ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವಗ್ರಹವಿಲ್ಲದ ಅಧ್ಯಯನ ಅಗತ್ಯ

ಸಾಹಿತ್ಯ ಸಂವಾದದಲ್ಲಿ ಬರಹಗಾರ ಗೋಪಾಲಕೃಷ್ಣ ಕೇರಿಮನೆ ಅಭಿಮತ
Last Updated 30 ಜನವರಿ 2017, 5:45 IST
ಅಕ್ಷರ ಗಾತ್ರ
ಶಿರಸಿ: ಹಳೆಯ ಸಾಹಿತಿಗಳ ಕೃತಿಗಳನ್ನು ಯಾವುದೇ ಪೂರ್ವಗ್ರಹವಿಲ್ಲದೇ ಇಂದಿನ ಬರಹಗಾರರು ಅಧ್ಯಯನ ಮಾಡಬೇಕು ಎಂದು ಬರಹಗಾರ ಗೋಪಾಲಕೃಷ್ಣ ಹೆಗಡೆ ಕೇರಿಮನೆ ಹೇಳಿದರು. 
 
ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ನಯನ ಫೌಂಡೇಷನ್ ಜಂಟಿಯಾಗಿ ಭಾನುವಾರ ಇಲ್ಲಿ ಆಯೋಜಿಸಿದ್ದ ‘ಹಳೆಬೇರು– ಹೊಸ ಚಿಗುರು’ ಸಾಹಿತ್ಯ ಸಂವಾದದಲ್ಲಿ ಅವರು ಮಾತನಾಡಿದರು. 
 
ನಮ್ಮ ಬಗ್ಗೆ ನಮಗೆ ಶ್ರದ್ಧೆ, ನಂಬಿಕೆ ಇರಬೇಕು. ಯುವ ಬರಹಗಾರರು ಇದನ್ನು ಅರಿತುಕೊಂಡು ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು. ಹಳೆಯ ಬೇರುಗಳ ಜೊತೆ ಹೊಸ ಚಿಗುರುಗಳು ಮೂಡಬೇಕು. ಮರಕ್ಕೆ ಹಳೆಯ ಬೇರು, ಬಿಳಿಲುಗಳು ಇಲ್ಲದಿದ್ದರೆ ಹೊಸ ಚಿಗುರು ಮೂಡಲಾರದು ಎಂದರು. 
 
‘ಮುದ್ರಣ ವ್ಯವಸ್ಥೆ ಇಲ್ಲದ ಕಾಲದಿಂದ ಇಂದಿನವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಹಿತ್ಯಿಕ ವಾತಾವರಣ ಉಳಿದುಕೊಂಡು ಬಂದಿದೆ. ಜಿಲ್ಲೆಯ ಅನೇಕ ಪ್ರಬುದ್ಧ ಸಾಹಿತಿಗಳು, ಬರಹಗಾರರು ಇಂದಿಗೂ ಕೃತಿಗಳ ಮೂಲಕ ನಮ್ಮೊಂದಿಗೆ ಇದ್ದಾರೆ. ಸಾಹಿತ್ಯದ ತಳಹದಿ ಹಾಕಿಕೊಟ್ಟ ಅವರು ಪ್ರಾತಃಸ್ಮರಣೀಯರಾಗಿದ್ದಾರೆ’ ಎಂದರು. 
 
ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಸಾಹಿತ್ಯ ಸಂವಾದ ಉದ್ಘಾಟಿಸಿದರು. 
 
ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಂತ ಮಹತ್ವದ್ದಾಗಿದೆ. ಬರಹಗಾರರಿಗೆ ಬರಹದಿಂದಾಗುವ ಸಾಮಾಜಿಕ ಪರಿಣಾಮದ ಅರಿವಿನ ಎಚ್ಚರವಿದ್ದರೆ ಹೆಚ್ಚು ಜವಾಬ್ದಾರಿಯುತವಾಗಿ ಬರೆಯಲು ಸಾಧ್ಯವಾಗಬಹುದು. ಇನ್ನೊಂದು ಮಗ್ಗುಲಿನಿಂದ ನೋಡಿದಾಗ ಮೌಲ್ಯಗಳ ಘರ್ಷಣೆ ನಡೆದಾಗಲೇ ಹೊಸ ಚಿಂತನೆಗಳ ಹೊಳಹು ಮೂಡುತ್ತದೆ. ಚಿಂತನೆ ಅಭಿವ್ಯಕ್ತಿಪಡಿಸುವ ಸ್ವಾತಂತ್ರ್ಯ ಸಹ ಬಹು ಮುಖ್ಯವಾಗುತ್ತದೆ. ಇಂತಹ ಚಿಂತನೆಗಳನ್ನು ಬರಹಗಾರರು, ಲೇಖಕರು ದಿಟ್ಟವಾಗಿ ಅಭಿವ್ಯಕ್ತಿಸಿದ್ದಾರೆ. ದೀವಿಗೆಯ ಬೆಳಕಿನಲ್ಲಿ ಜನರನ್ನು ಕೊಂಡೊಯ್ಯುವ ಸಾಮರ್ಥ್ಯ ಬರಹಗಾರನಿಗೆ ಇದೆ ಎಂದು ಹೇಳಿದರು. 
 
ಯಾವುದೇ ನಿರ್ಬಂಧವಿಲ್ಲದ ಬರಹಗಳು ಸಾಮೂಹಿಕ ಗೆಜೆಟ್ ಮಾಧ್ಯಮಗಳಲ್ಲಿ ಕಾಣುತ್ತಿವೆ. 21ನೇ ಶತಮಾನದಲ್ಲಿ ಎದುರಾಗಿರುವ ಈ ಸವಾಲುಗಳ ನಡುವೆ ತನ್ನತನವನ್ನು ಉಳಿಸಿಕೊಳ್ಳುವ ಬರಹಗಾರ ಓದುಗರಿಗೆ ನಾಯಕನಾಗಿ ಕಾಣುತ್ತಾನೆ ಎಂದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ.ಧರಣೇಂದ್ರ ಕುರಕುರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪ್ರೊ. ವಿಜಯನಳಿನಿ ರಮೇಶ ಸ್ವಾಗತಿಸಿದರು. ತಾರಾ ಹೆಗಡೆ ನಿರೂಪಿಸಿದರು. ಡಿ.ಎಸ್. ನಾಯ್ಕ ವಂದಿಸಿದರು.  
 
ಗೋಷ್ಠಿಯಲ್ಲಿ ನಾ.ಸು.ಭರತನಹಳ್ಳಿ ಬದುಕು -ಬರಹದ ಬಗ್ಗೆ ಸಿದ್ದಾಪುರದ ದಿವಾಕರ ಹೆಗಡೆ, ಪ್ರೊ. ರಾಜು ಹೆಗಡೆ ಬದುಕು -ಬರಹದ ಬಗ್ಗೆ  ಕೃಷ್ಣಮೂರ್ತಿ ಹೆಬ್ಬಾರ ಹಾಗೂ ಸಿಂಧು ಹೆಗಡೆ ಬದುಕು -ಬರಹದ ಬಗ್ಗೆ ಸಿದ್ದಾಪುರದ ಗಂಗಾಧರ ಕೊಳಗಿ ಮಾತನಾಡಿದರು. 
 
**
ಸಾಹಿತ್ಯಕ್ಕೆ ಆತ್ಮ ಜಾಗೃತಿ ಗೊಳಿಸುವ ಶಕ್ತಿಯಿದೆ. ಓದುಗರ ಮನತಟ್ಟುವ ಕೃತಿಗಳಿಂದ ಬರಹಗಾರ ಸದಾ ಸಮಾಜದಲ್ಲಿ ಪ್ರಸ್ತುತವಾಗಿರುತ್ತಾನೆ
-ಕೆ. ರಾಜು ಮೊಗವೀರ
ಉಪವಿಭಾಗಾಧಿಕಾರಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT