ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸುಕಾದ ರಸ್ತೆ ನಾಮಫಲಕಗಳು

ಫಲಕಗಳಲ್ಲಿ ಅಳಿಸಿ ಹೋದ ಅಕ್ಷರಗಳು; ಪಾದಚಾರಿ ಹಾಗೂ ವಾಹನ ಸವಾರರ ಪರದಾಟ
Last Updated 30 ಜನವರಿ 2017, 5:34 IST
ಅಕ್ಷರ ಗಾತ್ರ
ಕಾರವಾರ: ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ರಸ್ತೆ ಮಾರ್ಗವನ್ನು ತೋರಿಸಲು ಅನುಕೂಲಕರವಾಗಿದ್ದ ನಗರದ ಬಹುತೇಕ ನಾಮಫಲಕಗಳು ಅಧೋಗತಿಗೆ ತಲುಪಿವೆ. ಸದ್ಯ ಬಣ್ಣ ಕಳೆದುಕೊಂಡು ಮಸುಕಾಗಿರುವ ಈ ಫಲಕಗಳು ನವೀಕರಣ ಅಥವಾ ಕಾಯಕಲ್ಪಕ್ಕೆ ಕಾದಿವೆ.
 
ನಗರಸಭೆಯು 31 ವಾರ್ಡ್‌ಗಳನ್ನು ಹೊಂದಿದ್ದು, ಸಾಮಾನ್ಯವಾಗಿ ಎಲ್ಲ ರಸ್ತೆಗಳಲ್ಲಿ ನಾಮಫಲಕಗಳನ್ನು ಅಳವಡಿಸಿದೆ. ಆದರೆ ಹಳೆಯದ್ದಾಗಿರುವುದರಿಂದ ಹಾಗೂ ಬಿಸಿಲು, ಮಳೆಗೆ ಸಿಲುಕಿ ಫಲಕದ ಬಣ್ಣ ಮಾಸಿ ಹೋಗಿದೆ. ಜತೆಗೆ ಹಳದಿ ಬಣ್ಣದ ಮೇಲೆ ಬರೆದ ಕಪ್ಪು ಅಕ್ಷರಗಳು ಅಳಿಸಿ ಹೋಗಿವೆ. ಹಲವೆಡೆ ನಾಮಫಲಕ ಬುಡಸಮೇತ ನೆಲಕ್ಕುರುಳಿ ಅನಾಥವಾಗಿ ಬಿದ್ದಿವೆ. ಕೆಲವೆಡೆ ರಸ್ತೆ ವಿಸ್ತರಣೆ ಆದ ಸಂದರ್ಭದಲ್ಲಿ ತೆರವುಗೊಳಿಸಿದ ನಾಮಫಲಕವನ್ನು ಪುನಃ ಅಗತ್ಯ ಜಾಗದಲ್ಲಿ ಅಳವಡಿಸದೇ ಪಕ್ಕದಲ್ಲೇ ದಿಕ್ಕಾಪಾಲಾಗಿ ಎಸೆಯಲಾಗಿದೆ. 
 
ಬರಹದಲ್ಲೂ ಲೋಪ: ನಗರಸಭೆಯಿಂದ ನಗರ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಅನೇಕ ನಾಮಫಲಕಗಳ ಬರಹದಲ್ಲೂ ಲೋಪಗಳಿವೆ. ನಗರದ ಕಾರ್ಪೊರೇಷನ್‌ ಬ್ಯಾಂಕ್‌ ಸಮೀಪ ‘ಹೈ ಚರ್ಚ್‌’ ರಸ್ತೆ ಇದೆ. ರಸ್ತೆಯ ಆರಂಭದಲ್ಲಿ ಹಾಕಿರುವ ನಾಮಫಲಕದಲ್ಲಿ ‘ಹಾಯ್‌ ಚರ್ಚ್‌’ ಎಂದು ಬರೆಯಲಾಗಿದೆ. ಹೊಸಬರು ಇದನ್ನು ಕಂಡು ಇದ್ಯಾವ ರಸ್ತೆಯ ಹೆಸರು ಎಂದು ತಬ್ಬಿಬ್ಬಾದ ನಿದರ್ಶನಗಳಿವೆ. ಇದೇ ರೀತಿಯ ಅನೇಕ ನಾಮಫಲಕಗಳ ಅಕ್ಷರಗಳಲ್ಲಿ ದೋಷಗಳಿವೆ. 
 
ಕನ್ನಡದ ಬಗ್ಗೆ ಅಸಡ್ಡೆ ಬೇಡ: ‘ನಾಮಫಲಕಗಳಲ್ಲಿ ರಸ್ತೆಯ ಹೆಸರನ್ನು ನಗರಸಭೆಯು ತಪ್ಪು ತಪ್ಪಾಗಿ ಬರೆಸಿರುವುದು ಸರಿಯಲ್ಲ. ಅಲ್ಲದೇ ಈ ಬಗ್ಗೆ ಎಚ್ಚೆತ್ತುಕೊಂಡು ತಪ್ಪನ್ನು ಸರಿಪಡಿಸಲು ಮುಂದಾಗದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರುತ್ತದೆ. ಕನ್ನಡ ಪರ ಸಂಘಟನೆಗಳು ಸಹ ಈ ಬಗ್ಗೆ ಕಣ್ಮುಚ್ಚಿ ಕುಳಿತಿವೆ.
 
ಸುಂದರ ಪ್ರವಾಸಿ ತಾಣಗಳನ್ನು ಹೊಂದಿರುವ ಕಾರವಾರ ನಗರದಲ್ಲಿ ನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಅವರು ಹೋಟೆಲ್‌ ಹಾಗೂ ಲಾಡ್ಜ್‌ಗಳನ್ನು ಹುಡುಕುವ ಸಂದರ್ಭದಲ್ಲಿ ಈ ರೀತಿಯ ಫಲಕಗಳು ಅವರ ಕಣ್ಣಿಗೆ ಬಿದ್ದರೆ ಕಾರವಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇನ್ನಾದರೂ ನಗರಸಭೆಯವರು ನಾಮಫಲಕಗಳ ನವೀಕರಣಕ್ಕೆ ಮುಂದಾಗಬೇಕು’ ಎನ್ನುತ್ತಾರೆ ಸ್ಥಳೀಯ ಯಶೋಧರ ನಾಯ್ಕ.
 
ಲೋಪ ಸರಿಪಡಿಸಲು ನೆರವು: ‘ನಗರದಲ್ಲಿನ ಅನೇಕ ರಸ್ತೆ ನಾಮಫಲಕಗಳಲ್ಲಿನ ಕನ್ನಡ ಬರಹದಲ್ಲಿ ಲೋಪವಿದೆ. ಇನ್ನೂ ಕೆಲ ಫಲಕಗಳಲ್ಲಿ ಅಕ್ಷರಗಳು ಅಳಿಸಿ ಹೋಗಿ ಅನರ್ಥಕ್ಕೆ ಕಾರಣವಾಗಿವೆ. ಗಡಿ ಭಾಗವಾದ ಕಾರವಾರದಲ್ಲಿ ಕನ್ನಡ ಮಸುಕಾಗದಂತೆ ನೋಡಿಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್‌ ಬದ್ಧವಾಗಿದೆ. ನಗರಸಭೆಯು ಈ ನಾಮಫಲಕಗಳ ನವೀಕರಣಕ್ಕೆ ಮುಂದಾಗುವ ಸಂದರ್ಭದಲ್ಲಿ ಗುತ್ತಿಗೆದಾರನಿಗೆ ಸ್ವಯಂ ಪ್ರೇರಿತವಾಗಿ ನೆರವಾಗಲಿದ್ದೇವೆ. ಕನ್ನಡ ಅಕ್ಷರ ಹಾಗೂ ಪದಗಳು ತಪ್ಪಾಗದಂತೆ ಸಹಕರಿಸಲಿದ್ದೇವೆ’ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹರಪನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.
 
**
ದುಃಸ್ಥಿತಿಗೆ ತಲುಪಿರುವ ನಗರದ ರಸ್ತೆ ನಾಮಫಲಕಗಳಿಗೆ ಕಾಯಕಲ್ಪ ನೀಡಲು ಶೀಘ್ರದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು
-ಆರ್‌.ವಿ.ಜತ್ತನ್ನ,
ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT