ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿನಗರದಲ್ಲಿ ದಿನಕ್ಕೆ 27ಟನ್ ಕಸ ಸೃಷ್ಟಿ!

ಇಂದು ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ
Last Updated 30 ಜನವರಿ 2017, 7:01 IST
ಅಕ್ಷರ ಗಾತ್ರ
ಯಾದಗಿರಿ: ಅಡುಗೆ ಮನೆಯಿಂದ ಹಿಡಿದು ಎಲ್ಲಾ ಬಗೆಯಿಂದ ನಗರದಲ್ಲಿ ದಿನಕ್ಕೆ 27ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ! ಈ ಅಚ್ಚರಿ ಅಂಶವನ್ನು ನಗರಸಭೆಯ ಪರಿಸರ ಆರೋಗ್ಯ ವರದಿ ಬಹಿರಂಗಪಡಿಸಿದೆ.
 
ಸ್ವಚ್ಛತೆ ಎಂಬುದು ಜೀವನಮಟ್ಟ ಸುಧಾರಣೆಯ ಪ್ರಥಮ ಹೆಜ್ಜೆ. ಹಾಗಾಗಿಯೇ ಕೇಂದ್ರ ಸರ್ಕಾರ 2005ರಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಪೂರ್ಣ ನೈರ್ಮಲ್ಯ ಅಭಿಯಾನಕ್ಕೆ ಚಾಲನೆ ನೀಡಿದೆ. ಆದರೆ, ಅಭಿಯಾನ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಬಹಿರಂಗ ಸತ್ಯ. ಯಾದಗಿರಿ ನಗರ ಸ್ವಚ್ಛತೆ ವಿಚಾರದಲ್ಲಿ ತೀರಾ ಹಿಂದುಳಿದಿದೆ. ಜಿಲ್ಲಾ ಕೇಂದ್ರದಲ್ಲಿ ನಾಗರಿಕರು ಸ್ವಚ್ಛತೆಗಾಗಿ ಬೀದಿಗಿಳಿದು ಹೋರಾಟ ಮಾಡುವಂತಹ ಪರಿಸ್ಥಿತಿ ಬಂದಿರುವುದು ಗಿರಿನಗರ ನಾಗರಿಕರ ದೌರ್ಭಾಗ್ಯ ಎನ್ನುತ್ತಾರೆ ಹಿರಿಯ ನಾಗರಿಕರಾದ ಅಯ್ಯಣ್ಣ ಹುಂಡೇಕರ್.
 
ಆತಂಕಪಡುವ ರೀತಿಯಲ್ಲಿ ನಗರದಲ್ಲಿ ಮಾನವ ತ್ಯಾಜ್ಯ ಸಂಗ್ರಹಗೊಳ್ಳುತ್ತಿದೆ. ಬೃಹತ್‌ ಮಟ್ಟದಲ್ಲಿ ಸೃಷ್ಟಿಯಾಗುತ್ತಿರುವ ಈ ಮಾನವ ತ್ಯಾಜ್ಯವನ್ನು ವಿಲೇವಾರಿ ಮಾಡುವುದನ್ನೇ ನಗರಸಭೆ ಮರೆತಿದೆ. ಮಾನವ ತ್ಯಾಜ್ಯವನ್ನು ಶೀಘ್ರ ವಿಲೇವಾರಿ ಮಾಡದಿದ್ದರೆ ಸಾಂಕ್ರಾಮಿಕ ರೋಗಗಳಿಗೆ ನಾಗರಿಕರು ತುತ್ತಾಗಲಿದ್ದಾರೆ ಎಂಬುದಾಗಿ ಈಚೆಗೆ ಭೇಟಿ ನೀಡಿರುವ ದೆಹಲಿಯ ಸ್ವಚ್ಛತಾ ಮತ್ತು ತ್ಯಾಜ್ಯ ಸಮೀಕ್ಷಣಾ ಅಧಿಕಾರಿಗಳ ತಂಡ ನಗರಸಭೆಗೆ ಎಚ್ಚರಿಕೆ ನೀಡಿ ಹೋಗಿದೆ. ಆದರೂ, ನಗರಸಭೆ ಸಿಬ್ಬಂದಿ ಕೊರತೆಯ ಕುಂಟುನೆಪ ಹೇಳುತ್ತಾ ಮಾನವ ತ್ಯಾಜ್ಯ ವಿಲೇವಾರಿ ಕೈಚೆಲ್ಲಿದೆ. 
 
ಇದರಿಂದಾಗಿ ಒಳಚರಂಡಿ ವ್ಯವಸ್ಥೆ ಇಲ್ಲದ ನಗರದಲ್ಲಿ ಎಲ್ಲೆಂದರಲ್ಲಿ ತೆರೆದ ಚರಂಡಿಗಳು ದುರ್ವಾಸನೆ ಸೂಸುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಅಂಬೆಗಾಲಿಡುತ್ತಿರುವ ಬೇಸಿಗೆ ಸಂದರ್ಭದಲ್ಲಿ ಮಲೇರಿಯಾ, ಅತಿಸಾರ, ಶಿಸ್ಟೊಸೊಮಿಯಾಸಿಸ್‌, ಕಾಲರಾ, ಡೆಂಗಿ ರೋಗ ಭೀತಿಯ ಅಪಾಯಕಾರಿ ಎಚ್ಚರಿಕೆ ಗಂಟೆ ಬಾರಿಸುತ್ತಿದೆ! ಇದಕ್ಕೆ ಪೂರಕ ಎಂಬಂತೆ ಆರೋಗ್ಯ ಇಲಾಖೆ ಈ ಎರಡು ತಿಂಗಳಿನಲ್ಲಿ ಜಿಲ್ಲೆಯಲ್ಲಿ ಒಟ್ಟು 42 ಡೆಂಗಿ ಪ್ರಕರಣ ದೃಢಪಟ್ಟಿರುವುದಾಗಿ ಘೋಷಿಸಿದೆ!
‘2010ರಲ್ಲಿ ಜಿಲ್ಲೆ ಉದಯಿಸಿದಾಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ‘ಯಾದಗಿರಿ ಜಿಲ್ಲೆ–ವಿಷನ್‌ 2020’ ಅಭಿವೃದ್ಧಿ ಮಂತ್ರ ಆಡಳಿತದ ಕನಸು ಎಂದು ಘೋಷಿಸಿದ್ದರು. ಆದರೆ, ಜಿಲ್ಲೆ ಉದಯಿಸಿ 6 ವರ್ಷ ಗತಿಸಿದರೂ ಬರೀ ನಗರ ಸ್ವಚ್ಛತೆ ಕಾಣುವಲ್ಲಿ ಅಭಿವೃದ್ಧಿ ಕುಂಟುತ್ತಿದೆ. ನಗರಸಭೆಗೆ ಸಾಕಷ್ಟು ಅನುದಾನ ನೀಡಿ ಆರ್ಥಿಕ ಸಬಲತೆ ನೀಡುವವರೆಗೂ ನಗರ ಸ್ವಚ್ಛತೆ ಸುಧಾರಿಸಲಾಗದು’ ಎನ್ನುತ್ತಾರೆ ಕೊಳೆಗೇರಿ ಅಭಿವೃದ್ಧಿ ಸಂಘದ ಜಿಲ್ಲಾ ಸಂಚಾಲಕಿ ಉಮಾದೇವಿ ಸಡರಗಿ.
 
**
ಶೇ 50ರಷ್ಟು ಸಿಬ್ಬಂದಿ ಕೊರತೆ
ನಗರ ಅನೈರ್ಮಲ್ಯದಿಂದ ಮುಕ್ತವಾಗಬೇಕಾದರೆ 236 ಸಿಬ್ಬಂದಿ ಅವಶ್ಯಕ. ಅದರಲ್ಲಿ ಈಗಾಗಲೇ ನಗರಸಭೆ ಒಟ್ಟು 171 ಮಂದಿ ಪೌರಕಾರ್ಮಿಕರನ್ನು ನೇಮಿಸಿದೆ. ಆದರೆ 50 ಮಂದಿ ಅನ್ಯ ಕಚೇರಿಗಳಿಗೆ ನಿಯೋಜನೆ ಗೊಂಡಿದ್ದಾರೆ. ಇದರಿಂದ ನಗರಸಭೆಯಲ್ಲಿ ಶೇ 50ರಷ್ಟು ಸಿಬ್ಬಂದಿ ಕೊರತೆ ಇದೆ.
 
**
ಎಲ್ಲಿ ಕಸದ  ರಾಶಿ  ಹೆಚ್ಚು
ವಿವೇಕಾನಂದ ಕಾಲೊನಿ, ಗಾಂಧಿನಗರ, ಗಂಜ್‌ ಏರಿಯಾ, ಮುಸ್ಲಿಂಪುರ, ಕೋಲಿವಾಡ, ಗಾಜರ ಕೋಟ, ಮಾತಾ ಮಾಣಿಕೇಶ್ವರ ನಗರ, ಸ್ಟೇಷನ್‌ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿಯಾಗಿಲ್ಲ.
 
**
ತ್ಯಾಜ್ಯ ವಿಂಗಡಿಸಿ
ತ್ಯಾಜ್ಯ ಹಾಕುವ ನಗರದ ನಾಗರಿಕರಿಗೆ ತ್ಯಾಜ್ಯ ವಿಂಗಡನೆ ಬಗ್ಗೆ ಅರಿವು ಪಡೆದುಕೊಳ್ಳಬೇಕು. ತ್ಯಾಜ್ಯ ಅಂದರೆ ಬರೀ ಕಸವಲ್ಲ. ಹಸಿ, ಒಣ, ಘನ, ದ್ರವ ರೂಪದಲ್ಲಿ ಅದು ಇರುತ್ತದೆ. ಅದನ್ನು ವಿಂಗಡಿಸಿ ಬೇರ್ಪಡಿಸುವುದರಿಂದ ವಿಲೇವಾರಿ ಮಾಡಲು ಪೌರ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ವಿಲೇವಾರಿ ಸ್ವಲ್ಪ ತಡವಾದರೆ ಶಾಪ ಹಾಕುವ ಜನರು ಕಸ ವಿಂಗಡನೆಯತ್ತ ಮನಸ್ಸು ಮಾಡುವುದಿಲ್ಲ. ಕಸ ಬೇರ್ಪಡಿಸಿದರೆ ನಗರ ಸ್ವಚ್ಛತೆಗೆ ಸಹಕರಿಸಿದಂತಾಗುತ್ತದೆ ಎನ್ನುತ್ತಾರೆ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷ ಸಂತೋಷ್‌ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT