ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಡಿಯೊ ಹೌಸ್, ಕಮಾನು ಸ್ಥಳಾಂತರ ಪೂರ್ಣ

ಪಾರಂಪರಿಕ ಕಟ್ಟಡ ಪುನರ್‌ ಸ್ಥಾಪಿಸುವಲ್ಲಿ ಬಿಟಿಡಿಎ ಯಶಸ್ವಿ; ಕಟ್ಟಡಗಳ ಸ್ಥಳಾಂತರಕ್ಕೆ ₹ 11 ಲಕ್ಷ ವೆಚ್ಚ: ನೋಟಗಾರ
Last Updated 30 ಜನವರಿ 2017, 5:15 IST
ಅಕ್ಷರ ಗಾತ್ರ
ಬಾಗಲಕೋಟೆ: ಹಳೆಯ ನಗರದ ಪಾರಂಪರಿಕ ಅಸ್ಮಿತೆಗಳಲ್ಲಿ ಒಂದಾಗಿದ್ದ ‘ನಗರವನ’ದ ಮಾದರಿಯನ್ನು  ಪುನರ್‌ ಪ್ರತಿಷ್ಠಾಪಿಸಲು ಮುಂದಾಗಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ನವನಗರದ 37ನೇ ಸೆಕ್ಟರ್‌ನ ಹೊಸ ಉದ್ಯಾನವನಕ್ಕೆ ‘ರೇಡಿಯೊ ಹೌಸ್‌’ ಹಾಗೂ ಕಮಾನನ್ನು ಯಶಸ್ವಿಯಾಗಿ ಸ್ಥಳಾಂತರಿಸಿದೆ.
 
ರಾಣಿಚೆನ್ನಮ್ಮ ಪಾರ್ಕ್ ಎಂದು ಕರೆಯಲಾಗುತ್ತಿದ್ದ ‘ನಗರವನ’ ‘ಕೃಷ್ಣಾರ್ಪಣ’ಕ್ಕೂ ಮುನ್ನ ಹಳೆಯ ಊರಿನ ನವಿರಾದ ನೆನಪುಗಳಲ್ಲಿ ಒಂದು. ಬ್ರಿಟಿಷ್ ಭಾರತದಲ್ಲಿ ಪೋಸ್ಟ್‌ ಮಾಸ್ಟರ್ ಜನರಲ್ ಆಗಿದ್ದ ಭೀಮಸೇನರಾವ್‌ ಜಿ.ಬೇವೂರ ಅವರ ನೆನಪಿಗೆ ಆಗಿನ ನಗರಾಡಳಿತ ಈ ಉದ್ಯಾನವನ ನಿರ್ಮಿಸಿತ್ತು.
 
1925ರಲ್ಲಿ ಉದ್ಯಾನವನದ ನಿರ್ಮಾಣದ ನೆನಪಿಗೆ ಕಮಾನು ಗೋಪುರ ಕಟ್ಟಿ ಅದರಲ್ಲಿ ನಗರವನ ಎಂದು ನಮೂದಿಸಲಾಗಿತ್ತು. ಆಲಮಟ್ಟಿ ಜಲಾಶಯದ ಹಿನ್ನೀರಿನ ಮುಳುಗಡೆ ಪ್ರದೇಶದ ವ್ಯಾಪ್ತಿಗೆ ಬರುವ ಈ ಪಾರ್ಕ್‌ ಜಾಗವನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಾಗಾಗಿ ಹಳೆಯ ಉದ್ಯಾನವನ್ನು ಅದರ ಪಾರಂಪರಿಕ ನೆಲೆಗೆ ಒಂದಷ್ಟೂ ಧಕ್ಕೆ ಬಾರದಂತೆ ನವನಗರದ 37ನೇ ಸೆಕ್ಟರ್‌ಗೆ ಸ್ಥಳಾಂತರಿಸಲು ಬಿಟಿಡಿಎ ನಿರ್ಧರಿಸಿತ್ತು.
 
ರೇಡಿಯೊ ಹೌಸ್‌ ಸ್ಥಳಾಂತರ:  ಪಾರ್ಕ್‌ನ ಪ್ರವೇಶ ದ್ವಾರದಲ್ಲಿದ್ದ ಕಮಾನು ಹಾಗೂ ಒಳಗಿದ್ದ ರೇಡಿಯೊ ಹೌಸನ್ನು ಬಾದಾಮಿಯ ಗೌಂಡಿ ಯಮನೂರಪ್ಪ ಪಾತ್ರೋಟ ನೇತೃತ್ವದ ತಂಡ ಸತತ ಒಂದೂವರೆ ತಿಂಗಳು ಕಾಲ ಪರಿಶ್ರಮ ಪಟ್ಟು ಕಿತ್ತು ತಂದು ಇಲ್ಲಿ ಪುನರ್‌ಸ್ಥಾಪಿಸಿದೆ. 
 
ಈ ಹಿಂದೆ ಪಟ್ಟದಕಲ್ಲಿನ ದೇವಾಲಯ ಸಮುಚ್ಛಯ ಪುನರ್‌ನಿರ್ಮಾಣ ಹಾಗೂ ಕೂಡಲಸಂಗಮದ ಸಂಗಮನಾಥ ದೇವಾಲಯದ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಈ ತಂಡ ಎರಡೂ ಕಟ್ಟಡಗಳ ಕಲ್ಲುಗಳಿಗೆ ಸಂಖ್ಯೆ ನೀಡಿ ಮೂಲ ಸ್ವರೂಪಕ್ಕೆ ಮುಕ್ಕಾಗದಂತೆ ಕಿತ್ತು ತಂದು ಇಲ್ಲಿ ಕಟ್ಟಿದ್ದಾರೆ. ‘ಪ್ರಜಾವಾಣಿ’ ಭಾನುವಾರ ಸ್ಥಳಕ್ಕೆ ಭೇಟಿ ನೀಡಿದಾಗ ಕಮಾನಿಗೆ ಅಂತಿಮ ಸ್ಪರ್ಶ ನೀಡುವ ಕೆಲಸದಲ್ಲಿ ಕೆಲಸಗಾರರು ತೊಡಗಿದ್ದರು.
 
ಎಫ್‌ಎಂ ರೇಡಿಯೊ:  ‘ಕಟ್ಟಡಗಳ ಸ್ಥಳಾಂತರಕ್ಕೆ ₹ 11 ಲಕ್ಷ ವೆಚ್ಚವಾಗಿದೆ. 15 ಎಕರೆ ವಿಸ್ತೀರ್ಣದ ಹೊಸ ಪಾರ್ಕ್‌ನಲ್ಲಿ ಆರು ಕಡೆ ಸ್ಪೀಕರ್‌ಗಳನ್ನು ಅಳವಡಿಸಲಾಗುತ್ತಿದೆ. ಮುಂಜಾನೆ–ಸಂಜೆ ವಾಯುವಿಹಾರಕ್ಕೆ ಬರುವವರಿಗೆ ಇದು ನೆರವಾಗಲಿದೆ. ಅಲ್ಲಿ ಎಫ್‌ಎಂ ರೇಡಿಯೊ ಸವಲತ್ತು ಒದಗಿಸಿ ಹಳೆಯ ರೇಡಿಯೊ ಹೌಸ್ ಕಲ್ಪನೆಯನ್ನು ಸಾಕಾರಗೊಳಿಸುತ್ತಿರುವುದಾಗಿ’ ಪಾರ್ಕ್‌ನ ಮೇಲ್ವಿಚಾರಣೆ ಹೊತ್ತಿರುವ ಎಸ್.ಬಿ.ನೋಟಗಾರ ಹೇಳುತ್ತಾರೆ. 
 
ಏನಿದು ರೇಡಿಯೊ ಹೌಸ್..
70ರ ದಶಕಕ್ಕೂ ಮುನ್ನ ಮನೆಯಲ್ಲಿ ರೇಡಿಯೊ ಇಟ್ಟುಕೊಳ್ಳಲು ಸರ್ಕಾರದಿಂದ ಲೈಸೆನ್ಸ್ ಪಡೆಯಬೇಕಿತ್ತು. ಅದರ ಉಸಾಬರಿ ಏಕೆ ಎಂದು ಬಹಳಷ್ಟು ಮಂದಿ ರೇಡಿಯೊ ಸಹವಾಸಕ್ಕೂ ಹೋಗುತ್ತಿರಲಿಲ್ಲ. ಹಾಗಾಗಿ ನಗರಾಡಳಿತದಿಂದಲೇ ರಾಣಿ ಚೆನ್ನಮ್ಮ ವೃತ್ತದಲ್ಲಿ ರೇಡಿಯೊ ಹೌಸ್ ನಿರ್ಮಿಸಿ ಅಲ್ಲಿ ಬೆಳಿಗ್ಗೆ ಹಾಗೂ ಮುಂಜಾನೆ ಸಾರ್ವಜನಿಕರು ಕಾರ್ಯಕ್ರಮಗಳನ್ನು ಆಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ರಾಣಿ ಚೆನ್ನಮ್ಮ ಪಾರ್ಕ್‌ನ ರೇಡಿಯೊ ಹೌಸ್ ಜನಮಾನಸದಲ್ಲಿ ಹೆಚ್ಚು ಆಪ್ತವಾಗಿತ್ತು. 1978ರಲ್ಲಿ ಬಸವಣ್ಣೆಪ್ಪ ಎಂಬ ನಗರಸಭೆ ಆಡಳಿತಾಧಿಕಾರಿ ಇಲ್ಲಿ ಪ್ರತಿ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಮಕ್ಕಳ ಉದ್ಯಾನವನಾಗಿಯೂ ಇದು ಬಳಕೆಯಲ್ಲಿತ್ತು. ಎದುರಿಗೆ ಸರ್ಕಾರಿ ಆಸ್ಪತ್ರೆ, ಪಕ್ಕದಲ್ಲಿ ತೇಜಾಬಾಯಿ ಸುರಾನಾ ಹೆರಿಗೆ ಆಸ್ಪತ್ರೆ ಇದ್ದ ಕಾರಣ ಅಲ್ಲಿಗೆ ಬರುವವರು ಪಾರ್ಕ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ರೇಡಿಯೊ ಹೌಸ್, ಕಮಾನು ಸ್ಥಳಾಂತರದ ಮೂಲಕ ಹಳೆಯ ನೆನಪು ತಾಜಾಗೊಳಿಸಲು ಬಿಟಿಡಿಎ ಮುಂದಾಗಿದೆ.
 
**
ಒಂದೇ ಒಂದು ಕಲ್ಲು ಮುಕ್ಕಾಗದಂತೆ ಎರಡೂ ಕಟ್ಟಡಗಳನ್ನು ಸ್ಥಳಾಂತರಿಸಲಾಗಿದೆ. ಶೀಘ್ರ ಮರಳು ಲೇಪನ ಮಾಡಿ ಹಳೆಯ ವೈಭವ ಕಾಣುವಂತೆ ಮಾಡಲಾಗುವುದು.
-ಎಂ.ಪಿ.ನಾಡಗೌಡ
ಬಿಟಿಡಿಎ ಎಂಜಿನಿಯರ್

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT