ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರ್ಮಾ ಸಾಹಿತ್ಯ ಸಾಧನೆ ಅವಿಸ್ಮರಣೀಯ

ದಿ. ಜಿ.ವಿ.ಶರ್ಮಾ ನುಡಿನಮನ ಕಾರ್ಯಕ್ರಮದಲ್ಲಿ ಅಭಿಮತ
Last Updated 30 ಜನವರಿ 2017, 6:57 IST
ಅಕ್ಷರ ಗಾತ್ರ
ಸಿಂಧನೂರು: ತೆಲುಗು, ಸಂಸ್ಕೃತ ಮತ್ತು ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಮತ್ತು ಬರೆಯುವ ಕಲೆಯನ್ನು ಸಿದ್ದಿಸಿಕೊಂಡಿದ್ದ ಪಂಡಿತ್ ಶರ್ಮಾ ತಮ್ಮ ಬದುಕನ್ನು ಆಧ್ಯಾತ್ಮಿಕ ನೆಲೆಯಲ್ಲಿ ರೂಪಿಸಿಕೊಂಡಿದ್ದರು ಎಂದು ಸಂಶೋಧಕ ಪ್ರೊ.ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ ಅಭಿಪ್ರಾಯಪಟ್ಟರು.
 
ಇಲ್ಲಿನ ಪ್ರಶಾಂತನಗರದಲ್ಲಿರುವ ಪಂಡಿತ್ ಜಿ.ವಿ.ಶರ್ಮಾ ಅವರ ಅಕ್ಷರ ನಿವಾಸದಲ್ಲಿ ವಚನ ಸಾಹಿತ್ಯ ಪರಿಷತ್ ಹಾಗೂ ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ  ಮಾತನಾಡಿದರು. 
 
ಆಂಧ್ರದ ತೆನಾಲಿಯಿಂದ ಶಿಕ್ಷಕನಾಗುವ ಹಂಬಲ ಇಟ್ಟುಕೊಂಡು, ಉದ್ಯೋಗವನ್ನರಿಸಿ ತಾಲ್ಲೂಕಿಗೆ ಬಂದ ಶರ್ಮಾ ಒಬ್ಬ ಪ್ರಬುದ್ಧ ಸಾಹಿತಿಯಾದದ್ದು ಒಂದು ರೋಚಕ ಕಥೆ. ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಕನ್ನಡಿಗರಿಗೆ ಇರದ ಕನ್ನಡದ ಪ್ರೀತಿ ಅವರಲ್ಲಿ ತಾವು ಕಂಡಿರುವುದಾಗಿ ಹೇಳಿದರು. 
 
ಮಕ್ಕಳ ಸಾಹಿತ್ಯ, ಧಾರ್ಮಿಕ ಪುಸ್ತಕಗಳು, ನಾಟಕಗಳು ಹೀಗೆ ಹಲವು ಪ್ರಕಾರಗಳಲ್ಲಿ ಅವರು ಬರೆದಿರುವ 42 ಪುಸ್ತಕಗಳಲ್ಲಿ 5 ತೆಲುಗು ಭಾಷೆಯಲ್ಲಿದ್ದರೆ, ಉಳಿದೆಲ್ಲವು ಕನ್ನಡ ಭಾಷೆಯಲ್ಲಿ ರಚನೆಗೊಂಡಿವೆ. ಇವರ ಪುಸ್ತಕಗಳಿಗೆ ಪ್ರತಿಷ್ಠಿತ ಸ್ವಪ್ನ ಪುಸ್ತಕ ಮಳಿಗೆಯಲ್ಲಿ ಕೌಂಟರ್‌ಗಳಿದ್ದವೆಂದರೆ ಅವರ ಸಾಹಿತ್ಯ ಎಷ್ಟು ಪ್ರಬುದ್ಧವಾಗಿತ್ತು ಎಂಬುದನ್ನು ಎಲ್ಲರೂ ಮನನ ಮಾಡಿಕೊಳ್ಳಬೇಕು ಎಂದರು. 
 
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬೀರಪ್ಪ ಶಂಭೋಜಿ ಮಾತನಾಡಿ, ಶರ್ಮಾರ ಕನ್ನಡದ ಅಕ್ಷರಗಳು ಮುತ್ತಿಟ್ಟಂತೆ ಇದ್ದವು. ಎರಡನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಅವರ ಅಧ್ಯಕ್ಷೀಯ ಭಾಷಣವನ್ನು ಅವರ ಕೈಬಹರದಲ್ಲಿಯೇ ಹೊರತಂದಿದ್ದು, ಉಳಿದ ಸಮ್ಮೇಳನಗಳಿಗೆ ಮೇಲ್ಪಂಕ್ತಿಯಾಗಿದೆ. ಪರಿಷತ್ ಸದಸ್ಯರು ಇಂಗ್ಲಿಷ್‌ನಲ್ಲಿ ಸಹಿ ಮಾಡಿದ ಕಾರಣಕ್ಕಾಗಿ ಬೇಸತ್ತು ಪರಿಷತ್‌ನಿಂದ ದೂರವಿದ್ದ ಶರ್ಮಾ ತಾಲ್ಲೂಕು ಸಮ್ಮೇಳನಾಧ್ಯಕ್ಷ ಸ್ಥಾನ ಅಲಂಕರಿಸಲು ಬೇಗನೆ ಒಪ್ಪಿರಲಿಲ್ಲ ಎಂದು ವಿವರಿಸಿದರು. 
 
ಜಿಲ್ಲಾ ಪಂಚಾಯಿತಿ ಸದಸ್ಯ ಶಿವನಗೌಡ ಗೊರೇಬಾಳ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸರಸ್ವತಿ ಪಾಟೀಲ್, ಎಸ್.ಶರಣೇಗೌಡ, ಎಸ್.ದೇವೇಂದ್ರಗೌಡ, ಪತ್ರಕರ್ತ ಪ್ರಹ್ಲಾದಗುಡಿ, ಇಸ್ಮಾಯಿಲ್‌ಸಾಬ್, ಕಂಡಕ್ಟರ್ ಜಾನಿ, ಶಿಕ್ಷಕರಾದ ವೆಂಕನಗೌಡ ವಟಗಲ್, ಧರಯ್ಯಸ್ವಾಮಿ, ವೀರೇಶ ಗೋನವಾರ, ರಮಾದೇವಿ ಶಂಭೋಜಿ, ಕೊಟ್ರೇಶ ಬಿ, ಕೆಂಗಲ್ ವೆಂಕಟೇಶ ಮಾತನಾಡಿದರು. 
 
ಪಂಪಯ್ಯಸ್ವಾಮಿ ಸಾಲಿಮಠ ಶರ್ಮಾರ ಕುರಿತು ಸ್ವರಚಿತ ಕವನ ವಾಚಿಸಿದರು. ನಾಗರತ್ನ ಬಂಗಾರಶೆಟ್ಟಿ ಹಾಗೂ ಶರ್ಮಾರ ಕುಟುಂಬ
ದವರು ಇದ್ದರು.
 
**
ಶರ್ಮಾ ತಮ್ಮ ಮನೆಗೆ ‘ಅಕ್ಷರ ನಿಲಯ’ ಎಂಬ ಹೆಸರಿಟ್ಟು ತಾವು ಬರೆದ ಎಲ್ಲ ಪುಸ್ತಕಗಳ ಮುಖಪುಟವನ್ನು ಶಿಲೆಗಳಲ್ಲಿ ಹಾಕಿಸಿ ಕನ್ನಡತನ ಮೆರೆದಿದ್ದಾರೆ
-ಪ್ರೊ.ಶಾಶ್ವತಯ್ಯಸ್ವಾಮಿ . 
ಸಂಶೋಧಕ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT