ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತುಗಳ ಭಾರ ಎಳೆಯುವ ಸ್ಪರ್ಧೆ

ಗಂಗಾವತಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆಚರಣೆ
Last Updated 30 ಜನವರಿ 2017, 7:08 IST
ಅಕ್ಷರ ಗಾತ್ರ
ಗಂಗಾವತಿ: ಪ್ರಾಣಿಗಳಿಗೆ ಹಿಂಸೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಆಚರಣೆಯಲ್ಲಿದ್ದ ಕಂಬಳ ನಿಷೇಧಿಸಲಾಗಿದ್ದರೆ, ಇತ್ತ ಗಂಗಾವತಿಯಲ್ಲಿ ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ ಯಾವುದೇ ಅಡ್ಡಿ ಆತಂಕವಿಲ್ಲದೇ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ರೈತರು ಖುಷಿಯಿಂದ ಪಾಲ್ಗೊಳ್ಳುತ್ತಿದ್ದಾರೆ. 
 
ಎತ್ತುಗಳನ್ನು ಬಯಲು ಜಾಗದಲ್ಲಿ ಭಾರದ ಕಲ್ಲುಗಳನ್ನು ಕಟ್ಟಿ ಓಡಿಸುವ ಮೂಲಕ ಗುರಿ ತಲುಪುವ ಸ್ಪರ್ಧೆಯನ್ನು ರೈತಾಪಿ ಜನ ಆಯೋಜಿಸುತ್ತಿದ್ದಾರೆ. 
 
ತುಂಗಭದ್ರಾ ಎಡದಂಡೆ ಕಾಲುವೆ ಆಶ್ರಯಿತ ಗಂಗಾವತಿ ತಾಲ್ಲೂಕಿನ ಬಹುತೇಕ ನೀರಾವರಿ ಪ್ರದೇಶಲ್ಲಿ ಈಗಾಗಲೇ ಭತ್ತದ ಕಟಾವು ಮುಗಿದಿದೆ. ಮತ್ತೆ ಕಾಲುವೆಗೆ ನೀರು ಬರುವರೆಗೂ ರೈತರಿಗೆ ಯಾವುದೇ ಕೃಷಿ ಚಟುವಟಿಕೆಗಳು ಇಲ್ಲದೇ ಇರುವುದರಿಂದ ರೈತರು ಸಮಯ ಕಳೆಯಲು ಗ್ರಾಮೀಣ ಕ್ರೀಡೆಗಳ ಮೊರೆ ಹೋಗುತ್ತಿದ್ದಾರೆ. 
 
ಪರಿಣಾಮ ತಾಲ್ಲೂಕಿನ ಕಲ್ಗುಡಿ, ನಂದಿಹಳ್ಳಿ, ಸಿದ್ದಾಪುರ, ಹಿರೇಜಂತಕಲ್, ಬೆಣಕಲ್, ಚಿಕ್ಕಬೆಣಕಲ್, ವೆಂಕಟಗಿರಿ, ಬೆನ್ನೂರು, ಗುಂಡೂರು, ಸಿಂಗನಾಳ, ಹಣವಾಳ, ಮರಳಿ, ಉಡುಮಕಲ್‌ದಂತ ಗ್ರಾಮೀಣ ಭಾಗದಲ್ಲಿ ಜೋಡೆತ್ತುಗಳಿಗೆ ಕಲ್ಲುಕಟ್ಟಿ ಎಳೆಯುವ ಸ್ಪರ್ಧೆ ಆಯೋಜಿಸಲಾಗುತ್ತಿದೆ. 
 
ಜೋಡೆತ್ತುಗಳಿಗೆ ಕಲ್ಲುಕಟ್ಟಿ ಓಡಿಸುವುದು ಒಂದು ಮಾದರಿಯ ಕಂಬಳ ಮಾದರಿಯ ಸ್ಪರ್ಧೆ. ಕೇವಲ ಇದೊಂದೆ ಅಲ್ಲ. ಕೆಸರುಗದ್ದೆಯಲ್ಲಿ ರೈತರು ಅಥವಾ ಅವರ ಮಕ್ಕಳಿಗೆ ಓಟದಂತಹ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ ಎಂದು ಕೃಷಿಕ ಸಂಘದ ಮುಖಂಡ ಸಿದ್ದಾಪುರದ ತಿಮ್ಮನಗೌಡ ಕಲ್ಗಡಿ ಹೇಳಿದರು.
 
ಈಗ ಭತ್ತದ ಕೊಯ್ಲು ಮುಗಿದಿದೆ. ಆಯಾ ಗ್ರಾಮಗಳಲ್ಲಿನ ಗ್ರಾಮ ದೇವತೆ, ಊರ ದೇವರ ಜಾತ್ರೆ, ಉತ್ಸವಗಳು ನಡೆಯುತ್ತವೆ. ಅದರ ಅಂಗವಾಗಿ ವಿವಿಧ ಸ್ಫರ್ಧೆ ಆಯೋಜಿಸಲಾಗುತ್ತದೆ ಎಂದು ಕಲ್ಗುಡಿ ಗ್ರಾಮದ ರೈತ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಪ್ರಸಾದ ಹೇಳಿದರು. 
 
ಪ್ರಾಣಿ ಹಿಂಸೆಯ ನೆಪವೊಡ್ಡಿ ಕರಾವಳಿಯಲ್ಲಿನ ಕಂಬಳಕ್ಕೆ ಕಾನೂನು ತೊಡಕು ಎದುರಾಗಿರುವುದರ ಮಧ್ಯೆಯೇ ಭತ್ತದ ನಾಡಿನಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಎತ್ತುಗಳಿಗೆ ಕಲ್ಲು ಕಟ್ಟಿ ಎಳೆಯುವ   ಸ್ಪರ್ಧೆಗಳು ನಿರಾತಂಕವಾಗಿ ಸಾಗಿದೆ. ಇದು ಕೃಷಿಕರಲ್ಲಿ ಸಂತಸಕ್ಕೆ ಕಾರಣವಾಗಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT