ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಮ ಸ್ಥಿತಿಗೆ ತಲುಪಿದ ನಗರದ ಪರಿಸರ

ಬಂಡೆ ಕ್ರಷರ್‌ಗಳು, ತ್ಯಾಜ್ಯಕ್ಕೆ ಬೆಂಕಿ, ಮರಗಳ ಮಾರಣಹೋಮದಿಂದ ಮಲಿನವಾಯಿತು ಗಾಳಿ
Last Updated 30 ಜನವರಿ 2017, 7:42 IST
ಅಕ್ಷರ ಗಾತ್ರ

ತುಮಕೂರು:  ಸ್ಮಾರ್ಟ್‌ ಸಿಟಿಯ ಕನಸಿನಲ್ಲಿ ತೇಲಿ ಹೋಗುತ್ತಿರುವ ನಗರಕ್ಕೆ ಈಚೆಗೆ ಗ್ರೀನ್‌ ಪೀಸ್‌ ಸಂಸ್ಥೆ ಪ್ರಕಟಿಸಿದ ನಗರದ ಪರಿಸರ ಮಾಲಿನ್ಯ ವಿಷಮ ಸ್ಥಿತಿ ತಲುಪಿದೆ ಎಂಬ ವರದಿ ನುಂಗಲಾರದ ತುತ್ತಾಗಿದೆ. ನಗರದ ಪರಿಸರ ಹಾಳಾಗಿಲ್ಲ ಎಂದು ಬಿಂಬಿಸಲು ಆಡಳಿತ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಆದರೆ ವಾಸ್ತವ ಸ್ಥಿತಿ, ಗ್ರೀನ್‌ ಪೀಸ್‌ ಸಂಸ್ಥೆ ಹೇಳಿರುವುದಕ್ಕಿಂತಲೂ ಕಳವಳಕಾರಿ ಯಾಗಿದೆ ಎಂದು ಹೇಳಲಾಗುತ್ತಿದೆ.

ನಗರದಲ್ಲಿ ಪರಿಸರ ಹಾಳಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈವರೆಗೂ ನಗರದ ಎಲ್ಲ ಭಾಗದಲ್ಲೂ ಪರಿಸರ ಮಾಲಿನ್ಯವನ್ನು ಅಳೆದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಎಲ್ಲ ಭಾಗದಲ್ಲೂ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧ್ಯಯನ ಮಾಡಿದರೆ ಭಯಾನಕ ವರದಿ ಹೊರ ಬೀಳಲಿದೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.

ನಗರ ಸುತ್ತಲೂ ಆವರಿಸಿರುವ ಬಂಡೆ ಕ್ರಷರ್‌ಗಳು, ಫಿಲ್ಟರ್‌ ಮರಳು ಗಣಿಗಾರಿಕೆ, ಎಗ್ಗಿಲ್ಲದೆ ನಡೆದಿರುವ ಮರಗಳ ಮಾರಣಹೋಮ, ರಿಯಲ್‌ ಎಸ್ಟೇಟ್‌ಗೆ ಬಲಿಯಾಗುತ್ತಿರುವ ತೋಟ, ಗುಡ್ಡಗಾಡು ಪ್ರದೇಶ, ಕೆರೆಗಳಲ್ಲಿ ನಡೆಯುತ್ತಿರುವ ಮಣ್ಣಿನ  ದಂಧೆ ಇವೆಲ್ಲವೂ ನಗರವನ್ನು ಜನರು ಬದುಕಲಾಗದ ಸ್ಥಿತಿಗೆ ತಂದು ನಿಲ್ಲಿಸಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಗ್ರೀನ್‌ ಪೀಸ್‌ ಸಂಸ್ಥೆ ಪ್ರಕಟಿಸಿ ರುವುದಕ್ಕಿಂತಲೂ ನಗರ ಸ್ಥಿತಿ  ಗಂಭೀರವಾಗಿದೆ.  ನಗರದ ಪಿಎಂ ಪ್ರಮಾಣ (ಗಾಳಿಯಲ್ಲಿ ತೇಲಾಡುವ ದೂಳಿನ ಪ್ರಮಾಣ) 118 ಮೈಕ್ರೋ ಗ್ರಾಂ ಕ್ಯೂಬಿಕ್‌ ಮೀಟರ್‌ ಎಂದು ಗ್ರೀನ್‌ ಪೀಸ್‌ ಸಂಸ್ಥೆ ತಿಳಿಸಿದೆ. ಆದರೆ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪಿಎಂ ಇದೆ. ಕೆಲವು ತಿಂಗಳಲ್ಲಿ  ಪಿಎಂ ಪ್ರಮಾಣ 174 ರಷ್ಟಿದೆ. ಸರಾಸರಿ ಪ್ರಮಾಣವೇ 129.58ರಷ್ಟಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಗಳು ತಿಳಿಸಿವೆ.

‘ಕೈಗಾರೀಕರಣದ ದಟ್ಟಣೆ ಇಲ್ಲದ ಪರಿಸ್ಥಿತಿಯಲ್ಲೇ ನಗರದ ಪರಿಸರದ ಸ್ಥಿತಿ ಹೀಗಾದರೆ, ಇನ್ನೂ ವಸಂತನರಸಾಪುರ, ಅಂತರಸನಹಳ್ಳಿ ಮುಂತಾದ ಕಡೆ ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ಬಂದರೆ ಪರಿಸರದ ಸ್ಥಿತಿ ಏನಾಗಬೇಕು. ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೊಳಕು ಪರಿಸರದಲ್ಲಿ ಬದುಕುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ’ ಎನ್ನುತ್ತಾರೆ ಮಾನವ ಹಕ್ಕುಗಳ ಹೋರಾಟಗಾರ ರಮೇಶ್‌ಬಾಬು.

‘ನಗರದಲ್ಲಿರುವ ಅಕ್ಕಿ ಗಿರಣಿಗಳು ಪರಿಸರ ಮಾಲಿನ್ಯಕ್ಕೆ ಹೆಚ್ಚು ಕೊಡುಗೆ ನೀಡುತ್ತಿವೆ. ಕೂಡಲೇ ಅಕ್ಕಿಗಿರಣಿಗಳನ್ನು ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಎತ್ತಂಗಡಿ ಮಾಡಬೇಕು’ ಎನ್ನುತ್ತಾರೆ ಚಿಕನವಜ್ರದ ಲೋಕೇಶ್‌.

‘ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರೇ ಖುದ್ದು ಅಕ್ಕಿ ಗಿರಣಿ ಮಾಲೀಕರ ಸಭೆ ನಡೆಸಿದ್ದಾರೆ. ಆದರೂ ಅವರು ನಗರದಿಂದ ಸ್ಥಳಾಂತರಗೊಳ್ಳುತ್ತಿಲ್ಲ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
 
ಮಹಾ ನಗರದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಗಾಳಿಯನ್ನು (ಎನ್‌ಒ2) ಉತ್ಪತ್ತಿ ಮಾಡುವಲ್ಲಿ ಪಾಲಿಕೆಯ ಕೊಡುಗೆಯೆ ಹೆಚ್ಚಿದೆ. ಕಸಕ್ಕೆ ಅಲ್ಲಲ್ಲಿ ಹಾಕುತ್ತಿರುವ ಬೆಂಕಿಯಿಂದ ಬರುವ ಹೊಗೆ, ಕೊಳೆತ ತ್ಯಾಜ್ಯ, ಸ್ವಚ್ಛಮಾಡದ ಚರಂಡಿಗಳಿಂದ ಉತ್ಪತ್ತಿಯಾಗುವ ಮಿಥೇನ್‌ ವಿಷಮ ಗಾಳಿ ಉತ್ಪತ್ತಿಯಾಗಲು ಕಾರಣ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಇದು  ಗೊತ್ತಿದ್ದು, ಪಾಲಿಕೆ ಮೌನಕ್ಕೆ ಶರಣಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಮಹಾನಗರದ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡಬೇಕು. ಪಾದಚಾರಿ ಮಾರ್ಗ ಮಾಡಬೇಕು. ರಸ್ತೆ ಬದಿಗಳಲ್ಲಿ ಕಡ್ಡಾಯವಾಗಿ ಗಿಡಗಳನ್ನು ಬೆಳೆಸಿದರೆ ಮಾತ್ರ ಹದಗೆಟ್ಟಿರುವ ಪರಿಸರವನ್ನು ಸರಿದಾರಿಗೆ ತರಬಹುದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
 
‘ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಹಸಿರೀಕರಣಕ್ಕೆ ಮಹತ್ವವನ್ನೇ ನೀಡಿಲ್ಲ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿರುವ ಚಾವಣೆ ಮೇಲಿನ ಸೋಲಾರ್‌ ಯೋಜನೆಯನ್ನು ಕೈ ಬಿಟ್ಟು ಪಾರ್ಕ್‌ಗಳ ಅಭಿವೃದ್ಧಿ, ನಗರ ಹಸೀಕರಣ ಯೋಜನೆ, ಎಲ್ಲ ಕೆರೆಗಳಿಗೆ ಚರಂಡಿ ನೀರು ಶುದ್ಧೀಕರಿಸಿ ತುಂಬುವ ಯೋಜನೆ ರೂಪಿಸಬೇಕು’ಎನ್ನುತ್ತಾರೆ  ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್‌.ರಾಘವೇಂದ್ರ. ಕೆರೆ ಅಂಗಳ, ಖಾಲಿ ನಿವೇಶನಗಳಲ್ಲಿ ಹಳೆಯ ಟೈರುಗಳನ್ನು ಸುಡುವುದಕ್ಕೆ ನಿಯಂತ್ರಣ ಹೇರಬೇಕು ಎನ್ನುತ್ತಾರೆ ಪರಿಸರವಾದಿ ಬಿ.ವಿ.ಗುಂಡಪ್ಪ.

ಮಾಲಿನ್ಯ ನಿಯಂತ್ರಣಕ್ಕೆ ಇಲ್ಲಿದೆ ಮಾರ್ಗೋಪಾಯ
ನಗರದ ವಾಯು ಮಾಲಿನ್ಯ ನಿಯಂತ್ರಣ ಮಾಡುವುದು ಅತ್ಯಂತ ತುರ್ತಿನ ಕೆಲಸವಾಗಬೇಕು, ಇದಕ್ಕೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುತ್ತಾರೆ ಸೂಕ್ಷ್ಮಾಣು ಜೀವಶಾಸ್ತ್ರ ತಜ್ಞ ಡಾ. ಆರ್‌. ಪವನ್‌. ನಗರದಲ್ಲಿ ಪರಿಸರ ಸುಧಾರಿ ಸಲು ಸಲಹೆ ಮುಂದಿಡುತ್ತಾರೆ.

-ನಗರದ ಹೊರಭಾಗದಲ್ಲಿರುವ ಗ್ರಾನೈಟ್‌ ಕಟ್ಟಿಂಗ್ ಮತ್ತು ಪಾಲಿಶಿಂಗ್ ಘಟಕಗಳ ತ್ಯಾಜ್ಯ ಹೂಳಲು, ಸುರಿಯಲು ಈವರೆಗೂ ಒಂದು ಪ್ರದೇಶ ನಿಗದಿ ಮಾಡಿಲ್ಲ. ಈ ಘಟಕಗಳು ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುತ್ತಿವೆ. ರಸ್ತೆಯ ಬದಿ ತ್ಯಾಜ್ಯ ಸುರಿಯುವುದಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು.

-ಕೈಗಾರಿಕಾ ಘಟಕಗಳ ತ್ಯಾಜ್ಯ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ತ್ಯಾಜ್ಯಕ್ಕೆ ಬೆಂಕಿ ಹಾಕಿ ಸುಡುವು ದನ್ನು ಕಡ್ಡಾಯವಾಗಿ ನಿಯಂತ್ರಿಸಬೇಕು. ಕೈಗಾರಿಕಾ ತ್ಯಾಜ್ಯ ವಿಲೇವಾರಿಗಾಗಿ ಪ್ರತ್ಯೇಕ ಘಟಕ ಸ್ಥಾಪಿಸಬೇಕು.

-ಪ್ರತಿ ರಸ್ತೆಯನ್ನು ವಾರದಲ್ಲಿ ಮೂರು ಸಲವಾದರೂ  ಗುಡಿಸಬೇಕು.

-ಘನತ್ಯಾಜ್ಯಕ್ಕೆ ಯಾವುದೇ ಕಾರಣಕ್ಕೂ ಬೆಂಕಿ ಹಾಕಿ ಸುಡ ಬಾರದು.

-ನಗರದ ಬಿ.ಎಚ್‌.ರಸ್ತೆಯಲ್ಲಿ ಹಾದು ಹೋಗುವ ಹೊರ ಜಿಲ್ಲೆಗಳ ವಾಹನ ಗಳನ್ನು ಕಡ್ಡಾಯವಾಗಿ ರಿಂಗ್ ರಸ್ತೆ ಮೂಲಕ ಸಾಗುವಂತೆ ಮಾಡಬೇಕು.

-ಹೆಚ್ಚಿನ ಭಾರ ಹೊತ್ತು ಸಾಗುವ ಲಾರಿ, ವಾಹನಗಳ ನಿಲುಗಡೆ  ಸ್ಥಳಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು.

-ನಗರದ ಸುತ್ತಮುತ್ತಲ ಕೈಗಾರಿಕೆ ಆವರಣದಲ್ಲಿರುವ  ರಸ್ತೆಗಳನ್ನು ದುರಸ್ತಿಗೊಳಿಸಬೇಕು.

-ಕೈಗಾರಿಕಾ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಮಾಪನ ಮಾಡಲು ಪ್ರತ್ಯೇಕ ತಪಾಸಣಾ ಘಟಕ ಸ್ಥಾಪಿಸಬೇಕು.

ಒಂದು ಕೆಟ್ಟಿದೆ, ಇನ್ನೊಂದಕ್ಕೆ ನಿರ್ವಹಣೆ ಇಲ್ಲ !
ವಾಯು ಗುಣಮಟ್ಟ ತಪಾಸಣೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಳಿ ಇರುವುದು ಒಂದೇ ಯಂತ್ರ (ಆ್ಯಬಿಯೇಂಟ್‌ ಏರ್‌ ಕ್ವಾಲಿಟಿ ಮಾನಿಟರಿಂಗ್‌ ಮೆಶೀನ್‌). 
ನಗರದ ಶಿರಾಗೇಟ್‌ನಲ್ಲಿರುವ ಮಂಡಳಿ ಕಚೇರಿ ಚಾವಣಿಯಲ್ಲಿ ಇಡಲಾಗಿದೆ. ನಗರದ ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ಅಷ್ಟೇನು ದೂಳಿನ ಪ್ರಮಾಣ ಇಲ್ಲವಾಗಿದೆ. ಈ ಯಂತ್ರ 24*7  ಕಾರ್ಯನಿರ್ವಹಿಸಬೇಕು. ಪಾಳಿ ಆಧಾರದಲ್ಲಿ ಕೆಲಸ ಮಾಡಲು ಮೂವರು ಸಿಬ್ಬಂದಿ ಬೇಕು. ಆದರೆ ಅಗತ್ಯ  ಸಿಬ್ಬಂದಿಯೇ ಇಲ್ಲ.  ಯಂತ್ರಕ್ಕೆ ದಿನದ 24 ಗಂಟೆಯೂ ವಿದ್ಯುತ್‌ ಪೂರೈಕೆ ಇರಬೇಕು. ಯುಪಿಎಸ್‌ ಬ್ಯಾಕ್‌ ಅಪ್‌ ಇಲ್ಲದ ಕಾರಣ ವಿದ್ಯುತ್ ಕೈಕೊಟ್ಟಾಗ ಯಂತ್ರ ಕೆಲಸ ನಿಲ್ಲಿಸುತ್ತದೆ. 2.5 ಪಿಎಂ ಪ್ರಮಾಣ ಪರೀಕ್ಷಿಸುವ ಮತ್ತೊಂದು ಯಂತ್ರ ಕೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT