಬಾಲಿಶ. ಪರೀಕ್ಷೆ ‘ಅದೃಷ್ಟ ಪರೀಕ್ಷೆ’ ಅಲ್ಲ. ಅದು ಎಷ್ಟು ಮನನವಾಗಿದೆ ಎನ್ನುವುದರ ಪರೀಕ್ಷೆ. ಫಲಿತಾಂಶ ಬಂದಮೇಲೆ ಕೇಳುವಂತೆಯೇ ಇಲ್ಲ. ‘ಉತ್ತೀರ್ಣತೆಗಿಂತ ಪ್ರತಿಭೆಯೇ ಇಲ್ಲ, ಅನುತ್ತೀರ್ಣತೆಗಿಂತ ನಿಷ್ಪ್ರಯೋಜಕತೆ ಇನ್ನೊಂದಿಲ್ಲ’ ಎನ್ನುವ ಅಸಂಬದ್ಧ ಗ್ರಹಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT