ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರ ಪಂಚಾಕ್ಷರೇಶ್ವರ ಪ್ರಶಸ್ತಿ ಪ್ರದಾನ

ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ
Last Updated 30 ಜನವರಿ 2017, 5:51 IST
ಅಕ್ಷರ ಗಾತ್ರ

ಹಾನಗಲ್: ‘ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು ಮತ್ತು ಹಾನಗಲ್‌ ಗಂಗೂಬಾಯಿ ಅವರಂತಹ ಸಂಗೀತದ ಮೇರು ಪ್ರತಿಭೆಗಳಿಗೆ ಜನ್ಮ ನೀಡಿದ ಹಾನಗಲ್‌ ತಾಲ್ಲೂಕಿನ ಮಣ್ಣಿ ನಲ್ಲಿ ಸಂಗೀತ ಪ್ರತಿಭೆಗಳನ್ನು ಸೃಷ್ಟಿಸುವ ಶಕ್ತಿಯಿದೆ’ ಎಂದು ಬಮ್ಮನ ಹಳ್ಳಿ ಗುರುಪಾದೇಶ್ವರ ವಿರಕ್ತಮಠದ ಶಿವಯೋಗಿಶ್ವರ ಸ್ವಾಮೀಜಿ ನುಡಿದರು.

ಪಂಚಾಕ್ಷರಿ ಗವಾಯಿಗಳ ಹುಟ್ಟೂರ ತಾಲ್ಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವದ ಅಂಗವಾಗಿ ಶನಿವಾರ ರಾತ್ರಿ ನಡೆದ ಸಂಗೀತೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದಾರ್ಶನಿಕರ ಸ್ಮರಣೆ ಹಾಗೂ ಆದರ್ಶಗಳ ಪಾಲನೆ ಸಜ್ಜನ ಸಮಾಜ ನಿರ್ಮಾಣಕ್ಕೆ ಶಕ್ತಿ ತುಂಬುತ್ತದೆ. ನಾಳಿನ ಮನುಷ್ಯ ಬದುಕಿನ ಜೀವನಾಡಿ ಧರ್ಮವೇ ಆಗುವುದರಲ್ಲಿ ಸಂದೇಹ ವಿಲ್ಲ. ಧರ್ಮ ಕೇಂದ್ರಗಳು ಜಾಗೃತ ಸ್ಥಾನಗಳಾಗಬೇಕು’ ಎಂದರು.

ರಾಯನಾಳ ವಿರಕ್ತಮಠದ ಮಹಾಂತಸ್ವಾಮೀಜಿ ಆಶೀರ್ವಚನ ನೀಡಿ, ‘ಸುಜ್ಞಾನದ ಬದುಕಿಗೆ ಸ್ಫೂರ್ತಿಯಾಗಿ ಅಜ್ಞಾನದ ಕತ್ತಲೆ ಕಳೆಯುವ ಜಾತ್ರೆಗಳು ಧರ್ಮ ಸಂಸ್ಕಾರದ ಮೂಲಕ ಗ್ರಾಮೀಣ ಬದುಕನ್ನು ಅರ್ಥಪೂರ್ಣಗೊಳಿಸುತ್ತವೆ’ ಎಂದರು.

‘ರಾಯನಾಳ ಸಂಸ್ಥಾನ ವಿರಕ್ತಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ದತ್ತಿಯಿಂದ ಪ್ರತಿವರ್ಷ ಶ್ರೀ ಕುಮಾರ ಪಂಚಾಕ್ಷರೇಶ್ವರ ರಾಜ್ಯ ಪ್ರಶಸ್ತಿ ನೀಡುವ ಸಂಪ್ರದಾಯ ಹಾಕಲಾಗಿದ್ದು, ಇಂದಿನದು 3ನೇ ಪ್ರಶಸ್ತಿಯಾಗಿದೆ’ ಎಂದರು.

‘ನಕ್ಷತ್ರ ಮಂಡಲದಲ್ಲಿ ಸೂರ್ಯ–ಚಂದ್ರರಿಗೆ ಇರುವ ಪ್ರಭೆಯ ಸಮಾನತೆಯನ್ನು ಸಂಗೀತ ಲೋಕದಲ್ಲಿ ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು ಹೊಂದಿದ್ದಾರೆ’ ಎಂದು ಬೆಟದೂರ ಮಹಾದೇವರು ನುಡಿದರು.

ಸಂಗೀತ ಕಲಾವಿದ ಪಂ.ಡಿ. ಕುಮಾರದಾಸ ಅವರಿಗೆ ‘ಶ್ರೀ ಕುಮಾರ ಪಂಚಾಕ್ಷರೇಶ್ವರ ರಾಜ್ಯ ಪ್ರಶಸ್ತಿ 2017’ ರಾಜ್ಯ ಪ್ರಶಸ್ತಿಯನ್ನು ವೇದಿಕೆಯಲ್ಲಿದ್ದ ಶ್ರೀಗಳು ಪ್ರದಾನ ಮಾಡಿದರು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಜ್ಜಯ್ಯನವರು, ಹೋತನಹಳ್ಳಿ  ಸಿಂದಗಿಮಠದ ಶಂಭುಲಿಂಗ ಶಿವಾಚಾರ್ಯರು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾಲೇಬಾನು ಮುಲ್ಲಾ, ಎಪಿಎಂಸಿ ಸದಸ್ಯ ಸದಾನಂದ ನಾಗನೂರ ಇದ್ದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಬಸವರಾಜ ಬೂದಿಹಾಳ ಸ್ವಾಗತಿಸಿದರು. ಎಚ್.ಪಿ.ವೆಂಕಟೇಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT