ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಮನ ಸಿದ್ಧಾಂತ, ಬಸವಣ್ಣನ ಕ್ರಿಯಾಶೀಲತೆ ಅಗತ್ಯ

ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣಿಗಳ ಒಡಲಾಳ ಪರಿಚಯಿಸಿದ ಗೋಷ್ಠಿಗಳು
Last Updated 30 ಜನವರಿ 2017, 7:21 IST
ಅಕ್ಷರ ಗಾತ್ರ
ಹಾಸನ: ‘ಸರ್ಕಾರ ಮಂಡಿಸುವ ಬಜೆಟ್ ಕುರಿತು ವಿಸ್ತೃತ ಅಧ್ಯಯನ ನಡೆಸಿ, ಅದರಲ್ಲಿ ಆಗಬೇಕಿರುವ ಬದಲಾವಣೆ ಕುರಿತು ಚರ್ಚೆಗೆ ತಯಾರಿ ನಡೆಸಿದರೆ ಸರ್ಕಾರ ನಮ್ಮನ್ನು ಉಳಿಸಿಕೊಳ್ಳುವುದಿಲ್ಲ, ಸಾರ್ವಜನಿಕ ಮದುವೆ, ವೈಕುಂಠ ರಾಧನೆಗೆ ಹೋಗದಿದ್ದರೆ ಜನ ಮತ ನೀಡುವುದಿಲ್ಲ..’
 
ಶಾಸಕ ಕಿಮ್ಮನೆ ರತ್ನಾಕರ ಅವರು ಪ್ರಸ್ತುತ ರಾಜಕಾರಣದ ಕುರಿತು ಬಿಚ್ಚಿಟ್ಟ ಮನದಾಳದ ಮಾತುಗಳಿವು.
 
15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಪ್ರಭುತ್ವ ಸುಧಾರಣೆಗಾಗಿ ಪ್ರಬುದ್ಧ ಚಿಂತನೆ ಗೋಷ್ಠಿಯ ‘ಸಾಮಾಜಿಕ ಬದಲಾವಣೆಯಲ್ಲಿ ರಾಜಕಾರಣದ ಪಾತ್ರ’ ವಿಷಯವಾಗಿ ಮಾತನಾಡಿದರು.
 
‘ಮತದಾರ ದಾರಿಯಲ್ಲಿ ಅಡ್ಡಗಟ್ಟಿ ಇಷ್ಟು ದಿನ ನಡೆದ ಶಾಸನ ಸಭೆಗಳಲ್ಲಿ ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀರಿ ಅಂತ ಕೇಳುತ್ತಾನೆ. ಆದರೆ, ನನ್ನ ಕಾರ್ಯವ್ಯಾಪ್ತಿ, ಮಾಡಬಹುದಾದ ಕೆಲಸ ಕಾರ್ಯಗಳ ಕುರಿತು ಅರಿಯಲು ಅವಕಾಶ ನೀಡುವುದಿಲ್ಲ. ಠೇವಣಿ ಉಳಿಸಿಕೊಳ್ಳಬೇಕೆಂದರೆ ಅಧೀನದಲ್ಲಿರುವ ಡಿ.ಸಿ ಅಥವಾ ಎ.ಸಿ ಅವರ ಮೇಲೆಯೇ ಎಲ್ಲ ಭಾರ ಹೊರಿಸುವ ನಾವು ಮುಂದಿನ ಚುನಾವಣೆಯತ್ತ ದೃಷ್ಟಿ ನೆಡುತ್ತೇವೆ’ ಎಂದರು.
 
‘ಶೇ 90ರಷ್ಟು ಜನಪ್ರತಿನಿಧಿಗಳಿಗೆ ಬಜೆಟ್‌ನ ಗ್ರಹಿಕೆಯೇ ಆಗಿರುವುದಿಲ್ಲ. ಸ್ಪೀಕರ್ ಅವರ ಪ್ರಶ್ನೆಗೆ ತನ್ನ ಪಕ್ಷದ ಸದಸ್ಯರು ಯಾವ ನಿರ್ಧಾರ ತಾಳುತ್ತಾರೋ ಅದಕ್ಕೆ ನಾನು ಬದ್ಧನಾಗಿರಬೇಕಾಗುತ್ತದೆ. ಇದರಿಂದಾಗಿ ನೈತಿಕ ರಾಜಕಾರಣದ ವಾತಾವರಣ ಕಾಣದಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
 
‘ಸಮಾಜದಲ್ಲಿ ಎಲ್ಲ ಒಳ್ಳೆಯ ಮತ್ತು ಕೆಟ್ಟ ಕೆಲಸಕ್ಕೆ ಬೆಂಬಲ ಇದ್ದೇ ಇರುತ್ತದೆ. ಆದರೆ ನಿರ್ಧಾರ ನಮ್ಮ ಕೈಯಲ್ಲಿರುತ್ತದೆ. ಬುದ್ದ, ಬಸವಣ್ಣ, ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಯಾವುದೇ ಅಧಿಕಾರ ಇಲ್ಲದೆ ಸಾಮಾಜಿಕ ಬದಲಾವಣೆ ತಂದರು. ಆದರೆ, ಇಂದಿನ ರಾಜಕಾರಣಿಗಳಿಗೆ ಅಧಿಕಾರವಿದ್ದರೂ ಏನೂ ಮಾಡಲಾಗುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕ್ಲಿಷ್ಟಕರ ಪರಿಸ್ಥಿತಿ ಸೃಷ್ಟಿಯಾಗಿರುವುದು ದೊಡ್ಡ ದುರಂತ’ ಎಂದರು.
 
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕೆಂದರೆ ಮತದಾರರು ಬದಲಾಗಬೇಕು. ವಿದ್ಯಾರ್ಥಿಗಳು ಎಲ್ಲ ವಿಷಯವನ್ನು ಆಳವಾಗಿ ಅಭ್ಯಸಿಸಬೇಕು. ಆಸೆ ಆಮಿಷಗಳಿಗೆ ಬಲಿಯಾಗದೆ ಉತ್ತಮ ಅಭ್ಯರ್ಥಿಯ ಆಯ್ಕೆ ಮಾಡಬೇಕು’ ಎಂದರು.
 
ಧಾರ್ಮಿಕತೆ ಹೆಸರಲ್ಲಿ ರಂಪ: ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಬಲ ಸ್ಥಾನ ಪಡೆದಿದ್ದ ಜಾತಿಯು ಇಂದು ಧರ್ಮದವರೆಗೆ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದ್ದು, ಜನರ ಭಾವನೆಗಳನ್ನು ಕೆರಳಿಸಿ ದೊಡ್ಡ ರಂಪ ಸೃಷ್ಟಿಸಿದೆ ಎಂದು ಶಾಸಕ ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟರು.
 
‘ರಾಜಕಾರಣ ಅಂದು– ಇಂದು– ಮುಂದು’ ವಿಷಯವಾಗಿ ಮಾತನಾಡಿದ ಅವರು, ‘ಯಾವುದೇ ರಾಜಕೀಯ ಪಕ್ಷ ಧಾರ್ಮಿಕ ಹೆಸರಿನಲ್ಲಿ ಯೋಜನೆ ಘೋಷಿಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಕೇಂದ್ರ ಸರ್ಕಾರವು ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ರಾಮ ಜನ್ಮಭೂಮಿಯನ್ನೇ ಆದ್ಯತೆಯಾಗಿ ಇರಿಸಿಕೊಂಡಿದೆ. ಕೇಂದ್ರ ಸರ್ಕಾರವೇ ನ್ಯಾಯಾಲಯದ ತೀರ್ಪನ್ನು ಕಡೆಗಣಿಸುವಾಗ ಗ್ರಾಮ ಪಂಚಾಯಿತಿ ಸದಸ್ಯನ ಗತಿ ಹೇಗೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
 
ಯಾವ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಎಂದು ಪ್ರಶ್ನಿಸುವಂತಾಗಿದೆ. ಕಪ್ಪು – ಬಿಳುಪಿನ ಮಧ್ಯೆ ನಮ್ಮ ಆಯ್ಕೆ ಯಾವುದು ಎಂದು ಮತದಾರರಿಗೆ ಬಗೆಹರಿಸಲಾಗದ ಕಗ್ಗಂಟಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ತನ ಕಾಪಾಡಿಕೊಳ್ಳಬೇಕೆಂದರೆ ಒಂದು ನಿಯಮ ಪಾಲಿಸಬೇಕು ಎಂದ ಅವರು, ‘ಅಲ್ಲಮನ ಸಿದ್ಧಾಂತ, ಬಸವಣ್ಣನ ಕ್ರಿಯಾಶೀಲತೆ ಹಾಗೂ ಅಂಬಿಗರ ಚೌಡಯ್ಯನ ಆಕ್ರೋಶ ಹೊಂದಬೇಕು’ ಎಂದು ಸಲಹೆ ನೀಡಿದರು.
 
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಜಿ.ಎಸ್.ಶಿವರುದ್ರಪ್ಪ ಅವರ ಕಾವ್ಯ ‘ಆನೆಯನೇರಿ ಹೋದಿರಿ, ಕುದುರೆಯನೇರಿ ಹೋದಿರಿ, ಊರು ಕೇರಿ ತುಂಬೆಲ್ಲ ಬ್ಯಾಂಡು, ಭಜಂತ್ರಿ ಆದರೆ ಅದರ ಹಿಂದೆದ್ದ ದೂಳಿನಲಿ ಮಿಂದೆವು ನಾವು’ ಎಂದು ವ್ಯವಸ್ಥೆಯನ್ನು ವ್ಯಾಖ್ಯಾನಿಸಿದರು.
 
ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಂದಿನ ರಾಜಕಾರಣ ಪರಸ್ಪರ ಸ್ನೇಹ, ಸೌಹಾರ್ದದಿಂದ ಕೂಡಿತ್ತು. ಆದರೆ, ಈಗ ಅದರ ಕುರಿತು ಮಾತನಾಡಲು ಭಯವಾಗುತ್ತದೆ ಎಂದರು.
 
ಎಲ್ಲ ಕಾಲದಲ್ಲೂ ಒಳ್ಳೆಯ ರಾಜಕಾರಣಿಗಳಿದ್ದಾರೆ. ಅವರನ್ನು ಗುರುತಿಸಿ ಹೋರಾಟಕ್ಕೆ ಬೆಂಬಲ ನೀಡಬೇಕಾದ ಕೆಲಸ ಯುವಕರದ್ದಾಗಿದೆ ಎಂದು ಕಿವಿಮಾತು ಹೇಳಿದರು.
 
ಕಾಂಗ್ರೆಸ್‌ ಮುಖಂಡರಾದ ಎಸ್.ಎಂ. ಆನಂದ್, ಎಚ್.ಕೆ.ಮಹೇಶ್, ಗುರುರಾಜ್ ಹೆಬ್ಬಾರ್, ಲ.ಸಿ.ಪ್ರಶಾಂತ ಬಾಗಡೆ, ಸಮ್ಮೇಳನಾಧ್ಯಕ್ಷ ಎಚ್.ಬಿ.ಮದನಗೌಡ, ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ರವಿ ನಾಕಲಗೂಡು ಇದ್ದರು.
 
**
ಅಕ್ಷರ ಜಾತ್ರೆಗೆ ವರ್ಣರಂಜಿತ ತೆರೆ
ಹಾಸನ:
ಮೂರು ದಿನ ನಗರದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ತೆರೆ ಬಿತ್ತು.

ಜ. 27 ರಿಂದ 29ರ ವರೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಅಕ್ಷರ ಜಾತ್ರೆಯು ಸಾಹಿತ್ಯಾಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಸಮ್ಮೇಳನದಲ್ಲಿ ಹಮ್ಮಿಕೊಂಡಿದ್ದ ಚರ್ಚಾ ಗೋಷ್ಠಿಗಳು ವೈಚಾರಿಕ ಪ್ರಜ್ಞೆ ಹೆಚ್ಚಿಸಿದವು.

ಜಿಲ್ಲೆಯ ಅಭಿವೃದ್ಧಿಯ ಸವಾಲುಗಳು–ಒಂದು ಮೌಲಿಕ ಚಿಂತನೆ ಗೋಷ್ಠಿಯು ನೂರಾರು ಅನ್ನದಾತರಿಂದ ಮೆಚ್ಚುಗೆ ಗಳಿಸಿತು. ನಂತರ ನಡೆದ ಗೋಷ್ಠಿ, ಚರ್ಚೆಗಳು ಕೇಳುಗರ ಚಿಂತನಾ ಶೈಲಿಯನ್ನು ಓರೆಗಲ್ಲಿಗೆ ಕರೆದೊಯ್ಯಿತು. ಕೆಲ ಗೋಷ್ಠಿಗಳಲ್ಲಿ ಜನರೇ ಇರುತ್ತಿರಲಿಲ್ಲ.

ಮೂರು ದಿನ ಊಟ: ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಊಟ ಬಡಿಸುವ ಜವಾಬ್ದಾರಿ ನಿರ್ವಹಿಸಿದರು. ಬೆಳಿಗ್ಗೆ ತಿಂಡಿಗೆ ಇಡ್ಲಿ, ಪೊಂಗಲ್, ಮಧ್ಯಾಹ್ನ ಪುಲವ್‌, ತರಕಾರಿ ಬಾತ್‌, ಬೀನ್ಸ್‌ ಪಲ್ಯ, ಬೂಂದಿ, ಅನ್ನ ಸಾಂಬರು ವಿತರಿಸಲಾಯಿತು.

ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಿಗ್ಗೆ ನಡೆದ ನಗೋಣ ಬನ್ನಿ, ಹಾಸ್ಯ ಸಿಂಚನ ನುಡಿ ಜಾತ್ರೆಗೆ ಮೆರಗು ತಂದುಕೊಟ್ಟಿತು. ಜೀ ವಾಹಿನಿಯಲ್ಲಿ ಮೂಡಿ ಬಂದ ಡ್ರಾಮಾ ಜೂನಿಯರ್‌ನ ರೇವತಿ ಹಾಗೂ ತೇಜಸ್ವಿನಿ ಅವರ ಪಂಚಿಂಗ್‌ ಡೈಲಾಗ್‌ಗಳು ಪ್ರೇಕ್ಷಕ ವರ್ಗದಲ್ಲಿ ನಗು ತರಿಸಿತು. ಕಲಾವಿದ ರವಿ ಭಜಂತ್ರಿ ಅವರ ಹಾಸ್ಯ ಚಟಾಕಿಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.  ಪುಸ್ತಕ ಮಳಿಗೆಗಳ ಬಳಿ ಓದುಗರ ಸಂಖ್ಯೆ ಹೆಚ್ಚು ಕಂಡು ಬಂತು. 

‘ಪ್ರಾಮಾಣಿಕರಿಗೂ ಕಳಂಕ’
ಹಾಸನ: 
‘ನಾನು ಕೂಡ ನಾಯಕನಾಗಬೇಕು ಎಂಬ ಉತ್ಕಟ ಉದ್ದೇಶದಿಂದ ಯಾವುದೋ ಮಾರ್ಗದಿಂದ ರಾಜಕೀಯ ಸೇರುವ ವ್ಯಕ್ತಿ ಸಂವಿಧಾನ ಮಣ್ಣುಪಾಲು ಆಗುವ ಎಲ್ಲ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಾನೆ. ಇದರಿಂದ ಪ್ರಾಮಾ ಣಿಕ ರಾಜಕಾರಣಿಗಳಿಗೂ ಕಳಂಕ ಅಂಟಿಕೊಳ್ಳುತ್ತದೆ’ ಎಂದು ಎ.ಸಿ ಎಚ್.ಎಲ್.ನಾಗರಾಜ್ ಅಭಿಪ್ರಾಯಪಟ್ಟರು.

‘ಪ್ರಭುತ್ವದ ಸುಧಾರಣೆಗಾಗಿ ಪ್ರಬುದ್ಧ ಚಿಂತನೆ’ ಎಂಬ ಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಅವರು, ಪ್ರಜಾಪ್ರಭುತ್ವ ಮೌಲ್ಯ ಅರಿಯದೆ ರಾಜಕೀಯ ಸೇರುವವರು ಹೆಚ್ಚಾಗಿದ್ದಾರೆ. ವ್ಯವಸ್ಥೆಯ ಕುರಿತು ಉನ್ನತ ಚಿಂತನೆ ಮಾಡಬೇಕಾದ ಇವರು ಭ್ರಷ್ಟಾಚಾರಕ್ಕೆ ಹಾದಿ ಹುಡುಕುತ್ತಾರೆ. ದೇಶದ ಅರ್ಥ ವ್ಯವಸ್ಥೆ ಹಾಳಾಗಲು ರಾಜಕಾರಣಿಗಳೇ ಕಾರಣ. ಅಪ್ರಬುದ್ಧ ಬುದ್ಧಿಯಿಂದ ಇನ್ನೊಬ್ಬರ ತಲೆ ಒಡೆಯುತ್ತಾರೆ. ಇಂತವರಿಂದ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಮಾರ್ಮಿಕವಾಗಿ ನುಡಿದರು.

ಹಾಸನ ಗರಡಿಯಲಿ ಬೆಳೆದೆವು
ರಾಜಕೀಯ ಎಂದರೇನು ಎಂಬುದು ವೇದಿಕೆ ಮೇಲಿರುವ (ವೈ.ಎಸ್.ವಿ. ದತ್ತ, ಕಿಮ್ಮನೆ ರತ್ನಾಕರ) ನಮಗೆಲ್ಲರಿಗೂ ಗೊತ್ತು, ಯಾಕೆಂದರೆ ಇಲ್ಲಿಯೇ ನಮ್ಮ ಪೂರ್ವಾಶ್ರಮ ಇರುವುದು. ಹಾಸನದ ಗರಡಿಯಲ್ಲೇ ಮೂವರು ಬೆಳೆದಿದ್ದೇವೆ ಎಂದು ಬಿ.ಎಲ್.ಶಂಕರ್ ಹೇಳಿದರು.

ಪಾರ್ಲಿಮೆಂಟಿನಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಕೇವಲ 7. ಅದರಲ್ಲಿ 5 ಜನ ಕಮ್ಯುನಿಷ್ಟ್‌ ಪಾರ್ಟಿ ಅವರೇ ಇರುತ್ತಾರೆ. ಅಧ್ಯಯನ ಇಲ್ಲದೆ ಯಾವ ಅಭಿವೃದ್ಧಿಯು ಸಾಧ್ಯವಿಲ್ಲ ಎಂದರು. ಮೊದಲಿನ ರಾಜಕೀಯ ಸ್ಥಿತಿಯೇ ಬೇರೆ ಇತ್ತು. ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ ಕುರಿತು ಇತರೆ ಪಕ್ಷಗಳ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಇಂದು ನಾವು ಆ ರೀತಿ ಬಾಯಿಬಿಟ್ಟರೆ ಪಕ್ಷದಿಂದ ಗೇಟ್‌ಪಾಸ್ ನೀಡುತ್ತಾರೆ ಎಂದು ಹೇಳಿದರು.
 
***
ಸಾಹಿತ್ಯದಿಂದ ಸಮಾಜ ಬದಲಾವಣೆ ಸಾಧ್ಯ. ಪರಿಪೂರ್ಣ ಬದುಕಿಗೆ ಮಹನೀಯರ ಆದರ್ಶ ಮತ್ತು ತತ್ವಗಳನ್ನು ಪಾಲಿಸಬೇಕು
-ಕಿಮ್ಮನೆ ರತ್ನಾಕರ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT