ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಪೂರೈಕೆಗೆ ಪುರಸಭೆ ಹರಸಾಹಸ

ತುಂಗಭದ್ರಾ ನದಿ ಗುಂಡಿಯಲ್ಲಿ ನಿಂತಿರುವ ನೀರು ಬಳಕೆ
Last Updated 30 ಜನವರಿ 2017, 6:28 IST
ಅಕ್ಷರ ಗಾತ್ರ

ಹರಪನಹಳ್ಳಿ:  ತುಂಗಭದ್ರಾ ನದಿ ನೀರು ಬತ್ತಿ ಹೋಗಿ ಹಲವು ತಿಂಗಳು ಕಳೆದಿವೆ. ನದಿ ಗುಂಡಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಿಂತಿರುವ ನೀರನ್ನು ಪಟ್ಟಣಕ್ಕೆ ಪೂರೈಸಲು ಸ್ಥಳೀಯ ಪುರಸಭೆ ಶನಿವಾರ ಹರಸಾಹಸಕ್ಕೆ ಕೈಹಾಕಿದೆ.

ಕುಡಿಯುವ ನೀರಿಗಾಗಿ ಕಳೆದ 15 ವರ್ಷಗಳ ಹಿಂದೆ 40 ಕಿ.ಮೀ ದೂರದ ತುಂಗಭದ್ರಾ ನದಿಯಿಂದ ನೀರು ಪೂರೈಸುವ ಯೋಜನೆಯನ್ನು ಸರ್ಕಾರ ಕಾರ್ಯರೂಪಕ್ಕೆ ತಂದಿತ್ತು. ಹರಪನಹಳ್ಳಿ ಪಟ್ಟಣದಲ್ಲಿ 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಮಳೆಯ ಅಭಾವದಿಂದ ಜಲಮೂಲಗಳು ಬತ್ತಿವೆ. ನಿತ್ಯ ಪಟ್ಟಣಕ್ಕೆ 75 ಸಾವಿರ ಲೀಟರ್‌ ಕುಡಿಯುವ ನೀರಿನ ಅವಶ್ಯಕತೆ ಇದೆ.

ಪುರಸಭೆ ಕುಡಿಯುವ ನೀರಿಗಾಗಿ ಲಭ್ಯವಿರುವ ಕೊಳವೆಬಾವಿಗಳನ್ನು ದುರಸ್ತಿ ಮಾಡಿಸಿ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಕೊಳವೆಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ಎರಡು ಟ್ಯಾಂಕರ್‌ ಮೂಲಕ ಕುಡಿವ ನೀರನ್ನು ಪೂರೈಸಲಾಗುತ್ತಿದೆ. ‘ಸುಮಾರು 300 ಮೀಟರ್‌ ದೂರದಲ್ಲಿರುವ ನೀರನ್ನು 7.5 ಎಚ್‌.ಪಿ ಸಾಮರ್ಥ್ಯದ ಮೂರು ಮೋಟಾರ್‌ಗಳನ್ನು ಬಳಸಿ ಜಾಕ್‌ವೆಲ್‌ಗೆ ಪಂಪ್‌ ಮಾಡಲು ಪುರಸಭೆ ಸಿದ್ಧತೆ ಮಾಡಿಕೊಂಡಿದೆ.

ನಂತರ ಜಾಕ್‌ವೆಲ್‌ನಿಂದ ನೀರನ್ನು ಪಂಪ್‌ ಮಾಡಿ ಜ.31ರಿಂದ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ನದಿ ತಗ್ಗು ಪ್ರದೇಶದಲ್ಲಿ ನಿಂತಿರುವ ನೀರು ಕನಿಷ್ಠ 20 ದಿನಗಳಿಂದ ಒಂದು ತಿಂಗಳ ಕಾಲ ಬಳಸಿಕೊಳ್ಳಲು ಸಾಧ್ಯವಿದೆ. ನದಿ ತಟದಲ್ಲಿ ಉಪಾಧ್ಯಕ್ಷ ಸತ್ಯನಾರಾಯಣ್‌, ಮುಖ್ಯಾಧಿಕಾರಿ ಐ.ಬಸವರಾಜ್‌ ಮತ್ತು ತಂತ್ರಜ್ಞರ ತಂಡ ಬೀಡು ಬಿಟ್ಟಿದೆ’ ಎಂದು ಪುರಸಭೆ ಅಧ್ಯಕ್ಷ ಎಚ್‌.ಕೆ. ಹಾಲೇಶ್‌ ತಿಳಿಸಿದ್ದಾರೆ. 

ನೀರಿನ ಘಟಕ: ಪಟ್ಟಣದಲ್ಲಿ ಒಂದೇ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಶುದ್ಧ ನೀರಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಪ್ರವಾಸಿ ಮಂದಿರ ಆವರಣ ಮತ್ತು ಹೂವಿನಹಡಗಲಿ ವೃತ್ತದಲ್ಲಿ ಸ್ಥಗಿತಕೊಂಡಿರುವ ಶುದ್ಧ ಕುಡಿಯವ ನೀರಿನ ಘಟಕಗಳ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

***
– ಮಲ್ಲಿಕಾರ್ಜುನ ಕನ್ನಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT