ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜನ ಅದ್ದೂರಿ ಜಾತ್ರೆ ಮುಗಿದ ಬಳಿಕ...

ಜಾತ್ರೆ ಮುಗಿದು ಎರಡೂ ವಾರ ಕಳೆದರೂ ಮುಗಿಯದ ಗುಂಗು
Last Updated 30 ಜನವರಿ 2017, 7:05 IST
ಅಕ್ಷರ ಗಾತ್ರ
ಕೊಪ್ಪಳ: ಅಜ್ಜನ ತೇರು ಮೈದಾನದಲ್ಲಿ ಸಂಚರಿಸಿ ತನ್ನ ಮನೆ ಸೇರಿದೆ. ಜ. 27ಕ್ಕೆ ಅಜ್ಜನ ಜಾತ್ರೆಗೆ ಸಂಪೂರ್ಣ ತೆರೆಬಿದ್ದಿದೆ. ಭೂಮಿಗೆ ಬರವಿದ್ದರೂ ಭಕ್ತಿಗೆ ಬರವಿಲ್ಲ ಎಂಬುದನ್ನು ಜಾತ್ರೆ ಸಾಕ್ಷೀಕರಿಸಿದೆ ಎಂಬುದು ಜಾತ್ರೆಗೆ ಬಂದ ಗಣ್ಯರು ಹೇಳುವ ಮಾತು. 
 
ಜ. 28ರಿಂದ ಜಾತ್ರೆಯ ಎಲ್ಲ ಅಲಂಕಾರ, ವ್ಯವಸ್ಥೆಯನ್ನು ತೆಗೆದಿಡುವ ಕಾರ್ಯ ನಡೆದಿದೆ. ಭಕ್ತರು ಅದರಲ್ಲೂ ಸೇವಾ ಭಾವ ಕಾಣುತ್ತಿದ್ದಾರೆ. ದಾಸೋಹವು ನಿತ್ಯ ಪ್ರಸಾದ ನಿಲಯಕ್ಕೆ ವರ್ಗಾವಣೆಗೊಂಡಿದೆ. ಶನಿವಾರ ಪ್ರಸಾದ ಭವನದ ಚಪ್ಪರ ಕೀಳುವ ಕಾರ್ಮಿಕರು, ಅಂಗಡಿ ತೆರವು ಮಾಡುವ ವ್ಯಾಪಾರಿಗಳು, ತಮ್ಮ ತಾಂತ್ರಿಕ ಪರಿಕರ ಎತ್ತಿಡುತ್ತಿರುವ ವಿದ್ಯುತ್‌ ಕೆಲಸಗಾರರು, ಪೊಲೀಸರು ಮಠದ ಆವರಣದಲ್ಲಿ ಕಾರ್ಯನಿರತರಾಗಿದ್ದರು.
 
ಜಾತ್ರೆಯ ಅಂಗಣದಲ್ಲಿ ಬಿದ್ದ ಪ್ಲಾಸ್ಟಿಕ್‌ ಹೆಕ್ಕುವ ಕೈಗಳು, ಅಲ್ಲಿ ಇಲ್ಲಿ  ಬೆಲೆಬಾಳುವ ವಸ್ತುಗಳೇನಾದರೂ ಸಿಕ್ಕಿಯಾವೋ ಎಂದು ಅರಸುವ ಕಣ್ಣುಗಳಿಗೇನೂ ಕೊರತೆ ಇರಲಿಲ್ಲ. ದಾಸೋಹ ಭವನದಲ್ಲಿ ಉರಿದ ಕಟ್ಟಿಗೆಯ ಇದ್ದಿಲು ಒಟ್ಟುಗೂಡಿಸುವ ಮಹಿಳೆಯರು, ಶಾಮಿಯಾನ ತೆರವುಗೊಳಿಸುವವರು.... ಹೀಗೆ ಮಠದ ಆವರಣದಲ್ಲಿ ಅಕ್ಷರಶಃ ಕಾಯಕ ಜಾತ್ರೆ ನಡೆಯುತ್ತಿದೆ. ಭಕ್ತರ ಸಂಖ್ಯೆ ನಿಧಾನಕ್ಕೆ ಇಳಿಮುಖವಾಗಿದೆ.  ಆದರೆ, ಜಾತ್ರೆಯ ಗುಂಗು ಇನ್ನೂ ಹೋಗಿಲ್ಲ ಎನ್ನುತ್ತಾರೆ ಭಕ್ತರು. 
 
ಮಠದ ಮೂಲಗಳು ಹೇಳುವ ಪ್ರಕಾರ ರಥೋತ್ಸವದ ದಿನ ಸುಮಾರು 4 ಲಕ್ಷ ಜನ ಭಕ್ತರು ಬಂದಿದ್ದರು. ಉಳಿದ ಎರಡು ದಿನ ಸರಾಸರಿ ಒಂದೂವರೆಯಿಂದ ಎರಡು ಲಕ್ಷ ಜನ ಬಂದಿದ್ದಾರೆ. ಜ. 16ರಿಂದ 22ರವರೆಗೂ ಇದೇ ಪ್ರಮಾಣದ ಜನ ಬಂದಿದ್ದಾರೆ. ದಾಸೋಹ ಭವನದಲ್ಲಿ ಜನರ ಒತ್ತಡವನ್ನು ನಿಭಾಯಿಸುವುದೇ ಕಷ್ಟವಾಗಿಬಿಟ್ಟಿತ್ತು ಎನ್ನುತ್ತವೆ.
 
**
ಪೊಲೀಸರ ಹದ್ದಿನ ಕಣ್ಣು
ವಿಶೇಷವೆಂದರೆ ಈ ಬಾರಿ ಜಾತ್ರೆಯಲ್ಲಿ ಅಪರಾಧ ಪ್ರಕರಣಗಳು ನಡೆದಿಲ್ಲ. ಜ. 23ರಂದು ತಿರುಗು ತೊಟ್ಟಿಲಿನಿಂದ ಬಿದ್ದು ವ್ಯಕ್ತಿಯೊಬ್ಬ ಗಾಯಗೊಂಡ ಘಟನೆ ಬಿಟ್ಟರೆ ಬೇರೆ ಯಾವ ಅವಘಡಗಳೂ ಸಂಭವಿಸಿಲ್ಲ ಎಂದು ಪೊಲೀಸರು ನಿಟ್ಟುಸಿರುಬಿಟ್ಟರು. ಅಪರಾಧ ಪ್ರಕರಣ ಸಂಭವಿಸದಂತೆ ಹದ್ದಿನ ಕಣ್ಣಿಟ್ಟು ಕಾದ ಪೊಲೀಸರ ಕಾರ್ಯವನ್ನು ಎಷ್ಟು ಶ್ಲಾಘಿಸಿದರೂ ಸಾಲದು ಎನ್ನುತ್ತಾರೆ ಮಠದ ವಕ್ತಾರರು. 
 
 
**
220 ಮಕ್ಕಳು  ಮಡಿಲಿಗೆ ಜಾತ್ರೆಯಾದ್ಯಂತ ಪೊಲೀಸರದ್ದಂತೂ ತೀವ್ರ ಒತ್ತಡದ ಕೆಲಸ. ಜಾತ್ರೆಯ ಗದ್ದಲದಲ್ಲಿ ಕಳೆದುಹೋದ 220 ಮಕ್ಕಳನ್ನು ಹುಡುಕಿ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿಸಿದ್ದಾರೆ. ಕೆಲವರ ಮೊಬೈಲ್‌ ಕಳೆದುಹೋದ ಪ್ರಕರಣಗಳು ನಡೆದಿವೆ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ರುದ್ರೇಶ್‌ ಎಸ್‌.ಉಜ್ಜನಕೊಪ್ಪ ಹೇಳಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT