ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಗಿರಿಯಲ್ಲಿ ಕೊಬ್ಬರಿ ಹೋರಿಗಳ ಅಬ್ಬರ!

ಪ್ರಾಣಿ ಕ್ರೌರ್ಯ ತಡೆ– ಕರ್ನಾಟಕ ತಿದ್ದುಪಡಿ ಮಸೂದೆ–2017
Last Updated 30 ಜನವರಿ 2017, 12:04 IST
ಅಕ್ಷರ ಗಾತ್ರ
ಹಾವೇರಿ: ಅತ್ತ ರಾಜ್ಯ ಸರ್ಕಾರವು ಕಂಬಳ, ಚಕ್ಕಡಿ ಓಟ ಕುರಿತ ಮಸೂದೆ ಮಂಡಿಸಲು ಸಿದ್ಧತೆ ನಡೆಸುತ್ತಿದ್ದರೆ, ಇತ್ತ ತಾಲ್ಲೂಕಿನ ದೇವಗಿರಿಯಲ್ಲಿ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ಭಾನುವಾರ ಅಬ್ಬರದಿಂದ ನಡೆಯಿತು. 
 
ಪ್ರಾಣಿಗಳ ಕ್ರೌರ್ಯ ತಡೆ ಕಾಯಿದೆ ಅಡಿಯಲ್ಲಿ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ಸೇರಿದಂತೆ ಕಂಬಳ, ಚಕ್ಕಡಿ ಓಟ ಇತ್ಯಾದಿಗಳ ಮೇಲೆ ಈ ಹಿಂದೆ ನಿಷೇಧ ಹೇರಲಾಗಿತ್ತು. ಆದರೆ, ತಮಿಳನಾಡಿನ ಜಲ್ಲಿಕಟ್ಟು ಹೋರಾಟದ ಬಳಿಕ ರಾಜ್ಯದಲ್ಲೂ ಇಂತಹ ಕ್ರೀಡೆಗಳಿಗೆ ಕಾಯಿದೆಯಿಂದ ರಿಯಾಯಿತಿ ನೀಡುವ ಬಗ್ಗೆ ಹೋರಾಟ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ– ಕರ್ನಾಟಕ ತಿದ್ದುಪಡಿ ಮಸೂದೆ–2017’ ಮಂಡಿಸಲು ಸಿದ್ಧತೆ 
ನಡೆಸಿದೆ. ಮಸೂದೆ ಮಂಡನೆಯಾಗಿ, ಕಾಯಿದೆ ರೂಪ ಪಡೆಯುವ ಮೊದಲೇ ಜಿಲ್ಲೆಯಲ್ಲಿ ‘ಕೊಬ್ಬರಿ ಹೋರಿ’ ಅಬ್ಬರಿಸಿದೆ. 
 
ಆದರೆ, ಜಿಲ್ಲೆಯಲ್ಲಿ ನಿಷೇಧದ ನಡುವೆಯೂ ಪರವಾನಗಿ ರಹಿತವಾಗಿ ‘ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ’ಯು ಅಲ್ಲಲ್ಲಿ ನಡೆಯುತ್ತಿತ್ತು. 
 
ಹೋರಿಗಳ ಸಿಂಗಾರ: ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ತಮ್ಮ ಹೋರಿಗಳನ್ನು ಝೂಲಾ, ಕೊಬ್ಬರಿ, ಗೆಜ್ಜೆ, ಕೊಂಬೆಣಸು, ರಿಬ್ಬನ್‌ ಸೇರಿದಂತೆ ವಿವಿಧ ರೀತಿಯ ಬಣ್ಣ ಬಣ್ಣದ ಬಟ್ಟೆಗಳು, ಬಲೂನುಗಳಿಂದ ಸಿಂಗರಿಸಿ, ಸ್ಪರ್ಧೆ ನಡೆಯುವ ದೇವಗಿರಿಗೆ ತಂದಿದ್ದರು. ಅಖಾಡದ ಆರಂಭದಲ್ಲಿ ಟ್ರ್ಯಾಕ್ಟರ್‌, ಚಕ್ಕಡಿ ಮತ್ತಿತರ ವಾಹನಗಳನ್ನು ನಿಲ್ಲಿಸಿ ಅಡ್ಡ ಇಡಲಾಗಿತ್ತು. ಈ ಮಧ್ಯದ ಗೇಟಿನ ಮೂಲಕ ಒಂದೊಂದು ಹೋರಿಯನ್ನು ಅಖಾಡಾಕ್ಕೆ ಬಿಡಲಾಗುತ್ತಿತ್ತು. ಗೇಟು ತೆಗೆದ ತಕ್ಷಣವೇ ಹೋರಿಗಳು ಓಡಲು ಶುರು ಮಾಡುತ್ತಿದ್ದವು. 
 
ಆಗ ‘ಹೋರಿ ಬಂತು .... ಕೊಬ್ರಿ ಹರಿಯೋರ್ ಹುಶ್ಯಾರ್‌, ಕೊಬ್ರಿ ಹರಿದಾರ, ಹೋರಿ ಹಿಡದಾರ.... ಗೇಟ್‌ ತಗೀರಿ ...ಗೇಟ್‌ ಬಿಟ್ಟ್‌ ಸರೀರಿ, ಹೋರಿ ಬಿಡಬ್ಯಾಡ್ರೀ...ಅಬ್ಬಬ್ಬಾ.... ಹೋರಿ...ಬಲು ಚಮಕ್ಕ ಐತ್ತಿ... ಎಂಬ ಹುರಿದುಂಬಿಸುವ ಘೋಷಣೆಗಳು ಕೇಳಿಬಂದವು. ಇನ್ನೂ ಕೆಲವರು ಪಟಾಕಿ ಸಿಡಿಸಿ, ಬಣ್ಣದ ಸಿಂಚನ ಮಾಡಿ ಸಂಭ್ರಮಿಸಿದರು. ಹಾದಿಯಲ್ಲಿ ಹೋರಿ ಮೇಲಿನ ಕೊಬ್ಬರಿ ತೆಗೆಯಲು ನಿಂತ ಯುವಕರು ಮುಗಿಬಿದ್ದರು. ಹೋರಿಯ ಕೊರಳಲ್ಲಿ ಕಟ್ಟಲಾದ ಕೊಬ್ಬರಿಯನ್ನು ಹರಿಯಲು ಯತ್ನಿಸಿದರು. ಕೆಲವರು ಹೋರಿಗಳ ಮೇಲೆ ಹಾರಿ, ಬೆನ್ನ ಮೇಲೆ ಹತ್ತಿ, ಕೊಂಬನ್ನು ಹಿಡಿದುಕೊಂಡು ಹೋರಿಯನ್ನು ಜಗ್ಗಲು ಯತ್ನಿಸಿದರು.  
 
ಹೋರಿಗಳಿಗೆ ಗರುಡ, ಅರ್ಜುನ, ಸಿಂಹದ ಮರಿ, ಕಾಳಿಂಗ, ಹಾವೇರಿ ಹುಲಿ, ಗಾನಯೋಗಿ, ಸಿಪಾಯಿ, ಸುಂಟರಗಾಳಿ, ಗಾಳಿಪಟ, ಅಭಿಮನ್ಯು, ಸಾಹಸ ಸಿಂಹ, ಅಂಜದ ಗಂಡು, ಭಜರಂಗಿ, ದೂಳ್‌, ಧರ್ಮ, ಕರಿಯ ಸೇರಿದಂತೆ ವೈವಿಧ್ಯಮಯ ಹೆಸರು ಇಡಲಾಗಿತ್ತು. ಮಹಾರಾಜ, ಹಾವೇರಿ ಕಾ ರಾಜಾ, ಕಿಂಗ್ ಮತ್ತಿತರ ಹೆಸರುಗಳನ್ನು ಹೋರಿ ಝೂಲಾದ ಮೇಲೂ ಹಾಕಿದ್ದರು. ಒಟ್ಟಾರೆ ಕೊಬ್ಬರಿ ಹೋರಿ ಹಬ್ಬವು ಸಹಸ್ರಾರು ಜನಸಾಗರದ ನಡುವೆ ನಡೆಯಿತು. ಸ್ಪರ್ಧೆ ನಡೆಸುವ ಬಗ್ಗೆ ಶನಿವಾರ ರಾತ್ರಿ ತನಕ ಇದ್ದ ಗೊಂದಲವು ಸಂಘಟಕರ ಛಲದ ಮುಂದೆ ಮರೆಯಾಗಿತ್ತು. 
 
ವಿಜೇತರಿಗೆ ಬೈಕ್‌ಗಳು, ಚಕ್ಕಡಿ, ಚಿನ್ನದ ಹಾರ, ಗೃಹೋಪಯೋಗಿ ವಸ್ತುಗಳನ್ನು ಬಹುಮಾನಗಳಾಗಿ ಇಡಲಾಗಿತ್ತು.
 
**
ಕೊಬ್ಬರಿ ಹೋರಿ ಸ್ಪರ್ಧೆ
ಕೃಷಿಕರಿಗೆ ದೀಪಾವಳಿ, ಮಕರ ಸಂಕ್ರಾಂತಿ, ಕಾರಹುಣ್ಣಿಮೆಗಳು ಪ್ರಮುಖ ಹಬ್ಬಗಳು. ಈ ಸಂದರ್ಭದಲ್ಲಿ ಹೊಲ, ಕೃಷಿ ಪರಿಕರ, ಧನ–ಧಾನ್ಯ, ಜಾನುವಾರುಗಳಿಗೆ 
ಪೂಜೆ ಮಾಡುತ್ತಾರೆ. ಆ ಬಳಿಕ ಈ ಕ್ರೀಡೆ ನಡೆಯುತ್ತದೆ. ಹೋರಿಯನ್ನು ಬೆನ್ನಟ್ಟಿ, ಅದರ ಕೊರಳಲ್ಲಿರುವ ಕೊಬ್ಬರಿ ಸರ ಹರಿದುಕೊಳ್ಳುವ ಸ್ಪರ್ಧೆ ಇದು. ಹೀಗಾಗಿ ಜಿಲ್ಲೆಯ ಹಲವೆಡೆ ಎರಡು ತಿಂಗಳ ಕಾಲ ಸ್ಪರ್ಧೆ ನಿರಾತಂಕವಾಗಿ ನಡೆಯುತ್ತದೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT