ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಕುರಂಗ ರಾಜ ನಾಟಕ ಪ್ರದರ್ಶನ

31ರಂದು ಸಂಜೆ 5.30ಕ್ಕೆ ಪ್ರದರ್ಶನ
Last Updated 30 ಜನವರಿ 2017, 7:38 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಇತಿಹಾಸವನ್ನು ಮರು ವ್ಯಾಖ್ಯಾನಿಸುವ ಸಾಹಿತಿ ಡಾ. ಓ.ನಾಗರಾಜ್ ಅವರ ‘ಕುರಂಗ ರಾಜ ವೈಭವ’ ಐತಿಹಾಸಿಕ ಕಾದಂಬರಿ ಆಧರಿತ ‘ಕುರಂಗ ರಾಜ’ ನಾಟಕ ಪ್ರದರ್ಶನ ಜ.31ರಂದು ಸಂಜೆ 5.30ಕ್ಕೆ ನಗರದ ಡಾ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ  ನಡೆಯಲಿದೆ.

ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ರಂಗ ಶಿಕ್ಷಣ ಕೇಂದ್ರ ಮತ್ತು ಶಶಾಂಕ ಪ್ರಕಾಶನದ ಆಶ್ರಯದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ವೆಂಕಟೇಶ್‌ ಜೋಷಿ ನಾಟಕ ನಿರ್ದೇಶಿಸಿದ್ದಾರೆ.

ತುಮಕೂರು ವಿ.ವಿ ಕುಲಪತಿ ಡಾ. ಎ.ಎಚ್‌.ರಾಜಾಸಾಬ್‌ ಕಾರ್ಯಕ್ರಮ ಉದ್ಘಾಟಿಸುವರು. ಪಿಯುಸಿಎಲ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ. ದೊರೈರಾಜ್‌ ಅಧ್ಯಕ್ಷತೆ ವಹಿಸುವರು. ಚಲನಚಿತ್ರ ನಟ ಡಿಂಗ್ರಿ ನಾಗರಾಜ್‌, ರಂಗ ಶಿಕ್ಷಣ ಕೇಂದ್ರದ ಸಂಸ್ಥಾಪಕ ಸಿ.ಸಿದ್ದರಾಜು, ಸಾಹಿತಿ ಡಾ. ವಡ್ಡಗೆರೆ ನಾಗರಾಜಯ್ಯ, ಭಾರತೀಯ ಸಾಮಾಜಿಕ ಪರಿವರ್ತನಾ ಚಳವಳಿಯ ಪ್ರಚಾರ ಸಮಿತಿ ಅಧ್ಯಕ್ಷ ಆರ್‌.ಲೋಕೇಶ್‌, ವೆಂಕಟೇಶ್‌ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಏನಿದು ನಾಟಕ?
ಜಿಲ್ಲೆಯ ಸಿದ್ಧರಬೆಟ್ಟವನ್ನು ಕೇಂದ್ರವಾಗಿಟ್ಟುಕೊಂಡು ಕುರುಂ ಕೋಟೆ ಕಟ್ಟಿಕೊಂಡು ದಲಿತ ಸಮುದಾಯದ ಕುರಂಗ ಎಂಬುವನು 16ನೇ ಶತಮಾನದಲ್ಲಿ ರಾಜ್ಯಭಾರ ಮಾಡುತ್ತಿದ್ದನು. ಮಧುಗಿರಿಯ ಮಹಾನಾಡ ಪ್ರಭುಗಳ ಸಾಮಂತ ರಾಜ ಆಗಿದ್ದನು.

ಕುರಂಗರಾಜನ ಕುರಿತು ಅನೇಕ ಮೌಖಿಕ ಕಥನಗಳಿವೆ. ರಾಜನ ಆಡಳಿತದ ಮೇಲೆ ಬೆಳಕು ಚೆಲ್ಲುವ ಅನೇಕ ಕುರುಹುಗಳು, ಅರಮನೆ, ಲದ್ದಿಕಟ್ಟೆ, ಸೂಳೆಕಲ್ಲು, ಸಿದ್ದೇಶ್ವರ ಗದ್ದುಗೆ ಸೇರಿ ಅನೇಕ ಐತಿಹ್ಯಗಳಿವೆ.

ಈತನ ಬಗ್ಗೆ ಇತಿಹಾಸಕಾರರು ಬೆಳಕು ಚೆಲ್ಲುವ ಕೆಲಸ ಮಾಡಿಲ್ಲ.   ದಲಿತನಾಗಿದ್ದ ಕಾರಣ ಇತಿಹಾಸಕಾರರು ಈ ರಾಜನ ಕುರಿತು ಏನನ್ನು ಬರೆದಿಲ್ಲ, ಸಂಶೋಧನೆ ಮಾಡಲು ಪ್ರಯತ್ನಪಟ್ಟಿಲ್ಲ ಎಂಬ ಆರೋಪಗಳಿವೆ.

ಈ ರಾಜನ ಕುರಿತಾದ ಮೌಖಿಕ ಕಥನಗಳು, ಐತಿಹ್ಯ ಹಾಗೂ ಕುರಂಕೋಟೆ ಸುತ್ತಮುತ್ತ ಸಿಕ್ಕಿರುವ ಕುರುಹುಗಳು, ಲಾವಣಿಗಳನ್ನು ಬಳಸಿಕೊಂಡು ಡಾ. ಓ. ನಾಗರಾಜ್‌ ಅವರು ಕುರಂಗರಾಜ ವೈಭವ ಕೃತಿ ರಚಿಸಿದ್ದರು. ಈ ಕೃತಿಯನ್ನು  ನಾಟಕಕ್ಕೆ ನಾಗರಾಜ್‌ ಅವರೇ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT