ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ವಿವಿಧೆಡೆ ಸೂಚನಾ ಫಲಕ ಅಳವಡಿಕೆ

ರಸ್ತೆ ಸುರಕ್ಷತೆಗೆ ಒತ್ತು ಜಿಲ್ಲಾ ಪೊಲೀಸ್‌ ಕ್ರಮ
Last Updated 30 ಜನವರಿ 2017, 6:56 IST
ಅಕ್ಷರ ಗಾತ್ರ
ರಾಯಚೂರು: ನಗರ  ಮತ್ತು ನಗರದ ಹೊರವಲಯದ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಯಲು ಜಿಲ್ಲಾ ಪೊಲೀಸ್‌ ಇಲಾಖೆಯು ₹ 4 ಲಕ್ಷ ವೆಚ್ಚದಲ್ಲಿ ಸೂಚನಾ ಫಲಕಗಳು, ರಸ್ತೆ ವಿಭಜಕಗಳಲ್ಲಿ ಪ್ರತಿಫಲಕಗಳು, ರಸ್ತೆ ಮಧ್ಯೆಯಲ್ಲಿ ಪ್ರತಿಫಲಿಸುವ (ರಿಫ್ಲೆಕ್ಟರ್‌) ಕ್ಯಾಟ್‌ಐಸ್‌ ಸಾಧನಗಳನ್ನು ಅಳವಡಿಸಿದೆ.
 
ಲಿಂಗಸುಗೂರು ಹೆದ್ದಾರಿಯಲ್ಲಿ ಸಾತ್‌ ಮೈಲ್‌ನಿಂದ ಹೈದರಾಬಾದ್‌ ಹೆದ್ದಾರಿಯ ಬೈಪಾಸ್‌ ರಸ್ತೆಯವರೆಗೆ ಮತ್ತು ನಗರದ ವಿವಿಧೆಡೆ ಇವುಗಳನ್ನು ಅಳವಡಿಸಲಾಗಿದೆ. ಇವುಗಳ ಜೊತೆಗೆ, ರಸ್ತೆ ದಾಟುವ ಪಾದಚಾರಿಗಳಿಗೆ ಸೂಚನಾ ಫಲಕ, ವಾಹನ ನಿಲುಗಡೆ ಮತ್ತು ನಿಷೇಧ ಸೂಚನಾ ಫಲಕಗಳನ್ನೂ ಹಾಕಲಾಗಿದೆ.
 
ಕೂಡು ರಸ್ತೆಗಳಲ್ಲಿ ಮತ್ತು ಪ್ರಮುಖ ವೃತ್ತದಲ್ಲಿ ಸೌರ ವಿದ್ಯುತ್‌ ಚಾಲಿತ 15 ಡೆಲಿಗ್ನೆಟರ್‌ಗಳನ್ನು (ಮಿನುಗುವ ದೀಪ) ಅಳವಡಿಸಲಾಗಿದೆ. 285 ಕ್ಯಾಟ್‌ ಐಸ್‌ಗಳನ್ನು  (ಬೆಳಕಿಗೆ ಪ್ರತಿಫಲಿಸುವ ಸಾಧನ) ಲಿಂಗಸುಗೂರು ಹೆದ್ದಾರಿ ಮತ್ತು ವೇಗ ನಿಯಂತ್ರಕಗಳಲ್ಲಿ (ಹಂಪ್‌) ಅಳವಡಿಸಲಾಗಿದೆ. 
 
‘ಲಿಂಗಸುಗೂರು ಹೆದ್ದಾರಿಯ ಪವರ್‌ಗ್ರಿಡ್‌ ಬಳಿ 2015–16ರಲ್ಲಿ 11 ಅಪಘಾತಗಳು ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಹಾಗಾಗಿ ಇಲ್ಲಿ ಓವರ್‌ ಟೆಕ್‌ (ವಾಹನ ಹಿಂದಿಕ್ಕುವುದು) ಮಾಡದಂತೆ 20 ಸೂಚನಾ ಫಲಕಗಳನ್ನು ಮತ್ತು  14 ಅಪಾಯ ಸೂಚಿ ಫಲಕ (ಹಜಾರ್ಡ್‌ ಮಾರ್ಕ್‌ ಬೋರ್ಡ್‌) ಹಾಕಲಾಗಿದೆ’ ಪೊಲೀಸ್‌ ವರಿಷ್ಠಾಧಿಕಾರಿ ಚೇತನಸಿಂಗ್‌ ರಾಠೋರ್‌ ತಿಳಿಸಿದರು.
 
‘ರಸ್ತೆ ಸುರಕ್ಷತಾ ವಿಭಾಗದಿಂದ 2016ರಲ್ಲಿ ₹ 8 ಲಕ್ಷ ಅನುದಾನ ದೊರೆತಿದ್ದು, ಇದರಲ್ಲಿ ₹ 4 ಲಕ್ಷಗಳಲ್ಲಿ ಸೂಚನಾ ಫಲಕ ಮತ್ತಿತರ ಸಾಧನಗಳನ್ನು ಅಳವಡಿಸಲಾಗಿದೆ. ಉಳಿದ ₹ 4 ಲಕ್ಷಗಳನ್ನು ಸಂಚಾರ ನಿಯಂತ್ರಣ ದೀಪಗಳ ದುರಸ್ತಿ ಮತ್ತು ನಿರ್ವಹಣೆಗೆ ಬಳಕೆ ಮಾಡಲಾಗಿದೆ’ ಎಂದರು. ಹೆಲ್ಮೆಟ್‌ ಕಡ್ಡಾಯ ಮಾಡಿದ್ದು, ಹೆಲ್ಮೆಟ್‌ ಇಲ್ಲದ ಸವಾರರಿಗೆ ದಂಡ ವಿಧಿಸಲಾಗುತ್ತಿದೆ. 
 
**
ಚೀತಾ ಗಸ್ತು ಬೈಕ್‌
‘ಎರಡು ತಿಂಗಳಿಂದ ಸೈರನ್‌ ಅಳವಡಿಸಿದ ಎಂಟು ಚೀತಾ ಬೈಕ್‌ಗಳು ನಗರದಲ್ಲಿ ಗಸ್ತು ತಿರುಗುತ್ತಿವೆ. ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಬಂದ ಕೂಡಲೇ ಈ ಬೈಕ್‌ಗಳ ಸೇವೆಗೆ ನಿಯೋಜಿಸಿರುವ ಸಿಬ್ಬಂದಿಗೆ ಮಾಹಿತಿ ನೀಡಲಾಗುತ್ತದೆ. ಇದರಿಂದ ಟ್ರಾಫಿಕ್‌ ಜಾಮ್‌, ಗಲಾಟೆ ಮುಂತಾದ ಸನ್ನಿವೇಶದಲ್ಲಿ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಹೋಗಲು ಆಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನಸಿಂಗ್‌ ರಾಠೋರ್‌ ಹೇಳಿದರು.
 
**
₹ 15 ಸಾವಿರ ದಂಡ
‘ಹೆಲ್ಮೆಟ್‌ ಧರಿಸಿದ ಕಾರಣ ಶನಿವಾರ ಒಂದೇ ದಿನ 150 ಬೈಕ್‌ ಸವಾರರಿಂದ ₹ 15 ಸಾವಿರ ದಂಡ  ವಸೂಲು ಮಾಡಲಾಗಿದೆ’ ಎಂದು ಪಿಎಸ್‌ಐ ಸಿದ್ದರಾಮೇಶ್ವರ ಗಡದ ಹೇಳಿದರು. 
 
**
ಅಪಘಾತ ತಡೆಗಟ್ಟಲು ನಗರ ಮತ್ತು ನಗರದ ಹೊರವಲಯದ ಲಿಂಗಸುಗೂರು ಹೆದ್ದಾರಿಯಲ್ಲಿ ಸೂಚನಾ ಫಲಕ ಮತ್ತು ರಸ್ತೆ ವಿಭಜಕಗಳಿಗೆ ರಿಫ್ಲೆಕ್ಟರ್‌ಗಳನ್ನು ಅಳವಡಿಸಲಾಗಿದೆ.
-ಚೇತನಸಿಂಗ್‌ ರಾಠೋರ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT