ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ‘ಡಾಬರ್‌ಮನ್’ ಚಾಂಪಿಯನ್

ಶಿರಸಿ ಉತ್ಸವದಲ್ಲಿ ಮುದ ನೀಡಿದ ಶ್ವಾನ ಪ್ರದರ್ಶನ; 21 ತಳಿಯ 210 ನಾಯಿಗಳು ಭಾಗಿ
Last Updated 30 ಜನವರಿ 2017, 5:12 IST
ಅಕ್ಷರ ಗಾತ್ರ
ಶಿರಸಿ: ಡಾಬರ್‌ಮನ್, ಮುಧೋಳ ಹೌಂಡ್, ರಾಟ್‌ವೀಲರ್, ಪಮೇರಿಯನ್, ಸೈಬೇರಿಯನ್ ಹಸ್ಕಿ, ಸೇಂಟ್ ಬರ್ನಾಡ್ ಇನ್ನಿತರ ತಳಿಯ ಶ್ವಾನಗಳು ಹಸಿರು ಕಾರ್ಪೆಡ್‌ ಮೇಲೆ ರಾಜ ಗಾಂಭೀರ್ಯದ ಹೆಜ್ಜೆ ಹಾಕಿ ನೋಡುಗರಲ್ಲಿ ಭಯಮಿಶ್ರಿತ ಆನಂದ ಮೂಡಿಸಿದವು. 
 
ಶಿರಸಿ ಉತ್ಸವದ ಎರಡನೇ ದಿನ ಭಾನುವಾರ ಬೆಳಿಗ್ಗೆ ಇಲ್ಲಿನ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನಕ್ಕೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದ 21 ತಳಿಗಳ 210ಕ್ಕೂ ಹೆಚ್ಚು ಶ್ವಾನಗಳ ಚಲನವಲನ, ಆಟ, ಆಜ್ಞೆ ಪಾಲನೆಯನ್ನು ಪ್ರೇಕ್ಷಕರು ಅಚ್ಚರಿಯಿಂದ ವೀಕ್ಷಿಸಿದರು. 
 
ಕೆಲವು ಶ್ವಾನಗಳು ಸುಡುಬಿಸಿಲಿಗೆ ಹೆದರಿ ನೆರಳನ್ನು ಅರಸುತ್ತಿದ್ದವು. ನಿಲ್ಲಿಸಿಟ್ಟಿದ್ದ ಕಾರಿನ ಅಡಿಯಲ್ಲಿ ಕೆಲವು ಆಶ್ರಯ ಪಡೆದರೆ ಇನ್ನು ಕೆಲವು ಮಾಲೀಕನ ಕೈಯಲ್ಲಿದ್ದ ಸರಪಳಿಯನ್ನು ಜಗ್ಗಿಗೊಂಡು ನೆರಳಿನ ಕಡೆಗೆ ಓಡಲು ಹಾತೊರೆಯುತ್ತಿದ್ದವು. ಜನರನ್ನು ಕಂಡು ದಿಗಿಲುಕೊಂಡ ಒಂದೆರಡು ಶ್ವಾನಗಳು ಕೂಗಿ ಪೌರುಷ ತೋರಿದವು. 
 
ಬಳ್ಳಾರಿ ಹಗರಿಬೊಮ್ಮನಳ್ಳಿಯ ರೆಹಮಾನ ಎ ಮಾಲೀಕತ್ವದ ಡಾಬರ್‌ಮನ್ ನಾಯಿ ಜನರಲ್ ಚಾಂಪಿಯನ್ ಹಾಗೂ ಶಿವಮೊಗ್ಗದ ತೇಜಸ್ವ ಡಿ ಮಾಲೀಕತ್ವದ ಗ್ರೇಟ್‌ ಡೆನ್ ತಳಿಯ ನಾಯಿ ರನ್ನರ ಅಪ್ ಚಾಂಪಿಯನ್  ಪಡೆದುಕೊಂಡಿತು. ಮಂಗಳೂರಿನ ಅನಿಲ್‌ ತಂದಿದ್ದ ಜರ್ಮನ್ ಷೆಪರ್ಡ್ ತೃತೀಯ ಹಾಗೂ ಹರಿಹರದ ಲಿಂಗರಾಜ ಮಾಲೀಕತ್ವದ ಜರ್ಮನ್ ಷೆಪರ್ಡ್ ಚತುರ್ಥ ಬಹುಮಾನ ಪಡೆದವು. 
 
ಸಾಗರದ ಸೌಮ್ಯ ಡಿ ತಂದಿದ್ದ ಸೇಂಟ್ ಬರ್ನಾಡ್ 5ನೇ ಸ್ಥಾನ, ಸಾಗರದ ಚೈತನ್ಯ ಮಾಲೀಕತ್ವದ ಜರ್ಮನ್ ಷೆಪರ್ಡ್ 6ನೇ ಸ್ಥಾನ, ಶಿರಸಿಯ ರಾಘವೇಂದ್ರ ಅವರ ಗೋಲ್ಡನ್ ರಿಟ್ರಿವರ್ 7ನೇ ಸ್ಥಾನ ಪಡೆದವು. 
 
ನಿರ್ಣಾಯಕರಾಗಿ ಉಡುಪಿಯ ಡಾ. ಗೋಪಾಲಕೃಷ್ಣ ಭಟ್ಟ, ಸಿದ್ದಾಪುರದ ಡಾ. ನಂದಕುಮಾರ ಪೈ, ಡಾ. ಶಿಲ್ಪಾ, ಶಿರಸಿಯ ಡಾ.ಆರ್.ಜಿ.ಹೆಗಡೆ ಇದ್ದರು.
 
ಸ್ಥಳೀಯ ವೈದ್ಯರಾದ ಡಾ.ಪಿ.ಎಸ್.ಹೆಗಡೆ, ಡಾ.ಗಣೇಶ ಹೆಗಡೆ, ಡಾ,ರೋಹಿತ, ಉತ್ಸವ ಸಮಿತಿಯ ವಿನಯ ಹಾಗೂ ಗೋಪಾಲ ಹೆಗಡೆ ಸಹಕರಿಸಿದರು. ಸಂಚಾಲಕರಾದ ರವೀಂದ್ರ ನಾಯ್ಕ, ಪ್ರದೀಪ ಶೆಟ್ಟಿ, ಉಪೇಂದ್ರ ಪೈ, ಫ್ರಾನ್ಸಿಸ್ ನರೋನಾ, ಶ್ರೀಧರ ಮೊಗೇರ, ಕುಬಾಲ, ಇಬ್ರಾಹಿಂ ಸಾಬ್ ಹಾಜರಿದ್ದರು.
 
**
ಶ್ವಾನ ಪ್ರದರ್ಶನವನ್ನು ಏರ್ಪಡಿಸಿ ರಾಜ್ಯದ ವಿವಿಧ ಭಾಗಗಳ ಶ್ವಾನಗಳನ್ನು ಇಲ್ಲಿಯೇ ನೋಡುವ ಭಾಗ್ಯವನ್ನು ಶಿರಸಿಗರಿಗೆ ಕಲ್ಪಿಸಿದ ಖುಷಿಯಿದೆ
-ರವೀಂದ್ರ ನಾಯ್ಕ,
ಉತ್ಸವ ಸಮಿತಿ ಅಧ್ಯಕ್ಷ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT