ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾಭಾರತ, ರಾಮಾಯಣದ ನೀತಿ ಕಥೆ ತಿಳಿಸಿ’

Last Updated 30 ಜನವರಿ 2017, 7:49 IST
ಅಕ್ಷರ ಗಾತ್ರ

ಮಾಗಡಿ: ಮಾತೆಯರು ಮಕ್ಕಳಿಗೆ ಬಾಲ್ಯದಲ್ಲಿಯೇ ಹಾರುವ ಹಕ್ಕಿಗಳು, ಹರಿಯುವ ನೀರು, ಗಿಡದಲ್ಲಿನ ಹಸಿರನ್ನೂ, ಆಕಾಶದಲ್ಲಿ ನಕ್ಷತ್ರಗಳು ಮತ್ತು ಚಂದಮಾಮನನ್ನು ತೋರಿಸುತ್ತಾ, ನಿತ್ಯ ರಾಮಾಯಣ ಹಾಗೂ ಮಹಾಭಾರತದಲ್ಲಿನ ನೀತಿ ಕಥೆಗಳನ್ನು ಹೇಳಿಕೊಡಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಕಲ್ಯಾ ಜಗನ್ನಾಥ ರಾವ್‌ ತಿಳಿಸಿದರು.

ಪಟ್ಟಣದ  ಬಾಲಾಜಿ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನ ಡಾ.ಎಪಿಜೆ ಅಬ್ದುಲ್‌ ಕಲಾಂ ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಬಾಲಾಜಿ ಫ್ಯೂಷನ್‌ –2017ನಲ್ಲಿ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಸದ್ಭಾವನಾ ಪ್ರಶಸ್ತಿ ಸ್ವೀಕರಿಸಿ ಅವರ ಮಾತನಾಡಿದರು.

ವಿದ್ಯಾರ್ಥಿಗಳ ತಲೆಗೆ ವಿಜ್ಞಾನದ ನೂತನ ಆವಿಷ್ಕಾರಗಳನ್ನು ತುಂಬಬೇಕು. ಮಕ್ಕಳಿಗೆ ಪ್ರಶ್ನಿಸಲು ಅವಕಾಶ ಕೊಡಬೇಕು, ಸಂವಾದದಿಂದ ಮಾತ್ರ ಸಂವಹನ ಕ್ರಿಯೆ ಯಶಸ್ವಿಯಾಗಲಿದೆ ಎಂದರು.

ಶಿಕ್ಷಕರು ಮಕ್ಕಳಿಗೆ ಭಾರತದ ಚಾರಿತ್ರಿಕ, ಆಧ್ಯಾತ್ಮಿಕ, ಧಾರ್ಮಿಕ, ಆಯುರ್ವೇದ, ಗಿಡಮೂಲಿಕೆಗಳ ಬಗ್ಗೆ ತಿಳಿಸಿಕೊಡಬೇಕು. ವಿಜ್ಞಾನ ದೇಶಕ್ಕೆ ಹೊಸದೇನಲ್ಲ. ವೇದಗಳಲ್ಲಿ ವಿಜ್ಞಾನದ ಅಂಶಗಳಿವೆ. ಪ್ರತಿಯೊಬ್ಬ ಭಾರತೀಯನ ರಕ್ತದ ಕಣದಲ್ಲಿ ವಿಜ್ಞಾನದ ಅಣುಗಳಿವೆ. ಮೂಢನಂಬಿಕೆಗಳನ್ನು ಮೂಲೆಗೆ ತಳ್ಳಿ, ನಿಜವಾದ ಧರ್ಮ, ನಿಜವಾದ ದೇವರು, ಕಷ್ಟಪಟ್ಟು ದುಡಿದು ಉಣ್ಣುವ, ಹಂಚಿತಿನ್ನುವ ಎಲ್ಲರೂ ಒಗ್ಗೂಡಿ ಬಾಳುವುದನ್ನು ಕಲಿಸಿಕೊಡಬೇಕು ಎಂದು ತಿಳಿಸಿದರು.

ಯುವಜನತೆ, ಮೊಬೈಲ್‌, ಕಂಪ್ಯೂಟರ್‌, ಇಮೇಲ್‌, ಇಂಟರ್‌ ನೆಟ್‌, ಫೇಸ್‌ಬುಕ್‌ ಬಳಕೆಯ ಒಳಿತು ಕೆಡಕು ಮೊದಲು ತಿಳಿದುಕೊಂಡು ಗುಣಗ್ರಾಹಿಗಳಾಗಬೇಕು ಎಂದು ತಿಳಿಸಿದರು.

‘ಮಾಗಡಿಯವನು ಎಂಬ ಹೆಮ್ಮೆ ನನಗಿದೆ. ಗ್ರಾಮೀಣ ಭಾಗದ ಬಾಲಾಜಿ ಶಾಲೆಯಲ್ಲಿ ಮಕ್ಕಳಿಗೆ ಕಡಿಮೆ ಹಣ ಪಡೆದು ಗುಣಮಟ್ಟದ ವಿದ್ಯೆ ನೀಡುತ್ತಿರುವುದನ್ನು ನೋಡಿ ಸಂತೋಷವಾಯಿತು’ ಎಂದರು. ಶಿಕ್ಷಣ ತಜ್ಞ ಡಾ.ಜಯರಾಮ ಶೆಟ್ಟಿ ಮಾತನಾಡಿ ಮಕ್ಕಳಿಗೆ ಸಂಸ್ಕಾರವಂತ ಶಿಕ್ಷಣ ನೀಡಿದರೆ ನಾಡಿನ ಭವಿಷ್ಯ ಉಜ್ವಲವಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ವಿದ್ಯೆ ಸಾಧಕರ ಸ್ವತ್ತೇ ವಿನಾ ಸೋಮಾರಿ ಆಸ್ತಿಯಲ್ಲ. ಕಡುಬಡತನದಲ್ಲಿ ಜನಿಸಿದ ಅಬ್ದುಲ್‌ ಕಲಾಂ ಅವರ ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಿದರೆ ಮಕ್ಕಳಿಗೆ ಸ್ಫೂರ್ತಿಯಾಗಲಿದೆ ಎಂದರು.

ವಿಜಯ ನಗರ ರಾಮನಗರ ಶಾಖಾಮಠದ ಅನ್ನದಾನೇಶ್ವರ ಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಮಾರೇಗೌರ, ಸರ್ಕಲ್‌ ಇನ್‌ಪೆಕ್ಟರ್‌ ಎಚ್‌.ಎಲ್‌.ನಂದೀಶ್‌ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಹೊಂಬಮ್ಮ ನರಸಿಂಹಮೂರ್ತಿ, ಎಪಿಎಂಸಿ ನಿರ್ದೇಶಕ ಜಿ.ವಿ.ರಾಮಣ್ಣ, ಬಾಲಾಜಿ ವಿದ್ಯಾಸಂಸ್ಥೆ ಸಂಸ್ಥಾಪಕ ಬಿ.ಆರ್‌.ರಂಗನಾಥ್‌, ಕಾರ್ಯದರ್ಶಿ ಕೆ.ಕುಮಾರಿ ದೇವಿ, ದಾನಿಗಳಾದ ಚಿಕ್ಕಮ್ಮ ರಂಗಧಾಮಯ್ಯ, ತಿಮ್ಮಣ್ಣ, ಶೈಕ್ಷಣಿಕ ಸಲಹೆ ಗಾರ ಸುದರ್ಶನ್‌, ವಿದ್ಯಾಸಂಸ್ಥೆಯ ಟ್ರಸ್ಟಿಗಳಾದ ಸುಧಾ, ಮಹಾಲಕ್ಷ್ಮೀ, ಲತಾ ಇದ್ದರು. ಪೋಷಕರು ಮಕ್ಕಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT