ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಕಿಂಗ್‌ ಅವ್ಯವಸ್ಥೆ: ಸಂಚಾರಕ್ಕೆ ಅಡ್ಡಿ

ವಿಸ್ತರಣೆಗೊಂಡ ರಸ್ತೆಯಲ್ಲಿ ವಾಹನ ನಿಲ್ಲಿಸುವ ರೂಢಿ; ಪೊಲೀಸ್‌ ಇಲಾಖೆ ವೈಫಲ್ಯ ಆರೋಪ
Last Updated 30 ಜನವರಿ 2017, 6:07 IST
ಅಕ್ಷರ ಗಾತ್ರ
ಬೆಳಗಾವಿ: ಮಹಾನಗರದಲ್ಲಿ ವಾಹನ­ಗಳ ಪಾರ್ಕಿಂಗ್ ಸಮಸ್ಯೆ ದಿನೇದಿನೇ ಉಲ್ಬಣಗೊಳ್ಳುತ್ತಿದೆ. ಇಕ್ಕಟ್ಟಿನ ರಸ್ತೆ­ಗಳಿಂದಾಗಿ ಸಂಚಾರ ಸಮಸ್ಯೆ ಉಂಟಾ­ಗುತ್ತಿದೆ ಎಂಬ ಕಾರಣದಿಂದ ರಸ್ತೆಗಳ ವಿಸ್ತರಣೆ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ ವಿಸ್ತರಣೆಗೊಂಡ ರಸ್ತೆಗಳೀಗ ಪಕ್ಕದ ಅಂಗಡಿ ಮಾಲೀಕರ ಮತ್ತು ಕಾರ್ಮಿಕರ ವಾಹನಗಳ ಪಾರ್ಕಿಂಗ್‌ ಸೀಮಿತ ಎನ್ನುವಂತಾಗಿದೆ.
 
ನಗರದ ಮಧ್ಯಭಾಗದಲ್ಲಿ ವಿಸ್ತರಣೆ­ಗೊಂಡ ರಸ್ತೆಯಲ್ಲಿ ಒಮ್ಮೆ ಸಂಚರಿಸಿದರೆ ಚಕ್ಕನೆ ಗೋಚರಿಸು­ವುದು ರಸ್ತೆಗಳ ಇಕ್ಕೆಲಗಳಲ್ಲಿರುವ ವಾಹನಗಳ ಪಾರ್ಕಿಂಗ್‌ ದುರವಸ್ಥೆ. ಚಿಕ್ಕ ಮತ್ತು ಕೈಗಾಡಿ ವ್ಯಾಪಾರಸ್ಥರು ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮಾಡಿ­ದ್ದಲ್ಲದೇ, ನಡುರಸ್ತೆಯಲ್ಲಿ ವ್ಯಾಪಾರಕ್ಕೆ ಇಳಿದಿದ್ದಾರೆ. ನಿರಂತರ­ವಾಗಿ ಹೆಚ್ಚು­ತ್ತಿರುವ ಜನಸಂಖ್ಯೆ ಹಾಗೂ ವಾಹನಗಳಿಂದಾಗಿ ದಟ್ಟನೆ ಹೆಚ್ಚಾಗಿ, ಸಂಚಾರಕ್ಕೆ ಅಡಚಣೆ ಉಂಟಾಗಿದೆ.  
 
ಈ ಮೊದಲು ರಸ್ತೆಯ ಒಂದೇ ಕಡೆ ವಾಹನ ಪಾರ್ಕಿಂಗ್‌ ವ್ಯವಸ್ಥೆ ಇತ್ತು. ಈಗ ರಸ್ತೆ ಅಗಲಗೊಂಡ ಬಳಿಕ ಎರಡೂ ಕಡೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಿರು­ವು­ದರಿಂದ ಜನಸಂಚಾರಕ್ಕೆ ರಸ್ತೆಯು ಮತ್ತೆ ಕಿರಿದಾಗಿದೆ. 
 
ಕಾಕತಿವೇಸ್‌, ಶನಿವಾರ ಕೂಟ, ಗಣಪತಿ ಗಲ್ಲಿ, ಖಡೇಬಜಾರ್‌, ಕಿರ್ಲೋಸ್ಕರ ರಸ್ತೆ, ಮಾರುತಿ ಗಲ್ಲಿ, ಮೇದಾರ ಗಲ್ಲಿ, ಕಡೋಲ್ಕರ ಗಲ್ಲಿ, ನರಗುಂದಕರ ಭಾವೆ ಚೌಕ್‌, ಅನಂತಶಯನ ಗಲ್ಲಿ, ಕುಲಕರ್ಣಿ ಗಲ್ಲಿ, ಪಾಟೀಲಗಲ್ಲಿ, ಶಿವಾಜಿ ರಸ್ತೆ, ಮಠಗಲ್ಲಿ, ಪಿಂಪಳಕಟ್ಟಿ, ಫೋರ್ಟ್‌ ರೋಡ್‌, ಎಸ್‌ಪಿಎಂ ರಸ್ತೆ, ಕಾಲೇಜು ರಸ್ತೆ ಸೇರಿ ಮಧ್ಯ ಭಾಗದಲ್ಲಿ ರಸ್ತೆ ಅಗಲ­ಗೊಂಡಷ್ಟೂ ಪಾರ್ಕಿಂಗ್‌ ಸಮಸ್ಯೆ ತಪ್ಪಿಲ್ಲ. ಕೈಗಾಡಿ ವ್ಯಾಪಾರಸ್ಥರು ರಸ್ತೆ ಮಧ್ಯದಲ್ಲಿಯೇ  ಚಾಚಿಕೊಂಡಿದ್ದಾರೆ. 
 
ಅಂಗಡಿಗಳ ಮಾಲೀಕರಿಗೆ ಗ್ರಾಹ­ಕರು ಬೇಕು. ಆದರೆ, ಗ್ರಾಹಕರ ವಾಹನ ಹಾಗೂ ಲಗೇಜ್‌ಗಳು ಬೇಡ. ಮಾಲೀ­ಕರ ಇಂಥ ಗ್ರಾಹಕ ವಿರೋಧಿ ಧೋರಣೆಯಿಂದ ನಗರ ಮಧ್ಯದ ಮಾರುಕಟ್ಟೆ ಭಾಗ ವಾಹನದಟ್ಟಣೆ ಸ್ಥಳವಾಗಿ ಪರಿಣಮಿಸಿದೆ. 
 
ಪೊಲೀಸರ ವೈಫಲ್ಯ: ‘ನಗರದಲ್ಲಿಯ ಸಂಚಾರ ವ್ಯವಸ್ಥೆಯನ್ನು ಸರಿಪಡಿಸ­ಬೇಕಾದ ಪೊಲೀಸ್‌ ವ್ಯವಸ್ಥೆಯ ವೈಫಲ್ಯ ಹಾಗೂ ಕಟ್ಟಡಗಳ ನೆಲಮಾಳಗೆ ತೆರವುಗೊಳಿಸದ ಮಹಾನಗರ ಪಾಲಿಕೆಯ ವೈಫಲ್ಯವೇ ಇಂಥ ಸಮಸ್ಯೆಗೆ ಕಾರಣವಾಗಿದೆ‘ ಎಂದು ನಾಗರೀಕ ಶ್ರೀನಿವಾಸ ತಾಳೂಕರ ಅಭಿಪ್ರಾಯ ವ್ಯಕ್ತಪಡಿಸಿದರು.
 
**
ಬೆಳಗಾವಿ ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿದ್ದರೂ ಅದರ ಅನು­ಷ್ಠಾನ ನಿಧಾನವಾಗಿದೆ. ‘ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು’ ಎನ್ನುವ ಸ್ಥಿತಿಯಂತಾಗಿದೆ.
-ಶ್ರೀನಿವಾಸ ತಾಳೂಕರ  
ನಾಗರಿಕ
 
**
ಮಹಾನಗರದಲ್ಲಿರುವ ವಾಣಿಜ್ಯ ಕಟ್ಟಡಗಳ ನೆಲಮಾಳಿಗೆ ತೆರವುಗೊಳಿಸಿ, ಪಾರ್ಕಿಂಗ್‌ಗೆ ಅವಕಾಶ ಮಾಡಿ­ಕೊ­ಡುವ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ 
-ಸರಿತಾ ಪಾಟೀಲ  
ಮೇಯರ್‌, ಮಹಾನಗರ ಪಾಲಿಕೆ

**
-ಆರ್‌.ಎಲ್‌. ಚಿಕ್ಕಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT